ಅತಿಮರ್ಯಾದೆ ತರುವ ಫಲ

7

ಅತಿಮರ್ಯಾದೆ ತರುವ ಫಲ

ಗುರುರಾಜ ಕರಜಗಿ
Published:
Updated:

ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ಆಳುತ್ತಿದ್ದಾಗ ಬೋಧಿಸತ್ವ ಒಂದು ಹಳ್ಳಿಯ ಜಮೀನುದಾರರ ಮನೆಯಲ್ಲಿ ಹಸುವಾಗಿ ಹುಟ್ಟಿದ. ಅವನ ಹೆಸರು ಮಹಾಲೋಹಿತ. ಅವನಿಗೊಬ್ಬ ತಮ್ಮ. ಅವನ ಹೆಸರು ಚುಲ್ಲಲೋಹಿತ. ಇಬ್ಬರೂ ಯಜಮಾನನಿಗೋಸ್ಕರ ಕಷ್ಟಪಟ್ಟು ದುಡಿದು ಅವನ ಪ್ರೀತಿಯನ್ನು ಸಂಪಾದಿಸಿಕೊಂಡಿದ್ದರು. ಕೊಟ್ಟಿಗೆಯಲ್ಲಿ ಇವರಿಬ್ಬರಲ್ಲದೆ ಹತ್ತಾರು ದನ-ಕರುಗಳೂ ಇದ್ದವು.

ಜಮೀನುದಾರನಿಗೆ ಒಬ್ಬಳೇ ಮಗಳು. ಅವಳಿಗೆ ಮದುವೆ ಗೊತ್ತಾಗಿತ್ತು. ಮನೆಯಲ್ಲೆಲ್ಲ ಸಂಭ್ರಮ. ಅನೇಕ ಜನ ಬಂಧುಗಳು ಬಂದು ಸೇರುತ್ತಿದ್ದರು. ಆಗೊಂದು ಘಟನೆಯಾಯಿತು. ಯಜಮಾನನ ಸೇವಕರು ಐದು ಚೆನ್ನಾಗಿ ಬಲಿತ ಹಂದಿಗಳನ್ನು ತಂದು ಕೊಟ್ಟಿಗೆಯ ಒಂದು ಭಾಗದಲ್ಲಿ ಕಟ್ಟಿದರು. ಎರಡೂ ಹಸುಗಳು ಅವನ್ನೇ ನೋಡುತ್ತಿದ್ದವು. ಮರುದಿನದಿಂದ ಹಂದಿಗಳಿಗೆ ರಾಜಮರ್ಯಾದೆ ಪ್ರಾರಂಭವಾಯಿತು. ಅವುಗಳಿಗೆ ವಿಶೇಷವಾದ ಜವೆಗೋಧಿಯ ಅನ್ನವನ್ನು ತಿನ್ನಿಸುತ್ತಿದ್ದರು. ಮೇಲಿಂದ ಮೇಲೆ ಹುರುಳಿಕಾಳುಗಳ ಸೇವೆಯಾಗುವುದು. ಅಷ್ಟೇ ಅಲ್ಲ, ದಿನಕ್ಕೊಂದು ಬಾರಿ ಅವುಗಳಿಗೆ ಉಜ್ಜಿ, ಉಜ್ಜಿ ಸ್ನಾನ ಮಾಡಿಸುವರು.

ಈ ರಾಜೋಪಚಾರವನ್ನು ನೋಡಿ ಚುಲ್ಲಲೋಹಿತನಿಗೆ ತಡೆಯಲಾಗಲಿಲ್ಲ. ಅಣ್ಣನನ್ನು ಕೇಳಿದ, ‘ಅಣ್ಣಾ, ಇದು ಅನ್ಯಾಯವಲ್ಲವೇ? ಕುಟುಂಬದ ಒಳಿತಿಗೆ ದುಡಿಯುವವರು ನಾವು ಮತ್ತು ಈ ಎತ್ತುಗಳು. ಆದರೆ ಮರ್ಯಾದೆ, ವಿಶೇಷ ಕಾಳಜಿ ದೊರಕುತ್ತಿರುವುದು, ನಿನ್ನೆ ಮೊನ್ನೆ ಬಂದ ಹಂದಿಗಳಿಗೆ. ಮನೆಯವರೂ ನಮಗೆ ಬರೀ ಹುಲ್ಲು, ಕಡ್ಡಿಗಳನ್ನೇ ಹಾಕುತ್ತಾರೆ. ಈ ಹಂದಿಗಳಿಗೆ ಅಕ್ಕಿಯ ಪಾಯಸ ಮಾಡಿ ಹಾಕುತ್ತಾರೆ. ಇದಕ್ಕೇನು ಕಾರಣ?’ ತಿಳಿವಳಿಕೆಯುಳ್ಳ ಮಹಾಲೋಹಿತ ಸಮಾಧಾನ ಹೇಳಿತು, ತಮ್ಮಾ, ಮತ್ತೊಬ್ಬರ ಶ್ರೇಯಸ್ಸನ್ನು ನೋಡಿ ಕೊರಗಬಾರದು. ಇನ್ನೊಬ್ಬರು ಯಾವ ಕಾರಣಕ್ಕೆ ಮೆರೆಯುತ್ತಾರೆ ಎಂಬುದು ನಮಗೆ ಗೊತ್ತಿಲ್ಲ. ಹೀಗೆ ಮೆರೆದವರಿಗೆ ಏನು ಕಾದಿದೆ ಎಂಬುದೂ ತಿಳಿದಿಲ್ಲ. ನಡೆಯುವುದನ್ನು ಸುಮ್ಮನೆ ನೋಡುತ್ತಿರು’.

ಮರುದಿನ ಎರಡು ಹಂದಿಗಳು ಮರೆಯಾದವು. ಚುಲ್ಲಲೋಹಿತನಿಗೆ ಚಿಂತೆ. ಮಹಾಲೋಹಿತ ಸುಮ್ಮನಿರಲು ಸನ್ನೆ ಮಾಡಿತು. ಮದುವೆಯ ಮರುದಿನ ಒಂದು ಹಂದಿಯೂ ಕಾಣಲಿಲ್ಲ. ತಮ್ಮನ ಕಾಳಜಿಯನ್ನು ಕಂಡು ಹೇಳಿತು. ‘ತಿಳಿಯಿತೇ ತಮ್ಮ? ಹಂದಿಗಳಿಗೆ ಆ ಪರಿಯ ಆದರ ಸತ್ಕಾರ ದೊರೆತದ್ದು ಅವುಗಳನ್ನು ಬಲಿಕೊಡಲು. ಐದೂ ಹಂದಿಗಳು ಮನೆಗೆ ಬಂದ ಬಂಧು, ಆಹ್ವಾನಿತರ ಹೊಟ್ಟೆಗಳನ್ನು ಸೇರಿವೆ. ಅವು ಮುಂದೆ ಮಾಂಸದ ಸಾಮಗ್ರಿಗಳಾಗಲಿ ಎಂದೇ ಅವುಗಳಿಗೆ ಭೂರಿಭೋಜನ ನೀಡಲಾಗುತ್ತಿತ್ತು. ಆದ್ದರಿಂದ ನಮಗೆ ನೀಡಿದ ಹುಲ್ಲು-ಕಡ್ಡಿ ದೀರ್ಘಾಯುಸ್ಸಿನ ಭರವಸೆಯನ್ನು ನೀಡಿದರೆ ಹಂದಿಗಳಿಗೆ ಹಾಕಿದ ಭಾರೀ ಊಟ ಮರಣಕ್ಕೆ ರಹದಾರಿಯಾಗಿತ್ತು’. ತಮ್ಮ ವಿಷಯ ತಿಳಿದು ನಕ್ಕಿತು.

ನಮ್ಮ ಸಮಾಜದಲ್ಲೂ ಕೆಲವು ಜನ ಬಲುಬೇಗನೇ ಮೇಲಕ್ಕೇರಿ ಸಂಭ್ರಮಿಸುವಾಗ, ಕಳ್ಳದಾರಿಗಳಿಂದ ಹಣಗಳಿಸಿ ಮೆರೆಯುವಾಗ, ಥಟ್ಟನೇ ಅಧಿಕಾರದ ಮಜಲುಗಳನ್ನು ಹತ್ತಿ ಅಟ್ಟಹಾಸ ಮಾಡುವಾಗ ಅವರನ್ನು ಕಂಡು ಕರುಬುವುದು ಬೇಡ, ಸಂಕಟಪಡುವುದೂ ಬೇಡ. ಈ ಕಥೆ ನೆನಪಿದ್ದರೆ ಸಾಕು.

ಬರಹ ಇಷ್ಟವಾಯಿತೆ?

 • 32

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !