ಶನಿವಾರ, ಮಾರ್ಚ್ 6, 2021
21 °C

ಕೃತಜ್ಞತೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಕಾಶಿಯಲ್ಲಿ ಬ್ರಾಹ್ಮಣನ ಮಗನಾಗಿ ಹುಟ್ಟಿದ. ತಕ್ಕಶಿಲೆಗೆ ಹೋಗಿ ಸಕಲ ವಿದ್ಯೆಗಳಲ್ಲಿ ಪಾರಂಗತನಾಗಿ ಮುಂದೆ ಪಬ್ಬಜಿತನಾಗಿ ಕಾಡಿನಲ್ಲಿ ಆಶ್ರಮ ಕಟ್ಟಿಕೊಂಡು ಕಂದಮೂಲಗಳನ್ನು ತಿಂದು ವಾಸವಾಗಿದ್ದ.

ಈ ಸಮಯದಲ್ಲಿ ವಾರಣಾಸಿಯ ಗಡಿ ಪ್ರದೇಶದಲ್ಲಿ ಅರಾಜಕತೆಯಾಗಿ ವೈರಿಗಳು ದಂಡೆತ್ತಿ ಬಂದರು. ಆಗ ಬ್ರಹ್ಮದತ್ತ ಸೈನ್ಯದೊಂದಿಗೆ ಅಲ್ಲಿಗೆ ಹೋಗಿ ಯುದ್ಧ ಮಾಡಿದ. ಆದರೆ ಶತ್ರುಸೈನ್ಯ ಬಹಳ ಸಂಖ್ಯೆಯಲ್ಲಿದ್ದುದರಿಂದ ಆತ ಸೋತು ರಣದಿಂದ ಹಿಂದಕ್ಕೆ ಬಂದ. ಆನೆಯನ್ನೇರಿ ಕಾಡಿನಲ್ಲಿ ಬರುತ್ತಿದ್ದಾಗ ಬೋಧಿಸತ್ವನ ಆಶ್ರಮ ಕಂಡಿತು. ತುಂಬ ನೀರಡಿಕೆಯಾದ್ದರಿಂದ ಅಲ್ಲಿಗೆ ಹೋದರೆ ನೀರು ಸಿಕ್ಕಿತೆಂದುಕೊಂಡು ಆಶ್ರಮದೊಳಗೆ ಬಂದ. ಆದರೆ ಬೋಧಿಸತ್ವ ಕಂದಮೂಲಗಳನ್ನು ತರಲು ಹೊರಗೆ ಹೋಗಿದ್ದರಿಂದ ಯಾರೂ ಇರಲಿಲ್ಲ. ಆತ ಆನೆಯಿಂದ ಇಳಿದು ಹುಡುಕಾಡಿದಾಗ ಅಲ್ಲೊಂದು ಬಾವಿ ಕಂಡಿತು. ಅಲ್ಲಿ ಹಗ್ಗ, ಬಿಂದಿಗೆ ಯಾವುದೂ ಇರಲಿಲ್ಲ. ಬಾಯಾರಿಕೆಯನ್ನು ತಡೆಯುವುದು ಅಸಾಧ್ಯವೆನ್ನಿಸಿದಾಗ ಆನೆಯ ಕೊರಳಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ, ಒಂದು ತುದಿಯನ್ನು ಆನೆಯ ಕಾಲಿಗೆ ಕಟ್ಟಿ, ಇನ್ನೊಂದು ತುದಿಯನ್ನು ಹಿಡಿದುಕೊಂಡು ಬಾವಿಯಲ್ಲಿ ಇಳಿದ. ಹಗ್ಗ ಚಿಕ್ಕದಾಗಿದ್ದರಿಂದ, ನೀರನ್ನು ಮುಟ್ಟಲಾಗಲಿಲ್ಲ. ನಂತರ ತಾನು ಹೊದ್ದಿದ್ದ ಶಲ್ಯವನ್ನು ಹಗ್ಗದ ತುದಿಗೆ ಕಟ್ಟಿ ಇಳಿದ. ಆಗ ಅವನ ಕಾಲುಗಳು ಮಾತ್ರ ನೀರನ್ನು ಸ್ಪರ್ಶಿಸುತ್ತಿದ್ದವು. ನೀರು ಕುಡಿಯಲು ಸಾಧ್ಯವಿಲ್ಲದಿದ್ದರೆ ಸಾಯುವುದೇ ವಾಸಿಯೆಂದು ಶಲ್ಯದ ಕೈ ಬಿಟ್ಟು ನೀರಿಗೆ ಹಾರಿದ. ಹೊಟ್ಟೆ ತುಂಬ ನೀರು ಕುಡಿದ. ಮೇಲೆ ಬರುವ ದಾರಿ ಕಾಣದೆ ಬಾವಿಯ ದಂಡೆಯನ್ನು ಹಿಡಿದು ನಿಂತುಬಿಟ್ಟ.

ಎಷ್ಟೋ ಸಮಯದ ಮೇಲೆ ಆಶ್ರಮಕ್ಕೆ ಬಂದ ಬೋಧಿಸತ್ವ ಕವಚವನ್ನು ಧರಿಸಿದ್ದ ಆನೆಯನ್ನು ಕಂಡು ರಾಜ ಬಂದಿರಬೇಕೆಂದು ಭಾವಿಸಿದ. ಎಲ್ಲಿ ಹುಡುಕಿದರೂ ರಾಜ ಕಾಣಲಿಲ್ಲ. ಬಾವಿಯ ಹತ್ತಿರ ನಿಂತ ಆನೆಯನ್ನು ಮತ್ತು ಅದರ ಕಾಲಿಗೆ ಕಟ್ಟಿದ ಹಗ್ಗವನ್ನು ನೋಡಿ ಬಾವಿಯ ಹತ್ತಿರ ಬಂದ. ಆನೆ ಸರಿದು ದಾರಿ ನೀಡಿತು. ಬಾವಿಯಲ್ಲಿದ್ದ ರಾಜನನ್ನು ಕಂಡು, ಹಗ್ಗದ ಏಣಿಯನ್ನು ಕೆಳಗಿಳಿಸಿ ರಾಜನನ್ನು ಮೇಲಕ್ಕೆ ಎಳೆದುಕೊಂಡ. ನಂತರ ಅವನಿಗೆ ಆಹಾರ ಕೊಟ್ಟು, ಕಾಡು ತೈಲಗಳನ್ನು ಮೈಗೆ ಹಚ್ಚಿ, ಒತ್ತಿ ಸ್ನಾನ ಮಾಡಿಸಿದ. ಮೂರು-ನಾಲ್ಕು ದಿನ ಆಶ್ರಮದಲ್ಲೇ ಉಳಿಸಿಕೊಂಡು ನಂತರ ರಾಜಧಾನಿಗೆ ಕಳುಹಿಸಿದ. ಈ ಸಮಯದಲ್ಲಿ ರಾಜ ಕಾಣೆಯಾದದ್ದನ್ನು ತಿಳಿದ ಅಮಾತ್ಯರು ದೊಡ್ಡ ಸಂಖ್ಯೆಯಲ್ಲಿಯ ಸೈನ್ಯವನ್ನು ಕರೆದೊಯ್ದು ವೈರಿಗಳನ್ನು ಸೋಲಿಸಿ, ಓಡಿಸಿಬಿಟ್ಟಿದ್ದರು. ಆಗ ಆನೆ ಏರಿ ಬಂದ ರಾಜನನ್ನು ಗೌರವದಿಂದ ಅರಮನೆಗೆ ಕರೆದುಕೊಂಡು ಹೋದರು.

ತನ್ನ ಪ್ರಾಣ ಉಳಿಸಿದ ಬೋಧಿಸತ್ವನನ್ನು ರಾಜ ಅರಮನೆಗೆ ಕರೆಸಿಕೊಂಡು ಅವನನ್ನು ಅತ್ಯಂತ ವಿಶೇಷವಾಗಿ ಸತ್ಕರಿಸಿದ. ರಾಜ ಸನ್ಯಾಸಿಗೆ ಈ ಪರಿಯ ಮರ್ಯಾದೆ ನೀಡುವುದನ್ನು ಕಂಡ ಮಂತ್ರಿಗಳು ಹಾಗೂ ಅಧಿಕಾರಿಗಳು ರಾಜನಿಗೆ ಈ ಸನ್ಯಾಸಿ ಏನೋ ಮಾಟ ಮಾಡಿಸಿರಬೇಕು ಎಂದು ಗಾಳಿಸುದ್ದಿಯನ್ನು ಹರಡಿದರು. ಅದು ಬೋಧಿಸತ್ವನಿಗೂ ತಲುಪಿ ಅರಮನೆಯಿಂದ ಹೊರಡಲು ಸಿದ್ಧನಾದ. ಆಗ, ರಾಜ ಮಂತ್ರಿಗಳನ್ನು, ಅಧಿಕಾರಿಗಳನ್ನು, ಸಮಾಜದ ಹಿರಿಯರನ್ನು ಕರೆಸಿ, ಬೋಧಿಸತ್ವ ತನ್ನ ಜೀವವನ್ನು ಉಳಿಸಿದ್ದನ್ನು ಹೇಳಿ, “ಮನುಷ್ಯನ ಅತ್ಯಂತ ಶ್ರೇಷ್ಠ ಗುಣವೆಂದರೆ ಕೃತಜ್ಞತೆ. ಅದನ್ನು ತೋರದ ಮನುಷ್ಯ ಪಶುಗಳಿಗಿಂತಲೂ ಕಡೆ” ಎಂದು ಎಲ್ಲರನ್ನು ಒಪ್ಪಿಸಿದ.

ಇಂದಿಗೂ ಆ ಮಾತು ಸತ್ಯ ಆದರೆ ಅದು ಅಪರೂಪವಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು