ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಕರ್ಮದ ಶವಭಾರ

Last Updated 19 ಸೆಪ್ಟೆಂಬರ್ 2022, 17:06 IST
ಅಕ್ಷರ ಗಾತ್ರ

ತನ್ನ ಶಿಲುಬೆಯ ತಾನೆ ಹೊತ್ತನಲ ಗುರು ಯೇಸು? |
ನಿನ್ನಕರ್ಮದಹೊರೆಯ ಬಿಡದೆ ನೀನೆ ಹೊರು ||
ಖಿನ್ನನಾಗದೆ ತುಟಿಯ ಬಿಗಿದು ಶವಭಾರವನು |
ಬೆನ್ನಿನಲಿ ಹೊತ್ತು ನಡೆ – ಮಂಕುತಿಮ್ಮ || 718 ||

ಪದ-ಅರ್ಥ: ಹೊರೆಯ=ಭಾರವ, ಖಿನ್ನನಾಗದೆ=ಮನವನ್ನು ಕುಗ್ಗಿಸದೆ

ವಾಚ್ಯಾರ್ಥ: ತನ್ನ ಶಿಲುಬೆಯ ಭಾರವನ್ನು ತಾನೆ ಹೊರಲಿಲ್ಲವೆ ಏಸು? ಅಂತೆಯೇ ನಿನ್ನಕರ್ಮದಫಲಭಾರವನ್ನು ನೀನೇ ಹೊರಬೇಕು. ಹೊರುವಾಗ ದುಃಖಬೇಡ. ತುಟಿಯನ್ನು ಬಿಗಿದು ಆ ಭಾರವನ್ನು ಬೆನ್ನ ಮೇಲೆ ಹೊತ್ತು ನಡೆ.

ವಿವರಣೆ: ವಾಲ್ಮೀಕಿ ರಾಮಾಯಣದ ಆಯೋಧ್ಯಾಕಾಂಡದಲ್ಲಿ ಒಂದು ಪ್ರಸಂಗ. ರಾಮ ವನವಾಸಕ್ಕೆ ಹೊರಟು ಹೋದ ಮೇಲೆ ದಶರಥ ಪುತ್ರ ವಿರಹದಿಂದ ದುಃಖಿತನಾಗಿದ್ದಾನೆ. ತಾನು ಇನ್ನು ಹೆಚ್ಚು ಕಾಲ ಬದುಕಲಾರೆ ಎಂಬುದು ಖಚಿತವಾಗಿದೆ. ಆಗ ತನ್ನ ಹಿರಿಯ ಪತ್ನಿ, ಕೌಸಲ್ಯೆಗೆ ಒಂದು ಮಾತು ಹೇಳುತ್ತಾನೆ. ಅದೊಂದು ಭರತವಾಕ್ಯ. ಸಾರ್ವಕಾಲಿಕ ಸತ್ಯ.

ಯದಾಚರತಿ ಕಲ್ಯಾಣಿ ಶುಭಂ ವಾ ಯದಿವಾ ಶುಭಮ್ |
ತದೇವ ಲಭತೇ ಭದ್ರೇ
ಕರ್ತಾ ಕರ್ಮಜಮಾತ್ಮನ: ||

“ಮಂಗಳಾಂಗಿ ಕೌಸಲ್ಯೆ, ಮನುಷ್ಯನು ಒಳ್ಳೆಯದನ್ನು ಮಾಡಲಿ ಅಥವಾ ಕೆಟ್ಟದ್ದನ್ನು ಮಾಡಲಿ, ತನ್ನ ಕರ್ಮಕ್ಕೆ ತಕ್ಕ ಫಲವನ್ನೇ ಪಡೆಯುತ್ತಾನೆ”. ಹೀಗೆ ಹೇಳಿ ತನ್ನಿಂದ ಹತನಾದ
ಶ್ರವಣಕುಮಾರನ ಕಥೆಯನ್ನು ಹೇಳುತ್ತಾನೆ. ವೃದ್ಧ ದಂಪತಿಗಳಿಂದ ಅವರ ಪುತ್ರನನ್ನು ಅಗಲಿಸಿದ ಕರ್ಮಕ್ಕೆಪ್ರತಿಫಲವಾಗಿ ನಾನು ಇಂದು ನನ್ನ ಅಂತ್ಯಕಾಲದಲ್ಲಿ ಮಗನನ್ನು ಅಗಲುತ್ತಿದ್ದೇನೆ ಎಂದು ಪ್ರಲಾಪ ಮಾಡುತ್ತಾನೆ. ಕೆಟ್ಟ ಕರ್ಮಕ್ಕೆ ಕೆಟ್ಟ ಫಲ, ಒಳ್ಳೆಯ ಕಾರ್ಯಕ್ಕೆ ಒಳ್ಳೆಯ ಫಲ ಎಂದಿಗೂ ತಪ್ಪುವುದಿಲ್ಲವೆಂಬುದು ಸಿದ್ಧಾಂತ. ಅದನ್ನೇ ಕಗ್ಗ ಹೇಳುತ್ತದೆ, “ನಿನ್ನಕರ್ಮದಹೊರೆಯ ಬಿಡದೆ ನೀನೆ ಹೊರು”. ಹಿಂದೆ ಮಾಡಿದ ಕರ್ಮಗಳನ್ನು ನಾವು ಮರೆಯಬಹುದು, ಆದರೆ ವಿಧಿ ಮರೆಯುವುದಿಲ್ಲ. ಅದು ಚಾಚೂ ಬಿಡದೆ ನಮ್ಮಿಂದ ಫಲವನ್ನು ಅನುಭವಿಸುವಂತೆ ಮಾಡುತ್ತದೆ. ನಹುಷನ ಕಾಮಾತುರತೆಗೆ ದೀರ್ಘಕಾಲದ ಸರ್ಪದೇಹದ ಶಿಕ್ಷೆ ದೊರಕಿತು. ಧರ್ಮರಾಜ ಹೇಳಿದ ಒಂದು ಸುಳ್ಳು ಅವನಿಗೆ ನರಕದರ್ಶನ ಮಾಡಿಸಿತು, ವಾಲಿಗೆ ಮರಣವನ್ನು ತಂದಿತ್ತಿತು. ರಾವಣನ ಒಂದು ತಪ್ಪು ಅವನ ವಂಶವನ್ನೇ ಸವರಿ ಹಾಕಿತು. ಅಲೆಗ್ಝಾಂಡರ್‌ನ ಮಹತ್ವಾಕಾಂಕ್ಷೆ ಮತ್ತು ಕ್ರೌರ್ಯ ಅವನನ್ನು ಚಿಕ್ಕ ವಯಸ್ಸಿಗೇ ಅಸಹಾಯಕನಂತೆ ಸಾಯುವಂತೆ ಮಾಡಿತು. ಇತಿಹಾಸದಲ್ಲಿ ಇಂಥ ಸಾವಿರ ಉದಾಹರಣೆಗಳು ಸಿಕ್ಕಾವು. ಕಗ್ಗ ತಿಳಿಸುತ್ತದೆ, ಮಹಾತ್ಮನಾದ ಏಸುಕ್ರಿಸ್ತನೇ ತನ್ನ ಶಿಲುಬೆಯನ್ನು ತಾನೇ ಹೊತ್ತು ಬೆಟ್ಟ ಏರಿದನಂತೆ. ಅಂತೆಯೇ ವಿಧಿ ನಿನಗೆ ನೀಡಿದ ಕರ್ಮಫಲವನ್ನು ಗೊಣಗದೆ ಹೊತ್ತು ನಡೆ. ನಿನಗೆ ಬೇರೆ ದಾರಿಯಿಲ್ಲ. ಮುಖ ಗಂಟಿಕ್ಕದೆ, ತುಟಿ ಕಚ್ಚಿ ಬಂದದ್ದನ್ನು ಅನುಭವಿಸು. ಯಾಕೆಂದರೆ ಬಂದದ್ದು ನೀನು ಮಾಡಿದ್ದರ ಪ್ರತಿಫಲವೇ. ಅದನ್ನು ಬೆನ್ನಿನಲ್ಲಿ ಹೊತ್ತು ನಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT