ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಅಂಕಿತ

Published 2 ಆಗಸ್ಟ್ 2023, 23:49 IST
Last Updated 2 ಆಗಸ್ಟ್ 2023, 23:49 IST
ಅಕ್ಷರ ಗಾತ್ರ

ಮಂಕುತಿಮ್ಮನ ಹೆಸರು ಬಿಂಕಕ್ಕೆ ಸಾಲದೆನೆ |
ವೆಂಕನಿಗೊ ಕಂಕನಿಗೊ ಶಂಕರಾರ್ಯನಿಗೋ ||
ಅಂಕಿತವ ಮಾಳ್ಕೆ ಜನರವರೋದಿದರೆ ಸಾಕು |
ಶಂಕೆ ನಿನಗೇನಿಹುದೊ – ಮಂಕುತಿಮ್ಮ || 941 ||

ಪದ-ಅರ್ಥ: ಸಾಲದೆನೆ=ಸಾಲದು+ಎನೆ, ಜನರವರೋದಿದರೆ=ಜನರು+ಅವರು+ಓದಿದರೆ, ನಿನಗೇನಿಹುದೊ=ನಿನಗೆ+ಏನಿಹುದೊ.

ವಾಚ್ಯಾರ್ಥ: ಮಂಕುತಿಮ್ಮ ಎಂಬ ಹೆಸರು ಅಭಿಮಾನಕ್ಕೆ ಸಾಲದು ಎನ್ನಿಸಿದರೆ ವೆಂಕನೆಂತೋ, ಕಂಕನೆಂತೊ, ಶಂಕರಾರ್ಯನೆಂದೋ ಅಂಕಿತವ ಮಾಡಿದರಾಯಿತು. ಯಾವ ಹೆಸರಾದರೇನು, ಜನರು ಓದಿದರೆ ಸಾಕು, ನಿನಗೇಕೆ ಶಂಕೆ ?

ವಿವರಣೆ: ಸಾಮಾನ್ಯವಾಗಿ ವಚನಗಳಿಗೆ, ದಾಸರ ಪದಗಳಿಗೆ ಅಂಕಿತವಿರುತ್ತದೆ. ಅದು ಯಾರು ಬರೆದದ್ದೆಂದು ತಿಳಿಯಲು ಸಾಧನ. ಈ ಚೌಪದಿಗಳ ಅಂಕಿತ, ಮಂಕುತಿಮ್ಮ. ಈ ಮಂಕುತಿಮ್ಮ ಯಾರು? ಅವನ ಹೆಸರನ್ನೇಕೆ ಅಂಕಿತ ಮಾಡಿದ್ದಾರೆ? ಸಾಮಾನ್ಯವಾಗಿ ‘ಮಂಕು’ ಎಂದರೆ ದಡ್ಡ. ಈ ದಡ್ಡತಿಮ್ಮನ ಅಂಕಿತ ಏಕೆ? ಎಂದೆಲ್ಲ ಜಿಜ್ಞಾಸೆಗಳಿದ್ದವು. ಅದಕ್ಕೆ ಡಿ.ವಿ.ಜಿ ಯವರು, ಶ್ರೀ ರಘುನಾಥನ್ ಎನ್ನುವವರಿಗೆ ಸೆಪ್ಟೆಂಬರ್ 9, 1965 ರಂದು ಬರೆದ ಪತ್ರದಲ್ಲಿ ಇದರ ಬಗ್ಗೆ ತಿಳಿಸಿದ್ದಾರೆ. ‘My book in question is called ‘Manku-Thimmana-Kagga’. ‘Manku’ means the dull’. ‘Thimma’ is a country bumpkin. ‘Kagga’ is a rigmarole’. Alternatively speaking, it is ‘foggy fool’s tarrago’.

ಡಿ.ವಿ.ಜಿ ಯವರಿಗೆ ಹೆಸರಿನ ಮೋಹವಿರಲಿಲ್ಲ. ಪುಸ್ತಕಕ್ಕೆ ಯಾವ ಅಂಕಿತವನ್ನಿಟ್ಟರೇನು, ಅದರ ಹೂರಣ ಚೆನ್ನಾಗಿದ್ದರೆ ಸಾಕು ಎಂಬುದು ಅವರ ಧೋರಣೆ. ಅವರೇ ಒಂದೆಡೆಗೆ ಬರೆಯುತ್ತಾರೆ. ‘ಮನೆಯಲ್ಲಿ ಮಕ್ಕಳಿಗೆ, ಕಲ್ಲಪ್ಪ, ಗುಂಡಪ್ಪ, ತಿಪ್ಪಯ್ಯ ಎಂದು ಹೆಸರಿಡುವುದರ ಉದ್ದೇಶ ಹೇಗಾದರೂ ಕಲ್ಲಿನಂತೆ, ಗುಂಡಿನಂತೆ, ತಿಪ್ಪೆಯಂತೆ ಮಗು ಚೆನ್ನಾಗಿ ಬೆಳೆದರೆ ಸಾಕು’. ಅದರಂತೆ ಕಗ್ಗಕ್ಕೆ ಅಂಕಿತ ‘ಮಂಕುತಿಮ್ಮ’ ಎಂದಿಟ್ಟರೂ ಅದರ ಗುಣವಿಶೇಷಗಳೇನೂ ಕಡಿಮೆಯಾಗುವುದಿಲ್ಲ.

ಅದಕ್ಕೇ ಡಿ.ವಿ.ಜಿ ಹೇಳುತ್ತಾರೆ, ಮಂಕುತಿಮ್ಮನ ಹೆಸರು ನಮ್ಮ ಅಭಿಮಾನಕ್ಕೆ ಕೊರತೆ ಎನ್ನಿಸಿದರೆ ವೆಂಕನೆಂತಲೋ, ಕಂಕನೆಂತಲೋ, ಶಂಕರಾರ್ಯನೆಂತೋ ಅಂಕಿತವನ್ನು ಬಳಸಬಹುದು. ಯಾವ ಅಂಕಿತವನ್ನಿಟ್ಟರೇನು, ಪುಸ್ತಕ ಜನರಿಗೆ ಪ್ರಿಯವಾಗಿ, ಅವರು ಓದುವಂತಾದರೆ ಸಾಕು. ಅದಕ್ಕೆ ಶಂಕೆ ಏಕೆ?

ಅಂಕಿತನಾಮದಿಂದ ಗ್ರಂಥ ಪ್ರಸಿದ್ಧವಾಗುವುದಿಲ್ಲ, ಬದಲಾಗಿ ಪ್ರಸಿದ್ಧವಾದ ಗ್ರಂಥದಿಂದ ಅಂಕಿತನಾಮ ಪ್ರಚಲಿತವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT