ಬಂಧನಕ್ಕೂ, ಮೋಕ್ಷಕ್ಕೂ ಒಂದೇ ಕೀಲಿ ಕೈ

7

ಬಂಧನಕ್ಕೂ, ಮೋಕ್ಷಕ್ಕೂ ಒಂದೇ ಕೀಲಿ ಕೈ

ಗುರುರಾಜ ಕರಜಗಿ
Published:
Updated:
Deccan Herald

ಕದಕಗಳಿಯನು ಬಿಗಿದು ಬೊಮ್ಮ ಗುಡಿಯೊಳಗಿರಲಿ |
ಅದರ ಕೀಲ್ಕುಂಚಿಕೆಯ ಹೊರಕೆಸೆಯೆ ಸಾಕು ||
ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟು |
ಒದವಿಪರು ದಿಟದರಿವ – ಮಂಕುತಿಮ್ಮ || 4 ||

ಪದ-ಅರ್ಥ: ಕದಕಗಳಿಯನು=ಕದಕೆ+ಅಗಳಿಯನು, ಕೀಲ್ಕುಂಚಿಕೆ=ಬೀಗದ ಕೈ, ಹೊರಕೆಸೆಯೆ=ಹೊರಕ್ಕೆ+ಎಸೆಯೆ, ಪದವಾಕ್ಯವಿದರು=ನಾನಾ ಶಾಸ್ತ್ರಗಳನ್ನು ಬಲ್ಲವರು, ವಾದಗಡಣೆ+ವಾದ+ಗಡಣೆ(ಗದ್ದಲ), ಬದವಿಪರು=ನೀಡುವರು, ದಿಟದರಿವ=ದಿಟದ(ಸತ್ಯದ)+ಅರಿವ (ಜ್ಞಾನ)

ವಾಚ್ಯಾರ್ಥ: ಭಗವಂತ ಬೇಕಾದರೆ ಗುಡಿಯಲ್ಲಿಯೇ ಕುಳಿತು ಬಾಗಿಲು, ಅಗಳಿ ಹಾಕಿಕೊಂಡು ಇರಲಿ, ಬೀಗದ ಕೀಲಿಕೈಯನ್ನು ಹೊರಗೆಸೆದರೆ ಸಾಕು. ಆಗ ಶಾಸ್ತ್ರಬಲ್ಲಂತಹ ಪಂಡಿತರು ಅನವಶ್ಯಕವಾದ ವಾದಗಳ ಗದ್ದಲವನ್ನು ಬಿಟ್ಟು ಸತ್ಯದ ಜ್ಞಾನವನ್ನು ಪಡೆದು ನೀಡುವರು.

ವಿವರಣೆ: ಮೇಲ್ನೋಟಕ್ಕೆ ಇದು ತಕರಾರಿನ ಮಾತು ಎಂದೆನಿಸಬಹುದು. ಭಕ್ತ ಭಗವಂತನನ್ನು ಕಾಣದೇ ಬೇಜಾರಾಗಿ, ಅವನು ಬೇಕಾದರೆ ಗುಡಿಯಲ್ಲೇ ಬಾಗಿಲು ಕೀಲಿ ಹಾಕಿಕೊಂಡು ಕುಳಿತುಕೊಳ್ಳಲಿ, ನಮಗೆ ಕಾಣುವುದು ಬೇಡ. ಅವನೇ ನೂ ಪ್ರಯತ್ನ ಮಾಡುವುದು ಬೇಡ, ಬಾಗಿಲಿನ ಕೀಲಿಕೈಯನ್ನು ಹೊರಗೆ ಬಿಸಾಕಿದರೆ ಸಾಕು. ಆಗ ಸುಮ್ಮನೆ ವಾದ ಮಾಡಿ ಗದ್ದಲವೆಬ್ಬಿಸುವ ಪಂಡಿತರು ಸುಮ್ಮನಾಗಿ ಸತ್ಯದ ಜ್ಞಾನವನ್ನು ಪಡೆಯುತ್ತಾರೆ ಎನ್ನುವಂತಿದೆ. ಆದರೆ ಆಂತರ್ಯದಲ್ಲಿ ಈ ಕಗ್ಗ ಬಹುದೊಡ್ಡ ಆಧ್ಯಾತ್ಮಿಕ ಸತ್ಯವನ್ನು ತಿಳಿಸುತ್ತದೆ.

ಪರಮಸತ್ಯದ ವಸ್ತು ಎಂದಿಗೂ ಮಾನವನ ಮತಿಗೆ ಸಿಲುಕಲಾರದ್ದು. ಅದಕ್ಕೇ ‘ಕದಕ್ಕೆ ಅಗಳಿಯನು ಬಿಗಿದು’ ಎಂಬ ಮಾತಿನ ಬಳಕೆ. ಅದು ಒಳಗೆ ಬಂದೋಬಸ್ತಾಗಿ ಯಾರಿಗೂ ದೊರೆಯದಂತೆ ಕುಳಿತಿದೆ. ಅದನ್ನು ನೋಡುವ, ಅನುಭವಿಸುವ ಆಸೆ ಸಾಧಕನಿಗೆ ತೀವ್ರವಾಗಿದೆ, ಹಟವಾಗಿ ಪರಿಣಮಿಸಿದೆ. ಆತ ಕೇಳುತ್ತಾನೆ, ‘ನೀನು ದೊರಕದಿದ್ದರೆ ಬೇಡ, ನಿನ್ನೆಡೆಗೆ ಬರುವ ದಾರಿಯನ್ನಾದರೂ ತಿಳಿಸು. ನೀನು ಭದ್ರವಾಗಿ ಕುಳಿತಿರುವ ಕೋಶವನ್ನು ತೆರೆಯುವ ಬೀಗದ ಕೈ ಕೊಡು’. ಅಂದರೆ ನಿನ್ನೆಡೆಗೆ ಬರುವ ದಾರಿಯನ್ನು ತಿಳಿಸು. ಕೀಲಿಕೈ ಎನ್ನುವುದೊಂದು ಬಹುದೊಡ್ಡ ಚಿಂತನೆ. ಬೀಗವನ್ನು ಹಾಕುವುದಕ್ಕೂ, ತೆರೆಯುವುದಕ್ಕೂ ಒಂದೇ ಕೈ ಇದೆ. ಎಡಗಡೆಗೆ ತಿರುಗಿಸಿದರೆ ಮುಚ್ಚಿಕೊಳ್ಳುತ್ತದೆ, ಅದನ್ನೇ ಬಲಗಡೆಗೆ ತಿರುಗಿಸಿದರೆ ತೆರೆದುಕೊಳ್ಳುತ್ತದೆ.

‘ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋ:’ ||

ಬಂಧನಕ್ಕೂ, ಬಿಡುಗಡೆಗೂ ಕಾರಣವಾದದ್ದು ಮನಸ್ಸು ಮಾತ್ರ. ಆಸೆ-ಆಕಾಂಕ್ಷೆಗಳು ಮನದಲ್ಲಿ ಕೋಟ್ಯಂತರ ತೆರೆಗಳನ್ನು ಎಬ್ಬಿಸಿ ಅಲ್ಲೋಲಕಲ್ಲೋಲ ಮಾಡುತ್ತವೆ. ಈ ತೆರೆಗಳೆಲ್ಲ ಅಡಗಿ ನಿಶ್ಚಲವಾಗಬೇಕು. ಇಂಥ ಮನದಲ್ಲಿ ಬುದ್ಧಿ ಪ್ರಜ್ಞಾಶೀಲವಾಗುತ್ತದೆ, ಅದಕ್ಕೆ ಸತ್ಯ ಗೋಚರವಾಗುತ್ತದೆ, ಮೋಕ್ಷಕ್ಕೆ ದಾರಿಯಾಗುತ್ತದೆ. ಇದು ಚಮತ್ಕಾರದ, ತರ್ಕದ ಬುದ್ಧಿಯಲ್ಲ. ಶಾಸ್ತ್ರಪಂಡಿತರು, ತಾರ್ಕಿಕರು ನಡೆಸುವುದು ಇಂಥ ಕಸರತ್ತು. ಇದು ಬಂಧನಕ್ಕೆ ಕಾರಣವಾಗುತ್ತದೆ. ಪರವಸ್ತುವನ್ನು ಕಾಣಲು ಪ್ರಜ್ಞಾಶೀಲವಾದ ಬುದ್ಧಿಯನ್ನು ನೀಡುವುದೂ ಆ ಪರವಸ್ತುವೇ. ಅದಕ್ಕೇ ಕೀಲಿಕೈಯನ್ನು ಹೊರಗೆ ಎಸೆ ಎಂದು ಅದನ್ನೇ ಕೇಳುವುದು. ಅದು ಹಾಗೆ ನಮ್ಮ ಪ್ರಜ್ಞಾಶೀಲವಾದ ಬುದ್ಧಿಯನ್ನು ಪ್ರಧಾನಮಾಡಿದರೆ ಅನವಶ್ಯಕವಾದ, ಆಡಂಬರದ ವಾದಗಳ ಗದ್ದಲವನ್ನು ತೊರೆದು ಸತ್ಯದ ಅರಿವಿನೆಡೆಗೆ ಸಾಧಕ ಮುಂದುವರೆಯುತ್ತಾನೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !