ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಬಿಡುಗಡೆಯ ದಾರಿ

Last Updated 5 ಅಕ್ಟೋಬರ್ 2022, 20:15 IST
ಅಕ್ಷರ ಗಾತ್ರ

ಎರಡು ತೊಡರೆನಲೇಕೆ? ಬಿಡಿಸು ಮತಿಗಾದನಿತ |
ದುಡಿ ಕೈಯಿನಾದನಿತು, ಪಡು ಬಂದ ಪಾಡು ||
ಬಿಡು ಮಿಕ್ಕುದನು ವಿಧಿಗೆ, ಬಿಡದಿರುಪಶಾಂತಿಯನು|

ಬಿಡುಗಡೆಗೆ ದಾರಿಯದು – ಮಂಕುತಿಮ್ಮ || 729 ||

ಪದ-ಅರ್ಥ: ಎಡರು=ಕಷ್ಟಗಳು,ತೊಡರು=ಅಡ್ಡಿ, ಆತಂಕಗಳು, ಮತಿಗಾದನಿತ ಮತಿಗೆ(ಬುದ್ಧಿಗೆ)
+ಆದ+ಅನಿತ(ಅಷ್ಟು), ಕೈಯಿನಾದನಿತು=ಕೈಯಿನ(ಕೈಯಿಂದ)+ಆದ+ಅನಿತು, ಬಿಡದಿರುಪಶಾಂತಿಯನು=ಬಿಡದಿರು+ಉಪಶಾಂತಿಯನು(ಅಂತರಂಗದ ಶಾಂತಿಯನ್ನು).

ವಾಚ್ಯಾರ್ಥ: ಕಷ್ಟ, ಅಡ್ಡಿ ಎಂದೇಕೆ ಹೇಳುತ್ತೀ? ನಿನ್ನ ಬುದ್ಧಿಗೆ ತಿಳಿದಷ್ಟನ್ನು ಬಿಡಿಸು. ಕೈಯಿಂದಲಾದಷ್ಟು ದುಡಿ. ಬಂದ ಸುಖ, ದುಃಖಗಳನ್ನು ಎದುರಿಸು. ಉಳಿದದ್ದನ್ನು ವಿಧಿಗೆ ಬಿಡು. ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳಬೇಡ. ಇದೇ ಬಿಡುಗಡೆಯ ದಾರಿ.

ವಿವರಣೆ: ಬದುಕು ಎಂದರೆ ಹೂವಿನ ಹಾಸಿಗೆಯಲ್ಲ. ಕಷ್ಟಗಳು ಸಾಲುಸಾಲಾಗಿ ಬಂದಾವು. ಕಲ್ಲು ವಿಗ್ರಹವಾಗಲು ಉಳಿಪೆಟ್ಟು ಬೀಳದೆ ಆದೀತೇ? ಆದರೆ ಆ ಉಳಿಪೆಟ್ಟುಗಳಿಂದಲೇ ಅದು ವಿಗ್ರಹವಾದದ್ದು, ಪೂಜನೀಯವಾದದ್ದು. ನಮಗೆ ಕಷ್ಟ ಬಂದಿತು, ಅನೇಕ ಅಡ್ಡಿ ಆತಂಕಗಳು ಎದುರಾದವು ಎಂದು ಕಣ್ಣೀರು ಸುರಿಸುತ್ತ, ಎಲ್ಲರೊಂದಿಗೆ ದುಃಖವನ್ನು ಹಂಚಿಕೊಂಡು ಅವಲತ್ತುಕೊಳ್ಳುವುದು ಬದುಕಲ್ಲ. ಅದರಾಚೆಗೆ ಸುಂದರವಾದ ಬದುಕನ್ನು ಕಟ್ಟಿಕೊಳ್ಳಬಹುದು. ಅದಕ್ಕೆ ಏನು ಮಾಡಬೇಕು? ಕಗ್ಗ ಹೇಳುತ್ತದೆ, ಅಡ್ಡಿ, ಆತಂಕಗಳಿಗೆ, ಕಷ್ಟಗಳಿಗೆ ಹೆದರುವುದು ಬೇಡ. ಬೆಂಕಿಯಲ್ಲಿ ಬಂಗಾರ ಕರಗುತ್ತದೆ, ಮೊದಲಿನ ಆಕಾರ ಕಳೆದುಕೊಳ್ಳುತ್ತದೆ. ಆದರೆ ಬೆಂಕಿಯಿಂದ ಹೊರಬಂದಾಗ ಮತ್ತಷ್ಟು ಪರಿಶುದ್ಧವಾಗಿ, ಹೊಳಪನ್ನು ಹೆಚ್ಚಿಸಿಕೊಂಡು ಬರುತ್ತದೆ. ಅಂತೆಯೇ ನಮ್ಮನ್ನು ಬಾಧಿಸುವ ಕಷ್ಟ, ಕಾರ್ಪಣ್ಯಗಳು ನಮ್ಮನ್ನು ಪರಿಶುದ್ಧಿಗೊಳಿಸುವ ಸಾಧನಗಳು. ಪ್ರಪಂಚದ ಸಮಸ್ಯೆಗಳನ್ನೆಲ್ಲ ಪರಿಹರಿಸುವುದು ನಮ್ಮಿಂದ ಸಾಧ್ಯವಿಲ್ಲ. ಆದರೆ ನಮ್ಮ ಬುದ್ಧಿಗೆ ತಿಳಿದಷ್ಟು ಕಾರ್ಯವನ್ನು ಮಾಡಿ, ಅಲ್ಪ ಪ್ರಮಾಣದಲ್ಲಾದರೂ ಪರಿಹಾರವನ್ನು ಪಡೆಯಬಹುದು. ಅತಿಯಾದ ದುಡಿತಮನುಷ್ಯನನ್ನು ದಣಿಸುತ್ತದೆ, ಶಕ್ತಿಯನ್ನು ಹೀರಿಬಿಡುತ್ತದೆ. ಬೇಗ ಮುಪ್ಪು ತರುತ್ತದೆ. ಆದ್ದರಿಂದ ನಮ್ಮ ಶಕ್ತಿಯ ಮಿತಿಯಲ್ಲಿ ದುಡಿಯೋಣ. ಇಷ್ಟೆಲ್ಲ ಮಾಡಿದ ಮೇಲೂ, ಬಂದದ್ದನ್ನು ಎದುರಿಸೋಣ. ಸುಖ, ದು:ಖ ಯಾವುದು ಬಂದರೂ ಸರಿಯೆ, ಯಾವುದೂ ಶಾಶ್ವತವಲ್ಲ ಎಂಬ ನಂಬಿಕೆಯಿಂದ, ಶಾಂತಿಯಿಂದ, ಮುಂದುವರೆಯೋಣ. ಯಾವುದು ನಮ್ಮ ಕೈಯ್ಯಲ್ಲಿಲ್ಲವೊ, ಯಾವುದಕ್ಕೆ ವಿವರಣೆ ಅಸಾಧ್ಯವೊ, ಅದನ್ನು ವಿಧಿಯ ಉಡುಗೊರೆ ಎಂದು ಭಾವಿಸೋಣ. ಈ ಎಲ್ಲ ಧಾವಂತಗಳ ನಡುವೆ ಅತ್ಯಂತ ಮುಖ್ಯವಾದದ್ದೆಂದರೆ ಮನಸ್ಸಿನ ಶಾಂತಿ. ಅದೊಂದು ಇಲ್ಲದಿದ್ದರೆ ಪ್ರಪಂಚದಲ್ಲಿ ಏನಿದ್ದರೂ ಸಂತೋಷವಿಲ್ಲ. ನಮ್ಮೆಲ್ಲ ಕ್ರಿಯೆಗಳ ಗಮ್ಯವೇ ಸಂತೋಷ, ತೃಪ್ತಿ. ಅದಿಲ್ಲದಿದ್ದರೆ ಏನಿದ್ದರೇನು? ಪ್ರಪಂಚದಲ್ಲಿ ಅಧಿಕಾರ, ಹಣ, ಸಂಪರ್ಕ, ಬುದ್ಧಿಮತ್ತೆ ಇದ್ದವರು ಅನೇಕ. ಆದರೆ ಆಂತರಿಕ ಶಾಂತಿಯನ್ನು ಹೊಂದಿದವರು ಕೆಲವೇ ಕೆಲವರು. ಅವರು ಮಾತ್ರ ಬಿಡುಗಡೆಯ ದಾರಿಯನ್ನು ಪಡೆದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT