ಗುರುವಾರ , ಡಿಸೆಂಬರ್ 1, 2022
20 °C

ಬೆರಗಿನ ಬೆಳಕು: ಓಲೆಕಾರನ ನಿರ್ಲಿಪ್ತತೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಓಲೆಕಾರನಿಗೇಕೆ ಬರೆದ ಸುದ್ದಿಯ ಚಿಂತೆ? |
ಓಲೆಗಳನವರವರಿಗೈದಿಸಿರೆ ಸಾಕು ||
ಸಾಲಗಳೊ, ಶೂಲಗಳೊ, ನೋವುಗಳೊ,
ನಗುವುಗಳೊ! |
ಕಾಲೋಟವವನೂಟ – ಮಂಕುತಿಮ್ಮ || 727 |ಪದ-ಅರ್ಥ: ಓಲೆಕಾರನಿಗೇಕೆ=ಓಲೆಕಾರನಿಗೆ (ಅಂಚೆ ಹಂಚುವವನಿಗೆ)+ಏಕೆ, ಓಲೆಗಳನವರವರಿಗೈದಿಸಿರೆ=ಓಲೆಗಳನ್ನು+ಅವರವರಿಗೆ+ಐದಿಸಿರೆ(ತಲುಪಿಸಿದರೆ), ಕಾಲೋಟವವನೂಟ=
ಕಾಲೋಟವು+ಅವನ+ಊಟ.

ವಾಚ್ಯಾರ್ಥ: ಅಂಚೆಯಾಳಿಗೆ, ಪತ್ರದ ಸುದ್ದಿಯ ಚಿಂತೆ ಏಕೆ? ಅವರವರ ಪತ್ರಗಳನ್ನು ಅವರಿಗೆ ತಲುಪಿಸಿದರೆ ಸಾಕು. ಪತ್ರದಲ್ಲಿರುವ ಸಾಲುಗಳು, ಶೂಲಗಳು, ನೋವುಗಳು, ನಗುವುಗಳು, ಇವುಗಳ ವಿಷಯ ಅವನಿಗೆ ಸಂಬಂಧಿಸಿದ್ದಲ್ಲ. ಅವನು ನಡೆನಡೆದು ತಲುಪಿಸಿದ್ದರಿಂದಲೇ ಅವನಿಗೆ ಊಟ.

ವಿವರಣೆ: ಈ ಕಗ್ಗದಲ್ಲಿ ಒಂದು ಸುಂದರ ರೂಪಕ ತಳೆದು ನಿಂತಿದೆ. ಇಲ್ಲೊಂದು ದೃಶ್ಯ. ಅಂಚೆಯಾಳು ಮನೆಯಿಂದ ಮನೆಗೆ ಪತ್ರಗಳನ್ನು ತೆಗೆದುಕೊಂಡು ಹೋಗಿ ಹಂಚುತ್ತಿದ್ದಾನೆ. ಅವನಿಗೆ ಸಂಬಂಧಪಟ್ಟದ್ದು ಓಲೆಯ ಮೇಲೆ ಬರೆದ ವಿಳಾಸವಷ್ಟೆ. ಪತ್ರದೊಳಗಿದ್ದ ವಿಷಯಗಳ ಬಗ್ಗೆ ಅವನೇಕೆ ಚಿಂತಿಸುತ್ತಾನೆ? ವಿಳಾಸವಿದ್ದವರ ಪತ್ರಗಳನ್ನು ಅವರಿಗೆ ತಲುಪಿಸುವುದು ಅವನ ಧರ್ಮ. ಪತ್ರದಲ್ಲಿ ಸಾಲದ ವಿಷಯವಿದೆಯೋ, ನೋವಿದೆಯೋ, ಸಂತೋಷದ ಸುದ್ದಿ ಇದೆಯೋ ಎಂದು ಅವನು ಯೋಚಿಸಲು ಹೋಗುವುದಿಲ್ಲ. ಅವನ ಕೆಲಸ, ಇಡಿ ದಿನ ನಡೆದು ಪತ್ರಗಳನ್ನು ಮುಟ್ಟಿಸುವುದು. ಅದರಿಂದ ಅವನಿಗೆ ಸಂಬಳ, ಊಟ. ಇದು ಮೇಲ್ನೋಟಕ್ಕೆ ಕಾಣುವ ಚಿತ್ರ. ಈ ಚಿತ್ರದ ಹಿಂದೆ ಒಂದು ಬಹುದೊಡ್ಡ ತತ್ವವಿದೆ. ಪತ್ರಗಳನ್ನು ಜನರಿಗೆ ಹಂಚುವುದೆಂದರೆ ಒಬ್ಬ ವ್ಯಕ್ತಿ ಸಮಾಜದಲ್ಲಿ ಅನೇಕರೊಡನೆ ಸಂವಹನ ಮಾಡುವುದು. ಆಗ ಕೆಲವು ಸಂತೋಷದ, ನೋವಿನ ಘಟನೆಗಳು ನಡೆಯಬಹುದು. ಆಗ ನಾವು ಹೇಗೆ ನಡೆದುಕೊಳ್ಳಬೇಕು? ಇದಕ್ಕೆ ನಮ್ಮ ಭಾರತೀಯ ಚಿಂತನೆಯಲ್ಲಿ ಸಾಕ್ಷೀಭಾವ ಎನ್ನುತ್ತಾರೆ. ಬದುಕಿನಲ್ಲಿ ನಡೆಯುವ ಘಟನೆಗಳಿಂದ ನಮ್ಮನ್ನು ಪ್ರತ್ಯೇಕಿಸಿಕೊಂಡು, ಅವುಗಳನ್ನು ಸಾಕ್ಷಿಯಂತೆ ನೋಡತೊಡಗಿದರೆ, ಅವು ನಮ್ಮ ಮೇಲೆ ಅತಿಯಾದ ಪರಿಣಾಮಗಳನ್ನು ಮಾಡಲಾರವು. ನಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಭಾವೋದ್ವೇಗಗಳು ಬರುತ್ತವೆ. ಅವುಗಳೊಡನೆ ನಾವು ತಾದಾತ್ಮ್ಯ ಹೊಂದಿದಾಗ ಅವು
ಮತ್ತಷ್ಟು ಪ್ರಬಲವಾಗುತ್ತವೆ. ನಮ್ಮಲ್ಲಿ ಯಾವಾಗ ಎಂತೆಂಥ ಆಲೋಚನೆಗಳು ಬರುತ್ತವೆ, ಯಾವ ಭಾವವಿಕಾರಗಳು ಏಳುತ್ತವೆ ಎಂಬುದರ ಅರಿವೇ ಇರುವುದಿಲ್ಲ. ಭಾವಪ್ರವಾಹದಲ್ಲಿ ಇರುವವರೆಗೆ ನಮಗೆ ಪ್ರವಾಹದ ದಿಶೆ, ವೇಗ ತಿಳಿಯಲಾರದು. ಪ್ರವಾಹದಿಂದ ಹೊರಗೆ ಬಂದು ನಿಂತಾಗ, ಅದರ ಗತಿಯನ್ನು ನೋಡುವುದರೊಂದಿಗೆ, ಅದರ ಪರಿಣಾಮದಿಂದ ತಪ್ಪಿಸಿಕೊಳ್ಳಬಹುದು. ಇದೇ ಸಾಕ್ಷೀಭಾವ. ನಾವು ಘಟನೆಗಳಲ್ಲಿ ಪಾತ್ರವಾಗದೆ, ಸಾಕ್ಷಿಯಂತೆ ನಿಂತು ನೋಡಿದಾಗ ಮನಸ್ಸಿನ ಕುಣಿದಾಟ ಕಡಿಮೆಯಾಗಿ ಅದು ಶಾಂತವಾಗುತ್ತದೆ. ಹೀಗೆ ಬದುಕಿನ ಘಟನೆಗಳಲ್ಲಿ ಸಾಕ್ಷಿಯಾಗುವುದು ತುಂಬ ಸುಲಭವೇನಲ್ಲ. ಅದಕ್ಕೆ ಧೃಡವಾದ ಮನಸ್ಸು ಮತ್ತು ಪ್ರಯತ್ನ ಬೇಕು. ಅದು ಸಾಧಿಸಿದಾಗ, ನಾವು ಅಂಚೆಯವನಂತೆ, ಪತ್ರದ ವಿವರಗಳನ್ನೋದದೆ, ಅಂದರೆ ಘಟನೆಗಳಿಂದ ಭಾವೋದ್ರೇಕಗೊಳ್ಳದೆ, ಪತ್ರವನ್ನು ತಲುಪಿಸುವುದು, ಅಂದರೆ ಕಾರ್ಯಮಾಡುವುದು, ಸಾಧ್ಯವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು