ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮನುಷ್ಯ ಪ್ರಯತ್ನ

Last Updated 17 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಹಿಂದೆ ಮಿಥಿಲಾನಗರದಲ್ಲಿ ಮಹಾಜನಕನೆಂಬ ರಾಜನಿದ್ದ. ಅವನಿಗೆ ಇಬ್ಬರು ಮಕ್ಕಳು. ಹಿರಿಯವನು ಅರಿಟಜನಕ, ಕಿರಿಯವನು ಪೋಳಜನಕ. ಮಕ್ಕಳು ದೊಡ್ಡವರಾದಂತೆ ಹಿರಿಯವನನ್ನು ಉಪರಾಜನನ್ನಾಗಿ ಹಾಗೂ ಕಿರಿಯನನ್ನು ಸೇನಾಪತಿಯನ್ನಾಗಿ ರಾಜ ನೇಮಕ ಮಾಡಿದ. ಮುಂದೆ ತಂದೆಯ ಮರಣಾನಂತರ ಅರಿಟಜನಕ ರಾಜನಾದ. ಅರಮನೆಯಲ್ಲಿ ಭೇದ ತರುವವರು ಇದ್ದೇ ಇರುತ್ತಾರಲ್ಲ. ಕೆಲವರು ವ್ಯವಸ್ಥಿತವಾಗಿ ನಿತ್ಯವೂ ರಾಜನ ಬಳಿಗೆ ಹೋಗಿ ‘ಸೇನಾಪತಿ ನಿಮ್ಮನ್ನು ಕೊಲ್ಲಲು ಹೊಂಚು ಹಾಕುತ್ತಿದ್ದಾನೆ’ ಎಂದು ಚಾಡಿ ಹೇಳಿದರು. ನಿತ್ಯವೂ ಇದನ್ನೇ ಕೇಳುತ್ತಿದ್ದ ರಾಜನಿಗೆ ಅದರಲ್ಲಿ ನಂಬಿಕೆ ಬಂದು ಸೇನಾಪತಿಯನ್ನು ಬಂಧಿಸಿ ಕಾರಾಗೃಹದಲ್ಲಿ ಇಡುವಂತೆ ಆಜ್ಞೆ ಮಾಡಿದ.

ಕಾರಾಗೃಹದಲ್ಲಿದ್ದ ಪೋಳಜನಕ ಸತ್ಯಕ್ರಿಯೆ ಮಾಡಿ, ‘ನಾನು ನಿಜವಾಗಿಯೂ ಭ್ರಾತೃದ್ರೋಹಿಯಾಗಿದ್ದರೆ ನಾನು ಶಾಶ್ವತವಾಗಿ ಜೈಲಿನಲ್ಲಿರುವಂತೆ ಆಗಲಿ. ನಾನು ದ್ರೋಹಿಯಾಗಿಲ್ಲವಾದರೆ ನನ್ನ ಸಂಕೋಲೆಗಳು ಕಳಚಿ, ಕಾರಾಗೃಹದ ಬಾಗಿಲುಗಳು ತೆಗೆದುಬಿಡಲಿ’ ಎಂದು ಪ್ರಾರ್ಥಿಸಿದ. ಕ್ಷಣಾರ್ಧದಲ್ಲಿ ಅವನ ಬೇಡಿಗಳು ಕತ್ತರಿಸಿ, ಕಾರಾಗೃಹದ ಬಾಗಿಲು ತೆರೆದುಕೊಂಡವು. ಆತ ಅಲ್ಲಿಂದ ಹೊರಟು ದೇಶದ ಗಡಿಭಾಗವನ್ನು ಸೇರಿದ. ಅಲ್ಲಿ ಜನರ ಪ್ರೇಮವನ್ನು ಗಳಿಸಿದ. ಈಗ ಆತನಿಗೆ ತನ್ನನ್ನು ನಂಬದ ಅಣ್ಣನ ಬಗ್ಗೆ ದ್ವೇಷ ಹುಟ್ಟಿತು. ಅಲ್ಲಿಯ ಜನರನ್ನು ಒಟ್ಟುಗೂಡಿಸಿ, ಸೈನ್ಯ ಕಟ್ಟಿ ಅದನ್ನು ತಂದು ಮಿಥಿಲಾನಗರದ ಹೊರವಲಯದಲ್ಲಿ ಬೀಡುಬಿಟ್ಟ. ಅಣ್ಣನಿಗೆ ಸಂದೇಶ ಕಳುಹಿಸಿದ. ‘ನನ್ನನ್ನು ವಿನಾಕಾರಣ ಸಂದೇಹಿಸಿದ ನಿನ್ನ ವೈರಿ ನಾನಾಗಿದ್ದೇನೆ. ನನಗೆ ಸಿಂಹಾಸನ ಬಿಟ್ಟುಕೊಡು, ಇಲ್ಲವೆ ಯುದ್ಧಮಾಡು’.

ಅಣ್ಣ ಯುದ್ಧಕ್ಕೆ ಹೊರಡುವ ಮುನ್ನ ಗರ್ಭಿಣಿಯಾಗಿದ್ದ ಹೆಂಡತಿಗೆ ರಾಜ ಅರಿಟಜನಕ ಹೇಳಿದ, ‘ಯುದ್ಧದಲ್ಲಿ ಏನಾದರೂ ಆಗಬಹುದು. ನನಗೆ ಸಾವಾದರೆ ನೀನು ಗರ್ಭದ ರಕ್ಷಣೆ ಮಾಡಿಕೊಂಡು ಮಗುವನ್ನು ಬೆಳೆಸು’ ಅವನು ಅಂದುಕೊಂಡಂತೆ ಆತ ಯುದ್ಧದಲ್ಲಿ ಸತ್ತು ಹೋದ. ರಾಣಿ ಸುದ್ದಿ ಕೇಳಿ ಒಂದು ದೊಡ್ಡ ಬಿದಿರಿನ ಬುಟ್ಟಿಯಲ್ಲಿ ಅತ್ಯಂತ ಬೆಲೆಬಾಳುವ ವಜ್ರ, ಮಾಣಿಕ್ಯಗಳನ್ನು ತುಂಬಿಕೊಂಡು, ಅದರ ಮೇಲೆ ಚಿಂದಿಯನ್ನು ಹರಡಿ, ತಾನೂ ಚಿಂದಿಯನ್ನಿಟ್ಟು ಅರಮನೆಯಿಂದ ಹೊರಟಳು. ಚಂಪಾನಗರಿಗೆ ಹೋಗುವುದು ಆಕೆಯ ಉದ್ದೇಶ. ಆಕೆ ರಸ್ತೆಯಲ್ಲಿ ಹೋಗುತ್ತಿರುವಾಗ ಇಂದ್ರನಿಗೆ ಎಚ್ಚರಿಕೆಯಾಯಿತು. ರಾಣಿಯ ಗರ್ಭದಲ್ಲಿರುವವನು ಬೋಧಿಸತ್ವ. ಅವನ ರಕ್ಷಣೆ ಮಾಡುವುದು ತನ್ನ ಜವಾಬ್ದಾರಿ. ತಕ್ಷಣ ಆತ ವೃದ್ಧನ ವೇಷದಲ್ಲಿ ಒಂದು ಎತ್ತಿನ ಗಾಡಿಯನ್ನು ತಂದು ಆಕೆಯ ಮುಂದೆಯೇ ನಿಲ್ಲಿಸಿ ‘ಚಂಪಾನಗರಿಗೆ ಹೋಗುವವರು ಯಾರಾದರೂ ಇದ್ದರೆ ಬನ್ನಿ’ ಎಂದು ಕೂಗಿದ.

ರಾಣಿಯನ್ನು ಒಳಗೆ ಕೂಡ್ರಿಸಿ, ಆಕೆಗೆ ತೊಂದರೆಯಾಗದಂತೆ ಗಾಡಿಯನ್ನು ನೆಲದಿಂದ ಒಂದು ಅಂಗುಲ ಮೇಲಕ್ಕೆತ್ತಿ ಹೊರಟ. ಮರುಕ್ಷಣದಲ್ಲಿ ಆಕೆಗೆ ನಿದ್ರೆ ಬಂದಿತು. ಎಚ್ಚರಾಗುವುದರಲ್ಲಿ ಚಂಪಾನಗರಿ ತಲುಪಿಯಾಗಿತ್ತು. ಅಲ್ಲಿಗೆ ಹೋಗಿ ಮಗನಾದ ಬೋಧಿಸತ್ವನಿಗೆ ಜನ್ಮ ಕೊಟ್ಟು, ಬೆಳೆಸಿ, ವಿದ್ಯೆ ಕೊಡಿಸಿದಳು. ಅವನಿಗೆ ಅವನ ರಾಜತ್ವದ ಬಗ್ಗೆ ತಿಳಿಸಿ ಅದನ್ನು ಪಡೆಯಬೇಕು ಎಂದು ಬೋಧಿಸಿದಳು. ತರುಣ, ತೇಜಸ್ವಿ, ಬೋಧಿಸತ್ವ ಮಿಥಿಲೆಯ ಕಡೆಗೆ ಹೊರಟ, ಸಮುದ್ರಮಾರ್ಗವಾಗಿ.

ದಾರಿಯಲ್ಲಿ ಹಡಗು ಒಡೆದು, ಹಲಗೆಯೊಂದನ್ನು ಹಿಡಿದು ಹತ್ತಾರು ದಿನ ಸತತ ಪರಿಶ್ರಮ ಮಾಡಿ ಅನ್ನಾಹಾರಗಳಿಲ್ಲದೆ ಬದುಕಿದ. ನಂತರ ಇಂದ್ರನ ಕೃಪೆಯಿಂದ ದೇವತೆಯೊಬ್ಬಳು ಅವನನ್ನೆತ್ತಿ ತಂದು ಮಿಥಿಲೆಗೆ ಬಿಟ್ಟಳು. ಆಗ ಆಗಲೇ ಪೋಳಜನಕ ಮೃತ್ಯುಹೊಂದಿ ರಾಜ್ಯ ಅನಾಯಕವಾಗಿತ್ತು. ಆತ ತನ್ನ ಗುರುತು ಹೇಳಿ ರಾಜನಾದ. ಆತ ಪ್ರಜೆಗಳಿಗೆ ಹೇಳಿದ. ‘ನಾನು ಬೋಧಿಸತ್ವನಾಗಿರಬಹುದು, ರಾಜನಾಗಿರಬಹುದು, ಇಂದ್ರನ ಕೃಪೆ ಇರಬಹುದು, ಆದರೆ ಸಕಲ ಮನುಷ್ಯ ಪ್ರಯತ್ನ ಮಾಡದಿದ್ದರೆ ಯಾವುದೂ ಸಾಧ್ಯವಿಲ್ಲ’.

ಆ ಮಾತು ಇಂದಿಗೂ ಸತ್ಯ. ನಮ್ಮ ಹಿನ್ನೆಲೆ ನಮ್ಮನ್ನು ಕಾಪಾಡಲಾರದು. ಕೇವಲ ಪ್ರಯತ್ನವೊಂದೇ ಸಫಲತೆಗೆ ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT