ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಅರ್ಥವಿಲ್ಲದ ಮಾತು

Last Updated 25 ಏಪ್ರಿಲ್ 2020, 21:04 IST
ಅಕ್ಷರ ಗಾತ್ರ
ADVERTISEMENT
""

ರಾವಣನ ಹಳಿವವನೆ, ಜೀವನವೆ ಬಿಸುಡಿಸುವ |
ಲಾವಣ್ಯವೆಂತಹುದೊ? ನೋವದೆಂತಹುದೊ?||
ಬೇವಸವ ಪಟ್ಟು ತಿಳಿ, ತಿಳಿದು ಹಳಿಯುವೊಡೆ ಹಳಿ |
ಗಾವಿಲನ ಗಳಹೇನು?- ಮಂಕುತಿಮ್ಮ || 283 ||

ಪದ-ಅರ್ಥ: ಹಳಿವವನೆ=ತೆಗಳುವವನೆ, ಬಿಸುಡಿಸುವ=ಕಿತ್ತುಹಾಕುವ, ಬೇವಸ=ತಾಪಪಡುವುದು, ಗಾವಿಲ=ವ್ಯವಹಾರ ತಿಳಿಯದವ, ಮೂರ್ಖ, ಗಳಹು=ಅರ್ಥವಿಲ್ಲದ ಮಾತು.

ವಾಚ್ಯಾರ್ಥ: ರಾವಣನನ್ನು ತೆಗಳುವವನೆ, ಬದುಕನ್ನೇ ಬಿಸಾಡಿಬಿಡಬೇಕೆನ್ನಿಸುವ ರೂಪವೆಂಥದ್ದು? ಅದು ಕೊಟ್ಟ ನೋವು ಯಾವ ಪರಿಯದು? ನೀನೂ ಆ ತಾಪವನ್ನು ಪಟ್ಟು ತಿಳಿ, ತಿಳಿದ ಮೇಲೂ ತೆಗಳುವುದಾದರೆ ತೆಗಳು. ಸುಮ್ಮನೆ ಮೂರ್ಖರ ಅರ್ಥವಿಲ್ಲದ ಮಾತಿನಿಂದೇನು ಪ್ರಯೋಜನ?

ವಿವರಣೆ: ರಾವಣ ಸೀತೆಯನ್ನು ಕಂಡೊಡನೆ ಮನಸ್ಸು ವಿಚಲಿತವಾಗಿ, ಆಕೆಯನ್ನು ಹೊತ್ತುಕೊಂಡು ಲಂಕೆಗೆ ಕರೆದೊಯ್ದ. ರಾವಣ ಸೀತಾಪಹರಣವನ್ನು ಮಾಡಿದ್ದು ತಪ್ಪು, ಆತನೊಬ್ಬ ಕಾಮುಕ, ಸ್ವೇಚ್ಛಾಚಾರಿ ಎಂದೆಲ್ಲ ಅವನನ್ನು ಹಳಿಯುತ್ತೇವೆ. ಆದರೆ ಕಗ್ಗ ಇದನ್ನು ಮತ್ತೊಂದು ಬದಿಯಿಂದ ಗಮನಿಸಲು ಪ್ರೇರೇಪಿಸುತ್ತದೆ. ಹೌದಪ್ಪ, ರಾವಣ ನೀಚ, ಕಾಮಿ ಸರಿ. ಆದರೆ ಅವನೊಬ್ಬ ಪ್ರಚಂಡ ಸಾಧಕ, ತಪಸ್ವಿ, ಶಿವಭಕ್ತ. ಶಿವ ತನ್ನ ಆತ್ಮಲಿಂಗವನ್ನು ಕೊಟ್ಟದ್ದು ಎಷ್ಟು ಜನಕ್ಕೆ? ತನ್ನ ಹೊಟ್ಟೆಯ ಕರುಳುಗಳನ್ನು ಹೊರಗೆಳೆದು, ತಂತಿಗಳನ್ನಾಗಿ ಮಾಡಿ, ಸಂಗೀತ ನುಡಿಸಿ, ಶಿವನ ಕೃಪೆಗೆ ಒಳಗಾದ ರಾವಣ ಚಿಕ್ಕವನೆ? ಅವನು ಮಹಾತಪಸ್ವಿ, ಅತ್ಯಂತ ಶ್ರೇಷ್ಠ ಹಾಗೂ ನಿಪುಣ ನಾಯಕ ಎಂದು ರಾಮಾಯಣವೇ ಹೊಗಳುತ್ತದೆ. ಸಹಸ್ರಾರು ಆಪ್ಸರೆಯಂಥ ಸುಂದರಿಯರು ತಮ್ಮೊಲವಿನಿಂದ ಅವನನ್ನು ಬಯಸಿ ಬಂದರೂ ತಿರುಗಿ ನೋಡದವನು ರಾವಣ. ಅಂಥ ರಾವಣ, ತನ್ನ ಪ್ರಾಣ ಹೋದರೂ ಸರಿಯೆ ಆಕೆಯನ್ನು ಪಡೆದೇ ತೀರುತ್ತೇನೆಂದು ಛಲ ತೊಡುವುದಾದರೆ, ಅವನನ್ನು ಸೆಳೆದ ಸೀತೆಯ ಲಾವಣ್ಯವೆಂತಿರಬೇಕು? ಹತ್ತು ತಿಂಗಳುಗಳ ಕಾಲ ತನ್ನ ಆಶೋಕವನದಲ್ಲೇ ಆಕೆಯನ್ನು ಬಂದಿಯಾಗಿಟ್ಟಿದ್ದರೂ, ಪಡೆಯಲಾಗದ ನೋವು ಅದೆಂತಿರಬಹುದು?

ಅದಕ್ಕೆ ಈ ಕಗ್ಗ ಹೇಳುತ್ತದೆ, ಸುಮ್ಮನೆ ರಾವಣನನ್ನು ಹಳಿಯಬೇಡ, ಅವನ ಮನಸ್ಸನ್ನು ಸೆಳೆದ ರೂಪದ ಬಲ ಯಾವ ಮಟ್ಟದ್ದು ಎಂದು ಯೋಚಿಸು. ಮೋಹದ, ಮೋಹಕತೆಯ ಪ್ರಬಲವಾದ ಸೆಳೆತ ಅಂತಹದು. ಬ್ರಹ್ಮರ್ಷಿ ಪದವಿಯನ್ನು ಪಡೆದೇ ತೀರಬೇಕೆಂದು ಹಟದಿಂದ ತಪಸ್ಸಿಗೆ ಕುಳಿತ ವಿಶ್ವಾಮಿತ್ರನನ್ನು ಸಾಧನೆಯ ಪಥದಿಂದ, ಅವನ ಏಕಾಗ್ರತೆಯಿಂದ ಹೊರಗೆ ಎಳೆದದ್ದು ಮೇನಕೆಯ ರೂಪದ ಶಕ್ತಿ. ದೇವತೆಗಳ ರಾಜ ಇಂದ್ರ ಹಾಗೂ ಸ್ವತಃ ತಪಸ್ವಿಯೂ, ಋಷಿ ಗೌತಮರ ಪತ್ನಿಯೂ ಆದ ಅಹಲ್ಯೆ, ಇಬ್ಬರೂ ಸಂಯಮದ ಗೆರೆಯನ್ನು ದಾಟಿದ್ದು ಈ ಸೆಳೆತದಲ್ಲಿಯೇ. ಮಾನವರ, ದಾನವರ ಮಾತು ಬಿಡಿ, ದೇವತೆಗಳಿಗೂ ಇದರ ಸೆಳೆತ ತಪ್ಪಿಲ್ಲ. ಭಸ್ಮಾಸುರನಿಗೆ ವರಕೊಟ್ಟ ಶಿವ. ರಾಕ್ಷಸ ತನ್ನ ಮೇಲೆಯೇ ಅದರ ಪ್ರಯೋಗ ಮಾಡಲು ಬಂದಾಗ ಓಡಿ ಕೊಳದಲ್ಲಿ ಅವಿತುಕೊಂಡ. ವಿಷ್ಣು ಮೋಹಿನಿಯ ರೂಪದಲ್ಲಿ ಬಂದು ಭಸ್ಮಾಸುರನನ್ನು ಕಾಮದಲ್ಲಿ ಸಿಕ್ಕಿಸಿಬಿಟ್ಟ. ನಂತರ ತನ್ನ ತಲೆಯ ಮೇಲೆ ಕೈಯಿಟ್ಟುಕೊಂಡ ರಾಕ್ಷಸ ಭಸ್ಮವಾದ. ಕೊಳದಿಂದ ಹೊರಬಂದ ಮಹಾಯೋಗಿ ಶಿವ ವಿಷ್ಣುವಿನ ಮೋಹಕ ರೂಪಕ್ಕೆ ಮರುಳಾದನಂತೆ. ಅವರಿಂದ ಹುಟ್ಟಿದ್ದು ಅಯ್ಯಪ್ಪ ಎಂಬ ಕಥೆ.

ಮೋಹದ ಸೆಳೆತ ಬಲು ಕೆಟ್ಟದ್ದು. ಕಗ್ಗ ಹೇಳುತ್ತದೆ. ನೀನು ಈ ಸೆಳೆತದ ನೋವನ್ನು ಅನುಭವಿಸಿದ್ದೀಯಾ? ಅಂಥ ತಾಪವನ್ನು ಅನುಭವಿಸಿದ ಮೇಲೂ ರಾವಣನನ್ನು ತೆಗಳುವುದಾದರೆ ತೆಗಳು. ಸುಮ್ಮನೆ ಯಾವ ನೋವನ್ನೂ ಪಡದೆ ರಾವಣನ ಬಗ್ಗೆ ಹಗುರವಾಗಿ ಮಾತನಾಡುವುದು ಮೂರ್ಖನ ಬಡಬಡಿಕೆ ಇದ್ದಂತೆ. ಕಗ್ಗ ರಾವಣನ ನಡತೆಯ ಶಿಫಾರಸು ಮಾಡುತ್ತಿಲ್ಲ, ಆದರೆ ರಾವಣನ ಕೃತ್ಯದ ಹಿಂದಿನ ನೋವನ್ನು ತೋರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT