ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ವಿಧಿಗಿದಿರಾಗಿ ಪರಾಕ್ರಮ

Last Updated 27 ಜನವರಿ 2022, 19:30 IST
ಅಕ್ಷರ ಗಾತ್ರ

ನಿನ್ನ ಹೆಗಲಿನ ಹೊರೆಯ ದೈವಭುಜಕೇರಿಸುವ |
ಸನ್ನಾಹ ಸಾಗೀತೆ? ದೈವವೊಪ್ಪೀತೆ? ||
ಮನ್ನಿಸಲಿ ವಿಧಿ ನಿನ್ನ ಬೇಡಿಕೆಯ, ಭಿನ್ನಿಸಲಿ |
ನಿನ್ನ ಬಲವನು ಮೆರೆಸೊ – ಮಂಕುತಿಮ್ಮ || 551 ||

ಪದ-ಅರ್ಥ: ದೈವಭುಜಕೇರಿಸುವ=ದೈವಭುಜಕೆ(ದೈವದ ಹೆಗಲಿಗೆ)+ಏರಿಸುವ, ಭಿನ್ನಿಸಲಿ=ಮುರಿದು ಹಾಕಲಿ.

ವಾಚ್ಯಾರ್ಥ: ನಿನ್ನ ಹೆಗಲಿಗೆ ಬಂದ ಜವಾಬ್ದಾರಿಯನ್ನು ದೈವದ ಭುಜಕ್ಕೆ ಏರಿಸುವ ಸನ್ನಾಹ ಸರಿಯೆ? ಅದನ್ನು ದೈವ ಒಪ್ಪುತ್ತದೆಯೇ? ವಿಧಿ ನಿನ್ನ ಬೇಡಿಕೆಗಳನ್ನು ಒಪ್ಪಲಿ ಅಥವಾ ಒಪ್ಪದಿರಲಿ, ನಿನ್ನ ನಿಜಶಕ್ತಿಯನ್ನು ತೋರಿ ಮೆರೆ.

ವಿವರಣೆ: ನಾವೇನು ಮಾಡುವುದಕ್ಕಾ
ಗುತ್ತದೆ? ದೈವವೇ ನಮ್ಮ ವಿರುದ್ಧ ನಿಂತರೆ ನಾವು ಮಾಡುವುದೇನು? ನಾವೆಷ್ಟರವರು? ಎಂದು ಒದ್ದಾಡುವ ಕಾರ್ಯದಿಂದ ವಿಮುಖರಾಗುವ ಅನೇಕರನ್ನು ಪ್ರಪಂಚದಲ್ಲಿ ಕಂಡಿದ್ದೇವೆ. ಅವರಿಂದ ಯಾವ ಸಾಧನೆಯೂ ಆಗದಿದ್ದುದನ್ನು ನೋಡಿದ್ದೇವೆ. ಅವರೆಲ್ಲ ತಮ್ಮ ಕರ್ತವ್ಯಭಾರವನ್ನು ದೈವದ ಹೆಗಲಿಗೇರಿಸಿ ತಮ್ಮನ್ನು ಹಗುರವಾಗಿಸಿಕೊಂಡವರು. ಇಂಥ ಕಾರ್ಯವನ್ನು ದೈವವೂ ಒಪ್ಪಲಾರದು.

ದೈವ ಒಪ್ಪುತ್ತೋ ಬಿಡುತ್ತೋ ಎಂದು ಚಿಂತಿಸದೆ ತಮ್ಮ ಸಕಲ ಶಕ್ತಿಯನ್ನು ಬಳಸಿ ಹೋರಾಡುವ ಧೀರರು ಪ್ರಪಂಚ ಚರಿತ್ರೆಯಲ್ಲಿ ಕಾಣುತ್ತಾರೆ. ಅವರು ತಮ್ಮ ಗುರಿಯನ್ನು ಸಾಧಿಸುವುದರಲ್ಲಿ ಯಶಸ್ಸನ್ನು ಪಡೆಯಲಿಕ್ಕಿಲ್ಲ. ಆದರೆ ಗುರಿಯೆಡೆಗೆ ಅವರು ಮಾಡಿದ ಅವಿರತ ಪ್ರಯತ್ನ ಅಸಾಮಾನ್ಯವಾದದ್ದು. ದಕ್ಷಿಣ ಧ್ರುವದ ಅನ್ವೇಷಣೆಗೆ ಹೊರಟ ಸ್ಕಾಟ್ ಮತ್ತು ಅವನ ಸ್ನೇಹಿತರು ಪಟ್ಟ ಕಷ್ಟ ಅನ್ಯಾದೃಶವಾದದ್ದು, ಆದರೆ ಅವರ ಉತ್ಸಾಹ ಅಮಿತವಾದದ್ದು. ನಿಸರ್ಗದ ರುದ್ರನರ್ತನವನ್ನು ನೋಡುತ್ತಿದ್ದರೂ, ಎಲ್ಲ ಪರಿಸ್ಥಿತಿ ತನಗೆ ವಿರುದ್ಧವಾಗಿದ್ದರೂ, ನಗುನಗುತ್ತ ಅವುಗಳನ್ನೆದುರಿಸುತ್ತ ಮರಣವನ್ನಪ್ಪಿಕೊಂಡು ಅಮರರಾದರು. ಲಾರ್ಡ ಟೆನಿಸನ್‌ರ್ ಒಂದು ಕವನ ‘Charge of the light brigade’. ಅದನ್ನು ಬಿ.ಎಂ.ಶ್ರೀ ಯವರು ಕನ್ನಡಕ್ಕೆ ‘ಆರನೂರು ರಾವುತರು’ ಎಂದು ಅನುವಾದಿಸಿದ್ದಾರೆ. ಅದರಲ್ಲಿ ನಾಯಕ ನೀಡಿದ ಆಜ್ಞೆ ತಪ್ಪು ಎಂದು ತಿಳಿದಿದ್ದರೂ, ಸೈನಿಕರ ಧರ್ಮದಂತೆ ಅದನ್ನು ಪಾಲಿಸಲು ಮೃತ್ಯುವಿನ ಗುಹೆಯನ್ನು ಸೇರಿ ಹುತಾತ್ಮರಾದರು. ಕವಿ ಹೇಳುತ್ತಾನೆ. ಅವರೆಲ್ಲ ಸತ್ತರೇನೋ ಸರಿ. ಆದರೆ ಅವರ ಸಾಹಸದ ಕೀರ್ತಿ ಮಾತ್ರ ಎಂದೆAದೂ ಬಾಡದು.

ಮಹಾಭಾರತದ ಕರ್ಣ ಅಸಹಾಯ ಶೂರ. ತಾನು ಬದುಕಿ ಉಳಿಯುವುದಿಲ್ಲವೆಂಬುದು ಖಚಿತವಾಗಿದ್ದರೂ, ತನ್ನ ಎದುರಿನ ರಥದಲ್ಲಿದ್ದವನು ಭಗವಂತನೆಂದು ತಿಳಿದೂ ತನ್ನ ಕೌಶಲವನ್ನು, ಶೌರ್ಯವನ್ನು ಅವನೂ ಮೆಚ್ಚುವಂತೆ ಹೋರಾಡಿದ್ದು ಮರೆಯಲಾಗದ್ದು. ಅವನಿಗೆ ವಿಧಿ ಏನು ಮಾಡೀತು ಎಂಬ ಭಯವಿಲ್ಲ ಆದರೆ ತನ್ನ ಪರಾಕ್ರಮವನ್ನು ತೋರಿಯೇ ತೀರಬೇಕೆಂಬ ಛಲ ಅವನದು. ಅವನನ್ನು ಪ್ರಪಂಚ ಇಂದೂ ನೆನೆಯುವುದು ಆ ಶೌರ್ಯಪ್ರದರ್ಶನಕ್ಕೆ. ಅಭಿಮನ್ಯುವಿನ ಸಾಹಸವೂ ಅನುಪಮವಾದದ್ದು. ಆರು ಜನ ಮಹಾರಥರು ಅವನನ್ನು ಸುತ್ತುವರೆಯುವುದು ಮಾತ್ರವಲ್ಲ, ಹಿಂದಿನಿಂದ ಬಂದು ಕೈ ಕತ್ತರಿಸಿದಾಗ, ಅವನಿಗೆ ತಾನು ಬದುಕಿ ಉಳಿಯಲಾರೆ ಎಂಬುದು ಮನದಟ್ಟಾಗಿರಬೇಕು. ಆದರೂ ‘ಬವರವಾದರೆ ಹರನವದನಕೆ ಬೆವರ ತಹೆನು’ ಎಂದು ಅಬ್ಬರಿಸಿ ಹೋರಾಡಿದ ಅಭಿಮನ್ಯು ಪರಾಕ್ರಮದಿಂದ ಚಿರಂಜೀವಿಯಾದ. ಇಂದಿಗೂ ಹಾಗೆ ಸಮಸ್ಯೆಗಳ ಮಧ್ಯೆ ಹೋರಾಡುತ್ತ ತಮ್ಮ ಬಲವನ್ನು ಮೆರೆಸುವವರು ಇದ್ದಾರೆ. ಕಾಲುಕಳೆದುಕೊಂಡ ಅರುಣಿಮಾ ಸಿನ್ಹಾ ಮೌಂಟ ಎವರೆಸ್ಟ ಏರುವುದಾದರೆ, ಸುದಾಚಂದ್ರನ್ ನೃತ್ಯವನ್ನು ಮುಂದುವರೆಸುವುದಾದರೆ ಅದು ಸ್ವಲ್ಪಮಟ್ಟಿಗಾದರೂ ನಮ್ಮೆಲ್ಲರಿಂದ ಸಾಧ್ಯವಾಗಬಹುದಲ್ಲದೆ? ಇದೇ ಕಗ್ಗದ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT