ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಸಲ್ಲದ ಉತ್ಸಾಹ

Last Updated 7 ಆಗಸ್ಟ್ 2022, 21:28 IST
ಅಕ್ಷರ ಗಾತ್ರ

ಎಲ್ಲ ಬರಿ ಗೊಣಗಾಟ, ತಿಣಕಾಟ, ತಡಕಾಟ |
ಇಲ್ಲ ನಮಗೂರೆಕೋಲ್, ತಿಳಿಬೆಳಕುಮಿಲ್ಲ ||
ಬಲ್ಲತನ ಮಬ್ಬಿನಲಿ ನಿದ್ರಿಸದೆ ತೆವಳುವುದು |
ಸಲ್ಲದುಬ್ಬಟೆ ನಮಗೆ – ಮಂಕುತಿಮ್ಮ || 686 ||

ಪದ-ಅರ್ಥ: ನಮಗೂರೆಕೋಲ್ = ನಮಗೆ+ಊರೆಕೋಲ್(ಊರುಗೋಲು), ತಿಳಿಬೆಳಕುಮಿಲ್ಲ=ತಿಳಿಬೆಳಕುಂ+ಇಲ್ಲ, ಬಲ್ಲತನ=ತಿಳುವಳಿಕೆ,

ಸಲ್ಲದುಬ್ಬಟೆ=ಸಲ್ಲದ+ಉಬ್ಬಟೆ(ಉತ್ಸಾಹ, ಮೆರೆತ)

ವಾಚ್ಯಾರ್ಥ: ನಮ್ಮ ಜೀವನದಲ್ಲಿ ಬರೀ ಗೊಣಗಾಟ, ತಿಣಕಾಟ ಮತ್ತು ತಡಕಾಟಗಳೇ ಆಗಿವೆ. ಗಟ್ಟಿಯಾಗಿ ಬದುಕು ಸಾಗಿಸಲು ನಮಗೊಂದು ಊರುಗೋಲಾಗಲೀ, ತಿಳಿಬೆಳಕಾಗಲಿ ಇಲ್ಲ.

ತಿಳಿದಿದ್ದೇವೆ ಎಂಬ ಭ್ರಮೆಯ ಮಬ್ಬಿನಲ್ಲಿ, ನಿದ್ರಿಸದೆ, ಜೀವನ ತೆವಳಿಕೊಂಡು ಸಾಗುತ್ತಿದೆ. ಮೈಮರೆತು ಮೆರೆಯುವುದು ಬೇಡ.

ವಿವರಣೆ: ಪ್ರತಿಯೊಬ್ಬ ಮನುಷ್ಯನಿಗೂ ಅವನದೇ ಆದ ಒಂದು ವ್ಯಕ್ತಿತ್ವವಿದೆಯೆಂದು ನಂಬುತ್ತೇವೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಒಂದು ಎಂದು ತೋರಿದ ವ್ಯಕ್ತಿತ್ವದಲ್ಲಿ ನೂರಾರು ವ್ಯಕ್ತಿತ್ವಗಳು ಅಡಗಿವೆ. ಒಬ್ಬ ವ್ಯಕ್ತಿ ಏನೋ ಮಾಡಬೇಕೆಂದು ನಿರ್ಧರಿಸುತ್ತಾನೆ. ಸ್ವಲ್ಪ ಸಮಯದ ನಂತರ ತೀರ್ಮಾನವನ್ನು ಬದಲಾಯಿಸುತ್ತಾನೆ ನಿರ್ಧರಿಸಿದಾಗ ಒಂದು ವ್ಯಕ್ತಿತ್ವ, ಅದರ ವಿರುದ್ಧವಾಗಿ ತೀರ್ಮಾನಿಸಿದಾಗ ಮತ್ತೊಂದು ವ್ಯಕ್ತಿತ್ವ. ಒಂದೊಂದು ಸನ್ನಿವೇಶದಲ್ಲಿ ಒಂದೊಂದು ವ್ಯಕ್ತಿತ್ವ ಕಾಣುತ್ತದೆ. ಮನೆಯಲ್ಲಿ ಜೋರು ಮಾಡುವ ಯಜಮಾನ ಆಫೀಸಿನಲ್ಲಿ ಗುಲಾಮನಂತಿರುತ್ತಾನೆ. ದೇವಾಲಯದಲ್ಲಿ ಭಕ್ತ. ಆದರೆ ವ್ಯಾಪಾರದಲ್ಲಿ ವಂಚಕ. ಅತ್ಯಂತ ಪ್ರೀತಿಯ ಹೆಂಡತಿಯಾಗಿದ್ದವಳು, ಗಂಡನನ್ನು ಕೊಲ್ಲಿಸಿದಾಗ ಬೇರೆಯೇ ವ್ಯಕ್ತಿ. ಇಂದಿನ ಸಂಕೀರ್ಣವಾದ ಸಾಮಾಜಿಕ ಪರಿಸ್ಥಿತಿಯಲ್ಲಿ, ಹಲವು ಪ್ರಭಾವಗಳ ಒತ್ತಡದಿಂದ, ಆದರ್ಶಗಳ ಸೆಳೆತಗಳಿಂದ, ವ್ಯಕ್ತಿ ಕ್ಷಣಕ್ಷಣಕ್ಕೆ ಬದಲಾಗುತ್ತಾನೆ. ಇವು ಮಾನಸಿಕ ಸಂಘರ್ಷವನ್ನುಂಟು ಮಾಡುತ್ತವೆ. ಆಗ ತಲೆ ಎತ್ತುವುವು ಗೊಣಗಾಟ, ತಿಣಕಾಟ ಮತ್ತು ತಡಕಾಟಗಳು. ಮನ ನೊಂದು, ಕುದಿದು ಕುಲುಮೆಯಾಗುತ್ತದೆ. ದಾರಿ ತಪ್ಪುತ್ತದೆ. ಆ ಸಂದರ್ಭದಲ್ಲಿ ತಿಳುವಳಿಕೆಯ ಬೆಳಕು ತೋರದು. ಧೈರ್ಯ ನೀಡಲು ಯಾವ ಊರುಗೋಲೂ ಸಿಗದೆ ಜೀವ ತಡಕಾಡುತ್ತದೆ. ಹಂಪೆಯ ಹೇಮಗಲ್ಲಿನ ವಚನಕಾರ ಹೇಮಗಲ್ಲ ಹಂಪ, ಸಿದ್ಧಮಲ್ಲಿನಾಥನೆಂಬ ಅಂಕಿತದಲ್ಲಿ ಬರೆದ ವಚನ ಹೀಗಿದೆ.

ನೊಂದೆನೀ ಮನದಿಂದಲಿ, ಬೆಂದೆನೀಮನದಿಂದಲಿ, ಕಂದಿದೆನೀ ಮನದಿಂದಲಿ, ಕುಂದಿದೆನೀ ಮನದಿಂದಲಿ, ಮನವೆಂಬ ಸಂದೇಹದ ಕೀಲ ಕಳೆದು, ನಿಸ್ಸಂದೇಹಿಯಾಗಿಪ್ಪ ನಿರಾಭಾರಿ ಶರಣಂಗೆ ನಮೋ ನಮೋ ಎಂಬೆನಯ್ಯಾ,

ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆನನಗೆ ತಿಳಿದಿದೆ ಎಂಬ ಅಹಂಕಾರದ ಭ್ರಮೆ ಬಂದಾಗ, ಮನದ ಕೀಲ ಸಡಲಿ, ಬದುಕು ಕತ್ತಲಲ್ಲಿ ತೆವಳಿ ಸಾಗುತ್ತದೆ. ಆದ್ದರಿಂದ ಅನವಶ್ಯಕವಾದ ಹಾರಾಟ, ಉಬ್ಬಟೆ ಬೇಕಿಲ್ಲ. ಚಾರಿತ್ರ್ಯದ ಜೀವನ, ಧನಾತ್ಮಕ ಚಿಂತನೆಗಳು ಬದುಕಿಗೆ ಒಂದು ಬೆಳಕನ್ನು ನೀಡಿ, ಸರಿದಾರಿಗೆ ತರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT