ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲದಕ್ಕೂ ಮೂಲವಾದ ಬ್ರಹ್ಮ

Last Updated 22 ಫೆಬ್ರುವರಿ 2019, 20:30 IST
ಅಕ್ಷರ ಗಾತ್ರ

ಧರ್ಮವೆಂಬುದದೇನು? ಕರ್ಮವೆಂಬುದದೇನು? |
ಬ್ರಹ್ಮಾಂಡಕಥೆಯೇನು? ಜೀವಿತವಿದೇನು? ||
ಬ್ರಹ್ಮವೆಲ್ಲಕು ಮೂಲ ಮಾಯೆ ತತ್ಕೃತಿಜಾಲ |
ಬ್ರಹ್ಮವೇ ಜೀವನವೊ – ಮಂಕುತಿಮ್ಮ || 97 ||

ಪದ-ಅರ್ಥ: ತತ್ಕೃತಿಜಾಲ=ಅವನ ಕೈಚಳಕದ ಬಲೆ

ವಾಚ್ಯಾರ್ಥ: ಧರ್ಮ ಎಂಬುವುದು ಏನು? ಕರ್ಮ ಎನ್ನುವುದೇನು ? ಈ ಬ್ರಹ್ಮಾಂಡದ ಕಥೆ ಏನು? ನಮ್ಮ ಬದುಕೇನು? ಎಲ್ಲಕ್ಕೂ ಮೂಲವಾದದ್ದು ಬ್ರಹ್ಮ. ಮಾಯೆ ಅವನ ಕೈಚಳಕದ ಜಾಲ. ಬ್ರಹ್ಮವೇ ಜೀವನ.

ವಿವರಣೆ: ಮೊದಲಿನ ಎರಡು ಸಾಲಿನಲ್ಲಿ ಪ್ರಶ್ನೆಗಳನ್ನು ಕೇಳಿ, ಮುಂದಿನ ಎರಡು ಸಾಲಿನಲ್ಲಿ ಅವುಗಳಿಗೆ ಉತ್ತರ ಕೊಡುವ ಪ್ರಯತ್ನ ಈ ಕಗ್ಗದಲ್ಲಿದೆ. ಕಗ್ಗದ ಮೊದಲ ಕೆಲವು ಚೌಪದಿಗಳಲ್ಲಿ ಕೇಳಿದಂತೆ ಧರ್ಮ, ಕರ್ಮ, ಬ್ರಹ್ಮಾಂಡ ಹಾಗೂ ಬದುಕಿನ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾರೆ.

ಜೀವಿತವೆಂದರೆ ಬದುಕು, ನಮ್ಮೆಲ್ಲರ ಬದುಕು, ಪ್ರಪಂಚದ ಎಲ್ಲ ಪ್ರಾಣಿಗಳ ಬದುಕು. ಜೀವಿತವೆಂದರೆ ಸಾಯುವತನಕ ಉಸಿರಾಡುವುದೇ? ನಾವು ಇಲ್ಲಿಂದ ಹೋಗುವಾಗ ನಾವು ಬಿಟ್ಟು ಹೋಗುವ ಹೆಜ್ಜೆಗುರುತುಗಳೇ ನಮ್ಮ ಬದುಕಿನ ನಿಜವಾದ ಅರ್ಥ. ಈ ಬದುಕು ಸಾಗುವುದು ಈ ಪ್ರಪಂಚದಲ್ಲಿ, ಬ್ರಹ್ಮಾಂಡದಲ್ಲಿ. ಬ್ರಹ್ಮಾಂಡದ ಕಥೆಯೂ ಅದ್ಭುತವೇ. ಆದಿ ಇಲ್ಲ, ಅಂತ್ಯವಿಲ್ಲದ ಮಹಾ ವಿಸ್ಮಯ. ಇದೊಂದು ಬಹುದೊಡ್ಡ ಪ್ರಯೋಗಶಾಲೆ. ಇಲ್ಲಿ ಕೋಟ್ಯಾಂತರ ಜೀವಿಗಳ ಸಾಧನೆಗಳ, ವೈಫಲ್ಯಗಳ, ಪ್ರಯತ್ನಗಳ ಪ್ರಯೋಗ ನಡೆದಿದೆ. ಈ ಪ್ರಯೋಗಗಳೆಲ್ಲ ಜೀವಿಗಳ ಕರ್ಮ. ಕರ್ಮವಿಲ್ಲದೆ ಕ್ಷಣ ಕಾಲವೂ ಬದುಕುವುದು ಸಾಧ್ಯವಿಲ್ಲ. ಆದರೆ ಯಾವುದು ಸರಿಯಾದ ಕರ್ಮ, ಯಾವುದು ಅಲ್ಲ ಎಂಬುದರ ತೀರ್ಮಾನ ಹೇಗೆ? ಮಹಾಭಾರತದಲ್ಲಿ ಚಿಂತೆಯಿಂದ ಒದ್ದಾಡುತ್ತಿದ್ದ ಧೃತರಾಷ್ಟ್ರನಿಗೆ ವಿದುರ ಹೇಳುವ ಮಾತು ತುಂಬ ಮಾರ್ಮಿಕವಾದದ್ದು.

“ಆರ್ಯಕರ್ಮಣಿ ರಜ್ಯಂತೇ”

ಆರ್ಯರು ಎಂದರೆ ಹಿರಿಯರು, ಪ್ರಜ್ಞಾವಂತರು, ಜ್ಞಾನಿಗಳು ಯಾವ ಮಾರ್ಗದಲ್ಲಿ ನಡೆದಿದ್ದಾರೊ ಅದೇ ನಮಗೆ ಸರಿಯಾದ ಮಾರ್ಗ, ಅದೇ ನಮಗೆ ಪ್ರಯೋಜನಕಾರಿಯಾದ ಕರ್ಮ. ಈ ಕರ್ಮ ಯಾವಾಗಲೂ ಧರ್ಮದ ಚೌಕಟ್ಟಿನಲ್ಲೇ ಇದ್ದಾಗ ಶುಭವನ್ನುಂಟುಮಾಡುತ್ತದೆ. ಯಾವ ಒಂದು ಮಾತು ಅಥವಾ ನಡವಳಿಕೆ ಲೋಕಹಿತಕ್ಕೆ ಸಾಧಕವಾಗಿರುತ್ತದೋ ಅದೇ ಧರ್ಮ ಎನ್ನುತ್ತದೆ ಭಗವದ್ಗೀತೆ.
ಈಗ ನಾವು ಗಮನಿಸಿದ ಬದುಕು, ಪ್ರಪಂಚ, ಕರ್ಮ, ಧರ್ಮ ಇವುಗಳಿಗೆಲ್ಲ ಮೂಲ ಬ್ರಹ್ಮವೇ. ಆ ಅಪರಂಪಾರ ಶಕ್ತಿಯೇ ಎಲ್ಲದಕ್ಕೂ ಮೂಲ ಹಾಗೂ ಕಾರಣ.

ಉಳಿದದ್ದೆಲ್ಲ ಆ ಮೂಲ ಶಕ್ತಿ ನಿರ್ಮಿಸಿದ ಮಾಯೆಯ ಕೈಚಳಕ. ಅದೊಂದು ಮಾಯಾಜಾಲ. ಅದರಿಂದ ಪಾರಾಗುವುದು ಸುಲಭವಲ್ಲ. ಅದಕ್ಕೇ ಕೊನೆಗೆ ಈ ಕಗ್ಗ ಹೇಳುತ್ತದೆ, ಎಲ್ಲಕ್ಕೂ ಬ್ರಹ್ಮವೇ ಮೂಲಕಾರಣವಾದರೆ ನಮ್ಮ ಜೀವನವೇ ಬ್ರಹ್ಮ. ಅದನ್ನರಿತಾಗ ಆ ಶಕ್ತಿಯ ಮಾಯೆಯ ಪ್ರಭಾವ ತಿಳಿದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT