ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸುಕೃತಿ

Last Updated 11 ಜುಲೈ 2021, 19:30 IST
ಅಕ್ಷರ ಗಾತ್ರ

ಶಕ್ತಿ ಕರಣಕ್ಕಿರಲಿ, ರಸ ಸಂಗ್ರಹಣ ಶಕ್ತಿ |
ಯುಕ್ತವದರೊಡನಿರಲಿ ಭೋಗದಿ ವಿರಕ್ತಿ ||
ಶಕ್ತಿ ತನ್ನೊಳಗಿದ್ದು ರಕ್ತಮನನಾಗದನೆ |
ಉತ್ತಮೋತ್ತಮ ಸುಕೃತಿ – ಮಂಕುತಿಮ್ಮ || 437 ||

ಪದ-ಅರ್ಥ: ಕರಣ=ಇಂದ್ರಿಯ, ಯುಕ್ತವದರೊಡನಿರಲಿ= ಯುಕ್ತ (ಯೋಗ್ಯ, ಅರ್ಹ)+ ಅದರೊಡನೆ+ ಇರಲಿ, ರಕ್ತಮನನಾಗದೆ= ರಕ್ತಮನನ್ (ತುಂಬ ಆಸಕ್ತಿಯುಳ್ಳವನು)+ ಆಗದೆ, ಸುಕೃತಿ= ಒಳ್ಳೆಯ ಕೆಲಸಗಳನ್ನು ಮಾಡಿದವನು.

ವಾಚ್ಯಾರ್ಥ: ಇಂದ್ರಿಯಗಳಿಗೆ ಶಕ್ತಿ ಇರಲಿ. ಅವುಗಳಲ್ಲಿ ಸ್ವಾರಸ್ಯವನ್ನು ಸವಿಯುವ ಶಕ್ತಿಯೂ ಇರಲಿ. ಆದರೆ ಅದರೊಡನೆ ಅತಿಯಾದ ಭೋಗದಲ್ಲಿ ವಿರಕ್ತಿಯೂ ಇರಲಿ. ಅಪಾರವಾದ ಶಕ್ತಿಯನ್ನು ಹೊಂದಿಯೂ ಮೈಮರೆಸುವ ಆಸಕ್ತಿಯನ್ನು ಹೊಂದದೆ ನಿಗ್ರಹ ಶಕ್ತಿಯನ್ನು ಹೊಂದಿದವನು ಶ್ರೇಷ್ಠ ಸುಕೃತಿ.

ವಿವರಣೆ: ಸ್ವಾಮಿ ವಿವೇಕಾನಂದರು ‘ಶಕ್ತಿ ಎಂದರೆ ಬದುಕು, ದುರ್ಬಲತೆ ಸಾವು’ ಎಂದರು. ‘ನಿಮ್ಮ ದೇಹದ ಮಾಂಸ, ರಜ್ಜುಗಳಲ್ಲಿ ಶಕ್ತಿ ಹೆಚ್ಚಾದರೆ ಭಗವದ್ಗೀತೆ ಇನ್ನೂ ಚೆನ್ನಾಗಿ ಅರ್ಥವಾಗುತ್ತದೆ’ ಎಂದೂ ಹೇಳಿದರು. ಹಾಗೆಂದರೆ ನಮ್ಮ ಶರೀರ ಬಲಿಷ್ಠವಾಗಿರಬೇಕು, ಶಕ್ತಿಯಿಂದ ತುಂಬಿರಬೇಕು. ಇದೊಂದು ಅತ್ಯುತ್ತಮ ವಾಹನ. ನಮ್ಮನ್ನು ಗುರಿಯೆಡೆಗೆ ಕರೆದುಕೊಂಡು ಹೋಗಲು ಇದೊಂದೇ ವಾಹನ ನಮಗಿರುವುದು. ಅದು ಅಶಕ್ತವಾಗಿದ್ದರೆ, ದೋಷಪೂರಿತವಾಗಿದ್ದರೆ ಗುರಿ ತಲುಪುವುದು ಹೇಗೆ? ನಮ್ಮ ಸಾಧನೆಗೆ ಅನುವಾಗುವಂತೆ ಇಂದ್ರಿಯಗಳು ಶಕ್ತಿಯುತವಾಗಿರಬೇಕು. ಈ ಇಂದ್ರಿಯಗಳಿಂದಲೇ ನಮಗೆ ಪ್ರಪಂಚದ ಸ್ವಾರಸ್ಯದ ಅರಿವಾಗುವುದು.

ದೇಹ ದುರ್ಬಲವಾಗಿದ್ದರೆ, ಇಂದ್ರಿಯಗಳು ಪಟುತ್ವವನ್ನು ಕಳೆದುಕೊಂಡಿದ್ದರೆ, ವಿಷಯ ಸಂಗ್ರಹಣೆ ಆಗುವುದು ಹೇಗೆ? ಬದುಕಿನ ಸ್ವಾರಸ್ಯವೇ ಕಳೆದು ಹೋಗುತ್ತದೆ. ಇಲ್ಲೊಂದು ಎಚ್ಚರಿಕೆ ಇದೆ. ಭೋಗ ಬೇಕು. ಅದು ನಿಷಿದ್ಧವಲ್ಲ. ಆದರೆ, ಅತಿಯಾದ ಭೋಗ ಮೈಮರೆಸುತ್ತದೆ. ಅತಿಯಾದ ಶಕ್ತಿಯ ಸಾಹಸ, ಸಾವಕಾಶದ ವಿಷಾದಕ್ಕೆ ಎಡೆಯಾಗುತ್ತದೆ. ಇಂತಹುದನ್ನು ಇತಿಹಾಸ ಅನೇಕ ಬಾರಿ ದಾಖಲು ಮಾಡಿದೆ. ನಮ್ಮ ಮಹಾಭಾರತದ ಯುದ್ಧಕ್ಕೆ ಕೊಂಚ ಸಂವಾದಿಯಾಗಿರುವುದು ಗ್ರೀಸ್ ದೇಶದ ಹೋಮರ್ ಮಹಾಕವಿಯ ಇಲಿಯಡ್ ಕಾವ್ಯದ ಪುರಾಣಯುದ್ಧ. ಅದರಲ್ಲಿ ಟ್ರಾಯ್‍ಗೂ ಗ್ರೀಸಿಗೂ ಯುದ್ಧ ಬಲಿಯಿತು. ಎರಡು ಪಕ್ಷಗಳಲ್ಲೂ ಮಿತ್ರರಾಜರು ಸೇರಿಕೊಂಡರು. ಗ್ರೀಕರ ಪಕ್ಷದ ಶೂರ ಅಕಿಲಸ್. ಅವನ ಶೌರ್ಯವೇ ಗ್ರೀಕರ ಮುಖ್ಯ ಬಂಡವಾಳ. ಆದರೆ ಅವನಿಗೂ, ಅವನ ಪಕ್ಷದ ಮೂಲನಾಯಕ ಆಗಮೆಮ್ನನಿಗೂ ಮನಸ್ತಾಪ ಬಂದಿತು. ಅಕಿಲಸ್‍ನ ಕೋಪ, ಯುದ್ಧದಿಂದ ವಿರಮಿಸಿದ್ದು, ನಂತರ ಮತ್ತೆ ಯುದ್ಧಕ್ಕೆ ಧುಮಿಕಿ ಅಪಾರ ಜೀವಗಳ ಹನನ ಮಾಡಿದ್ದು ಶೌರ್ಯದ ದುರಂತ. ದುರ್ಯೋಧನ, ದುಶ್ಯಾಸನ, ಕರ್ಣ, ಆಗಮೆಮ್ನನ್, ಅಕಿಲಸ್ ಎಲ್ಲರೂ ಒಬ್ಬೊಬ್ಬ ವ್ಯಕ್ತಿಗಳು, ಅಪಾರ ಶಕ್ತಿಯನ್ನು ಹೊಂದಿದ ವ್ಯಕ್ತಿಗಳು. ಆದರೆ ತಮ್ಮ ಶಕ್ತಿಯ ಬಳಕೆಯ ಮಿತಿಯನ್ನು ಅರಿಯದೆ ಹೋದವರು. ಅವರ ಶಕ್ತಿಪರೀಕ್ಷೆಯ ಕರ್ಮದಿಂದ ಲಕ್ಷೋಪಲಕ್ಷ ನಿರಪರಾಧಿಗಳನ್ನು ವಿಧಿ ರಕ್ತದ ಮಡುವಿನೊಳಗೆ ಎಳೆದು ಮುಳುಗಿಸಿ ಬಿಟ್ಟಿತು. ಆದ್ದರಿಂದ ಶಕ್ತಿ ಅವಶ್ಯಕ. ಅದರೊಂದಿಗೆ ಶಕ್ತಿಯನ್ನು ಮಿತಿಯೊಳಗೆ ಬಳಸುವ ವಿವೇಕವೂ ಮುಖ್ಯ. ಅದನ್ನೇ ಕಗ್ಗ ಹೇಳುತ್ತದೆ. ಶಕ್ತಿ ಒಳಗಿದ್ದು ಅದರ ಬಳಕೆಯಲ್ಲಿ ಅತಿಯಾದ ಆಸಕ್ತಿಯನ್ನು ತೋರದೆ ನಿಗ್ರಹಿಸಿಕೊಳ್ಳುವವನು ನಿಜವಾಗಿಯೂ ಸುಕೃತಿ ಎನ್ನುತ್ತದೆ. ಅಂತಹ ಸುಕೃತದಿಂದ ಲೋಕಕ್ಷೇಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT