ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಪಂಚದ ಬೆರಗು

Last Updated 1 ಜನವರಿ 2020, 19:55 IST
ಅಕ್ಷರ ಗಾತ್ರ

ಇಂದೆದ್ದ ತೆರೆ ನಾಳೆ ಬೀಳುವುದು; ಮರುವಗಲು |
ಮುಂದೆ ತಾನೇಳುವುದು ಬೇರೆ ಗಾತ್ರದಲಿ ||
ಇಂದು ನಾಳೆಗಳೆಲ್ಲವ ಕೂಡಿ ನೋಡಿದೊಡೆ |
ಮುಂದಹುದು ಬೆರಗೊಂದೆ – ಮಂಕುತಿಮ್ಮ || 231 ||

ಪದ-ಅರ್ಥ: ಮರುವಗಲು=ಮರು+ಹಗಲು, ಮುಂದಹುದು= ಮುಂದೆ+ಅಹುದು

ವಾಚ್ಯಾರ್ಥ: ಇಂದು ಮೇಲೆದ್ದ ತೆರೆ ನಾಳೆ ಕೆಳಗೆ ಬೀಳುತ್ತದೆ. ಮರುದಿನ ಮತ್ತೆ ತಾನೇ ಏಳುವುದು. ಮತ್ತೊಂದು ಗಾತ್ರದಲಿ. ಇಂದು ಬಿದ್ದ ತೆರೆ, ನಾಳೆ ಏಳುವ ತೆರೆ ಇವುಗಳನ್ನೆಲ್ಲ ಕೂಡಿ ನೋಡಿದರೆ ನಮಗೆ ಮುಂದು ಕಾಣುವುದು ಆಶ್ಚರ್ಯವೊಂದೇ.

ವಿವರಣೆ: ಮೇಲ್ನೋಟಕ್ಕೆ ಇದು ತೆರೆಗಳಾಟ ಎನ್ನಿಸುತ್ತದೆ. ಆದರೆ ಈ ಕಗ್ಗ ಹೇಳುವುದು ಪ್ರಪಂಚವೆಂಬ ಸಮುದ್ರದ ಅಲೆಗಳ ಬಗ್ಗೆ.

ಒಂದು ಅಶ್ವತ್ಥ ವೃಕ್ಷ ನೂರಾರು ವರ್ಷ ಬದುಕುತ್ತದೆ. ಒಂದೊಂದು ಬಾರಿ ಅದರದೊಂದು ಕೊಂಬೆ ಒಣಗತೊಡಗುತ್ತದೆ. ಒಂದು ದಿನ ಎಲೆಗಳಿಂದ ತುಂಬಿ ನಲಿದಾಡುತ್ತಿದ್ದ ಕೊಂಬೆ ಬೋಡಾಗಿ ಕಾಣುತ್ತದೆ. ಅದರಲ್ಲಿ ಒಂದು ಎಲೆಯೂ ಇಲ್ಲ. ಅದೇನು ಇನ್ನು ಒಣಗಿ ಬಿದ್ದು ಹೋಗುತ್ತದೆ ಎನ್ನುವಂತಾಗುತ್ತದೆ. ಆದರೆ ಒಂದು ತಿಂಗಳಿನ ನಂತರ ಅದನ್ನು ಗಮನಿಸಿ. ಹೊಸ ಚಂದಳಿರು ಮೂಡಿದೆ. ಇನ್ನೊಂದು ತಿಂಗಳು ತಡೆದು ನೋಡಿ, ಅದೊಂದು ಹೊಸ ಕೊಂಬೆಯಂತೆಯೇ ಕಾಂತಿಯುತವಾಗಿದೆ. ಅದು ಮತ್ತೆ ಹೊಸ ಜೀವ ತಳೆದು ನಿಂತಿದೆ.

ಇದರಂತೆಯೇ ಪ್ರಪಂಚದ ಜೀವನ. ಒಂದು ಕಡೆಗೆ ಏರುವ ತೆರೆಯಂತೆ ಉತ್ಕರ್ಷವನ್ನು ತೋರುವ ವಿವೇಕ, ಯುಕ್ತಿ, ಸಂಭ್ರಮ, ಉತ್ಸಾಹ ಮತ್ತು ಅಭಿವೃದ್ಧಿಗಳು ಕಂಡುಬಂದು ಪ್ರಪಂಚವನ್ನು ಸಂತೋಷದಿಂದ ತುಂಬುತ್ತವೆ. ಮತ್ತೊಂದು ಕಡೆ ಅನಾಚಾರ, ಅತ್ಯಾಚಾರ, ಭ್ರಷ್ಟಾಚಾರಗಳು, ಪ್ರಯತ್ನ ಭಂಗ, ನಿರುತ್ಸಾಹ, ಅಧಿಕಾರ ದಾಹಗಳು ತಾಂಡವವಾಡುತ್ತ ಪ್ರಪಂಚವನ್ನು ದುಃಖದಿಂದ ಮುಳುಗಿಸುತ್ತವೆ. ಇವುಗಳು ಬಿದ್ದ ತೆರೆಯಂತೆ.

ಹೀಗೆ ಪ್ರಪಂಚದಲ್ಲಿ ಏರಿಕೆಗಳು ಕಾಣುತ್ತವೆ. ಮಾನವನ ವೈಜ್ಞಾನಿಕ ಪ್ರಗತಿ, ಅತ್ಯದ್ಭುತವಾದ ಸಾಹಿತ್ಯ ಸೃಷ್ಟಿ, ಅಸಾಮಾನ್ಯ ಶಿಲ್ಪಗಳು, ಹೃದಯ ಸೂರೆಗೊಳ್ಳುವ ನೃತ್ಯ-ಸಂಗೀತಗಳು, ಯೋಗಸಾಧನೆಗಳು ಇವೆಲ್ಲ ಮಾನವನ ಶಕ್ತಿಯನ್ನು ಏರಿಸಿದ ತೆರೆಗಳು. ಇವು ನಮಗೆ ಸಂತೋಷ ಕೊಡುತ್ತಿದ್ದಂತೆ ನಿಸರ್ಗದ ವಿಕೋಪಗಳು, ಮಾನವನ ಕ್ರೌರ್ಯದ ಪ್ರದರ್ಶನಗಳಾದ ಮಹಾಯುದ್ಧಗಳು, ಮತಭೇದಗಳು, ಪರಸ್ಪರ ದ್ವೇಷಗಳು, ಅನ್ಯಾಯಗಳು ಇವು ಪ್ರಪಂಚದ ತೆರೆಯನ್ನು ಕೆಳಗೆ ಬೀಳಿಸುವ ಕಾರ್ಯಗಳು.

ಹೀಗೆ ಏಳುತ್ತ, ಬೀಳುತ್ತ, ಹರಡುತ್ತ ಪ್ರಪಂಚವೆಂಬ ಸಮುದ್ರ ಮುನ್ನಡೆಯುತ್ತಲೇ ಇರುತ್ತದೆ. ಆದರೆ ತೆರೆ ಇಳಿತಗಳನ್ನು, ಏರುಗಳನ್ನು ಗಮನಿಸುತ್ತ ಹೋದರೆ ಒಂದು ಬೆರಗು ನಮ್ಮನ್ನು ಎದುರುಗೊಳ್ಳುತ್ತದೆ. ಅದಾವುದು ಬೆರಗು? ಇಷ್ಟು ಕಾಲ ಒಂದೇ ಸಮನೆ ತೆರೆ ಏರಿ, ಇಳಿದು ಮಾಡಿದರೂ ಸಮುದ್ರ ಅಷ್ಟೇ ಇದೆ, ಅದರ ಗಾತ್ರ ವಿಸ್ತಾರವಾಗಿಲ್ಲ, ಅದೆಲ್ಲೂ ಹರಿದು ಹೋಗಿಲ್ಲ. ಹಾಗೆಂದರೆ ತೆರೆ ಏರು, ಇಳಿವುಗಳಿಂದ ಸಮುದ್ರಕ್ಕೆ ಏನೂ ಆಗುವುದಿಲ್ಲ. ಅದು ಹಾಗೆಯೇ ಇರುತ್ತದೆ. ಇವು ಅದರ ತಾತ್ಪೂರ್ತಿಕ ರೂಪಾಂತರಗಳು. ಪ್ರಪಂಚ ಜೀವನವೂ ಹಾಗೆಯೇ. ಏನೇನು ಬದಲಾವಣೆಗಳಾದರೂ ಅದು ಹಾಗೆಯೇ ಇರುತ್ತದಲ್ಲ, ಅದೇ ಬೆರಗು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT