ಮಂಗಳವಾರ, ಅಕ್ಟೋಬರ್ 26, 2021
24 °C

ಬೆರಗಿನ ಬೆಳಕು: ಭಾವಬುದ್ಧಿಯ ಸೇವೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಜೀವನೋದ್ಯಮವೆಲ್ಲ ತೋಟದುದ್ಯೋಗವೆನು|
ಭಾವಬುದ್ಧಿಗಳ ಕೃಷಿಯಿಂದೊಗೆದ ಫಲದಿಂ||
ತೀವುತಿರೆ ನಗೆ ಹೊಳಪು ಮೊಗಮೊಗದೊಳಂ ಜಗದಿ|
ಸೇವೆಯದು ಬೊಮ್ಮಂಗೆ – ಮಂಕುತಿಮ್ಮ ||476||

ಪದ-ಅರ್ಥ: ಜೀವನೋದ್ಯಮವೆಲ್ಲ= ಜೀವನ+ ಉದ್ಯಮ+ ಎಲ್ಲ, ತೋಟದುದ್ಯೋಗವೆನು= ತೋಟದ+ ಉದ್ಯೋಗವೆ+ ಎನು, ಕೃಷಿಯಿಂದೊಗೆದ= ಕೃಷಿಯಿಂದ+ ಒಗೆದ (ಹೊರಟ), ತೀವುತಿರೆ= ಉಕ್ಕುತ್ತಿದ್ದರೆ, ಮೊಗಮೊಗದೊಳಂ= ಮುಖ, ಮುಖಗಳಲ್ಲಿ.

ವಾಚ್ಯಾರ್ಥ: ಜೀವನದ ಕಾರ್ಯಗಳೆಲ್ಲ ತೋಟದ ಕೆಲಸವೆಂದು ಭಾವಿಸು. ಭಾವಬುದ್ಧಿಗಳ ಪರಿಶ್ರಮದಿಂದ, ಮುಖಗಳಲ್ಲಿ ನಗೆ, ಸಂತೋಷ ಮಿನುಗುತ್ತಿದ್ದರೆ ಅದೇ ಭಗವಂತನ ಸೇವೆ.

ವಿವರಣೆ: ತೋಟದಲ್ಲಿ ರೈತ ಎಷ್ಟೊಂದು ಕೆಲಸಗಳನ್ನು ಮಾಡುತ್ತಾನೆ. ಮಣ್ಣು ಹದಮಾಡಿ, ಬೀಜವ ಬಿತ್ತಿ, ನೀರು ಹಾಯಿಸಿ, ಕಳೆ ತೆಗೆದು, ಬಂದ ರೋಗಗಳನ್ನೆಲ್ಲ ನಿವಾರಿಸಿ, ರಾಶಿ ಮಾಡಿದಾಗ ಫಲ ಬರುತ್ತದೆ. ಅಷ್ಟು ತಿಂಗಳುಗಳ ಶ್ರಮ ಮಾಯವಾಗಿ ಅವನ ಮುಖದಲ್ಲಿ ತೃಪ್ತಿಯ, ಸಂತೋಷದ ನಗೆ ಮಿನುಗುವುದು ಫಲವನ್ನು ಕಂಡಾಗ. ತಾಯಿ ಮಗುವಿಗಾಗಿ ನೂರೊಂದು ಕೆಲಸ ಮಾಡುತ್ತಾಳೆ. ಆ ಶ್ರಮವೆಲ್ಲ ಕ್ಷಣದಲ್ಲಿ ಕರಗಿ ನಗು ಮೂಡುವುದು ಮಗುವಿನ ಮುಖದಲ್ಲಿ ಕಂಡ ನಗುವಿನಿಂದ. ಅದೇ ಭಗವಂತನ ಸೇವೆ ಎನ್ನುತ್ತದೆ ಕಗ್ಗ. ನಮ್ಮ ದಿನನಿತ್ಯದ ಬದುಕೂ ಒಂದು ತೋಟದ ಸೇವೆಯಿದ್ದಂತೆ. ಆದರೆ ನಮ್ಮ ಸೇವೆ ನಡೆಯುವುದು ಭಾವದ, ಬುದ್ಧಿಯ ಕಾರ್ಯದಿಂದ. ಇಂದು ಪ್ರಪಂಚದಲ್ಲಿ ಕಾಣುವ ನವೀನತೆಗಳು, ಅನುಕೂಲತೆಗಳು ಬಂದದ್ದು ಯಾರೋ ಒಬ್ಬರ, ಅನೇಕರ ಪರಿಶ್ರಮದಿಂದ. ಎತ್ತಿನಗಾಡಿಯಿಂದ ಹಿಡಿದು ಇಂದಿನ ಜೆಟ್ ವಿಮಾನಗಳ ನಿರ್ಮಾಣದಲ್ಲಿ ಅದೆಷ್ಟು ಜನರ ಸೇವೆ ಸಂದಿದೆಯೋ! ಅದೆಷ್ಟು ಜನ ತಾವು ಏನೂ ಪಡೆಯದೆ, ಜಗಕ್ಕೆ ಎಲ್ಲವನ್ನೂ ನೀಡಿ ಮರೆಯಾದರೊ! ಬದುಕಿನುದ್ದಕ್ಕೂ ಪರಿಶ್ರಮ ಪಟ್ಟು ‘ಭರವಸೆಯ ನಾಡು’ ತೋರಿಸುತ್ತೇನೆಂದು ಸಹಸ್ರಾರು ಜನರಿಗೆ ಆ ನಾಡಿನ ದರ್ಶನ ಮಾಡಿದ ಮೋಸೆಸ್ ಕೊನೆಗೂ ತಾನು ಆ ನಾಡನ್ನು ನೋಡದೇ ಉಳಿದ. ಆದರೆ ಅಜರಾಮರನಾದ. ಮೂರು ದಶಕಗಳಿಗೂ ಕಾಲ ಅಹರ್ನಿಶಿ ದುಡಿದು ಭಾರತದ ಸ್ವಾತಂತ್ರ್ಯಕ್ಕೆ ನೆರವಾದ, ಗಾಂಧೀಜಿ ಸ್ವತಂತ್ರ ಭಾರತದಲ್ಲಿ ಒಂದು ವರ್ಷ ಕೂಡ ಬದುಕಲಿಲ್ಲ. ಆದರೆ ಮಹಾತ್ಮರಾದರು. ತಾರುಣ್ಯದಲ್ಲೇ, ದೇಶದ ಬಿಡುಗಡೆಗೆ ತಮ್ಮ ಬದುಕನ್ನೇ ಹೊಸಕಿ ಹಾಕಿ ಹೋದ ಭಗತ್ ಸಿಂಗ್, ರಾಜಗುರು, ಆಝಾದ್ ಅವರೆಲ್ಲ ಹುತಾತ್ಮರಾಗಿ ಮನದಲ್ಲಿ ನೆಲೆಸಿದರು.

ಹೀಗೆಯೇ ಕವಿಗಳು, ದಾರ್ಶನಿಕರು, ವಚನಕಾರರು, ಸಮಾಜ ಕಾರ್ಯಕರ್ತರು, ವಿಜ್ಞಾನಿಗಳು, ಆಟಗಾರರು, ನಿಸ್ವಾರ್ಥ ರಾಜಕಾರಣಿಗಳು, ಆಡಳಿತಗಾರರು, ಕಲೆಗಾರರು, ಕೃಷಿಕರು, ಗೃಹಿಣಿಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅವಿರತವಾಗಿ ಭಾವ, ಬುದ್ಧಿಗಳನ್ನು ಬಳಸಿಕೊಂಡು ಸಾಧಿಸಿದ ಜೀವನೋದ್ಯಮ ಇಂದು ಪ್ರಪಂಚವನ್ನು ಸುಂದರವಾಗಿಸಿದೆ. ಈ ಪ್ರಪಂಚ ಭಗವಂತನ ಸೃಷ್ಟಿಯೇ ಆದದ್ದರಿಂದ ಅವರೆಲ್ಲರ ಸೇವೆಯೂ ಭಗವಂತನ ಸೇವೆಯೇ. ⇒v

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು