ಮಂಗಳವಾರ, ಜನವರಿ 28, 2020
17 °C

ಭೂಮಿಯಿಂದ ಮುಕ್ತಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

Prajavani

ಹಿಂದೆ ಮಗಧರಾಜ ಮಗಧ ದೇಶವನ್ನು ಆಳುತ್ತಿದ್ದಾಗ ಬೋಧಿಸತ್ವ ಅವನ ಪಟ್ಟದ ರಾಣಿಯ ಗರ್ಭದಲ್ಲಿ ಜನಿಸಿದ. ಅವನಿಗೆ ಬ್ರಹ್ಮದತ್ತ ಕುಮಾರ ಎಂದು ಹೆಸರಿಟ್ಟರು. ಅವನು ಹುಟ್ಟಿದ ದಿನವೇ ರಾಜಪುರೋಹಿತನಿಗೂ ಒಬ್ಬ ಮಗ ಹುಟ್ಟಿದ. ಇಬ್ಬರೂ ಮಕ್ಕಳು ಕೂಡಿಯೇ ಬೆಳೆದರು. ತಕ್ಕಶಿಲೆಗೆ ಹೋಗಿ ಸಕಲವಿದ್ಯೆಗಳನ್ನು ಕಲಿತು ಬಂದರು.

ದೇಶಗಳನ್ನು ನೋಡಲೆಂದು ಸುತ್ತಾಡುತ್ತ ವಾರಾಣಸಿಗೆ ಬಂದು ತಲುಪಿದರು. ಒಂದು ಮನೆಯಲ್ಲಿ ಭಿಕ್ಷೆ ಸ್ವೀಕರಿಸಿ ರಾಜೋದ್ಯಾನಕ್ಕೆ ಬಂದು ವಿಶ್ರಾಂತಿ ಪಡೆಯುತ್ತಿದ್ದರು. ಆಗ ಪುರೋಹಿತನ ಮಗ, ದರೀಮುಖ, ಬ್ರಹ್ಮದತ್ತ ಕುಮಾರನನ್ನು ನೋಡುತ್ತಿರುವಾಗ ಅವನ ಪಾದದಲ್ಲಿಯ ಲಕ್ಷಣಗಳನ್ನು ಗಮನಿಸಿ ಈತ ಮುಂದೆ ರಾಜನಾಗುತ್ತಾನೆ. ನಾನು ಸ್ನೇಹಿತನಾದ್ದರಿಂದ ನನ್ನನ್ನು ಸೇನಾಪತಿಯನ್ನಾಗಿ ಮಾಡುತ್ತಾನೆ. ನನಗೆ ಯಾವ ರಾಜಕರ್ತವ್ಯಗಳೂ ಬೇಡ. ನಾನು ಸನ್ಯಾಸಿಯಾಗುತ್ತೇನೆ ಎಂದು ಯೋಚಿಸುತ್ತಿರುವಾಗ ಒಣಗಿದ ಹಳದಿ ಎಲೆಯೊಂದು ಅವನ ಮುಂದೆ ಬಿದ್ದಿತು. ಅದನ್ನು ಕಂಡು ನನ್ನ ಬದುಕೂ ಹೀಗೆ ಒಣಗಿಹೋಗುವ ಮೊದಲು ಜ್ಞಾನವನ್ನು ಪಡೆಯಬೇಕು ಎಂದುಕೊಂಡಾಗ ಅವನಿಗೆ ಜ್ಞಾನೋದಯವಾಗಿ ಆಕಾಶದಿಂದ ಅವನಿಗೆ ಚೀವರಗಳು, ಋದ್ಧಿಮಯ ಪಾತ್ರೆಗಳು ಬಂದವು. ಅವುಗಳಿಂದಾಗಿ ಅವನಿಗೆ ನೂರು ವರ್ಷದ ತಪಶ್ಯಕ್ತಿ ದೊರಕಿ ಹಂಸದಂತೆ ಹಾರಿ ಹಿಮಾಲಯಕ್ಕೆ ಹೋಗಿಬಿಟ್ಟ.

ಇತ್ತ ಬ್ರಹ್ಮದತ್ತ ಕುಮಾರ ಸಿಂಹಾಸನವನ್ನೇರಿ ವೈಭವದಲ್ಲಿ ಮತ್ತನಾಗಿ ರಾಜ್ಯಭಾರ ಮಾಡಿದ. ನಲವತ್ತು ವರ್ಷಗಳವರೆಗೆ ತನ್ನ ಸ್ನೇಹಿತ ದರೀಮುಖನ ನೆನಪು ಮಾಡಿಕೊಳ್ಳಲಿಲ್ಲ. ಆಮೇಲೆ ಅವನ ನೆನಪು ಕಾಡತೊಡಗಿತು. ಅವನನ್ನು ಹುಡುಕಿಸುವುದಕ್ಕೆ ಏನೆಲ್ಲ ಉಪಾಯಗಳನ್ನು ಮಾಡತೊಡಗಿದ. ಅದೇ ಸಮಯದಲ್ಲಿ ಹಿಮಾಲಯದಲ್ಲಿದ್ದ ದರೀಮುಖನಿಗೂ ತನ್ನ ಸ್ನೇಹಿತ ಬ್ರಹ್ಮದತ್ತ ಕುಮಾರನನ್ನು ನೋಡುವ ಆಸೆಯಾಯಿತು. ಆತ ಹಂಸದಂತೆ ಹಾರಿಬಂದು ರಾಜೋದ್ಯಾನದ ಶಿಲೆಯ ಆಸನದ ಮೇಲೆ ಸ್ವರ್ಣವಿಗ್ರಹದಂತೆ ಕುಳಿತುಕೊಂಡ. ಅವನನ್ನು ನೋಡಲು ರಾಜ ತನ್ನ ಸಕಲ ಪರಿವಾರ, ಆಡಂಬರಗಳೊಂದಿಗೆ ಅಲ್ಲಿಗೆ ಬಂದ. ಪ್ರತ್ಯೇಕ ಬುದ್ಧನಾಗಿದ್ದ ಸ್ನೇಹಿತನಿಗೆ ನಮಸ್ಕಾರ ಮಾಡಿ ಕುಶಲ ಕೇಳಿದ. ಆಗ ದರೀಮುಖ, “ಬ್ರಹ್ಮದತ್ತ, ನೀನು ಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದೀಯಾ? ಹಣಕ್ಕಾಗಿ ಪ್ರಜೆಗಳನ್ನು ಕಾಡುತ್ತಿಲ್ಲ ತಾನೇ? ನೀನು ಈಗ ಮುದುಕನಾಗಿದ್ದೀಯಾ. ಇನ್ನೂ ಎಷ್ಟು ಕಾಲ ಈ ಭೋಗದಲ್ಲಿ ಉಳಿಯಬೇಕೆನ್ನುತ್ತೀ? ನೀನೀಗ ಕಾಮದ ಜೀವನವನ್ನು ಕಳೆದು ಪ್ರವೃಜ್ಜಿತನಾಗುವ ಕಾಲ ಬಂದಿದೆ. ಸಾಕಿನ್ನು ಈ ಕರ್ಮಬಂಧ” ಎಂದ. ಬ್ರಹ್ಮದತ್ತ ಹೇಳಿದ, “ಸ್ನೇಹಿತ, ಏನೂ ಇಲ್ಲದಿದ್ದಾಗ ಸನ್ಯಾಸ ತುಂಬ ಚೆಂದ. ನಾನೀಗ ರಾಜ ಭೋಗದಲ್ಲಿದ್ದೇನೆ. ಅವುಗಳಲ್ಲಿ ತನ್ಮಯನಾಗಿ ಬಿಟ್ಟಿದ್ದೇನೆ. ಬಿಡಬೇಕೆಂಬ ಮನಸ್ಸಿದ್ದರೂ ಬಿಡಲಾಗುತ್ತಿಲ್ಲ”. ದರೀಮುಖ ನಗುತ್ತ ಹೇಳಿದ, “ಇನ್ನೆಷ್ಟು ದಿನ ನೀನು ವೈಭೋಗದಲ್ಲಿ ಇರುತ್ತೀಯಾ? ಭೋಗದಿಂದ ತೃಪ್ತಿಯನ್ನು ಪಡುವುದು ಸಾಧ್ಯವಿಲ್ಲ. ಬದುಕಿನ ಒಂದು ಹಂತದಲ್ಲಿ ಭೋಗದಿಂದ ನಿವೃತ್ತಿಯೇ ತೃಪ್ತಿಯನ್ನು ನೀಡುವುದು. ನೀನು ಎಷ್ಟು ಭೋಗಕ್ಕೆ, ಭೂಮಿಗೆ ಅಂಟಿಕೊಂಡಿದ್ದೀಯೋ ಅಷ್ಟು ಪ್ರಪಂಚವನ್ನು ನಿರಾಳವಾಗಿ ಬಿಟ್ಟು ಹೋಗುವುದು ಕಷ್ಟ. ನೀನು ನರಳಿ, ನರಳಿ ಹೋಗಬೇಕೋ ಅಥವಾ ಅನಾಯಾಸ ಮರಣ ಬೇಕೋ? ನಿದ್ರೆಯಂತೆ ಸಾವು ಪಡೆಯಬೇಕಾದರೆ ನೆಲದ ಬಗ್ಗೆ, ನಿನ್ನ ಐಶ್ವರ್ಯದ ಬಗ್ಗೆ ಇರುವ ಅಂಟನ್ನು ಕಳೆದುಕೋ”.

ಬ್ರಹ್ಮದತ್ತನಿಗೆ ಕೊನೆಯ ಮಾತು ಸರಿಯೆನ್ನಿಸಿ, ಅದನ್ನೊಪ್ಪಿ, ಪ್ರವೃಜ್ಯನಾದ. ಈ ಮಾತು ಸತ್ಯಸ್ಯ ಸತ್ಯ. ನನ್ನದು ಎಂದು ಅಂಟಿಕೊಂಡಷ್ಟೂ ಮುಕ್ತಿ ಕಠಿಣ. 

ಪ್ರತಿಕ್ರಿಯಿಸಿ (+)