ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕರ ನಡತೆ

Last Updated 10 ನವೆಂಬರ್ 2019, 20:14 IST
ಅಕ್ಷರ ಗಾತ್ರ

ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಒಂದು ಬ್ರಾಹ್ಮಣ ಕುಲದಲ್ಲಿ ಹುಟ್ಟಿದ್ದ. ದೊಡ್ಡವನಾದಂತೆ ಸಕಲ ವಿದ್ಯೆಗಳನ್ನು ಕಲಿತು, ವೈರಾಗ್ಯದಿಂದ ಋಷಿ ಪ್ರವ್ರಜ್ಯ ಸ್ವೀಕರಿಸಿ ಹಿಮಾಲಯದಲ್ಲಿ ಆಶ್ರಮ ಕಟ್ಟಿಕೊಂಡು ನೆಲೆಸಿದ್ದ.

ರಾಜ ತುಂಬ ಧರ್ಮಿಷ್ಠನಾಗಿದ್ದ. ತಾನು ಮಾಡುವುದು ಸರಿಯೆ, ತನ್ನಲ್ಲಿ ದೋಷಗಳೇನಾದರೂ ಇವೆಯೆ ಎಂದು ಪರೀಕ್ಷಿಸಿಕೊಳ್ಳಲು ಆತ ಮಾರುವೇಷದಲ್ಲಿ ನಗರಗಳಲ್ಲಿ ಸುತ್ತಾಡಿ ಜನಾಭಿಪ್ರಾಯ ಕೇಳುತ್ತಿದ್ದ. ಯಾರೂ ಅವನಲ್ಲಿ ದೋಷಗಳನ್ನೇ ಕಾಣಲಿಲ್ಲ. ಎಲ್ಲರೂ ಅವನನ್ನು ಹೊಗಳುವವರೆ. ನಂತರ ಆತ ಹಳ್ಳಿಗಳಲ್ಲಿ ತಿರುಗಾಡಿದ. ಅಲ್ಲಿ ಕೂಡ ಜನರು ಅವನಲ್ಲಿ ಒಳ್ಳೆಯ ಗುಣಗಳನ್ನೇ ಕಂಡರು. ಈಗ ಹಿಮಾಲಯದಲ್ಲಿರುವ ಸಾಧುಗಳು, ಸಂತರು ಇವರನ್ನು ಕೇಳಿ ನೋಡಬೇಕೆಂದು ಅಲ್ಲಿಗೆ ನಡೆದ. ಹೀಗೆ ಸುತ್ತಾಡುತ್ತಾ ಬೋಧಿಸತ್ವನ ಆಶ್ರಮಕ್ಕೆ ಬಂದು ನಮಸ್ಕರಿಸಿ ಕುಳಿತುಕೊಂಡ.

ಬೋಧಿಸತ್ವ ಬಂದ ಅತಿಥಿಗಾಗಿ ಕುಡಿಯಲು ನೀರು ಕೊಟ್ಟು, ತನಗಾಗಿ ತಂದಿಟ್ಟುಕೊಂಡಿದ್ದ ಅರಳಿ ಹಣ್ಣುಗಳನ್ನು ಅವನಿಗೆ ನೀಡಿದ. ಆ ಹಣ್ಣುಗಳನ್ನು ತಿಂದ ರಾಜನಿಗೆ ಆಶ್ಚರ್ಯವಾಯಿತು. ಇದುವರೆಗೂ ಅಂಥ ಹಣ್ಣುಗಳನ್ನೇ ಆತ ಕಂಡಿರಲಿಲ್ಲ. ಅವು ಸಕ್ಕರೆಯಂತೆ ಸಿಹಿಯಾಗಿದ್ದವು, ಶಕ್ತಿವರ್ಧಕವಾಗಿದ್ದವು. ರಾಜ ಬೋಧಿಸತ್ವನನ್ನು ಕೇಳಿದ, ‘ಭಂತೆ, ಹಣ್ಣುಗಳು ಇಷ್ಟು ಸಿಹಿಯಾಗಿರಲು ಕಾರಣವೇನು?’ ಬೋಧಿಸತ್ವ ಹೇಳಿದ, ‘ಯಾವಾಗ ರಾಜ ಧರ್ಮಿಷ್ಠನಾಗಿರು ತ್ತಾನೋ, ನ್ಯಾಯವಾಗಿ ರಾಜ್ಯವನ್ನು ಮುನ್ನಡೆಸುತ್ತಾನೋ ಆಗ ಹಣ್ಣುಗಳು ಸಿಹಿಯಾಗಿರುತ್ತವೆ. ಈಗಿರುವ ರಾಜ ಧರ್ಮದಲ್ಲಿ ನಡೆಯುತ್ತಿದ್ದಾನೆ’. ರಾಜನಿಗೆ ಬಹಳ ಸಂತೋಷವಾಯಿತು.

ಸಂತೋಷದ ಜೊತೆಗೆ ಹೆಮ್ಮೆಯೂ ಆಯಿತು. ನಿಧಾನವಾಗಿ ಹೆಮ್ಮೆ ಅಹಂಕಾರವಾಯಿತು. ಅಹಂಕಾರದಿಂದ ಉನ್ಮತ್ತತೆ ಬಂತು. ತಾನು ಮಾಡಿದ್ದೇ ಸರಿ ಎಂಬ ಭಾವನೆ ಬಲಿಯಿತು. ಅವನ ರಾಜ್ಯ ನಡೆಸುವ ರೀತಿಯೇ ಬೇರೆಯಾಯಿತು. ಅಧರ್ಮವೇ ಧರ್ಮವಾಯಿತು. ಜನರ ಬದುಕೇ ದುಸ್ಸಹವಾಯಿತು. ನಾಲ್ಕೈದು ವರ್ಷಗಳಲ್ಲಿ ಜನ ರೋಸಿ ಹೋದರು. ಹಿಂದೆ ಇದೇ ರಾಜ ಅಷ್ಟೊಂದು ಧರ್ಮಿಷ್ಠನಾಗಿದ್ದ ಎಂಬುದು ಮರೆತೇ ಹೋಯಿತು.

ಈಗ ರಾಜ ತನ್ನ ಆಡಳಿತದ ಬಗ್ಗೆ ಜನ ಏನು ಹೇಳುತ್ತಾರೆ ಎಂಬುದನ್ನು ಕೇಳಬೇಕೆಂದು ತೀರ್ಮಾನಿಸಿ ಮೊದಲು ಹಿಮಾಲಯಕ್ಕೆ ನಡೆದ. ಅಲ್ಲೆಲ್ಲ ತಿರುಗಾಡಿ ಕೊನೆಗೆ ಬೋಧಿಸತ್ವದ ಆಶ್ರಮಕ್ಕೆ ಬಂದ. ಹಿಂದಿನಂತೆ ಬೋಧಿಸತ್ವ ರಾಜನಿಗೆ ಕುಡಿಯಲು ನೀರು ಕೊಟ್ಟು ತನ್ನಲ್ಲಿದ್ದ ಅರಳೀ ಹಣ್ಣುಗಳನ್ನು, ಮತ್ತಿತರ ಹಣ್ಣುಗಳನ್ನು ನೀಡಿದ. ರಾಜ ನೀರು ಕುಡಿದಾಗ ಗಮನಿಸಿದ. ನೀರು ತುಂಬ ಸವುಳಾಗಿತ್ತು. ಬಾಯಿಯಲ್ಲಿ ಹಾಕದಷ್ಟು ರುಚಿಹೀನವಾಗಿತ್ತು.

ಹಣ್ಣುಗಳಂತೂ ಕಹಿಯಾಗಿದ್ದವು. ಒಂದು ಹಣ್ಣನ್ನೂ ತಿನ್ನುವುದು ಅಸಾಧ್ಯವೆನ್ನಿಸಿತು. ರಾಜ ಕೇಳಿದ, ‘ಈ ನೀರು ಇಷ್ಟು ಸವುಳಾಗಿದೆ, ಹಣ್ಣುಗಳು ಕಹಿಯಾಗಿವೆ. ಇವುಗಳನ್ನು ತಿಂದು ಹೇಗೆ ಬದುಕುತ್ತೀರಿ? ಬೇರೆ ಒಳ್ಳೆಯ ನೀರು, ಹಣ್ಣು ದೊರೆಯುವುದಿಲ್ಲವೇ?’ ಬೋಧಿಸತ್ವ ಹೇಳಿದ, ‘ಏನು ಮಾಡುವುದು, ದೊರೆಯುವ ಎಲ್ಲ ನೀರು, ಹಣ್ಣುಗಳು ಹೀಗೆಯೇ ರಸಹೀನವಾಗಿವೆ, ತಮ್ಮ ಶಕ್ತಿಯನ್ನು ಕಳೆದುಕೊಂಡು ಬಿಟ್ಟಿವೆ. ಇದಕ್ಕೆಲ್ಲ ಕಾರಣ ದೇಶದ ನಾಯಕತ್ವ. ರಾಜ ದುರ್ಮಾರ್ಗಿಯಾಗಿದ್ದಾನೆ, ಅಹಂಕಾರಿಯಾಗಿದ್ದಾನೆ. ಆತ ಧರ್ಮದ ದಾರಿಯನ್ನು ಬಿಟ್ಟು ನಡೆಯುತ್ತಿರುವುದರಿಂದ ಇಡೀ ನಿಸರ್ಗವೇ ಅದನ್ನು ಕಹಿಯಾಗಿ ಪ್ರತಿಭಟಿಸುತ್ತಿದೆ’ ಎಂದ. ರಾಜನಿಗೆ ತನ್ನ ತಪ್ಪಿನ ಅರಿವಾಗಿ ತಿದ್ದಿಕೊಂಡು ಧರ್ಮಮಾರ್ಗದಲ್ಲಿ ಬದುಕಿದನಂತೆ.

ಇದು ಅತ್ಯಂತ ಸಾಂಕೇತಿಕವಾದ ಕಥೆ, ‘ರಾಜಾ ಕಾಲಸ್ಯ ಕಾರಣಂ’ ಎನ್ನುವಂತೆ, ನಾಯಕರ ನಡತೆ ಕೇವಲ ರಾಜಕೀಯ ಸ್ಥಿತ್ಯಂತರಗಳನ್ನು ತರುವುದರೊಂದಿಗೆ, ಇಡೀ ಜನಪದದ ಮೇಲೆ, ವಾತಾವರಣದ ಮೇಲೆ ಪರಿಣಾಮವನ್ನು ಬೀರುತ್ತದೆ. ಅದಕ್ಕೇ ನಾಯಕರು ಅತ್ಯಂತ ಜವಾಬ್ದಾರಿಯಿಂದ, ಎಚ್ಚರಿಕೆಯಿಂದ ವ್ಯವಹರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT