ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ-ಬೆರಗಿನ ಬೆಳಕು| ಪ್ರಸಿದ್ಧಿಯ ಕಷ್ಟ

Last Updated 26 ಜನವರಿ 2021, 20:18 IST
ಅಕ್ಷರ ಗಾತ್ರ

ಹಿಂದೆ ಮಿಥಿಲೆಯಲ್ಲಿ ವಿದೇಹನೆಂಬ ರಾಜ ಆಳುತ್ತಿದ್ದಾಗ ಅವನಿಗೆ ನಾಲ್ಕು ಜನ ಅಮಾತ್ಯರಿದ್ದರು. ಅವರು ಸೆನಕ, ಪುಕ್ಕಸ, ಕಾವಿಂದ ಮತ್ತು ದೇವಿಂದ. ನಾಲ್ವರೂ ಮಹಾ ಬುದ್ಧಿಶಾಲಿಗಳೆಂದು ಪರಿಗಣಿಸಲ್ಪಟ್ಟಿದ್ದರು. ಒಂದು ದಿನ ರಾಜ ಬೆಳಗಿನ ಜಾವದಲ್ಲಿ ಕನಸು ಕಂಡ. ತನ್ನ ರಾಜಾಂಗಣದ ನಾಲ್ಕು ಮೂಲೆಗಳಲ್ಲಿ ನಾಲ್ಕು ಬೆಂಕಿಯ ಕಂಭಗಳಿದ್ದವು. ಅವು ಎರಡು ಅಂತಸ್ತುಗಳಷ್ಟು ಎತ್ತರದಲ್ಲಿ ದಗದಗನೆ ಉರಿಯುತ್ತಿದ್ದವು. ಅವನು ನೋಡುತ್ತಿದ್ದಂತೆ ಅವುಗಳ ಮಧ್ಯೆ ಒಂದು ಪುಟ್ಟ ಮಿಂಚು ಹುಳದಷ್ಟು ಕಿಡಿ ಉತ್ಪನ್ನವಾಯಿತು. ಕ್ಷಣಾರ್ಧದಲ್ಲಿ ಅದು ಬೃಹತ್ತಾಗಿ ಬೆಳೆಯುತ್ತ ನಾಲ್ಕು ಬೆಂಕಿಯ ಕಂಬಗಳನ್ನು ದಾಟಿ ಬ್ರಹ್ಮಲೋಕದವರೆಗೆ ಹೋಗಿಬಿಟ್ಟಿತು. ಆದರೆ ಅದರ ಬೆಳಕು ಎಷ್ಟು ಪ್ರಖರವಾಗಿತ್ತೆಂದರೆ ಅದು ಇಡೀ ಪ್ರಪಂಚವನ್ನೇ ಬೆಳಗಿಬಿಟ್ಟಿತು. ನೆಲದ ಮೇಲೆ ಬಿದ್ದ ಸಾಸುವೆಯ ಕಾಳೂ ಕಾಣುವಂತಿತ್ತು. ಜನರೆಲ್ಲ ಬೆಂಕಿಯಲ್ಲೇ ಓಡಾಡಿದಂತೆ ಕಂಡರೂ, ಯಾರ ರೋಮವೂ ಬೆಚ್ಚಗಾಗಲಿಲ್ಲ. ಈ ಕನಸಿನಿಂದ ಬೆದರಿ ರಾಜ ಎದ್ದು ಕುಳಿತ.

ಬೆಳಿಗ್ಗೆ ನಾಲ್ಕು ಜನ ಅಮಾತ್ಯರು ಬಂದಾಗ ಈ ಕನಸನ್ನು ಹೇಳಿ, ಇದರ ಪರಿಣಾಮವೇನು ಎಂದು ಕೇಳಿದ. ಸೆನಕ ಪಂಡಿತ ಹೇಳಿದ, ‘ಮಹಾರಾಜಾ, ಇದು ಶುಭಸೂಚಕ. ಈಗ ದೇಶದಲ್ಲಿ ನಾವು ನಾಲ್ಕು ಜನ ಪಂಡಿತರು ಜ್ಞಾನದಲ್ಲಿ ಬೆಂಕಿಯ ಕಂಬದಂತಿದ್ದೇವೆ. ಬಹುಶಃ ಕನಸಿನಂತೆ ಮತ್ತೊಬ್ಬ ಮಹಾಜ್ಞಾನಿ ನಮ್ಮ ನಡುವೆ ಹುಟ್ಟಿ ಬಂದು ಇಡೀ ಪ್ರಪಂಚವನ್ನೇ ಬೆಳಗಬಹುದು. ಆತ ದೇವಲೋಕವನ್ನು ಬೆಳಗಬಹುದು’. ರಾಜ ಈ ಮಾತನ್ನು ನೆನಪಿನಲ್ಲಿಟ್ಟುಕೊಂಡ.

ಮಿಥಿಲೆಯ ನಾಲ್ಕು ದ್ವಾರಗಳಲ್ಲಿ ನಾಲ್ಕು ನಿಗಮಗಳಿದ್ದವು. ಅವುಗಳಲ್ಲಿ ಪ್ರಾಚೀನ ನಿಗಮದಲ್ಲಿ ಶ್ರೀವರ್ಧನ ಎಂಬ ವೈಶ್ಯನಿದ್ದ. ಅವನ ಹೆಂಡತಿ ಸುಮನಾದೇವಿ, ರಾಜ ಕನಸು ಕಂಡ ದಿನವೇ ಗರ್ಭ ಧರಿಸಿದ್ದಳು. ಬೋಧಿಸತ್ವ ಆಕೆಯ ಗರ್ಭವನ್ನು ಪ್ರವೇಶಿಸಿದ್ದ. ಇಂದ್ರ, ಲೋಕವನ್ನು ಗಮನಿಸುವಾಗ ಇದನ್ನು ಯೋಚಿಸಿ, ಹತ್ತು ತಿಂಗಳುಗಳ ನಂತರ ಬೋಧಿಸತ್ವ ತಾಯಿಯ ಗರ್ಭದಿಂದ ಹೊರಬರುವ ಸಮಯದಲ್ಲಿ, ಅದೃಶ್ಯರೂಪದಲ್ಲಿ ಬಂದು, ಅವನ ಕೈಯಲ್ಲಿ ಕೆಲವು ಗಿಡಮೂಲಿಕೆಗಳನ್ನು ಕೊಟ್ಟು ಹೋದ. ಆದ್ದರಿಂದ ಪಾತ್ರೆಯಿಂದ ನೀರು ಬರುವಷ್ಟು ಸುಲಭವಾಗಿ ಹೆರಿಗೆಯಾಯಿತು. ತಾಯಿಗೆ ನೋವೇ ತಿಳಿಯಲಿಲ್ಲ. ತಾಯಿಗೆ ಆಶ್ಚರ್ಯ! ಮಗು ಕೈಯಲ್ಲಿ ಏನೋ ಹಿಡಿದುಕೊಂಡಿದೆ! ಮಗುವೇ ಮಾತನಾಡಿತು, ‘ಅಮ್ಮಾ ಇದು ದಿವ್ಯವಾದ ಔಷಧಿ. ಯಾವುದೇ ರೋಗದ ರೋಗಿಗೆ ಇದನ್ನು ಕೊಡು, ಗುಣವಾಗುತ್ತದೆ’. ತಾಯಿ ವಿಷಯವನ್ನು ಗಂಡನಿಗೆ ಹೇಳಿದಳು. ಮಗು ಹುಟ್ಟಿದಾಕ್ಷಣ ಮಾತನಾಡುವುದು, ಔಷಧಿ ಕೊಡುವುದು, ಇದೆಲ್ಲ ಪವಾಡದಂತೆ ಕಂಡಿತು. ಅವನಿಗೇ ಏಳು ವರ್ಷಗಳಿಂದ ತಲೆನೋವಿತ್ತು. ಆಗ ಆ ಮೂಲಿಕೆಯನ್ನು ತೇಯ್ದು ಹಣೆಗೆ ಹಚ್ಚಿಕೊಂಡ. ಕ್ಷಣದಲ್ಲಿ ನೋವು ಕರಗಿ ಹೋಯಿತು. ಈ ವಿಷಯ ಎಲ್ಲೆಡೆಗೆ ಹರಡಿತು. ಜನ ತಮ್ಮ ರೋಗಗಳ ಶಮನಕ್ಕೆ ಗುಂಪುಗುಂಪಾಗಿ ಬರತೊಡಗಿದರು. ಆ ಮೂಲಿಕೆಯನ್ನು ತೇಯ್ದು, ನೀರಿನಲ್ಲಿ ಕಲಸಿ, ಸ್ವಲ್ಪ ಕುಡಿಸಿದರೂ ಎಲ್ಲ ರೋಗಗಳು ಪರಿಹಾರವಾಗುತ್ತಿದ್ದವು. ಶ್ರೀವರ್ಧನ ಮಗನಿಗೆ ಮಹೋಷಧಕುಮಾರ ಎಂದು ಹೆಸರಿಟ್ಟ.

ಮಹೋಷಧಕುಮಾರ ಏಳು ವರ್ಷದವನಾಗುವುದರಲ್ಲಿ ಎಲ್ಲೆಲ್ಲೂ ಪ್ರಸಿದ್ಧನಾದ. ಪ್ರಸಿದ್ಧಿ ಬಹಳ ವಿಚಿತ್ರವಾದದ್ದು. ಪ್ರಸಿದ್ಧರಾದವರಿಗೆ ಇದು ಸಂತೋಷವನ್ನು ಕೊಟ್ಟರೂ, ಅನೇಕರಲ್ಲಿ ಹೊಟ್ಟೆಕಿಚ್ಚನ್ನು ಹುಟ್ಟಿಸುತ್ತದೆ. ಪ್ರಸಿದ್ಧ ಪುರುಷನಿಗೆ ತಿಳಿಯದಂತೆ, ಅಕಾರಣವಾಗಿ, ಅವನ ಯಾವ ದೋಷವೂ ಇಲ್ಲದೆ, ವೈರಿಗಳು ಹುಟ್ಟಿಕೊಳ್ಳುತ್ತಾರೆ. ಮಹೋಷಧಕುಮಾರನಿಗೆ ಹಾಗೆಯೇ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT