ಸೋಮವಾರ, ನವೆಂಬರ್ 30, 2020
24 °C

ಬೆರಗಿನ ಬೆಳಕು: ದೈವದ ಏಕಪಕ್ಷದ ಲೀಲೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಗುರುರಾಜ ಕರಜಗಿ

ಲೋಕವೆಲ್ಲವು ದೈವಲೀಲೆಯೆಂಬರೆ, ಪೇಳಿ |
ಶೋಕ ಸೋಂಕಿರದೊಡಾ ಲೀಲೆ ನೀರಸವೇಂ ? ||
ಮೂಕಂಗೆ ಕಳ್ ಕುಡಿಸಿ ಚೇಳ್ ಕುಟುಕಿಪಾಟವಿದು |
ಏಕಪಕ್ಷದ ಲೀಲೆ – ಮಂಕುತಿಮ್ಮ || ೩೫೪ ||

ಪದ-ಅರ್ಥ: ದೈವಲೀಲೆಯೆಂಬರೆ=ದೈವಲೀಲೆ+ಎAಬರೆ(ಎನ್ನುತ್ತಾರೆಯೆ?, ಎನ್ನುವವರೇ?), ಸೋಂಕಿರದೊಡಾ=ಸೋAಕಿರದೊಡೆ (ಮುಚ್ಚದಿದ್ದರೆ)+ಆ, ಮೂಕಂಗೆ= ಮೂಕನಿಗೆ, ಕಳ್=ಸುರೆ, ಕುಟುಕಿಪಾಟವಿದು=ಕುಟುಕಿಪ (ಕಚ್ಚಿಸುವ)+ ಆಟವಿದು.

ವಾಚ್ಯಾರ್ಥ: ಪ್ರಪಂಚವೆಲ್ಲವೂ ದೈವಲೀಲೆ ಎನ್ನುವಂಥವರೇ, ಹೇಳಿ, ಈ ಲೋಕದಲ್ಲಿ ಶೋಕ ಯಾರನ್ನು ತಟ್ಟದಿದ್ದರೆ ನೀರಸವಾಗಿರುತ್ತಿತ್ತೇ? ಮೂಕನಿಗೆ ಸುರೆ ಕುಡಿಸಿ ನಂತರ ಚೇಳು ಕಚ್ಚಿಸಿ ಅವನನ್ನು ಒದ್ದಾಡಿಸಿದಂತಿ ದೆ . ಈ ಏಕಪಕ್ಷದ ವಿಧಿಯಲೀಲೆ.

ವಿವರಣೆ: ಪ್ರಪಂಚದಲ್ಲಿ ಆಗುವ, ಆಗುತ್ತಲೇ ಇರುವ ಅನಾಹುತಗಳನ್ನು ಕಂಡ ಮನಸ್ಸು ಕೇಳುವ ಪ್ರಶ್ನೆ ಇದು. ಈ ಪ್ರಶ್ನೆ ಇಂದಿನದಲ್ಲ. ಎಂದೆಂದಿಗೂ ಮಾನವನ ಮನಸ್ಸನ್ನು ಕಾಡಿದ್ದು. ಎಲ್ಲ ಅಧ್ಯಾತ್ಮಿಗಳೂ ಹೇಳುವುದು ಒಂದೇ. ಈ ಪ್ರಪಂಚ ವಿಧಿಯ ಕೈಯಲ್ಲಿಯ ಆಟಿಗೆ. ಅದನ್ನು ಹೇಗಾದರೂ ವಿಧಿ ಆಡಿಸಿ ಸಂತೋಷಪಡುತ್ತದೆ. ಇದು ವಿಧಿಯ ಲೀಲೆ. ಅದರ ಸಂತೋಷಕ್ಕೋಸ್ಕರ ನಮ್ಮೆಲ್ಲರ ಬದುಕು. ಸರಿ. ಅದನ್ನು ಒಪ್ಪೋಣ. ಪ್ರಪಂಚ ಅದರದೇ ಸೃಷ್ಟಿ, ಅದರದೇ ಆಟ, ನಾವೆಲ್ಲ ಸೂತ್ರದ ಗೊಂಬೆಗಳು. ಆದರೆ ಈ ವಿಧಿ ಏಕೆ ಕೇವಲ ಸಂತೋಷದ ಆಟಗಳನ್ನಾಡುವುದಿಲ್ಲ? ತನ್ನ ಪ್ರಪಂಚ ಸದಾ ಸಂತೋಷದಲ್ಲಿರಬೇಕೆಂದು ಬಯಸುವದಿಲ್ಲವೆ? ಅದು ಕ್ಷುದ್ರ ತೃಪ್ತಿಯೆ? ದು:ಖಗಳ ಸರಮಾಲೆಗಳನ್ನು ತಂದೊಡ್ಡಿ ಅದರಿಂದ ಪಾರಾಗಲು ಜನ ಒದ್ದಾಡುವುದನ್ನು ಕಂಡು ಅದಕ್ಕೆ ಆನಂದವೆ? ತನ್ನ ಸೃಷ್ಟಿಯನ್ನೇ ಅಪಾಯಕ್ಕೆ ತಳ್ಳಿ ಅದರ ಸಂಕಟವನ್ನು ಕಂಡು ಸಂತೋಷಪಡುವುದು ಯಾವ ರೀತಿಯಿಂದ ಸರಿಯಾದದ್ದು? ಬಹುಶ: ಎಲ್ಲವೂ ಚೆನ್ನಾಗಿಯೇ ಇದ್ದರೆ, ಬರೀ ಸಂತೋಷವೇ ಬದುಕಿನಲ್ಲಿ ಇದ್ದರೆ ತನ್ನ ಲೀಲೆ ನೀರಸವಾಗುತ್ತದೆಂಬ ಯೋಚನೆಯೆ? ನಮ್ಮ ಕೆಲವು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಾಯಕಿ ಹಾಗೂ ನಾಯಕರು ಕಷ್ಟಪಟ್ಟಷ್ಟು, ಗೊಳೋ ಎಂದು ಅಳುತ್ತಿದ್ದಷ್ಟು ಅದು ರೋಚಕವಾಗಿ ಹೆಚ್ಚು ಜನರನ್ನು ಆಕರ್ಷಿಸುತ್ತದೆಂಬ ಕ್ಷುದ್ರ ಬುದ್ಧಿಯ ನಿರ್ದೇಶಕರಂತೆಯೇ ದೈವವಿದೆಯೆ? ಮೂಕನೊಬ್ಬನಿಗೆ ಸುರೆ ಕುಡಿಸಿ ನಂತರ ಚೇಳು ಕಚ್ಚಿಸಿದರೆ ಏನಾದೀತು? ಮೊದಲೇ ಆತನಿಗೆ ಮಾತನಾಡಲು ಆಗದು. ಹೊಟ್ಟೆ ತುಂಬ ಸಾರಾಯಿ ಕುಡಿದ ಮೇಲೆ ಬುದ್ಧಿ ಮಂಕಾಗಿ ಓಲಾಡತೊಡಗುತ್ತದೆ. ಮಾತು ಬಲ್ಲವನಿಗೇ, ಹೊಟ್ಟೆಯಲ್ಲಿ ಸುರೆ ಹೋದಾಗ ಮಾತನಾಡಲಾಗುವುದಿಲ್ಲ, ತೊದಲುತ್ತದೆ, ವಿಚಾರ ಸರಣಿ ತುಂಡು ತುಂಡಾಗಿ ಮಾತು ಎತ್ತೆತ್ತಲೋ ಹೋಗುತ್ತದೆ. ಇದಾದ ಮೇಲೆ ಚೇಳು ಕಚ್ಚಿದರೆ ಏನಾದೀತು? ಅದರ ಉರಿ, ಸಂಕಟ ಹೇಳಲಸಾಧ್ಯ. ಕೂಗಿ ಹೇಳಿ ಕೊಂಚ ಹಗುರಮಾಡಿಕೊಳ್ಳೋಣವೆಂದರೆ ಮಾತು ಬರುವುದಿಲ್ಲ. ಹೊಟ್ಟೆಯಲ್ಲಿಯ ಕಳ್ಳು ಬುದ್ಧಿ ಭ್ರಮೆಯನ್ನುಂಟು ಮಾಡಿ ಹೇಳಬೇಕಾದುದನ್ನು ಹೇಳದಂತೆ ಮಾಡುತ್ತದೆ. ಆತ ತನಗೆ ಚೇಳು ಕಚ್ಚಿದೆ ಎಂದು ಹೇಳಲೂ ತಿಳಿಯಲಾರದು. ಅವನ ಬವಣೆಯನ್ನು ಕಂಡು ಜನ ನಗುತ್ತಾರೆ. ಅವನ ಕಷ್ಟ ಜನರ ಮನರಂಜನೆಗೆ ಮಾರ್ಗವಾಯಿತು. ಇದು ಏಕಪಕ್ಷದ ವಿಷಯ. ಪಾಪ! ಮೂಗನ ಕಷ್ಟವನ್ನು ಯಾರೂ ಗಣನೆಗೆ ತೆಗೆದುಕೊಂಡಿಲ್ಲ.

ಕಗ್ಗ ಕೆಲವೊಮ್ಮೆ ಈ ತರಹದ ಪ್ರಶ್ನೆಗಳನ್ನು ಮುಂದೂಡಿ, ವಿಧಿಯ ಮಹತ್ತನ್ನು ಹೇಳಬಯಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.