ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಕುಟಿಲಕ್ಕೆ ಕುಟಿಲವೇ ಸರಿ

Last Updated 26 ಏಪ್ರಿಲ್ 2021, 21:01 IST
ಅಕ್ಷರ ಗಾತ್ರ

ಮಂತ್ರಿ ಕೇವಟ್ಟ, ರಾಜ ಬ್ರಹ್ಮದತ್ತನಿಗೆ ಹೇಳಿದ, ‘ಸ್ವಾಮಿ, ನಾನೂ ಪಂಡಿತನಿದ್ದೇನೆ, ಮಹೋಷಧಕುಮಾರನಿಗಿಂತ ತುಂಬ ಹಿರಿಯನಿದ್ದೇನೆ. ಈ ರಾಜನನ್ನು ಶಕ್ತಿಯಿಂದ ಸೋಲಿಸುವುದಕ್ಕಿಂತ ಯುಕ್ತಿಯಿಂದ ಸೋಲಿಸೋಣ. ಧರ್ಮಯುದ್ಧವನ್ನು ಘೋಷಿಸೋಣ. ಇದರಲ್ಲಿ ಎರಡೂ ಕಡೆಯ ಸೈನಿಕರು ಯುದ್ಧ ಮಾಡುವುದಿಲ್ಲ. ಅವರು ದೂರ ನಿಲ್ಲುತ್ತಾರೆ. ನಾನು ಮತ್ತು ಮಹೋಷಧಕುಮಾರ ಎರಡೂ ಸೈನ್ಯಗಳ ಮಧ್ಯೆ ಸೇರುತ್ತೇವೆ, ವಾದ ಮಾಡುತ್ತೇವೆ. ಯಾರು ಮತ್ತೊಬ್ಬರಿಗೆ ನಮಸ್ಕಾರ ಮಾಡುತ್ತಾರೋ ಅವರು, ಅವರ ರಾಜ್ಯ ಸೋತಂತೆ. ಈ ಯುಕ್ತಿ ಮಹೋಷಧನಿಗೆ ತಿಳಿದಿಲ್ಲ. ನಾನು ವಯಸ್ಸಿನಲ್ಲಿ ದೊಡ್ಡವನು. ಆದ್ದರಿಂದ ಆತ ನನಗೆ ನಮಸ್ಕಾರ ಮಾಡಿಯೇ ಮಾಡುತ್ತಾನೆ. ಆಗ ಮಿಥಿಲಾ ನರೇಶ ವಿದೇಹ, ಸೋತಂತೆ ಆಯಿತು”. ರಾಜನಿಗೆ ಇದು ಸರಿ ಎನ್ನಿಸಿತು. ಮಹೋಷಧಕುಮಾರನ ದಕ್ಷ ಗುಪ್ತಚಾರರು ಈ ವಿಷಯವನ್ನು ಅವನಿಗೆ ತಿಳಿಸಿದರು.

ಆತ ನಕ್ಕು ಈ ಉಪಾಯಕ್ಕೂ ಸಜ್ಜಾದ. ದೂತರು ಬ್ರಹ್ಮದತ್ತನ ಸಂದೇಶವನ್ನು ರಾಜ ವಿದೇಹನಿಗೆ ತಲುಪಿಸಿದರು. ರಾಜ ಮಹೋಷಧಕುಮಾರನನ್ನು ಕರೆಸಿ ಅಭಿಪ್ರಾಯ ಕೇಳಿದ. ಕುಮಾರ, “ಪ್ರಭೂ, ಚಿಂತೆ ಬೇಡ. ಈ ಕುಟಿಲ ಯುದ್ಧದಲ್ಲಿ ಗೆಲವು ನಮ್ಮದೆ. ಆ ಕೇವಟ್ಟನನ್ನು ನಾನು ವಂಚಿಸುತ್ತೇನೆ. ಅದಕ್ಕೆ ತಮ್ಮಲ್ಲಿದ್ದ, ಭಾರವಾದ ಎಂಟು ವಕ್ರದ ಮಣಿ ಬೇಕು” ಎಂದ. ರಾಜ ಅದನ್ನು ತರಿಸಿಕೊಟ್ಟ. ಅದು ಅತ್ಯಂತ ಬೆಲೆಬಾಳುವ, ಅದ್ಭುತ ಬೆಳಕು ಬೀರುವ ಮಣಿ. ಅದನ್ನು ತೆಗೆದುಕೊಂಡು ರಾಜನಿಗೆ ನಮಸ್ಕರಿಸಿ ಹೊರಗೆ ಬಂದ ಕುಮಾರ.

ನಿಗದಿಯಾಗಿದ್ದಂತೆ ಮರುದಿನ ಬೆಳಿಗ್ಗೆ ಮಹೋಷಧಕುಮಾರ, ತನ್ನ ಜೊತೆಗಾರರಾದ ಸಾವಿರ ಜನ ಸೈನಿಕರನ್ನು ಜೊತೆಯಲ್ಲಿ ಕರೆದುಕೊಂಡು, ಸುಗಂಧ ಜಲದಿಂದ ಸ್ನಾನಮಾಡಿ, ಗಂಧವನ್ನು ಲೇಪಿಸಿಕೊಂಡು, ಲಕ್ಷ ಕಹಾಪಣ ಬೆಲೆಯ ಪೀತಾಂಬರವನ್ನಿಟ್ಟು, ಎಲ್ಲ ಅಲಂಕಾರಗಳನ್ನು ಧರಿಸಿ, ಒಂಭತ್ತು ಸಾವಿರ ಕಹಾಪಣಗಳ ಬೆಲೆಯುಳ್ಳ ಬಿಳೀ ಕುದುರೆಗಳನ್ನು ಹೂಡಿದ ರಥವನ್ನೇರಿಕೊಂಡು ಉಭಯ ಸೈನ್ಯಗಳ ನಡುವೆ, ನಿರ್ಧಾರಿತ ಸ್ಥಳದಲ್ಲಿ ಬಂದು ನಿಂತ. ಕೇವಟ್ಟ ಇವನಿಗೋಸ್ಕರ ಕಾಯುತ್ತಿದ್ದ. ಬಿಸಿಲಿಗೆ ಅವನ ಮೈ ಬೆಮರಿತ್ತು, ಕಾಲು ನಡುಗುತ್ತಿದ್ದವು. ಮಹೋಷಧಕುಮಾರ ಸ್ಥಳಕ್ಕೆ ಬರುತ್ತಿದ್ದಂತೆ ಅವನ ಜೊತೆಗಿದ್ದ ಸಾವಿರ ಜನ ಸೈನಿಕರು, ನೆಲ ನಡುಗುವಂತೆ ಜಯಘೋಷ ಮಾಡಿದರು. ದೂರದಲ್ಲಿ ನಿಂತಿದ್ದ ಬ್ರಹ್ಮದತ್ತನ ಸೈನಿಕರೂ ಈತನ ರೂಪಶೋಭೆಯನ್ನು ಕಂಡು, ಈತ ಮಹಾತ್ಮ, ಮಹಾತೇಜಸ್ವಿ ಎಂದು ಹೊಗಳತೊಡಗಿದರು. ಎರಡೂ ಬದಿಯಲ್ಲಿ, ದೂರದಲ್ಲಿ ಇಬ್ಬರೂ ರಾಜರು, ಸೈನಿಕರು, ಮಧ್ಯದಲ್ಲಿ ನಡೆಯುವುದನ್ನು ನೋಡುತ್ತಿದ್ದರು.

ಮೊದಲು ಒಂದೆರಡು ಲೋಕಾಭಿರಾಮದ ಮಾತುಗಳನ್ನಾಡಿದ ಕುಮಾರ, ನಂತರ ತನ್ನ ಉಡಿಯಲ್ಲಿ ಕಟ್ಟಿಕೊಂಡಿದ್ದ ಪ್ರಕಾಶಮಾನವಾದ ಮಣಿಯನ್ನು ಹೊರತೆಗೆದು ಕೈಯಲ್ಲಿ ಹಿಡಿದುಕೊಂಡು ಅಮಾತ್ಯ ಕೇವಟ್ಟನೆಡೆಗೆ ಚಾಚಿದ. ಲೋಭಿಯಾದ ಕೇವಟ್ಟ ಅದನ್ನು ಕಂಡು ಬೆರಗಾದ. ಅದು ತನಗೆ ಆತ ನೀಡುವ ಕಾಣಿಕೆ ಎಂದು ಭಾವಿಸಿ, ಅದನ್ನು ತೆಗೆದುಕೊಳ್ಳಲು ಮುಂದೆ ಬಂದ. ಆಗ ಕುಮಾರ ಅದನ್ನು ಉಪಾಯವಾಗಿ ಕೆಳಗೆ ತನ್ನ ಕಾಲ ಬಳಿ ಬೀಳುವಂತೆ ಮಾಡಿದ. ಲೋಭವಶನಾದ ಬ್ರಾಹ್ಮಣ ಅದನ್ನು ತೆಗೆದುಕೊಳ್ಳಲು ಕುಮಾರನ ಪಾದದ ಬಳಿಗೆ ಬಾಗಿದ. ಕುಮಾರ ಒಂದು ಕೈಯಿಂದ ಅವನನ್ನು ಎತ್ತುವವನಂತೆ ಮಾಡಿ ಮತ್ತೊಂದು ಕೈಯಿಂದ ಅವನನ್ನು ನೆಲಕ್ಕೆ ಒತ್ತಿ ಅವನ ಮೂಗು, ಹಣೆಗಳಿಂದ ರಕ್ತ ಬರುವಂತೆ ತಿವಿದು, ತಿಕ್ಕಾಡಿದ. ದೂರದಲ್ಲಿ ನಿಂತಿದ್ದ ಎಲ್ಲರಿಗೂ ಕೇವಟ್ಟ, ಕುಮಾರನಿಗೆ ಶರಣಾಗಿ ನಮಸ್ಕಾರ ಮಾಡಿದ ಎಂದು ತೋರಿ ಜಯಘೋಷ ಮಾಡಿದರು. ಬ್ರಹ್ಮದತ್ತನ ಸೈನ್ಯ ಹಿಂದೆ ಓಡತೊಡಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT