ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗೆ ಭಯ ?

Last Updated 17 ಅಕ್ಟೋಬರ್ 2018, 17:20 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜನಾಗಿದ್ದಾಗ ಬೋಧಿಸತ್ವ ಒಂದು ಬ್ರಾಹ್ಮಣ ಕುಲದಲ್ಲಿ ಜನಿಸಿದ್ದ. ಅವನು ದೊಡ್ಡವನಾಗುತ್ತಿದ್ದಂತೆ ಪ್ರಪಂಚದಲ್ಲಿ ಜನರು ಕಾಮ-ಭೋಗಗಳಲ್ಲಿ ಮುಳುಗಿ ಹೋಗುತ್ತಿದ್ದುದನ್ನು ಕಂಡು ಬೇಸರಿಸಿದ. ತಾನು ಇದರಿಂದ ಪಾರಾಗಬೇಕು ಎಂದುಕೊಂಡು ಪಬ್ಬಜಿತನಾಗಿ ಹಿಮಾಲಯಕ್ಕೆ ಹೋದ. ಅನೇಕ ವರ್ಷಗಳ ಕಾಲ ಜ್ಞಾನ ಸಂಪಾದನೆ ಮಾಡಿ ಮತ್ತೊಮ್ಮೆ ಸಾಮಾಜಿಕ ಜೀವನವನ್ನು ನೋಡುವ ಆಶಯದಿಂದ ಒಂದು ಹಳ್ಳಿಗೆ ಬಂದ. ಅಲ್ಲಲ್ಲಿ ಸುತ್ತಾಡುತ್ತಿರುವಾಗ ಒಂದು ಪ್ರವಾಸಿಗರ ತಂಡವನ್ನು ಸೇರಿಕೊಂಡ. ಅವರೊಡನೆ ತಾನೂ ಪ್ರವಾಸ ಮಾಡತೊಡಗಿದ. ಅವನೊಬ್ಬ ತಪಸ್ವಿಯ ಹಾಗೆ ಕಾಣುತ್ತಿದ್ದುದರಿಂದ ಅವರಿಗೂ ಯಾವ ತಕರಾರು ಇರಲಿಲ್ಲ. ಸಮಯ ದೊರೆತಾಗಲೆಲ್ಲ ಅವರಲ್ಲಿ ಕೆಲವರು ಈತನೊಂದಿಗೆ ಮಾತನಾಡುತ್ತ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದರು.

ಒಂದು ಬಾರಿ ಹೀಗೆ ಪ್ರವಾಸ ಮಾಡುವಾಗ ದಟ್ಟವಾದ ಕಾಡನ್ನು ದಾಟಬೇಕಾಯಿತು. ಸಂಜೆಯಾದ್ದರಿಂದ ಪ್ರವಾಸವನ್ನು ನಿಲ್ಲಿಸಿ ಅವರು ಬಿಡಾರಗಳನ್ನು ನಿರ್ಮಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದರು. ಬೋಧಿಸತ್ವ ಅಲ್ಲಿಯೇ ಮರದ ಕೆಳಗೆ ಧ್ಯಾನಸ್ಥನಾಗಿ ಕುಳಿತಿದ್ದ. ರಾತ್ರಿ ದಟ್ಟವಾದ ಮೇಲೆ ತನ್ನಷ್ಟಕ್ಕೆ ತಾನೇ ಏನನ್ನೋ ಗುನುಗುನಿಸುತ್ತಾ ಬಿಡಾರಗಳ ಸುತ್ತ ನಡೆದಾಡುತ್ತಿದ್ದ. ಆ ಸಮಯಕ್ಕೆ ಕೆಲವು ಕಳ್ಳರು ಈ ಬಿಡಾರಗಳನ್ನು ನೋಡಿ, ಲೂಟಿ ಮಾಡಲು ಬಂದರು. ಹತ್ತಿರಕ್ಕೆ ಬಂದು ನೋಡಿದರೆ ಈ ತಪಸ್ವಿ ಬಿಡಾರಗಳ ಸುತ್ತ ಪ್ರದಕ್ಷಿಣೆ ಹಾಕುತ್ತಿದ್ದಾನೆ! ಅವರಿಗೆ ಭಯವಾಯಿತು. ಆತ ಅವರನ್ನು ಕಂಡು ಕೂಗು ಹಾಕಿದರೆ ಎಲ್ಲ ಪ್ರವಾಸಿಗರು ಎದ್ದು ಹೊರಬಂದು ತಮ್ಮನ್ನು ಹಿಡಿದು ದಂಡಿಸುತ್ತಾರೆ. ಆದ್ದರಿಂದ ಅವನು ಮಲಗಿದ ನಂತರ ದಾಳಿ ಮಾಡೋಣವೆಂದು ಹೊಂಚು ಹಾಕಿ ಕುಳಿತುಕೊಂಡರು. ಆದರೆ ಈ ತಪಸ್ವಿ ರಾತ್ರಿಯಿಡೀ ಶತಪಥ ಹಾಕುತ್ತಲೇ ಇದ್ದ. ಬೆಳಗಿನವರೆಗೂ ಹೀಗೆಯೇ ನಡೆಯಿತು. ಬೆಳಗಾದ ನಂತರ ಪ್ರವಾಸಿಗರು ಬಿಡಾರಗಳಿಂದ ಹೊರಬಂದರು. ಮರೆಯಲ್ಲಿ ಕಾದು ಕುಳಿತಿದ್ದ ಕಳ್ಳರಿಗೆ ನಿರಾಸೆಯಾದರೂ ಈ ತಪಸ್ವಿಯ ಬಗ್ಗೆ ಅಭಿಮಾನವೂ ಬಂದಿತು. ಆತ ಒಂದು ಕ್ಷಣವೂ ವಿಶ್ರಾಂತಿ ಪಡೆಯದೆ ಅವರನ್ನೆಲ್ಲ ರಕ್ಷಿಸಿದನಲ್ಲ!

ಕಳ್ಳರು ಹೊರಡುವಾಗ ಪ್ರವಾಸಿಗರಿಗೆ, ‘ನಾವು ಕಳ್ಳರು, ನಿಮ್ಮನ್ನು ಲೂಟಿ ಮಾಡಲೆಂದೇ ಬಂದವರು. ಆದರೆ ಈ ಮಹಾತ್ಮ ನಿಮ್ಮ ಸುತ್ತಲೂ ತಿರುಗಾಡುತ್ತ ರಕ್ಷಿಸಿಕೊಂಡ. ನೀವು ಅವನಿಗೆ ಕೃತಜ್ಞರಾಗಿರಬೇಕು. ಅವನಿಗೊಂದು ಸನ್ಮಾನ ಮಾಡಿ’ ಎಂದು ಹೇಳಿ ಅಲ್ಲಿಂದ ಹೊರಟು ಹೋದರು. ಪ್ರವಾಸಿಗರು ಗಾಬರಿಯಿಂದ ತಪಸ್ವಿಯ ಕಡೆಗೆ ಬಂದು, ‘ಸ್ವಾಮಿ, ನೀವು ರಾತ್ರಿ ಕಳ್ಳರನ್ನು ಗಮನಿಸಿದ್ದಿರಾ?’ ಎಂದು ಕೇಳಿದರು. ‘ಹೌದು, ಅವರನ್ನು ನಾನು ನೋಡಿದೆ. ಅಂತೆಯೇ ಮಲಗದೆ ಪ್ರದಕ್ಷಿಣೆ ಹಾಕುತ್ತಿದ್ದೆ’ ಎಂದ ತಪಸ್ವಿ. ‘ಆ ಕಳ್ಳರನ್ನು ನೋಡಿ ಹೆದರಿಕೆಯಾಗಲಿಲ್ಲವೇ?’ ಪ್ರಶ್ನಿಸಿದರು ಪ್ರವಾಸಿಗರು. ತಪಸ್ವಿ ಹೇಳಿದ, ‘ನನಗೇಕೆ ಭಯ? ನನ್ನ ಹತ್ತಿರ ಏನಾದರೂ ಇದ್ದರೆ ತಾನೆ ಭಯ? ಹಣವಂತರಿಗೆ ಕಳ್ಳರಿಂದ ಭಯ. ಇದ್ದವರಿಗೇ ಕಳೆದುಕೊಳ್ಳುವ ಭಯ. ಏನೂ ಇಲ್ಲದೆ ತಿರುಗಾಡುವ ನನಗೆ ಊರಿನಲ್ಲಾಗಲೀ, ಕಾಡಿನಲ್ಲಾಗಲೀ ಯಾವ ಭಯವೂ ಇಲ್ಲ’.

ಬುದ್ಧ ಹೇಳಿದ, ‘ಕರುಣೆಯಿಂದ ಕೂಡಿ ಋಜುಮಾರ್ಗದಲ್ಲಿ ನಡೆಯುವವನಿಗೆ, ಕಳ್ಳಕಾಕರ ಭಯವಿಲ್ಲ, ಮೋಸಗಾರರ ಹೆದರಿಕೆಯಿಲ್ಲ, ಅಧಿಕಾರಿಗಳು, ಅಹಂಕಾರಿಗಳು, ಜ್ಞಾನಿಗಳು ಯಾರೂ ಈ ವ್ಯಕ್ತಿಗೆ ತೊಂದರೆ ಮಾಡಲಾರರು. ಆದ್ದರಿಂದ ಬದುಕಿನಲ್ಲಿ ಅತ್ಯಂತ ಭಯವಿಲ್ಲದ ಮಾರ್ಗ ಕರುಣೆಯ ಋಜುಮಾರ್ಗ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT