ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು ಅಂಕಣ | ಪ್ರಯೋಜಕ ಕೊಳೆ

Last Updated 27 ಫೆಬ್ರುವರಿ 2023, 2:30 IST
ಅಕ್ಷರ ಗಾತ್ರ

ಕೊಳಕೆಂದು, ಹುಳುಕೆಂದು, ಹೇಸಿಗೆಯ ಹುಳುವೆಂದು |
ಇಳೆಯೊಳಾವುದರೊಳಮಸಹ್ಯಪಡಬೇಡ ||
ಬೆಲೆಯುಂಟು ಕೊಳೆಗಮೀ ಜೀವಸಾಮಗ್ರಿಯಲಿ |
ಕೊಳೆ ಶುಚಿಖ್ಯಾಪಕವೊ – ಮಂಕುತಿಮ್ಮ || 830 ||

ಪದ-ಅರ್ಥ: ಇಳೆಯೊಳಾವುದರೊಳಮಸಹ್ಯಪಡಬೇಡ=ಇಳೆಯೊಳು+ಆವುದರೊಳಮ್ (ಯಾವುದರಲ್ಲಿಯೂ)+ಅಸಹ್ಯಪಡಬೇಡ,
ಕೊಳೆಗಮೀ=ಕೊಳೆಗಂ(ಕೊಳೆಗೂ)+ಈ, ಶುಚಿಖ್ಯಾಪಕ=ಶುಚಿಯನ್ನು ಜ್ಞಾಪಕಕ್ಕೆ ತರುವುದು.

ವಾಚ್ಯಾರ್ಥ: ಕೊಳಕು, ಹುಳುಕು, ಹೇಸಿಗೆಯ ಹುಳು ಎಂದು ಪ್ರಪಂಚದಲ್ಲಿ ಯಾವುದನ್ನೂ ಅಸಹ್ಯದಿಂದ ಕಾಣಬೇಡ. ಈ ಜೀವಸಾಮಗ್ರಿಯಲ್ಲಿ ಕೊಳಕಿಗೂ ಒಂದು ಬೆಲೆಯುಂಟು. ಕೊಳೆ ನಮಗೆ ಶುಚಿಯ ಜ್ಞಾಪಕ ತರುತ್ತದೆ.

ವಿವರಣೆ: ಕಸವೆಂದರೆ ಎಲ್ಲರಿಗೂ ಅಸಹ್ಯ. ಅದೊಂದು ಪೀಡೆ. ಆದರಿಂದಲೇ ರೋಗ, ರುಜಿನಗಳು ಎಂಬ ಭಾವನೆ ದಟ್ಟವಾಗಿದೆ. ಆದರೆ ಕಗ್ಗ ಹೇಳುತ್ತದೆ, ಜಗತ್ತಿನಲ್ಲಿ ಯಾವುದನ್ನೂ ಕಸವೆಂದು ಅಸಹ್ಯಪಡಬೇಡ. ಕಸಕ್ಕೂ ಒಂದು ಪ್ರಮುಖ ಸ್ಥಾನವಿದೆ.

ಕಸವೆಂದರೆ ಬೇಡವಾದದ್ದು, ಒಬ್ಬರಿಗೆ ಬೇಡವಾದದ್ದು ಮತ್ತೊಬ್ಬರಿಗೆ ಬೇಕಾಗಬಹುದಲ್ಲವೆ? ಮರದ ದಿಮ್ಮಿಯನ್ನು ಕೊರೆದು
ಹಲಗೆ ಮಾಡಿದಾಗ ಉಳಿದ ಮರದ ಸಿಪ್ಪೆ, ಧೂಳು ಕಸ ನಿಜ. ಆದರೆ ಅದೇ ಉರುವಲಾಗಿ ಶಾಖ ಕೊಡುತ್ತದೆ, ಪ್ರಯೋಜನಕಾರಿಯಾಗು
ತ್ತದೆ. ನಮ್ಮ ಗ್ರಾಮಗಳಲ್ಲಿ, ನಗರ ಪ್ರದೇಶ ಗಳಲ್ಲಿ ಎಲ್ಲೆಂದರಲ್ಲಿ ಕಸ ಕಾಣುತ್ತದೆ. ಅದು ನಗರಗಳನ್ನು ಅಸಹ್ಯಗೊಳಿಸುತ್ತದೆ. ಅದನ್ನು ನಿವಾರಿಸುವ ಬಗೆ ತಿಳಿಯದೆ ಸರಕಾರಗಳು ಒದ್ದಾಡುತ್ತವೆ, ಕೋಟಿ ಕೋಟಿ ಹಣವನ್ನು ಖರ್ಚು ಮಾಡುತ್ತವೆ. ಆದರೆ ಕೆಲವು ದೇಶಗಳಿಗೆ ಈ ಕಸವೇ ವರವಾಗಿದೆ. ಯೂರೋಪಿನ ಸ್ವೀಡನ್, ನೆದರ್ ಲ್ಯಾಂಡ್‌ಗಳಲ್ಲಿ ಕಸಕ್ಕೆ ತುಂಬ ಬೇಡಿಕೆ ಇದೆ. ಅವು ಪಕ್ಕದ ದೇಶಗಳಿಂದ ಕೋಟ್ಯಾಂತರ ಟನ್‌ಗಳಷ್ಟು ಕಸವನ್ನು ಆಮದು ಮಾಡಿಕೊಂಡು ವಿದ್ಯುತ್ ಶಕ್ತಿಯನ್ನು ಉತ್ಪಾದನೆ ಮಾಡಿಕೊಳ್ಳುತ್ತವೆ. ಅವರಿಗೆ ಕಸ ತ್ಯಾಜ್ಯವಲ್ಲ, ಅತ್ಯಂತ ಅವಶ್ಯವಾದ ವಸ್ತು.

ಜರ್ಮನಿಯಲ್ಲಿ ತಾಮ್ರದ ಅದಿರನ್ನು ಶುದ್ಧಮಾಡಿ, ತಾಮ್ರವನ್ನು ತೆಗೆಯುವ ಕಾರ್ಯ ನಡೆಯುತ್ತಿತ್ತು. ಅಲ್ಲಿಯ ತಾಮ್ರದ ಅಂಶ ಮುಗಿಯಿತೆಂದು ವಿಜ್ಞಾನಿಗಳು ಆ ಗಣಿಯನ್ನು ಹಾಗೆಯೇ ಬಿಟ್ಟುಬಿಟ್ಟರು. ಮುಂದೆ ಮಳೆ ಬಂದು, ಗಣಿಯಲ್ಲಿ ನೀರು ತುಂಬಿಕೊಂಡಿತು. ಅದೊಂದು ಪರಿಸರಕ್ಕೆ ಆಪತ್ತೆಂದೇ ತೋರಿತು. ನಿಂತ ನೀರನ್ನು ಹೊರಗೆ ಪಂಪ್ ಮಾಡಿ ತೆಗೆದಾಗ ವಿಜ್ಞಾನಿಗಳಿಗೆ ಆಶ್ಚರ್ಯ! ರಾಶಿ, ರಾಶಿ ತಾಮ್ರ ಅಲ್ಲಿ ಇದೆ! ಅವರು ಕಂಡು ಹಿಡಿದದ್ದೆಂದರೆ,ನಿಂತ ನೀರಿನಲ್ಲಿದ್ದ ಬ್ಯಾಕ್ಟೀರಿಯಗಳು ತಾಮ್ರದ ಉಳಿದ ಅಂಶಗಳನ್ನು ಶುದ್ಧಮಾಡಿ ತಾಮ್ರವನ್ನು ತೆಗೆದಿದ್ದವು. ಯಾವ ಬ್ಯಾಕ್ಟೀರಿಯಾ ಒಂದು ಉಪದ್ರವ ಎಂದು ಭಾವಿಸಿದ್ದರೋ ಅದೇ ಅತ್ಯಂತ ಉಪಯೋಗಿಯಾಗಿತ್ತು.

ಆದ್ದರಿಂದ ಕೊಳಕು, ಹುಳುಕು ಎಂದು ಅಸಹ್ಯ ಬೇಡ. ಈ ಪ್ರಪಂಚದಲ್ಲಿ ಅದಕ್ಕೂ ಒಂದು ಪ್ರಮುಖ ಸ್ಥಾನವಿದೆ. ಕೊಳಕಿನ ಇನ್ನೊಂದು ಪ್ರಯೋಜನವೆಂದರೆ, ಅದಿರುವುದರಿಂದಲೇ ಶುಚಿ ಎಂದರೆ ಏನೆಂಬುದು ಅರ್ಥವಾಗುವುದು. ರಾತ್ರಿಯಿಂದ ಹಗಲಿಗೆ ಅರ್ಥವಿರುವಂತೆ, ಸಾವಿನಿಂದ ಬದುಕಿಗೊಂದು ಘನತೆ ಇರುವಂತೆ, ಕೊಳೆಯಿಂದ ಶುಚಿತ್ವದ ಅರಿವು ನಮಗಾಗುತ್ತದೆ. ಕೊಳೆ, ಶುಚಿಯನ್ನು ನೆನಪು ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT