ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪುಟ್ಟ ಕಾರ್ಯಕ್ಕೆ ದೊಡ್ಡ ಫಲ

Last Updated 13 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಹಿಂದೆ ಬಕ ಎಂಬ ರಾಜ ಧರ್ಮಾನುಸಾರ ವಾರಾಣಸಿಯ ರಾಜ್ಯವನ್ನು ನಡೆಸುತ್ತಿದ್ದ. ಅವನ ನಗರದ ಪೂರ್ವದ್ವಾರದ ಬಳಿ ಒಂದು ಗುಡಿಸಲಿನಲ್ಲಿ ಒಬ್ಬ ಹುಡುಗಿ ವಾಸವಾಗಿದ್ದಳು. ಒಂದು ಬಾರಿ ಪ್ರತ್ಯೇಕ ಬುದ್ಧನೊಬ್ಬನಿಗೆ ತನ್ನ ಗುಡಿಸಲಿಗೆ ಮಣ್ಣು ಮೆತ್ತಬೇಕಾಗಿತ್ತು. ಅದು ಎಲ್ಲಿ ಸಿಕ್ಕೀತು ಎಂದು ದಿವ್ಯದೃಷ್ಟಿಯಿಂದ ನೋಡಿ ಈ ಹುಡುಗಿಯ ಬಳಿಗೆ ಬಂದ. ಆಗ ಆಕೆ ಮಣ್ಣನ್ನು ಹದವಾಗಿ ತುಳಿಯುತ್ತಿದ್ದಳು. ಪ್ರತ್ಯೇಕ ಬುದ್ಧ ಮಣ್ಣು ಕೇಳಿದೊಡನೆ ಆಕೆ ಒಂದು ದೊಡ್ಡ ಮುದ್ದೆ ಮಣ್ಣನ್ನು ಆತನ ಬುಟ್ಟಿಗೆ ಹಾಕಿದಳು. ಮತ್ತು ಸಿಟ್ಟಿನಿಂದ ಆ ಪ್ರತ್ಯೇಕ ಬುದ್ಧನನ್ನು ದುರುಗುಟ್ಟಿ ನೋಡಿದಳು. ಕೈಯಿಂದ ಮಣ್ಣು ಕೊಟ್ಟಿದ್ದಕ್ಕೆ ಅವಳ ಕೈಗಳು ಅತ್ಯಂತ ಕೋಮಲವಾದವು ಮತ್ತು ಸುಮಧುರ ವಾಸನೆಯನ್ನು ಬೀರತೊಡಗಿದವು. ಆದರೆ ಕೋಪದಿಂದಿದ್ದುದರಿಂದ ಅವಳ ಕಾಲು, ಮುಖ, ಕಣ್ಣು, ಮೂಗು, ಕಿವಿ ಕುರೂಪವಾದವು. ಅವಳಿಗೆ ‘ಪಂಚಪಾಪ’ ಎಂದು ಹೆಸರಾಯಿತು.

ಒಂದು ದಿನ ವಾರಾಣಸಿಯ ರಾಜ ರಾತ್ರಿ ನಗರ ಸಂಚಾರಕ್ಕೆ ವೇಷ ಮರೆಸಿಕೊಂಡು ಹೋಗುತ್ತಿದ್ದಾಗ ಈ ಹುಡುಗಿ ಹತ್ತಿರ ಬಂದಳು. ಅವಳ ಕೈ ಅವನನ್ನು ಸೋಂಕಿತು. ಅವಳ ಹಸ್ತಸ್ಪರ್ಶದ ಪ್ರಭಾವ ಅವನ ಮೇಲೆ ಎಷ್ಟಾಯಿತೆಂದರೆ ಆತ ಮೈಮರೆತುಬಿಟ್ಟ. ‘ನೀನು ಯಾರು, ಯಾರ ಮಗಳು?’ ಎಂದು ಕೇಳಿದ. ಆಕೆ, ತಾನು ದ್ವಾರಪಾಲಕನ ಮಗಳು ಎಂದು ಹೇಳಿದಳು. ರಾಜ, ‘ನಾನು ನಿನ್ನನ್ನು ಮದುವೆಯಾಗುತ್ತೇನೆ, ತಂದೆ-ತಾಯಿಯರಿಗೆ ಹೇಳಿ ಬಾ’ ಎಂದ. ಪಂಚಪಾಪ, ತಾಯಿ ತಂದೆಯರಿಗೆ ಹೇಳಿದಾಗ ಅವರು ಸಂತೋಷಪಟ್ಟರು. ಈ ಕುರೂಪಿಯನ್ನು ಮದುವೆಯಾಗಬೇಕೆನ್ನುವವನು ದರಿದ್ರನೇ ಇರಬೇಕು ಎಂದು ಒಪ್ಪಿದರು. ರಾಜ ಅವಳೊಂದಿಗೆ ಆ ರಾತ್ರಿ ಇದ್ದು ಮರುದಿನ ಬೆಳಿಗ್ಗೆ ಅರಮನೆಗೆ ಬಂದ. ಇದೇ ರೀತಿ ಒಂದು ವಾರ ಕಾಲ ನಡೆಯಿತು. ನಂತರ ರಾಜ ಚಿಂತಿಸಿದ. ಈ ಕುರೂಪಿ ಹೆಂಗಸನ್ನು ಅರಮನೆಗೆ ಕರೆದೊಯ್ದರೆ ಜನ ಹಾಸ್ಯ ಮಾಡಬಹುದು, ತನ್ನನ್ನು ಟೀಕಿಸಬಹುದು. ಆದರೆ ಪ್ರಜೆಗಳಿಗೆ ಆಕೆಯ ಹಸ್ತಸ್ಪರ್ಶದ ಪ್ರಭಾವವಾದರೆ ಅವಳಿಗೆ ನಿಂದೆಯಿಂದ ಮುಕ್ತಿಯಾಗುತ್ತದೆ.

ಮರುದಿನ ಗುಡಿಸಲಿನಲ್ಲಿ ತನ್ನ ಉಂಗುರವನ್ನು ಬಿಟ್ಟು ಬಂದು, ಅರಮನೆಯಲ್ಲಿ ತನ್ನ ಸೇವಕರಿಗೆ ಅದನ್ನು ಹುಡುಕಲು ಹೇಳಿದ. ಅರಮನೆಯಲ್ಲಿ ಸಿಗದಿದ್ದಾಗ ಊರಲ್ಲೆಲ್ಲ ಹುಡುಕುವಂತೆ ಆಜ್ಞೆ ಮಾಡಿದ. ಸೈನಿಕರು ಪಂಚಪಾಪಳ ಗುಡಿಸಲಿನಲ್ಲಿ ಅದನ್ನು ಹುಡುಕಿ ಆಕೆಯನ್ನು ಹಿಡಿದು ತಂದರು. ಮಂತ್ರಿಗಳು ಆಕೆಯನ್ನು ಪ್ರಶ್ನಿಸಿದರು, ‘ಈ ಉಂಗುರ ಇಲ್ಲಿಗೆ ಹೇಗೆ ಬಂತು?’ ಆಕೆ, ‘ಅದನ್ನು ಗಂಡ ತಂದು ಬಿಟ್ಟು ಹೋಗಿದ್ದ’ ಎಂದಳು. ‘ನಿನ್ನ ಗಂಡ ಯಾರು?’ ಎಂದು ಸೈನಿಕರು ಕೇಳಿದಾಗ, ‘ಆತನನ್ನು ಬೆಳಕಿನಲ್ಲಿ ನೋಡಿಲ್ಲ. ಆತ ಕೇವಲ ರಾತ್ರಿ ಮಾತ್ರ ಬರುತ್ತಾನೆ. ಅವನನ್ನು ಸ್ಪರ್ಶದಿಂದ ಗುರುತಿಸಬಲ್ಲೆ’ ಎಂದಳು. ಆಗ ಆಕೆಯನ್ನು ಒಂದು ಡೇರೆಯಲ್ಲಿ ಕುಳ್ಳಿರಿಸಿ ಅದಕ್ಕೊಂದು ಕೈ ಹೋಗುವಷ್ಟು ಮಾತ್ರ ರಂಧ್ರವನ್ನು ಮಾಡಿ, ಆಕೆಯ ಕೈ ಹೊರಗೆ ಬರುವಂತೆ ಮಾಡಿದರು. ನಗರದ ಪುರುಷರೆಲ್ಲ ಒಬ್ಬೊಬ್ಬರಾಗಿ ಬಂದು ಆಕೆಯ ಕೈ ಮುಟ್ಟಿದರು, ಆ ಸ್ಪರ್ಶದ ಆಕರ್ಷಣೆಗೆ ಒಳಗಾದರು. ಅದು ಎಂಥ ಪ್ರಭಾವವಾಗಿತ್ತೆಂದರೆ ಅವರೆಲ್ಲರೂ ಡೇರೆಯ ಸುತ್ತ ನಿಂತು ಜಯಘೋಷ ಮಾಡತೊಡಗಿದರು. ರಾಜ ಅಲ್ಲಿಗೆ ಬಂದ. ಅವನ ಕೈ ಸ್ಪರ್ಶವಾದೊಡನೆ ಆಕೆ, ‘ಇವನೇ ನನ್ನ ಗಂಡ’ ಎಂದು ಕೂಗಿದಳು. ಜನರೆಲ್ಲ ಬೆರಗಾದರು. ರಾಜ ಹೇಳಿದ, ‘ಆಕೆಯನ್ನು ಮದುವೆಯಾಗಿ ಅರಮನೆಗೆ ಕರೆತರಬೇಕೆಂದಿದ್ದೆ. ಆದರೆ ನೀವು ಪ್ರಜೆಗಳು ಆಕೆಯ ದೇಹವನ್ನು ನೋಡಿ ತಿರಸ್ಕರಿಸಬಹುದು ಎಂಬ ಭಯವಿತ್ತು. ಆಕೆಯ ಸ್ಪರ್ಶಕ್ಕಿರುವ ವಿಶೇಷತೆಯನ್ನು ತಾವೆಲ್ಲ ತಿಳಿಯಲಿ ಎಂದು ಹೀಗೆ ಮಾಡಿದೆ’. ಜನರೆಲ್ಲ ಮೆಚ್ಚಿ ಆಕೆಯನ್ನು ಪಟ್ಟದ ರಾಣಿಯನ್ನಾಗಿ ಮಾಡಿದರು. ಒಂದು ಒಳ್ಳೆಯ ಕೆಲಸ - ಪ್ರತ್ಯೇಕ ಬುದ್ಧನಿಗೆ ಮಣ್ಣು ಕೊಟ್ಟದ್ದು - ಎಷ್ಟು ದೊಡ್ಡ ಸ್ಥಾನವನ್ನು ನೀಡಿತು ಎಂಬುದನ್ನು ಗಮನಿಸಿದರೆ ಒಳ್ಳೆಯ ಕಾರ್ಯಗಳ ಧನಾತ್ಮಕ ಫಲಶೃತಿಯ ಅರಿವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT