ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು ಅಂಕಣ: ಪೂರ್ಣತೆಯ ಮತ್ತೊಂದು ರೂಪ

Last Updated 27 ಫೆಬ್ರುವರಿ 2023, 23:45 IST
ಅಕ್ಷರ ಗಾತ್ರ

ತಳೆಯಲಾರನೆ ಬೊಮ್ಮ ಬೀಭತ್ಸರೂಪಗಳ? |
ನಲಿಯಲಾರನೆ ತಿಪ್ಪೆರೊಚ್ಚು ನಾತದಲಿ? ||
ಮಲವೇನೊ! ಹೊಲೆಯೇನೊ! ಜೀವ ಸಂಬಂಧವಲ |
ಮಲಿನದಲಿ ನೆನೆ ಶುಚಿಯ – ಮಂಕುತಿಮ್ಮ || 831 ||

ಪದ-ಅರ್ಥ: ಬೀಭತ್ಸರೂಪಗಳ=ಬೀಭತ್ಸ (ಜಿಗುಪ್ಸೆಯಾಗುವಂಥ)+ರೂಪಗಳ, ನಾತದಲಿ=ವಾಸನೆಯಲಿ, ಮಲಿನದಲಿ=ಕೊಳಕಿನಲಿ.

ವಾಚ್ಯಾರ್ಥ: ಬ್ರಹ್ಮ ಸುಂದರ ರೂಪಗಳನ್ನು ತಳೆದಂತೆ ಜಿಗುಪ್ಸೆಯಾಗುವ ರೂಪಗಳನ್ನು ತಾಳಲಾರನೆ? ಅವನೂ ಅಸಹ್ಯವಾದ ತಿಪ್ಪೆ ರೊಚ್ಚುಗಳಲ್ಲಿ ನಲಿಯಲಾರನೆ? ಮಲಕ್ಕಾಗಲೀ, ಹೊಲಸಿಗಾಗಲಿ ಜೀವಸಂಬಂಧವಿದೆ. ಆದ್ದರಿಂದ ಕೊಳೆಯಲ್ಲಿಯೂ ಶುಚಿಯನ್ನು ನೆನೆ.

ವಿವರಣೆ: ಇದೊಂದು ಬಹುದೊಡ್ಡ ಅಧ್ಯಾತ್ಮಿಕ ಸತ್ಯದ ಹೊಳಹು. ಪ್ರಪಂಚದ ಪ್ರತಿಯೊಂದು ವಸ್ತುವೂ ಪೂರ್ಣವೇ. ಹಾಗಾದರೆ ಅಪರಿಪೂರ್ಣತೆಗೆ ಅವಕಾಶವೆಲ್ಲಿ ಎಂಬ ಪ್ರಶ್ನೆ ಏಳುತ್ತದೆ. ಈ ಅಪರಿಪೂರ್ಣತೆಯ ಕಲ್ಪನೆ ಒಂದು ಆಂಶಿಕ ದೃಷ್ಟಿ. ಸಮಷ್ಠಿ. ದೃಷ್ಟಿಯಿಂದ ಗಮನಿಸಿದಾಗ ದೋಷವೂ ನಿರ್ದೋಷವಾಗಿಯೇ ಕಾಣುತ್ತದೆ. ಆದ್ದರಿಂದ ಪರಿಪೂರ್ಣತೆ ಮತ್ತು ಅಪರಿಪೂರ್ಣತೆಗಳು ಒಟ್ಟು ವಿಶ್ವಯೋಜನೆಯ ಅವಿಭಾಜ್ಯ ಅಂಗಗಳು. ನಾವು ಒಂದು ಚಿತ್ರದ ಭಾಗವನ್ನು ಮಾತ್ರ ನೋಡಿದರೆ ಅಲ್ಲಿ ಕೆಲವು ಗೆರೆಗಳು ಮತ್ತು ಬಣ್ಣಗಳು ದೋಷಪೂರ್ಣವಾಗಿ ಕಾಣಬಹುದು. ಆದರೆ ಒಟ್ಟು ಚಿತ್ರವನ್ನು ನೋಡಿದಾಗ ಅಸಂಬದ್ಧವೆಂದು ಕಂಡ ಗೆರೆಗಳು ಮಹತ್ವಪೂರ್ಣವಾಗಿ ತೋರುತ್ತವೆ. ಅಂತೆಯೇ ನಮ್ಮ ಪ್ರಪಂಚದಲ್ಲಿ ಕಂಡ ಅನೇಕ ಅಸಹ್ಯವೆಂದು ತೋರುವ, ಕುರೂಪದ, ಪಾಶವಿಕ ಗುಣಗಳನ್ನು ಕಂಡಾಗ ನಮಗೆ ಜಿಗುಪ್ಸೆಯಾಗುತ್ತದೆ. ಅವುಗಳನ್ನು ಮರೆಯಲು ಪ್ರಯತ್ನಿಸುತ್ತೇವೆ. ಅವು ನಮ್ಮನ್ನು ಪರೋಕ್ಷದಲ್ಲಿ ಕಾಡುತ್ತವೆ. ಈ ರೂಪಗಳು ಬೇಕೇ ಎನ್ನಿಸುತ್ತದೆ. ಆದರೆ ಅವೂ ಕೂಡ ಪರಬ್ರಹ್ಮದ ವಿಶೇಷ ರೂಪಗಳೇ. ಶಾಂತ, ಸುಂದರವಾದ ಶಿವ, ತಾಂಡವವನ್ನು ಮಾಡಬಲ್ಲ. ರೌದ್ರರೂಪವನ್ನು ಧರಿಸಿ ಪ್ರಳಯವನ್ನುಂಟು ಮಾಡಬಲ್ಲ. ಶ್ರೀರಾಮನನ್ನು ಕುರಿತು ವಾಲ್ಮೀಕಿಗಳು ಹೇಳಿದ ಮಾತನ್ನು ಸ್ಮರಿಸಬೇಕು.

“ಕಾಲಾಗ್ನಿಸದೃಶ: ಕ್ರೋಧೇ ಕ್ಷಮಯಾ ಪ್ರಥಿವೀ ಸಮ: ||”
ಅವನು ಕ್ರೋಧಗೊಂಡರೆ ಕಾಲಾಗ್ನಿಗೆ ಸಮ ಆದರೆ ಕ್ಷಮೆಯಲ್ಲಿ ಧರಿತ್ರಿಗೆ ಸಮ. ಎರಡೂ ರಾಮನ ಗುಣಗಳೇ. ಆತ ಎರಡರಲ್ಲೂ ಇರಲು ಸಾಧ್ಯವಾಗುತ್ತದೆ. ಕೃಷ್ಣ ಕೊಳಲು ಹಿಡಿದು ನುಡಿಸಿ ರಸಿಕರ ಹೃದಯವನ್ನು ಅಪಹಾರ ಮಾಡಬಲ್ಲ. ಆದರೆ ವಿಶ್ವರೂಪವನ್ನು ಧರಿಸಿ ಇಡೀ ವಿಶ್ವವನ್ನು ಸ್ವಾಹಾ: ಮಾಡಬಲ್ಲ. ಈ ಮಾತೇ ಕಗ್ಗದ್ದು. ಜಗತ್ತಿನಲ್ಲಿ ಕಂಡ ಸುಂದರ, ಕುರೂಪದ, ಸಂತೋಷದ, ಬೀಭತ್ಸದ ರೂಪಗಳೆಲ್ಲ ಬ್ರಹ್ಮನದೇ. ಅವನು ಎಲ್ಲದರಲ್ಲಿಯೂ ಸಮಾನವಾಗಿಯೇ ಇರತಕ್ಕವನು. ಮಲದಿಂದಲೇ ಹುಟ್ಟಿಬರುವ ಜೀವಕ್ಕೆ ಮಲವೂ ಸಹಾಯಕವಾಗಿ ಜೀವಸಂಬಂಧವೇ ಆಗುವುದಲ್ಲ. ಅದಕ್ಕೆ ಕೊಳೆಯನ್ನು ಕಂಡಾಗ ಶುಚಿಯಾದದ್ದನ್ನು ನೆನೆದು, ಕೊಳೆಯೂ ಕೂಡ ಒಂದು ಪರ್ಯಾಯ ರೂಪವೇ ಎಂದು ಪೂರ್ಣತೆಯನ್ನು ಚಿಂತಿಸುವುದು ಕ್ಷೇಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT