ಶನಿವಾರ, ಸೆಪ್ಟೆಂಬರ್ 25, 2021
22 °C

ಬೆರಗಿನ ಬೆಳಕು | ಮಾದ್ರಿದೇವಿಯ ಸಂಕಟ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಮಕ್ಕಳು ಕಾಣದಾದಾಗ, ಮಾದ್ರಿದೇವಿ ಗಾಬರಿಯಿಂದ ತನ್ನಷ್ಟಕ್ಕೆ ತಾನೇ ಮಾತನಾಡಿಕೊಂಡಳು, ‘ಅಯ್ಯೋ, ಈ ಜಾಗದಲ್ಲೇ ನನ್ನ ಮಕ್ಕಳು, ಆಕಳ ಬಳಿಗೆ ಓಡಿ ಬರುವ ಕರುಗಳ ಹಾಗೆ ಬಂದು ನಿಲ್ಲುತ್ತಿದ್ದರು. ಜಿಂಕೆಯ ಮರಿಗಳಂತೆ ಆನಂದಿತರಾಗಿ, ಕುಣಿದು ಕುಪ್ಪಳಿಸಿ ಬರುತ್ತಿದ್ದ ಜಾಲಿಕುಮಾರ ಮತ್ತು ಕೃಷ್ಣಾಜಿನರನ್ನು ನಾನು ಇಂದು ಕಾಣುತ್ತಿಲ್ಲ. ಮಾಂಸಲೋಭಿಯಾದ ಸಿಂಹಿಣಿ ತನ್ನ ಮರಿಗಳನ್ನು ಬಿಟ್ಟು ಹೋಗುವಂತೆ ನಾನು ಅವರನ್ನು ಬಿಟ್ಟು ಹೋದೆ. ಅವರ ಧ್ವನಿಗಳೂ ಕೇಳುತ್ತಿಲ್ಲ. ಆಶ್ರಮ ಸುತ್ತಲೂ ಗರಗರನೆ ತಿರುಗುವಂತೆ ಭಾಸವಾಗುತ್ತಿದೆ. ಒಂದು ಪಕ್ಷಿಯೂ ಕೂಗುತ್ತಿಲ್ಲ. ಖಂಡಿತವಾಗಿಯೂ ನನ್ನ ಮಕ್ಕಳಿಗೆ ಏನೋ ಅನಾಹುತವಾಗಿದೆ’.

ಹೀಗೆ ಅಳುತ್ತ ಆಕೆ ಬೋಧಿಸತ್ವನ ಬಳಿಗೆ ಬಂದು ಹಣ್ಣುಗಳಿಂದ ತುಂಬಿದ ಬುಟ್ಟಿಯನ್ನು ಕೆಳಗಿಳಿಸಿದಳು. ಆತ ಮೌನವಾಗಿ ಕುಳಿತಿದ್ದ. ಆಕೆಗೆ ಮತ್ತಷ್ಟು ಸಂಕಟವಾಯಿತು. ‘ಯಾಕೆ ಮೌನದಿಂದ ಕುಳಿತಿದ್ದೀರಿ? ನನ್ನ ಮಕ್ಕಳಿಗೆ ಏನಾಗಿದೆ? ಯಾವ ಪಕ್ಷಿಗಳೂ ಕಾಣುತ್ತಿಲ್ಲ. ಮಕ್ಕಳನ್ನು ಕಾಡುಮೃಗಗಳು ತಿಂದುಬಿಟ್ಟವೆ? ಅಥವಾ ಯಾರಾದರೂ ಬಂದು ಎತ್ತಿಕೊಂಡು ಹೋದರೆ? ನೀವೇ ಅವರನ್ನು ಎಲ್ಲಿಗಾದರೂ ಕಳುಹಿಸಿಕೊಟ್ಟಿದ್ದೀರಾ? ಅವರು ಆಟವಾಗಲು ಹೋಗಿದ್ದಾರೆಯೇ? ಮಲಗಿದ್ದಾರೆಯೆ?’ ಆಕೆ ಅಷ್ಟು ವಿಲಾಪ ಮಾಡುತ್ತ ಪ್ರಶ್ನೆಗಳನ್ನು ಕೇಳುತ್ತಿದ್ದರೂ ಬೋಧಿಸತ್ವ ಒಂದು ಮಾತೂ ಆಡಲಿಲ್ಲ.

ಮಾದ್ರಿದೇವಿ, ‘ಪ್ರಭೂ, ಯಾಕೆ ನನ್ನೊಂದಿಗೆ ಮಾತನಾಡುತ್ತಿಲ್ಲ? ನಾನು ಮಾಡಿದ ಅಪರಾಧವೇನು?’ ಎನ್ನುತ್ತ ಆಕೆ ಮತ್ತೆ ಕೇಳಿದಳು, ‘ಜಾಲಿಕುಮಾರ ಮತ್ತು ಕೃಷ್ಣಾಜಿನರನ್ನು ಕಾಣದಿರುವುದು ದೇಹವನ್ನು ಶಲ್ಯದಿಂದ ಸೀಳಿಬಿಡುವುದಕ್ಕಿಂತ ಹೆಚ್ಚು ನೋವನ್ನುಂಟು ಮಾಡುವುದು. ಜಾಲಿಕುಮಾರ ಮತ್ತು ಕೃಷ್ಣಾಜಿನರನ್ನು ಕಾಣದಿರುವುದು ಮೊದಲನೆಯ ಶಲ್ಯ. ನೀವು ನನ್ನೊಂದಿಗೆ ಮಾತನಾಡದಿರುವುದು ನನ್ನ ಹೃದಯವನ್ನು ಭೇದಿಸುತ್ತಿರುವ ಎರಡನೆಯ ಶಲ್ಯ. ರಾಜಪುತ್ರ, ಈ ರಾತ್ರಿ ತಾವು ನನಗೆ ಇದರ ವಿಷಯವನ್ನು ತಿಳಿಸದಿದ್ದರೆ, ನಾಳೆ ಬೆಳಿಗ್ಗೆಯೊಳಗೆ ನನ್ನ ಶವವನ್ನು ಕಾಣುತ್ತೀರಿ’. ಬೋಧಿಸತ್ವ ಅವಳ ಮಕ್ಕಳ ಶೋಕವನ್ನು ಕಡಿಮೆ ಮಾಡುವ ದೃಷ್ಠಿಯಿಂದ ಕಠೋರವಾಣಿಯಲ್ಲಿ ಕೇಳಿದ, ‘ಎಲೈ ಮಾದ್ರಿ, ನೀನು ಫಲಮೂಲಗಳನ್ನು ತರಲು ಬೆಳಿಗ್ಗೆಯೇ ಹೋದವಳು, ಇಷ್ಟು ರಾತ್ರಿಯಾದ ಮೇಲೆ ಮರಳಿದ್ದೀಯಲ್ಲ?’. ಆಕೆ ಮತ್ತೆ ಗಾಬರಿಯಾಗಿ ಹೇಳಿದಳು, ‘ಆರ್ಯಪುತ್ರ, ನೀವು ಸ್ವಲ್ಪ ಹೊತ್ತಿಗೆ ಮುಂಚೆ ಹುಲಿ, ಸಿಂಹ, ಚಿರತೆಗಳ ಘರ್ಜನೆಯನ್ನು ಕೇಳಲಿಲ್ಲವೆ? ಭಯಂಕರವಾದ ಕಾಡಿನಲ್ಲಿ ಫಲಮೂಲಗಳನ್ನು ಹುಡುಕುತ್ತಿದ್ದಾಗ ನನಗೆ ದುಃಖದ ಪೂರ್ವಸೂಚನೆ ದೊರಕಿತು. ಕೈಯಿಂದ ಮುಮ್ಮಟಿ ಜಾರಿಜಾರಿ ಬಿತ್ತು, ಹೆಗಲಿನಿಂದ ಸೆರಗು ಜಾರಿತು. ಆಗ ನಾನು ಭಯಭೀತಳಾಗಿ ಕೈಜೋಡಿಸಿ ಎಲ್ಲರಿಗೂ ಕಲ್ಯಾಣವಾಗಲಿ ಎಂದು ಎಲ್ಲ ದಿಕ್ಕುಗಳಿಗೂ ನಮಸ್ಕಾರ ಮಾಡಿದೆ.

ಯಾವ ಕಾಡುಮೃಗಗಳೂ ತಮಗೆ ಹಾಗೂ ಮಕ್ಕಳಿಗೆ ತೊಂದರೆಮಾಡದಿರಲಿ ಎಂದು ಬೇಡಿಕೊಂಡೆ. ಜಟಾಧಾರಿಣಿ, ಬ್ರಹ್ಮಚಾರಿಣಿಯಾದ ನಾನು ಹಗಲು-ರಾತ್ರಿ ಗಂಡ-ಮಕ್ಕಳ ಸೇವೆಯನ್ನು, ಶಿಷ್ಯ ತನ್ನ ಗುರುವಿಗೆ ಮಾಡಿದಂತೆ ಮಾಡುತ್ತಿದ್ದೇನೆ. ಎಲ್ಲರ ಹಿತಕ್ಕಾಗಿ ಜಿಂಕೆಯ ಚರ್ಮವನ್ನು ಸುತ್ತಿಕೊಂಡು ಕಾಡು ಕಾಡು ಅಲೆಯುತ್ತೇನೆ. ಇಂದು ಕೂಡ ಅತ್ಯಂತ ರುಚಿರುಚಿಯಾದ ಹಣ್ಣುಗಳನ್ನು ತಂದಿದ್ದೇನೆ. ಆದರೆ ನಿಮ್ಮ ಮೌನ ನನ್ನನ್ನು ಕೊರೆಯುತ್ತಿದೆ’. ಎಲ್ಲಕ್ಕೂ ಬೋಧಿಸತ್ವನ ಮೌನವೇ ಉತ್ತರವಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು