ಮಂಗಳವಾರ, ಮೇ 24, 2022
25 °C

ಬೆರಗಿನ ಬೆಳಕು: ಧೃಡಚಿತ್ತ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ತಿರುಗಿಸಲಿ ವಿಧಿರಾಯನಿಚ್ಛೆಯಿಂ ಯಂತ್ರವನು |
ಚರಿಕೆ ತಾರಾಗ್ರಹಗಳಿಷ್ಟವೋದಂತೆ ||
ಪರಿಹಾಸದಿಂ ಕರ್ಮ ದೈವ ಕೇಕೆಗಳಿಡಲಿ |
ಸ್ಥಿರಚಿತ್ತ ನಿನಗರಿಲಿ - ಮಂಕುತಿಮ್ಮ || 599 ||

ಪದ-ಅರ್ಥ: ವಿಧಿರಾಯನಿಚ್ಛೆಯಿಂ=ವಿಧಿರಾಯನು+ಇಚ್ಛೆಯಿಂ (ಇಚ್ಛೆಯಿಂದ), ಚರಿಕೆ=ಚಲಿಸಲಿ, ತಾರಾಗ್ರಹಗಳಿಷ್ಟವೋದಂತೆ=ತಾರೆ+ಗ್ರಹಗಳು+ಇಷ್ಟವೋದಂತೆ (ಇಷ್ಟಬಂದಂತೆ), ಪರಿಹಾಸ=ಕುಹಕ, ಕೇಕೆ=ಅಟ್ಟಹಾಸ, ಸ್ಥಿರಚಿತ್ತ=ಧೃಡವಾದ ಮನಸ್ಸು.

ವಾಚ್ಯಾರ್ಥ: ವಿಧಿರಾಯ ತನ್ನ ಇಚ್ಛೆಯಂತೆ ಯಂತ್ರವನ್ನು ತಿರುಗಿಸಲಿ, ತಾರೆ, ಗ್ರಹಗಳು, ತಮ್ಮ ಇಷ್ಟಬಂದಂತೆ ಚಲಿಸಲಿ. ಕರ್ಮ, ದೈವಗಳು ಅಟ್ಟಹಾಸ ಮಾಡಲಿ. ಆದರೆ ನಿನಗೆ ಧೃಡವಾದ ಮನಸ್ಸಿರಲಿ.

ವಿವರಣೆ: ಭೃತ್ಯಹರಿಯ ನೀಲಿಶತಕದಲ್ಲಿಯ ಒಂದು ನೀತಿಯ ಮಾತು ಹೀಗಿದೆ.
ಪ್ರಾರಭ್ಯತೇ ನ ಖಲು ವಿಘ್ನಭಯೇನ ನೀಚೈ:
ಪಾರಭ್ಯ ವಿಘ್ನವಿಹತಾ ವಿರಮನ್ತಿ ಮಧ್ಯಾ: |
ವಿಘ್ನೈ: ಪುನ: ಪುನರಪಿ ಪ್ರತಿಹನ್ಯಮಾನಾ:
ಪ್ರಾರಬ್ಧಮುತ್ತಮಗುಣೌ ನ ಪರಿತ್ಯಜನ್ತಿ ||

‘ವಿಘ್ನಗಳು ಬರುತ್ತವೇನೋ ಎಂಬ ಭಯದಿಂದ ಅಧಮರು ಕೆಲಸಗಳನ್ನು ಪ್ರಾರಂಭಿಸುವುದೇ ಇಲ್ಲ. ಮಧ್ಯಮರು ಸ್ವಲ್ಪ ತೊಂದರೆಗಳು ಬಂದರೂ ಮಾಡುತ್ತಿರುವ ಕೆಲಸವನ್ನು ನಿಲ್ಲಿಸಿ ಬಿಡುತ್ತಾರೆ.

ಆದರೆ ಉತ್ತಮರು ಎಂಥ ಆತಂಕಗಳು ಬಂದರೂ ಧೃತಿಗೆಡದೆ ಅವುಗಳನ್ನು ದಾಟುತ್ತ ಧೃಡಚಿತ್ತದಿಂದ ಮುಂದುವರೆಯುತ್ತಾರೆಯೇ ಹೊರತು ಪ್ರಯತ್ನಗಳನ್ನು ಬಿಡುವುದಿಲ್ಲ’, ಯಾವುದೇ ಕಾರ್ಯಮಾಡುವಾಗ ತೊಂದರೆಗಳು ಬರುವುದು ಸಹಜ. ವಿಧಿ ಪರೀಕ್ಷೆ ಮಾಡುತ್ತದೆ.ಅದನ್ನು ಕಗ್ಗ ರೋಚಕವಾಗಿ ಹೇಳುತ್ತದೆ. ವಿಧಿ ತನ್ನಿಚ್ಛೆಯಂತೆ ಬದುಕಿನ ಯಂತ್ರವನ್ನು ತಿರುಗಿಸಲಿ.

ತಾರೆಗಳು, ಗ್ರಹಗಳು ತಮ್ಮ ಇಷ್ಟಬಂದಂತೆ ಸರಿದುಹೋಗಲಿ. ಇದರರ್ಥವೆಂದರೆ ಯಾವುದೇ ಪ್ರಸಂಗ ಬರಲಿ ಯಾಕೆಂದರೆ ನಮ್ಮಲ್ಲಿ ಬಹಳಷ್ಟು ಮಂದಿ ನಕ್ಷತ್ರಗಳು, ಗ್ರಹಗಳು, ಇವುಗಳ ಸ್ಥಾನ, ಅವು ನಮ್ಮ ಮೇಲೆ ಮಾಡುವ ಪ್ರಭಾವಗಳು ಇವನ್ನೆಲ್ಲ ನಂಬುತ್ತಾರೆ. ಈ ಗ್ರಹಗಳು ಎಲ್ಲಿಯಾದರೂ ಹೋಗಲಿ. ದೈವ ಮತ್ತು ಕರ್ಮಗಳು ನಮ್ಮನ್ನು ನೋಡಿ ಅಟ್ಟಹಾಸದಿಂದ ನಗಲಿ. ಇವೆಲ್ಲವುಗಳನ್ನು ಎದುರಿಸುವ ಏಕಮಾತ್ರ ಉಪಾಯವೆಂದರೆ.

ಧೃಡಚಿತ್ತ. ಧೃಡಮನಸ್ಸಿನಿಂದ ಸಾಧ್ಯವಾಗದ್ದು ಯಾವುದೂ ಇಲ್ಲ. ಅದು ಎಂಥ ಪ್ರಸಂಗದಲ್ಲೂ ಅಲುಗಾಡದೆ ಇದ್ದು, ಕಾರ್ಯಸಾಧನೆ ಮಾಡುತ್ತದೆ.

ಸಗರ ಚಕ್ರವರ್ತಿಯ ಅಶ್ವಮೇಧ ಯಾಗದ ಕುದುರೆಯನ್ನು ಕಪಿಲಮುನಿಯ ಆಶ್ರಮದಲ್ಲಿ ಇಂದ್ರ ಬಚ್ಚಿಟ್ಟ. ಅದನ್ನು ಹುಡುಕುತ್ತ ಬಂದ ಅವನ ಅರವತ್ತು ಸಾವಿರ ಪುತ್ರರು ಋಷಿಯ ಶಾಪಕ್ಕೆ ಗುರಿಯಾಗಿ ಭಸ್ಮವಾದರು. ಅವರ ಮನೆತನದವನೇ ಆದ ಭಗೀರಥ ಭೂಮಿಗೆ ಗಂಗೆಯನ್ನು ತರ ಬಯಸಿ ಕಠೋರವಾದ ತಪಸ್ಸು ಮಾಡಿದ. ನೀರು, ಗಾಳಿ ಸೇವನೆಯನ್ನು ನಿಲ್ಲಿಸಿ ಹಟದಿಂದ ಗಂಗೆಯನ್ನು ಒಲಿಸಿದ. ನಂತರ ಶಿವನನ್ನು ಒಲಿಸಿ ಅವನ ಜಟೆಯ ಮೂಲಕ ಗಂಗೆ ಭೂಮಿಗೆ ಬಂದು ತನ್ನ ಪೂರ್ವಜರಿಗೆ ಮುಕ್ತಿ ಕೊಡುವಂತೆ ಮಾಡಿದ. ಇದು ಕಥೆ. ಎಂತೆಂತಹ ಕಷ್ಟಗಳು ಬಂದರೂ, ಪುನಃ ಪುನಃ ಪ್ರಯತ್ನಿಸಿ ತನ್ನ ಕಾರ್ಯಸಾಧನೆಯನ್ನು ಮಾಡಿಯೇ ತೀರಿದ ಭಗೀರಥ ಧೃಡಮನಸ್ಸಿಗೆ, ಛಲ ಬಿಡದ ಪ್ರಯತ್ನಕ್ಕೆ ಅನ್ವರ್ಥವಾಗಿದ್ದಾನೆ. ಅದೊಂದು ಸ್ಫೂರ್ತಿಯ ಸೆಲೆಯಾಗಿದೆ. ಈ ಧೃಡಚಿತ್ತವೊಂದೇ ಎಲ್ಲ ಸಮಸ್ಯೆಗಳಿಗೆ ರಕ್ಷಾ ಕವಚ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.