ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಎಲ್ಲವೂ ಪರಸತ್ವ

Last Updated 2 ಜನವರಿ 2023, 20:48 IST
ಅಕ್ಷರ ಗಾತ್ರ

ದಿನದಿನವು ಕುಸಿದು ಕಟ್ಟಿಸಿಕೊಳ್ಳುವ ಗುಡಿ ವಿಶ್ವ |

ಜನರೆಲ್ಲರಾಗುಡಿಯ ಕೆಲಸದಾಳುಗಳು ||

ಮನೆಯೇನು? ನಾಡೇನು? ಕುಲವೇನು? ಮಠವೇನು? |

ಎಣಿಸೆಲ್ಲವದೆಯೆಂದು – ಮಂಕುತಿಮ್ಮ || 791 ||

ಪದ-ಅರ್ಥ: ಜನರೆಲ್ಲರಾಗುಡಿಯ =ಜನರೆಲ್ಲ+ಆ+ಗುಡಿಯ, ಕೆಲಸದಾಳುಗಳು=ಕೆಲಸದ+ಆಳುಗಳು, ಎಣಿಸೆಲ್ಲವದೆಯೆಂದು=ಎಣಿಸು+ಎಲ್ಲವೂ+ಅದೆ+ಎಂದು.

ವಾಚ್ಯಾರ್ಥ: ಈ ವಿಶ್ವವೊಂದು ದಿನದಿನವೂ ಕುಸಿದು ಹೊಸದಾಗಿ ಕಟ್ಟಿಸಿಕೊಳ್ಳುವ ಗುಡಿ. ಎಲ್ಲ ಜನರೂ ಆ ಗುಡಿಯ ಕೆಲಸದ ಆಳುಗಳು. ಇಲ್ಲಿ ಮನೆ, ನಾಡು, ಕುಲ, ಮಠ ಯಾವುದೂ ಬೇರೆಯಲ್ಲ. ಎಲ್ಲವೂ ಒಂದೇ ಕಾರ್ಯದ ಹಲವು ಮುಖಗಳು.
ವಿವರಣೆ: ಈ ವಿಶ್ವ, ನಿತ್ಯಪರಿವರ್ತನೆಯ ಕೋಶ. ಇಲ್ಲಿ ತೆರೆ ಏಳುತ್ತದೆ, ತೆರೆ ಇಳಿಯುತ್ತದೆ. ವಿಜ್ಞಾನಿಗಳ ಪ್ರಕಾರ ಈ ವಿಶ್ವದ ಹುಟ್ಟು ಮತ್ತು ಬೆಳವಣಿಗೆ ಒಂದು ಪರಮವಿಸ್ಮಯ. ಮೊಟ್ಟೆಯಂತಿದ್ದ ವಿಶ್ವ ಫಟಾರೆಂದು ಸಿಡಿಯಿತಂತೆ. ಅದು ಯಾವ ಅಪಾರ ಶಕ್ತಿಯಿಂದ ಸಿಡಿಯಿತೆಂದರೆ ಸುಡುಸುಡುವ ಆವಿಯಾಗಿ ಹರಡತೊಡಗಿತು. ಅದು ಎಷ್ಟು ಶಾಖವೊ. ಗರಗರನೆ ತಿರುಗುತ್ತ ಆವಿ ನಿಧಾನವಾಗಿ ಕೊಂಚ ಕೊಂಚವಾಗಿ ಉಷ್ಣತೆಯನ್ನು ಕಳೆದುಕೊಳ್ಳುತ್ತ ಗಟ್ಟಿಯಾಗತೊಡಗಿತು. ಆಮೇಲೆ ಮಳೆ ಬಂತAತೆ. ಅದೆಷ್ಟು ವರ್ಷ? ಸಾವಿರಾರು ವರ್ಷಗಳವರೆಗೆ ಸುರಿದ ಮಳೆ ಗಟ್ಟಿಯಾದ ನಮ್ಮ ವಿಶ್ವವನ್ನು ತಣ್ಣಗಾಗಿಸಿತು. ಮೇಲ್ಮೈ ತಣ್ಣಗಾದರೂ ಒಳಗೆ ಇನ್ನೂ ಕುದಿಕುದಿಯುವ ಲಾವಾ ಇದೆ. ಭೂಮಿಯ ಮೇಲ್ಪದರು ತಂಪಾದಂತೆ, ಯಾವುದೋ ಅಮೃತಕ್ಷಣದಲ್ಲಿ ಜೀವಾಂಕುರವಾಯಿತು. ಗಿಡ ಮರಗಳು ಬಂದು ನೆಲ ಸಸ್ಯಶ್ಯಾಮಲೆಯಾಯಿತು. ಇತ್ತೀಚೆಗೆ ಸುಮಾರು ಐವತ್ತು ಸಾವಿರವರ್ಷಗಳಿಂದೀಚೆಗೆ ಪ್ರಾಣಿಗಳು ಹುಟ್ಟಿದವು. ಅವು ಕ್ರಮೇಣ ಬದಲಾಗುತ್ತ ಮನುಷ್ಯ ರೂಪ ತಳೆಯಿತು. ಎಲ್ಲವೂ ಸಂತೋಷವಾಗಿದ್ದವು. ಅದನ್ನು ಋಷಿಗಳು “ಅಸೈಂ ಪೃಥಿವೈ ಸರ್ವಾಣಿ ಭೂತಾನಿ ಮಧು” ಎಂದು ಕರೆದರು. ಈ ಜಗತ್ತು ಮಾತ್ರ ಜೇನಲ್ಲ, ಇಡೀ ಪೃಥ್ವಿಯೇ ಜೇನಿಗೆ ಸಮ. ಈ ಜೇನಿಗೆ ಸಮನಾದ ವಿಶ್ವವನ್ನು ಮನುಷ್ಯ ಸರಿಯಾಗಿ ತಿಳಿಯಲಿಲ್ಲ. ಜೇನಿಗೆ ಸ್ವಾರ್ಥತೆಯ ವಿಷ ಸೇರಿಸಿದ, ಉಳಿದ ಜೀವಿಗಳನ್ನು ತನಗಾಗಿ ಹಿಂಸಿಸಿದ, ಕೊಂದ. ಗಿಡಮರಗಳನ್ನು ಕತ್ತರಿಸಿ ಕಾಡನ್ನು ಬಯಲುಮಾಡಿದ. ವಾತಾವರಣ ಬದಲಾಗಿ ಹೋಗಿ,ಕಾಲಮಾನಗಳು ಬದಲಾಗಿ, ಮಳೆಗಾಲದಲ್ಲಿ ಬಿಸಿಲು, ಬಿಸಿಲುಗಾಲದಲ್ಲಿ ಚಳಿ ಉಂಟಾಗಿ, ರೋಗ ರುಜಿನಗಳ ಹಾವಳಿ ಅತಿಯಾಗಿ ಮನುಷ್ಯ ಒದ್ದಾಡಿದ.
ಹೀಗೆ ಮನುಷ್ಯನಿಂದ ಪ್ರಕೃತಿ, ಪ್ರಕೃತಿಯಿಂದ ಮನುಷ್ಯ ಬದಲಾಗುತ್ತಲೇ ಬಂದವು. ಅದಕ್ಕೇ ಕಗ್ಗ ಇದನ್ನು ದಿನದಿನವೂ ಕುಸಿದು ಕಟ್ಟಿಸಿಕೊಳ್ಳುವ ವಿಶ್ವ ಎಂದು ಕರೆಯುತ್ತದೆ. ಇದನ್ನು ಕಟ್ಟುವುದರಲ್ಲಿ ಕೆಡಿಸುವುದರಲ್ಲಿ ಜನರೇ ಕೆಲಸದ ಆಳುಗಳು. ವಿಶ್ವ ಬ್ರಹ್ಮದ ಮನೆ, ಆ ಪರಸತ್ವ ಕಾರ್ಯದಲ್ಲಿ ಮನೆ, ನಾಡು, ಕುಲ, ಮಠ ಇವು ಎಲ್ಲವೂ ಒಂದೇ ಮತ್ತು ಯಾವವೂ ಮುಖ್ಯವಲ್ಲ. ಇದು ನಮ್ಮ ಸ್ವಾರ್ಥದ ಕಾರ್ಯವಲ್ಲ, ಪರಮಸತ್ವದ ಕಾರ್ಯದಲ್ಲಿ ನೆರವಾಗುವವರು ನಾವೆಲ್ಲರೂ ಎಂದು ತಿಳಿದಾಗ ಭಿನ್ನತೆ ಬರುವುದಿಲ್ಲ. ಈ ವಿಶ್ವಗುಡಿಯ ಮೂಲ ಮೂರ್ತಿ ಈಶ್ವರ. ಇಡೀ ಪ್ರಪಂಚವೇ
ಅವನದು ಎಂದು ತಿಳಿದಾಗ ಸ್ವಾರ್ಥ ಕೊಂಚ ಕಡಿಮೆಯಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT