ಮಂಗಳವಾರ, ಫೆಬ್ರವರಿ 18, 2020
27 °C

ಗಂಟುಗಳ ಮೂಟೆ ಈ ಪ್ರಪಂಚ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

prajavani

ಐಕ್ಯ ನಾನಾತ್ವಗಳು, ನಿಯತಿ ಸ್ವತಂತ್ರಗಳು|

ತರ್ಕ್ಯ ನಿಸ್ತರ್ಕ್ಯಗಳು ಬೆರೆತು ಚಿತ್ರದಲಿ ||

ಶಕ್ಯಮುಂ ಪುರುಷ ತಂತ್ರಕ್ಕಶಕ್ಯಮುಮಾದ |

ಸಿಕ್ಕುಗಳ ಕಂತೆ ಜಗ – ಮಂಕುತಿಮ್ಮ || ೨೪೨ ||

ಪದ-ಅರ್ಥ: ಐಕ್ಯ=ಒಂದಾದ, ನಾನಾತ್ವ=ಬೇರೆ ಬೇರೆಯಾದ, ನಿಯತಿ=ನಿಯಮಕ್ಕೆ ಬದ್ಧವಾದ, ತರ್ಕ್ಯ=ತರ್ಕಕ್ಕೆ ಸಿಗುವ, ನಿಸ್ತರ್ಕ್ಯ=ತರ್ಕಕ್ಕೆ ಸಾಧ್ಯವಾಗದ, ಶಕ್ಯ=ಸಾಧ್ಯವಾಗುವ, ಪುರುಷತಂತ್ರಕ್ಕಶಕ್ಯಮುಮಾದ=ಪುರುಷತಂತ್ರಕ್ಕೆ (ಪುರುಷ ಪ್ರಯತ್ನಕ್ಕೆ)+ಅಶಕ್ಯಮುಂ(ಅಸಾಧ್ಯ)+ಆದ, ಸಿಕ್ಕುಗಳ=ಗಂಟುಗಳ.
ವಾಚ್ಯಾರ್ಥ: ಎಲ್ಲವೂ ಒಂದಾದ, ಬೇರೆಬೇರೆಯಾದ, ನಿಯಮಕ್ಕೆ ಬದ್ಧವಾದ ಮತ್ತು ಸ್ವತಂತ್ರವಾದ, ತರ್ಕ ಸಿಕ್ಕಬಹುದಾದ ಹಾಗೂ ತರ್ಕಕ್ಕೆ ಸಿಲುಕದ ಎಲ್ಲವುಗಳು ಈ ಚಿತ್ರದಲ್ಲಿ ಬೆರೆತು, ಸಾಧ್ಯವಾದ ಮತ್ತು ಪುರುಷ ಪ್ರಯತ್ನಕ್ಕೆ ಅಸಾಧ್ಯವಾದ ಗಂಟುಗಳ ಮೊತ್ತ ಈ ಜಗತ್ತು.

ವಿವರಣೆ: ಇದೆಂಥ ಅದ್ಭುತ ಪ್ರಪಂಚ! ಇಲ್ಲಿ ಏನಿದೆ, ಏನಿಲ್ಲ? ಒಂದು ದೊಡ್ಡದಾದ ಮಾರಾಟದ ಮಳಿಗೆಗೆ ಹೋದಾಗಲೇ ಅದೊಂದು ಕಳೆದು ಹೋಗಬಹುದಾದ ಲೋಕ ಎನ್ನಿಸುವುದಿಲ್ಲವೇ? ಅಲ್ಲಿ ಏನು ಆಕರ್ಷಣೆ! ಇಲ್ಲಿ ದೊರೆಯಲಾರದ್ದು ಯಾವುದೂ ಇಲ್ಲವೆನ್ನಿಸುತ್ತದೆ. ಒಂದು ಮಳಿಗೆಯಲ್ಲಿಯೇ ಹಾಗೆನ್ನಿಸುವುದಿದ್ದಲ್ಲಿ ಈ ಪ್ರಪಂಚದ ಕಥೆ ಏನು? ಇದನ್ನು ಅಲ್ಲಮಪ್ರಭು “ಕರ್ತಾರನ ಕಮ್ಮಟ” ಎಂದು ಕರೆದರು. ಲಕ್ಷ, ಲಕ್ಷ ಜೀವರಾಶಿಗಳು ಈ ಪ್ರಪಂಚದಲ್ಲಿ ! ಒಂದು ಪ್ರಾಣಿ ಮತ್ತೊಂದರಂತಿಲ್ಲ. ಕೆಲವೊಂದು ನೋಟಕ್ಕೆ ಒಂದೇ ಎಂದು ಕಂಡರೂ ಅವುಗಳ ವಿಶೇಷ ಲಕ್ಷಣಗಳೇ ಬೇರೆ. ಆಕಾಶವನ್ನು ರಾತ್ರಿ ತಲೆಯೆತ್ತಿ ನೋಡಿದರೆ ನಕ್ಷತ್ರಗಳ ಸಾಗರವೇ ಕಾಣುತ್ತದೆ. ಅವೆಷ್ಟು ಸಂಖ್ಯೆಯಲ್ಲಿವೆ ನಕ್ಷತ್ರಗಳು! ಕೋಟಿ, ಕೋಟಿ ಸಂಖ್ಯೆಯಲ್ಲಿರುವ ನಕ್ಷತ್ರಗಳಲ್ಲಿಹಲವು ನಮ್ಮ ಸೂರ್ಯನಿಗಿಂತ ಸಹಸ್ರಾರು ಪಟ್ಟು ದೊಡ್ಡದಾಗಿವೆ. ಈ ವಿಶ್ವದಲ್ಲಿ ಅದೆಷ್ಟು ತರಹದ ಮರಗಿಡಗಳು, ಹಣ್ಣು ಹಂಪಲಗಳು, ಕಾಳುಕಡಿಗಳು! ಈ ಪರಿಯ ವಿಸ್ತಾರದ ಜೀವ, ವಸ್ತು ಪ್ರಪಂಚ ನಾನಾತ್ವವನ್ನು ಸಾರುತ್ತದೆ.

ಆದರೆ ಪ್ರಪಂಚ ವ್ಯವಹಾರದಲ್ಲಿ ಕಂಡುಬರುವ ಜೀವರೂಪಗಳ ಮೂಲಸತ್ವವೇ, ಅದರ ಕೇಂದ್ರವೇ ಜೀವದ ಅಂತರ್ಬೀಜವಾದ ಆತ್ಮ. ಅದನ್ನು ‘ಪರಮಾತ್ಮ’ ಎನ್ನಿ, ‘ಈಶ್ವರ’ ಎನ್ನಿ, ‘ದೈವ’ ಎನ್ನಿ ಅಥವಾ ಅದೊಂದು ‘ಶಕ್ತಿ’ ಎನ್ನಿ. ಅದಕ್ಕೇ ಪ್ರಭುದೇವರು ಅದೇ ವಚನದ ಕೊನೆಯಲ್ಲಿ, “ತನು ಮನ ಧನಂಗಳೆಲ್ಲವು ನಮ್ಮ ಗೊಹೇಶ್ವರ ಲಿಂಗದ ಸೊಮ್ಮು” ಎನ್ನುತ್ತಾರೆ. ಅದನ್ನೇ ಉಪನಿಷತ್ತು, “ಈಶಾವಾಸ್ಯಮಿದಂ ಸರ್ವಂ” ಎನ್ನುತ್ತದೆ. ಅಂದರೆ ಹೊರಲೋಕದಲ್ಲಿ ಯಾವುದು ತಾನೇ ತಾನಾಗಿ ಇರುವಂತೆ ಮೆರೆಯುತ್ತಿರುವುದೋ ಅದರ ಐಕ್ಯ ಬಿಂದು ಆ ಈಶ್ವರ. ಇದು ಈಶ್ವರನ ಮನೆ, ಅಲ್ಲಿ ಅವನ ವಾಸ ಅಥವಾ ಇಲ್ಲಿ ಇದ್ದುದೆಲ್ಲವೂ ಈಶ್ವರನೇ. ಹೀಗೆ ನಾನಾತ್ವದ ಹಾಗೂ ಐಕ್ಯದ ಸಂಬಂಧ.

ಪ್ರಪಂಚದ ಚಲನೆಯನ್ನು ಕಂಡರೆ ಅದು ಸ್ವತಂತ್ರವಾಗಿರುವಂತೆ ಕಂಡರೂ ಅದರ ಗತಿಯಲ್ಲಿ ನಿಯತಿ, ನಿಯಮವಿದೆ. ಕೋಟಿ ವರ್ಷಗಳಿಂದ ಸ್ವತಂತ್ರವಾಗಿ ಚಲಿಸುವಂತೆ ತೋರುವ ನಕ್ಷತ್ರ, ಗ್ರಹ, ನಿಹಾರಿಕೆಗಳು ಒಂದು ನಿರ್ದಿಷ್ಟ ನಿಯಮದಲ್ಲೇ ಕಾರ್ಯನಿರ್ವಹಿಸುತ್ತವೆ. ಇಷ್ಟಲ್ಲದೆ ಈ ವಿಶ್ವದಲ್ಲಿ ತರ್ಕಕ್ಕೆ ಸಿಗುವ ಅನೇಕ ಚಿಂತನೆಗಳಿವೆ ಮತ್ತು ಮನುಷ್ಯನ ಚಿಂತನೆಗೆ, ತರ್ಕಕ್ಕೆ ಸಿಗದ ಅನೇಕ ವಿಷಯಗಳಿವೆ. ಭೌತವಿಷಯಗಳಿಗೆ ತರ್ಕ ಬೇಕಾದೀತು. ಆದರೆ ಅಧ್ಯಾತ್ಮ ವಿಷಯಗಳಲ್ಲಿ ತರ್ಕ ನಡೆಯಲಾರದು, ಅದು ನಿಸ್ತರ್ಕ್ಯ.

ಇದೇ ರೀತಿ ಮನುಷ್ಯನ ಶಕ್ತಿಗೆ ಸಾಧ್ಯವಾಗಬಹುದಾದ ಸಾವಿರ ಕೆಲಸಗಳಿವೆ. ಅಂತೆಯೇ ಅವರ ಶಕ್ತಿಯನ್ನು ಮೀರಿದ ಕಾರ್ಯಗಳೂ ಇವೆ. ಆಸ್ಪತ್ರೆಯಲ್ಲಿ ಅಂತ್ಯಾವಸ್ಥೆಯಲ್ಲಿದ್ದ ಮನುಷ್ಯ ಅದೆಷ್ಟು ಜನಪ್ರಿಯವಾಗಿದ್ದರೂ, ವಿಖ್ಯಾತನಾಗಿದ್ದರೂ, ಸರ್ವಶಕ್ತನಾಗಿದ್ದರೂ ಅವನನ್ನು ಒಂದು ಹಂತದಲ್ಲಿ ನೋಡುತ್ತ ಅಸಹಾಯರಾಗಿ ಕೂಡ್ರಬೇಕೇ ವಿನಃ ಅಂತ್ಯವನ್ನು ತಪ್ಪಿಸುವುದು ಅಸಾಧ್ಯ. ಹೀಗೆ ಬಹುತ್ವದ ಮತ್ತು ಐಕ್ಯದ, ಸ್ವತಂತ್ರತೆಯ ಮತ್ತು ನಿಯಮಕ್ಕೆ ಬದ್ಧವಾದ, ತರ್ಕಕ್ಕೆ ಸಿಗುವ ಮತ್ತು ತರ್ಕಾತೀತವಾದ, ಸಾಧ್ಯ ಮತ್ತು ಅಸಾಧ್ಯಗಳ ಒಟ್ಟು ಮೊತ್ತ ಈ ಪ್ರಪಂಚ. ಇದು ಈಶ್ವರನ ಸೃಷ್ಟಿ. ಅವನದೇ ಮನೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)