ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಕುತಿಮ್ಮನ ಕಗ್ಗ | ಅಖಂಡವಾದ ಜೀವತತ್ವ

Last Updated 22 ಮೇ 2020, 6:33 IST
ಅಕ್ಷರ ಗಾತ್ರ

ದರಿಯಿರದೆ ಗಿರಿಯಿಲ್ಲ, ನೆರಳಿರದೆ ಬೆಳಕಿಲ್ಲ |
ಮರಣವಿಲ್ಲದೆ ಜನನ ಜೀವನಗಳಿಲ್ಲ ||
ವರಗುಣೋನ್ನತಿಗೆ ನಿಮ್ನಗುಣಂಗಳೊಡವುಟ್ಟು |
ತೆರೆ ಬೀಳದೇಳುವುದೆ? – ಮಂಕುತಿಮ್ಮ || 293 ||

ಪದ-ಅರ್ಥ: ದರಿಯಿರದೆ=ದರಿ(ಕಣಿವೆ)+ಇರದೆ, ವರಗುಣೋನ್ನತಿಗೆ=ವರ(ಶ್ರೇಷ್ಠ)+ಗುಣ+ಉನ್ನತಿಗೆ,ನಿಮ್ನಗುಣಂಗಳೊಡವುಟ್ಟು=ನಿಮ್ನ (ಕೀಳು, ಕೆಳಮಟ್ಟದ)+ಗುಣಂಗಳ(ಗುಣಗಳ)+ಒಡವುಟ್ಟು(ಜೊತೆಗೇ ಹುಟ್ಟಿದ್ದು), ಬೀಳದೇಳುವುದೆ=ಬೀಳದೆ+ಏಳುವುದೆ.

ವಾಚ್ಯಾರ್ಥ: ಕಣಿವೆ ಇರದೆ ಬೆಟ್ಟವಿಲ್ಲ, ಕತ್ತಲಿಲ್ಲದೆ ಬೆಳಕಿಲ್ಲ. ಮರಣವಿಲ್ಲದೆ ಹುಟ್ಟು ಬದುಕುಗಳೇ ಇಲ್ಲ. ಅತ್ಯಂತ ಒಳ್ಳೆಯ ಗುಣಗಳ ಉನ್ನತಿಯೊಂದಿಗೇ ಕೀಳು ಗುಣಗಳು ಹುಟ್ಟಿಕೊಂಡಿವೆ. ಎದ್ದ ತೆರೆ ಕೆಳಗೆ ಬೀಳದ ಹೊರತು ಮತ್ತೊಂದು ಎದ್ದೀತು ಹೇಗೆ?

ವಿವರಣೆ: ಒಳ್ಳೆಯ ಗುಣಗಳಿಗೆ ವಿರೋಧಿಯಾದವು ದುರ್ಗುಣಗಳೇ ಎಂಬ ಭಾವನೆ ನೀತಿಶಾಸ್ತ್ರದಲ್ಲಿ ಕೇವಲ ಅರ್ಧಭಾಗ. ಸರಿಯಾಗಿ ಭಾವಿಸಿದರೆ ವಿರೋಧಿಗುಣಗಳೇ ಒಂದಕ್ಕೊಂದು ಪೂರಕವಾದವುಗಳು. ಕತ್ತಲೆ ಇಲ್ಲದೇ ಹೋಗಿದ್ದರೆ ಬೆಳಕಿಗೆ ಅರ್ಥವೇ ಇರುತ್ತಿರಲಿಲ್ಲ. ಅಜ್ಞಾನವಿಲ್ಲದಿದ್ದರೆ ಜ್ಞಾನವನ್ನು ಗುರುತಿಸುವುದು ಹೇಗೆ?

ಸರಿಯಾಗಿ ಗಮನಿಸಿ ನೋಡಿ, ಬೆಳಕನ್ನು ಬೆಳಗಿಸಿದ್ದು ಕತ್ತಲೆಯೆ. ಕತ್ತಲೆಯ ಇರುವು ಬೆಳಕಿಗೊಂದು ಅರ್ಥ ನೀಡುತ್ತದೆ. ಬೆಳಕಿಗೂ ಕತ್ತಲಿನ ಮಡಿಲೇ ಬೇಕು. ಸಕಲ ಜಗತ್ತಿಗೂ ಬೆಳಕು ನೀಡುವ ಸೂರ್ಯ ಮತ್ತಿತರ ಪ್ರಖರ ನಕ್ಷತ್ರಗಳು ತೇಲುತ್ತಿರುವುದು ಬ್ರಹ್ಮಾಂಡವೆಂಬ ಕತ್ತಲೆಯ ಆಕಾಶದ ಸಮುದ್ರದಲ್ಲಿ.

ಜೀವತತ್ವ ಯಾವಾಗಲೂ ಅಖಂಡವಾದದ್ದು. ಅದರಲ್ಲಿ ವಾಸ್ತವ, ಅವಾಸ್ತವಗಳು, ಸಂಗತ, ಅಸಂಗತಳು ಅನನ್ಯವಾಗಿ ಸೇರಿಕೊಂಡಿರುತ್ತವೆ. ಪ್ರತಿದಿನ, ಪ್ರತಿಯೊಬ್ಬರ ಜೀವನದೊಂದಿಗೆ ಅವನ ಸಾವೂ ಕೂಡ ಬೆಳೆಯುತ್ತಲೇ ಇರುತ್ತದೆ. ಸಾವು ಮತ್ತು ಬದುಕುಗಳನ್ನು ಬೇರೆಯಾಗಿ ನೋಡುವುದು ನಮಗೆ ಅಭ್ಯಾಸವಾಗಿದೆ. ಸಾವು, ಹುಟ್ಟಿನಂತೆಯೇ ಸಹಜವಾದದ್ದು. ಒಂದು ಸಾವು ಮತ್ತೊಂದು ಹುಟ್ಟು ನೀಡಬೇಕು. ಒಂದರ ಅಂತ್ಯ ಮತ್ತೊಂದರ ಪ್ರಾರಂಭ.

ಈ ಕಗ್ಗ ಹೇಳುತ್ತದೆ, ನಮ್ಮಲ್ಲಿರುವ ಒಳ್ಳೆಯ ಗುಣಗಳಿಗೆ ಹಾಗೂ ನಮ್ಮಲ್ಲಿರುವ ಕೆಳಮಟ್ಟದ ಅಥವಾ ಕೀಳುಗುಣಗಳಿಗೆ ಅವಿನಾಸಂಬಂಧ. ಅವು ಅನೇಕ ಬಾರಿ ಜೊತೆ ಜೊತೆಯಾಗಿಯೇ ಇರುತ್ತವೆ. ಮಹಾತ್ಮರ ಬದುಕಿನಲ್ಲೂ ಈ ವಿರೋಧಾಭಾಸಗಳು ಜೊತೆಯಾಗಿಯೇ ಇರುವುದನ್ನು ಕಾಣುತ್ತೇವೆ. ಮಹರ್ಷಿ ವಾಲ್ಮೀಕಿಗಳು ತಮ್ಮ ರಾಮಾಯಣದಲ್ಲಿ ಶ್ರೀರಾಮನ ಗುಣಗಳನ್ನು ಹೀಗೆ ಹೇಳುತ್ತಾರೆ-

ವಿಷ್ಣುನಾ ಸದೃಶೋ ವೀರ್ಯೇ ಸೋಮವತ್ ಪ್ರಿಯದರ್ಶನ: |
ಕಾಲಾಗ್ನಿ ಸದೃಶ: ಕ್ರೋಧೇ ಕ್ಷಮಯಾ ಪೃಥಿವೀ ಸಮ: ||

‘ಶ್ರೀರಾಮನು ಪರಾಕ್ರಮದಲ್ಲಿ ವಿಷ್ಣುವಿನಂಥವನು, ಆದರೂ ನೋಟಕ್ಕೆ ಚಂದ್ರನಂತೆ. ಕೋಪಗೊಂಡಾಗ ಅವನು ಪ್ರಳಯಾಗ್ನಿ, ಆದರೆ ಕ್ಷಮಿಸುವುದರಲ್ಲಿ ಭೂಮಾತೆಯಂಥವನು’.

ಮಹಾತ್ಮರ ಬದುಕಿನಲ್ಲಿ ಪರಸ್ಪರ ವಿರುದ್ಧವೆಂದು ತೋರುವ ಗುಣಗಳು ಅನ್ಯೋನ್ಯವಾಗಿ ಹೊಂದಿಕೊಳ್ಳುತ್ತವೆ. ಜಗತ್ತಿನಲ್ಲಿ ಉನ್ನತ ಸ್ಥಾನದಲ್ಲಿರುವವರ ಮನಸ್ಸು ಕೆಲವೊಮ್ಮೆ ವಜ್ರಕ್ಕಿಂತ ಕಠೋರವಾದದ್ದು ಮತ್ತು ಕೆಲವೊಮ್ಮೆ ಹೂವಿಗಿಂತಲೂ ಮೃದುವಾದದ್ದು. ಮೇಲ್ನೋಟಕ್ಕೆ ಪರಸ್ಪರ ವಿರೋಧಗಳೆಂದು ತೋರುವ ಗುಣಗಳು, ಸರಿಯಾಗಿ ಗಮನಿಸಿದರೆ ಅವು ಒಂದಕ್ಕೊಂದು ಪೂರಕವಾಗಿವೆ. ಒಂದು ಗುಣ ಏರಿದಾಗ ಮತ್ತೊಂದು ಕೆಳಗಿಳಿಯುತ್ತದೆ. ಇದು ಸಮುದ್ರದ ತೆರೆ ಇದ್ದಂತೆ. ಒಂದು ತೆರೆ ಇಳಿದ ಮೇಲೆಯೇ ಮತ್ತೊಂದು ತೆರೆ ಏಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT