ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸಂಸಾರ ಕಥೆ

Last Updated 7 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಪೂಸರದಿ ಕಾಂತಿ ಸೌರಭ ಮೊದಲನೆಯ ತಾಸು |

ವಾಸನೆಯ ಹಳಸು ಕೊಳಕೊಳಚೆಯಾ ಬಳಿಕ ||
ಮಾಸಿ ನಲುನಲುಗಿ ಮುಳ್ಳಹುದು ಮೂರನೆ ತಾಸು |
ಸಂಸಾರ ಕಥೆಯದುವೆ – ಮಂಕುತಿಮ್ಮ || 342 ||

ಪದ-ಅರ್ಥ: ಪೂಸರದಿ=ಹೂವಿನ ಮಾಲೆಯಲ್ಲಿ, ಕಾಂತಿ=ಹೊಳಪು, ಸೌರಭ=ಸುವಾಸನೆ,
ಮುಳ್ಳಹುದು=ಮುಳ್ಳು+ಅಹುದು, ಸಂಸಾರಕಥೆಯದುವೆ=ಸಂಸಾರ+ಕಥೆಯು+ಅದುವೆ

ವಾಚ್ಯಾರ್ಥ: ಮೊದಲನೆಯ ತಾಸಿನಲ್ಲಿ ಹೂವಿನ ಮಾಲೆಯ ಕಾಂತಿ, ಸುವಾಸನೆ ತುಂಬ ಚೆನ್ನಾಗಿರುತ್ತದೆ. ಮರುತಾಸಿನಲ್ಲಿ ಅದು ಹಳಸಲಾಗಿ, ಕೊಳಕಾಗ ತೊಡಗುತ್ತದೆ. ಮೂರನೆಯ ತಾಸಿನಲ್ಲಿ ಅದು ಒಣಗಿ, ಮುದ್ದೆಯಾಗಿ ಮುಳ್ಳಂತೆ ಆಗುತ್ತದೆ. ನಮ್ಮ ಸಂಸಾರದ ಕಥೆಯೂ ಹಾಗೆಯೆ.

ವಿವರಣೆ: ಮೂರು ತಾಸಿನಲ್ಲಿ ಹೂವಿನಲ್ಲಿ ಕಂಡು ಬರುವ ಬವಣೆ ಮನುಷ್ಯನ ಬದುಕಿನಲ್ಲಿ ಮೂರು ಹಂತಗಳಲ್ಲಿ ಕಂಡು ಬರುತ್ತದೆ. ಬಾಲ್ಯ ಅತ್ಯಂತ ಸುಂದರ. ಕಡುಬಡತನವೇ ಇರಲಿ, ಶ್ರೀಮಂತಿಕೆಯೇ ಇರಲಿ, ಅದು ಮಗುವಿಗೆ ತಿಳಿಯದು. ಅದು ತನ್ನ ಪ್ರಪಂಚದಲ್ಲೇ, ಇರುವ ಅವಕಾಶಗಳಲ್ಲೇ ಸಂತೋಷವಾಗಿ ಬೆಳೆಯುತ್ತದೆ. ಅದು ಮೊಗ್ಗಿನ ಸ್ಥಿತಿ. ತಾರುಣ್ಯದ ಹಂತ ಹೂವು ಅರಳಿರುವ ಹಂತ. ಅದರ ಕಾಂತಿ, ಶಕ್ತಿ ವಿಶೇಷ. ಜಗತ್ತನ್ನೇ ಗೆದ್ದು ಬಿಡುವ ಹುಮ್ಮಸ್ಸು, ಎಲ್ಲವೂ ಸುಂದರವಾಗಿಯೇ ಕಾಣುವ ವಯಸ್ಸು. ಪ್ರೀತಿಯ ಸೆಳವಿನಲ್ಲಿ ಕೊಚ್ಚಿ ಹೋಗುವ ತವಕ.

ಮಧ್ಯವಯಸ್ಸು ಬಂದಾಗ ತಾನು ಕಂಡ ಕನಸುಗಳೆಲ್ಲ ಸಾಧ್ಯವಾಗಲಾರವು ಎಂಬ ಭಾವನೆ ಬರುತ್ತದೆ. ಆಗ ಮದುವೆಯಾಗಿ ಮಕ್ಕಳು ಬೆಳೆಯುತ್ತಿರುವ ವಯಸ್ಸು. ಮಕ್ಕಳ ಆರೋಗ್ಯ, ಅವರ ಶಿಕ್ಷಣ, ಮನೆಯಲ್ಲಿ ಹಿರಿಯರ ಆರೋಗ್ಯ ಸಮಸ್ಯೆಗಳು ಕಾಣುತ್ತ ಜೀವನ ಪ್ರಯಾಣ ಅಷ್ಟು ಸುಲಭವಲ್ಲ ಎನ್ನಿಸೀತು. ಇನ್ನು ಸ್ವಲ್ಪ ಹೆಚ್ಚು ವಯಸ್ಸಾದಂತೆ ಮಕ್ಕಳ ಮದುವೆಗಳು, ಅವುಗಳೊಂದಿಗೆ ಬಂದ ಹೊಸಬರೊಂದಿಗೆ ಮಾನಸಿಕ ಹೊಂದಾಣಿಕೆ ತಳಮಳವನ್ನುಂಟು ಮಾಡುತ್ತವೆ. ತನ್ನ ಆರೋಗ್ಯದ ಕಿರಿಕಿರಿಯೊಂದಿಗೆ ಮಕ್ಕಳ ಜೀವನದಲ್ಲಾಗಬಹುದಾದ ಏರುಪೇರುಗಳಿಗೆ ಮನಸ್ಸು ಒದ್ದಾಡಿ ಹೋಗುತ್ತದೆ.

ವೃದ್ಧಾಪ್ಯ ಬಂದಾಗ, ನಿವೃತ್ತಿಯಾಗಿ ಆದಾಯ ಕಡಿಮೆಯಾಗುತ್ತದೆ. ಆಗ ಬದುಕು ನೇಪಥ್ಯಕ್ಕೆ ಸರಿಯತೊಡಗುತ್ತದೆ. ಇದುವರೆಗೂ ಮನೆಯಲ್ಲಿ ಮುಖ್ಯ ಗಳಿಕೆಯ ಹಾಗೂ ಕೇಂದ್ರಬಿಂದುವಾಗಿದ್ದ ವ್ಯಕ್ತಿಗೆ ಬದಿಗೆ ಸರಿಯುವುದು ಮತ್ತು ಕಿರಿಯರು ಹೇಳಿದಂತೆ ನಡೆಯುವುದು ಮಾನಸಿಕವಾಗಿ ಕಷ್ಟವೆನ್ನಿಸುತ್ತದೆ. ಈ ಸಮಯದಲ್ಲಿ ತಮಗಿಂತ ಹಿರಿಯರು, ಜೊತೆಗಾರರು, ಕೆಲವು ಕಿರಿಯರು ಪ್ರಪಂಚದಿಂದ ಮಾಯವಾಗತೊಡಗಿದಾಗ ಅಭದ್ರತೆ, ಭಯ ಕಾಡತೊಡಗುತ್ತದೆ. ತಾನಿಲ್ಲದ ಪ್ರಪಂಚವನ್ನು ಕಲ್ಪಿಸಿಕೊಳ್ಳುವುದು ಕಷ್ಟವೆನ್ನಿಸುತ್ತದೆ. ಆರೋಗ್ಯ ಹದಗೆಟ್ಟಾಗ ನೋವು-ತಾಪಗಳೊಡನೆ ಪರರ ಮೇಲೆ ಭಾರವಾದ, ಅವರ ಬದುಕಿಗೆ ತೊಡಕಾಗಿ ಉಳಿದ ಪರಾವಲಂಬಿ ಜೀವನದ ಬಗ್ಗೆ ಬೇಸರವಾಗುತ್ತದೆ.

ಒಂದು ದಿನ ಅದೆಲ್ಲ ಮುಗಿಯುತ್ತದೆ. ಹೂವಿನ ಬದುಕಿನಂತೆ ಮೊಗ್ಗಾಗಿ, ಅರಳಿ ಸುಗಂಧ ಸೂಸಿ, ಸಂತಸಪಟ್ಟು, ಸಂತಸವನ್ನು ನೀಡಿ, ನಂತರ ಮುದುಡಿ ಕೊಳಕಾಗಿ, ಕೊನೆಗೆ ಮುಳ್ಳುಮುಳ್ಳಾಗಿ ಉದುರಿ ಹೋಗುವಂತೆ, ಮನುಷ್ಯನ ಸಂಸಾರ ಕಥೆಯೂ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT