ಬುಧವಾರ, ಸೆಪ್ಟೆಂಬರ್ 29, 2021
20 °C

ಬೆರಗಿನ ಬೆಳಕು | ಮುಂದುವರೆದ ತಾಯಿಯ ದುಃಖ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಬೋಧಿಸತ್ವನ ಮೌನವನ್ನು ಕಂಡು ಮತ್ತಷ್ಟು ಉದ್ವಿಗ್ನಳಾದ ಮಾದ್ರಿದೇವಿ ಅವನನ್ನು ಬಿಟ್ಟು ನಡುಗುತ್ತ ಬೆಳದಿಂಗಳ ರಾತ್ರಿಯಲ್ಲಿ ಮಕ್ಕಳನ್ನು ಹುಡುಕಲು ಹೊರಟಳು. ಮಕ್ಕಳು ಮೊದಲು ಆಟವಾಡುತ್ತಿದ್ದ ಜಮ್ಮುನೇರಿಳೆ ಮರಗಳ ಕೆಳಗೆ ಹೋಗಿ ಮತ್ತೆ ಅಳತೊಡಗಿದಳು, ‘ನೇರಿಳೆ, ವೆದಿಸ, ಸಿಂಧುವಾರಿಕ ಹಾಗೂ ಅನೇಕ ಮರಗಳ ಕೆಳಗೆ ಮಕ್ಕಳು ಕಾಣಿಸುತ್ತಿಲ್ಲ. ಅರಳಿ, ಹಲಸು, ಆಲ, ಬೇಲಹಣ್ಣಿನ ಮರಗಳ ಕೆಳಗೂ ಅವರು ಕಾಣುತ್ತಿಲ್ಲ. ತಂಪಾಗಿ ಹರಿಯುವ ನದಿಯ ತಟದಲ್ಲಿಯೂ ಅವರಿಲ್ಲ. ಅವರು ಸಂತೋಷದಿಂದ ಧರಿಸಿಕೊಳ್ಳುತ್ತಿದ್ದ ನಾನಾ ಪ್ರಕಾರದ ಹೂವಿನ ಗಿಡಗಳು ಇಲ್ಲಿಯೇ ಇವೆ, ಆದರೆ ಅವರಿಲ್ಲ. ಅವರ ಆಟಿಕೆಯ ವಸ್ತುಗಳಾದ ಆನೆ, ಕುದುರೆ, ಎತ್ತುಗಳು ಇಲ್ಲಿಯೇ ಬಿದ್ದಿವೆ, ಆದರೆ ಮಕ್ಕಳು ಹತ್ತಿರದಲ್ಲಿ ಎಲ್ಲಿಯೂ ಇಲ್ಲ’.

ಆಕೆ ನಂತರ ಅಲ್ಲಿಂದ ಹೊರಟು ಕೆಳಗೆ ಬಂದು ಆಶ್ರಮದ ಸುತ್ತಮುತ್ತ ಹುಡುಕತೊಡಗಿದಳು. ‘ಅವರು ಆಟವಾಡುತ್ತಿದ್ದ ಸ್ವರ್ಣಮೃಗಗಳು, ಮೊಲಗಳು, ಕದಲೀ ಮೃಗಗಳು ಇಲ್ಲಿಯೇ ಸುತ್ತಾಡುತ್ತಿವೆ, ಆದರೆ ಮಕ್ಕಳಿಲ್ಲ. ಅವರಿಗೆ ಪ್ರಿಯವಾದ ಹಂಸಗಳು, ಕ್ರೌಂಚಗಳು, ನವಿಲುಗಳು ಮುಖ ಬಾಡಿಸಿಕೊಂಡು ನಿಂತಿವೆ, ಆದರೆ ಮಕ್ಕಳು ಅವುಗಳ ಬಳಿ ಇಲ್ಲ’ ಎಂದು ಕೊರಗಿದಳು. ಆಶ್ರಮದಲ್ಲಿ ಮಕ್ಕಳನ್ನು ಕಾಣದಾದಾಗ ಮಾದ್ರಿದೇವಿ ಆಶ್ರಮದ ಹಿಂದಿದ್ದ ಪುಷ್ಪಿತ ಗಹನವಾದ ಕಾಡಿಗೆ ಬಂದಳು. ‘ಇಲ್ಲಿ ಅವರು ಆಡುತ್ತಿದ್ದ, ಸದಾ ಕಾಲದಲ್ಲಿ ಹೂವುಗಳು ಅರಳಿರುತ್ತಿದ್ದ ವನಸಮೂಹವಿದೆ. ಅವರು ಮೊದಲು ಈಜಾಡುತ್ತಿದ್ದ, ಚಕ್ರವಾಕಗಳು ಕೂಗುತ್ತಿದ್ದ, ಮಂದಾಲಕ, ಕಮಲಗಳಿಂದ ಅಮೃತವಾದ ರಮಣೀಯ ಪುಷ್ಕರಿಣಿಗಳಿವೆ. ಆದರೆ ಮಕ್ಕಳು ಇಲ್ಲಿ ಎಲ್ಲಿಯೂ ಇಲ್ಲ’.

ಎಲ್ಲಿಯೂ ಮಕ್ಕಳು ದೊರಕದಿದ್ದಾಗ ಆಕೆ ಮತ್ತೆ ಬೋಧಿಸತ್ವನ ಬಳಿಗೆ ಓಡಿ ಬಂದಳು. ಆತ ಮೌನದಲ್ಲಿದ್ದರೂ, ಚಿಂತಾಮಗ್ನವಾಗಿರುವುದನ್ನು ಕಂಡು ಕೇಳಿದಳು, ‘ಪ್ರಭೂ, ಇಂದು ನೀವು ಸೌದೆಯನ್ನು ಕತ್ತರಿಸಿಲ್ಲ, ನೀರನ್ನು ಪೂಜೆಗೆ ತಂದು ಇಟ್ಟಿಲ್ಲ. ಬೆಂಕಿಯನ್ನು ಹೊತ್ತಿಸಿಲ್ಲ. ಏನು ಯೋಚನೆ ಮಾಡುತ್ತಿರುವಿರಿ? ಮಕ್ಕಳು ಎಲ್ಲಿಗೆ ಹೋಗಿದ್ದಾರೆಂಬುದು ನಿಮಗೂ ತಿಳಿದಿಲ್ಲವೇ?’.

ಅವಳು ಅಷ್ಟು ಕೇಳಿದರೂ ಬೋಧಿಸತ್ವ ಮೌನವಾಗಿಯೇ ಕುಳಿತಿದ್ದ. ಆತನ ಮೌನದಿಂದಾಗಿ ಆಕೆ ಶೋಕಪೀಡಿತಳಾಗಿ, ಪೆಟ್ಟು ತಿಂದ ಕೋಳಿಯಂತೆ ನಡುಗುತ್ತ ಮೊದಲು ಎಲ್ಲೆಲ್ಲಿ ಹೋಗಿ ನೋಡಿ ಬಂದಿದ್ದಳೋ, ಮತ್ತೆ ಅಲ್ಲೆಡೆಯಲ್ಲಿ ಹೋಗಿ ನೋಡಿ ಬಂದು ಬೋಧಿಸತ್ವನಿಗೆ ಹೇಳಿದಳು, ‘ಸ್ವಾಮಿ, ನನಗೆ ಮಕ್ಕಳು ಎಲ್ಲಿಯೂ ಕಾಣಿಸುತ್ತಿಲ್ಲ. ಅವರು ಸತ್ತು ಹೋದರೆ? ಅವರು ಹೇಗೆ ಸತ್ತರೆಂಬುದನ್ನಾದರೂ ದಯವಿಟ್ಟು ತಿಳಿಸಿ’.

ಇಷ್ಟು ಹೇಳಿದ ಮೇಲೂ ಬೋಧಿಸತ್ವ ಬಾಯಿ ಬಿಡಲಿಲ್ಲ. ಮಕ್ಕಳ ವಿಯೋಗದ ಶೋಕದಿಂದ ಬಳಲಿ ಹೋದ ಮಾದ್ರಿದೇವಿ, ಹುಚ್ಚಿಯ ಹಾಗೆ, ವಾಯುವೇಗದಲ್ಲಿ ಆಶ್ರಮದ ಎಲ್ಲ ಭಾಗಗಳಲ್ಲಿ ರಾತ್ರಿಯೆಲ್ಲ ಸುತ್ತಾಡಿದಳು. ಆಕೆಗೆ ಒಂದೇ ರಾತ್ರಿಯಲ್ಲಿ ಸುತ್ತಾಡಬಹುದಾದ ಜಾಗ ಹದಿನೈದು ಯೋಜನಗಳಷ್ಟು ವಿಸ್ತಾರವಾದಂತೆ ಭಾಸವಾಯಿತು. ರಾತ್ರಿ ಕಳೆಯಿತು. ಅರುಣೋದಯವಾಯಿತು. ಆಕೆ ಈಗ ಬೋಧಿಸತ್ವನ ಮುಂದೆ ಧೃಡ ತೀರ್ಮಾನ ಮಾಡಿ ಕುಳಿತುಕೊಂಡಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು