ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾತ್ವಿಕರ ಸಹನೆಯ ಪರೀಕ್ಷೆ

Last Updated 26 ಜುಲೈ 2019, 19:56 IST
ಅಕ್ಷರ ಗಾತ್ರ

ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ, ಬೋಧಿಸತ್ವ ಒಂದು ಎಮ್ಮೆಯಾಗಿ ಜನ್ಮತಳೆದಿದ್ದ. ಅವನು ವಾಸವಿದ್ದದ್ದು ಹಿಮಾಲಯದ ತಪ್ಪಲಿನಲ್ಲಿ. ಅವನು ದೊಡ್ಡವನಾದಂತೆ ಬೆಟ್ಟದಂತೆ ಮಹಾಶರೀರಿಯಾದ, ಶಕ್ತಿಶಾಲಿಯಾದ. ಅವನ ಮುಂದೆ ಬರಲು ಆನೆಗಳೂ ಹೆದರುತ್ತಿದ್ದವು. ಆದರೆ ಬೋಧಿಸತ್ವ ಸದಾಕಾಲ ಒಳ್ಳೆಯದನ್ನೇ ಚಿಂತಿಸುತ್ತ, ಯಾರಿಗೂ ತೊಂದರೆ ಕೊಡದೆ ಸಹನೆ, ತಾಳ್ಮೆಗಳನ್ನು ಮೈಗೂಡಿಸಿಕೊಂಡಿದ್ದ. ಆ ಎಮ್ಮೆ ದುರ್ಗಮವಾದ ಹಿಮಾಲಯದ ಕಾಡುಗಳಲ್ಲಿ ನಿರ್ಭೀತಿಯಿಂದ ಸಂಚರಿಸುತ್ತ, ತನಗೆ ಬೇಕಾದ ಆಹಾರವನ್ನು ಪಡೆಯುತ್ತ, ಒಂದು ದೊಡ್ಡ ಮರದ ಕೆಳಗೆ ದಟ್ಟವಾದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿತ್ತು.

ಆ ಮರದ ಮೇಲೆ ಅನೇಕ ಕೋತಿಗಳಿದ್ದವು. ಕೋತಿಗಳು ಈ ಭಾರೀ ಎಮ್ಮೆಯನ್ನು ನೋಡಿ ಮೊದಮೊದಲು ಹೆದರಿದವು. ನಂತರ ದಿನಗಳೆದಂತೆ ಅದರ ಸಾತ್ವಿಕ ಸ್ವಭಾವವನ್ನು ಕಂಡು ಅದರ ಬಗ್ಗೆ ಗೌರವ ತಾಳಿದವು. ಆದರೆ ಒಂದು ಕೋತಿ ಮಾತ್ರ ಎಮ್ಮೆಯ ಸೌಜನ್ಯವನ್ನು ದುರುಪಯೋಗಗೊಳಿಸಿಕೊಳ್ಳುತ್ತಿತ್ತು. ಎಮ್ಮೆಯ ಬೆನ್ನ ಮೇಲೆ ಹಾರಿ ನಿಂತು ಮಲಮೂತ್ರ ವಿಸರ್ಜನೆ ಮಾಡುತ್ತಿತ್ತು, ಅದರ ಬಾಲ ಹಿಡಿದು ಎಳೆದಾಡುತ್ತಿತ್ತು. ಎಮ್ಮೆ ಇನ್ನೂ ಸುಮ್ಮನಿದ್ದಾಗ ಅದರ ವಿಶಾಲವಾದ ಕೋಡುಗಳಿಗೆ ನೇತುಬಿದ್ದು ಜೋಕಾಲಿಯಾಡುತ್ತಿತ್ತು. ಪ್ರತಿಬಾರಿ ಕೋತಿ ತೊಂದರೆ ಕೊಟ್ಟಾಗ ಬೋಧಿಸತ್ವ ಎಮ್ಮೆ ತಾನು ಸಾಧಿಸಬೇಕೆಂದುಕೊಂಡಿದ್ದ ಶಾಂತಿ, ಕ್ಷಮೆ, ಮೈತ್ರಿ, ಕರುಣೆಗಳನ್ನು ನೆನಪಿಸಿಕೊಂಡು ಕೋತಿಯ ಅನಾಚಾರವನ್ನು ಸಹಿಸಿಕೊಂಡಿತು.

ಇದನ್ನು ಕಂಡ ವೃಕ್ಷದೇವತೆ ಕೇಳಿತು, ‘ನೀನು ಮಹಿಷರಾಜ. ನಿನ್ನ ಶಕ್ತಿಯ ಮುಂದೆ ಕೋತಿ ಒಂದು ಹುಳ. ನೀನು ಮನಸ್ಸು ಮಾಡಿದರೆ ಅರೆಕ್ಷಣದಲ್ಲಿ ಅದನ್ನು ಕೊಂಬಿನಿಂದ ಇರಿದು ಕಾಲಿನಲ್ಲಿ ಹೊಸಕಿ ಹಾಕಿ ಬಿಡಬಹುದು. ಯಾಕೆ ಅದರ ಉಪಟಳವನ್ನು ಸಹಿಸಿಕೊಂಡಿದ್ದೀಯಾ? ಈ ಚಂಚಲವಾದ ದ್ರೋಹಿಯನ್ನು ನೀನು ದಮನಮಾಡದೆ ಹೋದರೆ ಅದು ಮತ್ತಷ್ಟು ಪ್ರಾಣಿಗಳಿಗೆ ಹೆಚ್ಚಿನ ತೊಂದರೆ ನೀಡುತ್ತದೆ’ ಆಗ ಬೋಧಿಸತ್ವ ಎಮ್ಮೆ ಹೇಳಿತು, ‘ಕೋತಿ, ಜಾತಿಯಲ್ಲಿ, ಶಕ್ತಿಯಲ್ಲಿ ನನಗೆ ಸಮನಾದದ್ದಲ್ಲ. ಅದರೊಂದಿಗೆ ಹೋರಾಡಿ ಅದನ್ನು ಕೊಂದರೆ ನನಗೆ ಗೌರವವೂ ಬರುವುದಿಲ್ಲ. ಶಾಂತಿಯನ್ನು, ತಾಳ್ಮೆಯನ್ನು, ಸಹನೆಯನ್ನು ಮೈಗೂಡಿಸಿಕೊಳ್ಳಬೇಕೆಂಬ ನನ್ನ ಗುರಿಗೆ ಅದರ ಮೇಲಿನ ಆಕ್ರಮಣ ಸಹಾಯಮಾಡುವುದಿಲ್ಲ, ಬದಲಾಗಿ ನನ್ನ ಮನಸ್ಸಿನಲ್ಲೂ ಕ್ರೋಧ, ದ್ವೇಷ ಹುಟ್ಟಿಕೊಳ್ಳುತ್ತವೆ’. ವೃಕ್ಷದೇವತೆ ಮತ್ತೆ ಕೇಳಿತು, ‘ಹಾಗಾದರೆ ಇಂತಹ ದುರ್ನಡತೆಗೆ ಶಿಕ್ಷೆ ಬೇಡವೇ?’ ಬೋಧಿಸತ್ವ ಮಹಿಷ, ‘ಅದಕ್ಕೆ ಶಿಕ್ಷೆಯನ್ನು ನಾನು ಕೊಡಲಾರೆ. ಆದರೆ ಕೋತಿಗೆ ಅನಾಚಾರ ಮಾಡುವ ಸ್ವಭಾವ ಬಲಿತು ಬೇರೊಂದು ಪ್ರಾಣಿಯನ್ನು ನನ್ನಂತೆಯೇ ಬಗೆದು ತೊಂದರೆ ಮಾಡಿದಾಗ ತಕ್ಕ ಶಿಕ್ಷೆ ಖಂಡಿತವಾಗಿಯೂ ದೊರೆಯುತ್ತದೆ. ನನ್ನ ಅಹಿಂಸಾ ವೃತವೂ ನಡೆಯುತ್ತದೆ’ ಎಂದಿತು.

ನಾಲ್ಕು ದಿನಗಳ ನಂತರ ಬೋಧಿಸತ್ವ ಎಮ್ಮೆ ಬೇರೆಡೆಗೆ ಹೋದಾಗ ಮತ್ತೊಂದು ಎಮ್ಮೆ ಬಂದು ಮರದ ಕೆಳಗೆ ನಿಂತಿತ್ತು. ಸೊಕ್ಕು ತಲೆಗೇರಿದ ಕೋತಿ ಮತ್ತೆ ಆ ಎಮ್ಮೆಯ ಮೇಲೂ ಅನಾಚಾರ ಮಾಡಿತು. ತಕ್ಷಣ ಆ ಬಲಿತ ಎಮ್ಮೆ ಕೋತಿಯನ್ನು ನೆಲಕ್ಕೆ ಬೀಳಿಸಿ, ಕೊಂಬುಗಳಿಂದ ಎದೆಯನ್ನು ಇರಿದು, ಕಾಲುಗಳಿಂದ ಅದನ್ನು ತುಳಿದು ತುಂಡು ತುಂಡು ಮಾಡಿಬಿಟ್ಟಿತು.

ಸಜ್ಜನರಿಗೆ ತೊಂದರೆಕೊಡುವುದನ್ನೇ ಉದ್ಯೋಗ ಮಾಡಿಕೊಂಡ ದುರ್ಜನರಿಗೆ ಹೀಗೆ ಒಂದಿಲ್ಲೊಂದು ದಿನ ಬೇರೆಕಡೆಯಿಂದ ಒದೆ ಬಂದೇ ಬರುತ್ತದೆ. ಸಾತ್ವಿಕರು ಸಹನೆ ತೋರುತ್ತಾರೆಂದು ಅವರನ್ನು ಅಶಕ್ತರೆಂದು ಭಾವಿಸುವುದು ತಪ್ಪು. ಅವರ ತಾಳ್ಮೆಯನ್ನು ಕೆಣಕುವುದು ಕ್ಷೇಮವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT