ಬುಧವಾರ, ಜುಲೈ 28, 2021
20 °C

ಬೆರಗಿನ ಬೆಳಕು: ಮುದಿ ಬ್ರಾಹ್ಮಣನ ಪ್ರಯಾಣ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಮುದುಕ ಬ್ರಾಹ್ಮಣ ಮಾಡುತ್ತಿದ್ದ ಪ್ರಲಾಪವನ್ನು ಕೇಳಿ, ಕಾವಲುಗಾರನಾಗಿದ್ದ ಜೆತಿರಾಷ್ಟ್ರದ ಮನುಷ್ಯ ಹತ್ತಿರ ಬಂದ. ಮೊದಲು ಅವನನ್ನು ಸಮಾಧಾನ ಮಾಡಲು ಪ್ರಯತ್ನಿಸಿದ. ಬ್ರಾಹ್ಮಣ ವೆಸ್ಸಂತರನ ಹತ್ತಿರ ಹೋಗಬಯಸುತ್ತಾನೆಂದು ಖಚಿತವಾದಾಗ, ತನ್ನ ಬಿಲ್ಲನ್ನೆಳೆದು, ‘ಬ್ರಾಹ್ಮಣ ನಿನ್ನನ್ನು ಕೊಂದೇ ಬಿಡುತ್ತೇನೆ’ ಎಂದು ಅಬ್ಬರಿಸಿದ. ಈತ ದಾನ ಬೇಡಲು ಬಂದಿದ್ದಾನೆ ಎಂದು ಭಾವಿಸಿಕೊಂಡ ಮೇಲಂತೂ ಅವನ ಕೋಪ ಇಮ್ಮಡಿಯಾಯಿತು. ‘ನಿಮ್ಮಂಥವರಿಂದಲೇ ಪೀಡಿತನಾಗಿ, ರಾಜ್ಯವನ್ನು ಕಳೆದುಕೊಂಡು ಹೆಂಡತಿ ಮಕ್ಕಳನ್ನು ಕರೆದುಕೊಂಡು ವಂಕಪರ್ವತದಲ್ಲಿ ಸನ್ಯಾಸಿಯಂತೆ ಬದುಕು ನಡೆಸುತ್ತಿದ್ದಾನೆ. ಅಂಥವನಿಂದ ನೀನು ಮತ್ತೆ ದಾನ ಬೇಡಲು ಬಂದಿದ್ದೀ. ನೀನು ಅಹಿತ ಮಾಡುವವನು. ಅವನ ಬಳಿ ಈಗ ದಾನ ಮಾಡಲು ಯಾವ ವಸ್ತುವೂ ಇಲ್ಲ. ನಿನ್ನ ಬೇಡಿಕೆ ಅವನಿಗೆ ಹಿಂಸೆ ಮಾಡುವುದರಿಂದ, ನನಗೆ ಯಾವ ಪಾಪ ಬಂದರೂ ಚಿಂತೆಯಿಲ್ಲ, ನಿನ್ನನ್ನು ಕೊಂದೇ ಬಿಡುತ್ತೇನೆ’ ಎಂದು ಬಿಲ್ಲನ್ನೆಳೆದ. ಬ್ರಾಹ್ಮಣ ಗಾಬರಿಯಾದ. ತಕ್ಷಣ ಸುಳ್ಳು ಹೇಳಿದ, ‘ಅಯ್ಯಾ, ಜೆತಿಪುತ್ರ, ನನ್ನ ಮಾತು ಕೇಳು. ನಾನು ಬರೀ ಬ್ರಾಹ್ಮಣನಲ್ಲ, ನಾನು ಈಗ ದೂತನಾಗಿ ಬಂದಿದ್ದೇನೆ. ದೂತನನ್ನು ಕೊಲ್ಲಬಾರದೆಂಬುದು ಪ್ರಾಚೀನ ನಿಯಮ. ಈಗ ಸಿವಿ ರಾಜ್ಯದಲ್ಲಿ ವೆಸ್ಸಂತರನ ಮೆಲೆ ಯಾರಿಗೂ ಕೋಪವಿಲ್ಲ. ಎಲ್ಲರೂ ಶಾಂತರಾಗಿದ್ದಾರೆ. ಅವನ ತಂದೆಗೆ ತುಂಬ ವಯಸ್ಸಾಗಿದೆ, ತಾಯಿಯ ಆರೋಗ್ಯ ದುರ್ಬಲವಾಗಿದೆ. ಆಕೆಗೆ ಕೆಲವೇ ದಿನಗಳಲ್ಲಿ ದೃಷ್ಟಿ ಹೋಗಿಬಿಡುತ್ತದೆಂದು ವೈದ್ಯರು ಹೇಳಿದ್ದಾರೆ. ರಾಜ ದಂಪತಿಗಳೇ ನನ್ನನ್ನು ಇಲ್ಲಿಗೆ ದೂತನನ್ನಾಗಿ ಕಳುಹಿಸಿದ್ದಾರೆ. ಅವರಿಬ್ಬರೂ ಮಗನನ್ನು ಕಾಣಬೇಕೆಂದು, ಪಟ್ಟದ ಮೇಲೆ ಕೂಡ್ರಿಸಬೇಕೆಂದು ಹಾತೊರೆಯುತ್ತಿದ್ದಾರೆ. ನಾನು ಬಂದದ್ದು ವೆಸ್ಸಂತರನನ್ನು ಒಪ್ಪಿಸಿ ಮರಳಿ ಸಿವಿರಾಜ್ಯಕ್ಕೆ ಕರೆದೊಯ್ಯುವ ಉದ್ದೇಶದಿಂದ. ಆದ್ದರಿಂದ ನನ್ನಿಂದ ವೆಸ್ಸಂತರನಿಗೆ ಯಾವ ಅಪಾಯವೂ ಇಲ್ಲ’. ಇದನ್ನು ಕೇಳಿ ಚೆತಿಪುತ್ರ ಪ್ರಸನ್ನನಾದ.

ಮರದ ಕೆಳಗೆ ನಿಂತು ಬ್ರಾಹ್ಮಣನನ್ನೇ ನೋಡುತ್ತಿದ್ದ ಬೇಟೆನಾಯಿಗಳನ್ನು ಕಟ್ಟಿಹಾಕಿ ಮುದಿ ಬ್ರಾಹ್ಮಣನನ್ನು ಮರದಿಂದ ಕೆಳಗಿಳಿಸಿದ. ನಂತರ ಚೆತಿಪುತ್ರ ಮುದಿಬ್ರಾಹ್ಮಣನಿಗೆ ಭೋಜನ ಮಾಡಿಸಿದ. ಮುಂದಿನ ಪ್ರಯಾಣಕ್ಕಾಗಿ ಅವನಿಗೆ ಕಮಂಡಲು ತುಂಬ ಜೇನುತುಪ್ಪವನ್ನು ಮತ್ತು ಸಾಕಷ್ಟು ಪ್ರಮಾಣದ ಬೇಯಿಸಿದ ಎಳೆಜಿಂಕೆಯ ತೊಡೆಯ ಮಾಂಸವನ್ನು ಕಟ್ಟಿಕೊಟ್ಟ. ಆಮೇಲೆ ಬೆರಳು ತೋರಿಸಿ ಮುಂದಿನ ಮಾರ್ಗದ ವಿವರಣೆ ನೀಡಿದ. ‘ಎಲೈ ಬ್ರಾಹ್ಮಣ, ಇದು ಗಂಧಮಾದನ ಪರ್ವತ. ತಪಸ್ವಿಯಾದ ವೆಸ್ಸಂತರ ಬೋಧಿಸತ್ವ ವಾಸಿಸುವುದು ಇಲ್ಲಿಯೇ. ಆದರೆ ಮುಂದಿನ ಪ್ರಯಾಣ ದೀರ್ಘವಾದದ್ದು. ಮುಂದಿರುವ ಕಾಲುದಾರಿಯಲ್ಲೇ ಸಾಗು. ಇದು ನೇರವಾಗಿ ಒಂದು ಆಶ್ರಮಕ್ಕೆ ಹೋಗುತ್ತದೆ. ಅಲ್ಲೊಬ್ಬ ಅಚ್ಚುತನೆಂಬ ಋಷಿ ವಾಸವಾಗಿದ್ದಾನೆ. ಅವನು ನೋಡಲು ಕೊಳಕನಂತೆ ಕಾಣುತ್ತಾನೆ. ಆದರೆ ಆತ ದೊಡ್ಡ ತಪಸ್ವಿ. ಚರ್ಮ ಹಾಸಿ, ನೆಲದ ಮೇಲೆ ಮಲಗುತ್ತಾನೆ. ಅವನು ನಿನಗೆ ಮುಂದೆ ಮಾರ್ಗದರ್ಶನ ಮಾಡುತ್ತಾನೆ’. ಬ್ರಾಹ್ಮಣ ಸಂತೋಷದಿಂದ ತನ್ನ ಹೆಂಡತಿ ಕಟ್ಟಿಕೊಟ್ಟ ಸಿಹಿಉಂಡೆಗಳನ್ನು ಅವನಿಗೆ ಕೊಡಹೋದ. ಅದನ್ನು ಆತ ನಿರಾಕರಿಸಿ, ‘ನಿನ್ನ ಪ್ರಯಾಣಕ್ಕೆ ಅವುಗಳನ್ನು ಇಟ್ಟುಕೋ’ ಎಂದು ಹೇಳಿ ಅವನಿಗೆ ನಮಸ್ಕಾರ ಮಾಡಿ ಮುಂದೆ ಕಳುಹಿಸಿದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು