ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮತ್ತೊಮ್ಮೆ ಮುಖಭಂಗ

Last Updated 6 ಮೇ 2021, 19:30 IST
ಅಕ್ಷರ ಗಾತ್ರ

ಗಿಳಿಯ ಮಾತು ಕೇಳಿ ಮಹೋಷಧಕುಮಾರನಿಗೆ ಸಂಚಿನ ಸಂಪೂರ್ಣ ಅರಿವಾಯಿತು. ರಾಜನ ಬಳಿಗೆ ಹೋಗಿ ಸೂಕ್ಷ್ಮವಾಗಿ ಈ ಸಂಬಂಧ ಬೇಡ ಎಂದು ಅರಿಕೆ ಮಾಡಿದ. ಆದರೆ ಪಾಂಚಾಲ ಚಂಡಿಯ ರೂಪಕ್ಕೆ ಪೂರ್ತಿ ಮರುಳಾದ್ದರಿಂದ ಅವನಿಗೆ ಕುಮಾರನ ಮಾತು ಇಷ್ಟವಾಗಲಿಲ್ಲ. ಈ ರಾಜ ಕಾಮದ ಸುಳಿಗೆ ಸಿಕ್ಕಿದ್ದಾನೆ, ಆಕರ್ಷಣೆಯನ್ನು ಬಿಡಲಾರ ಎಂಬುದು ಅರಿವಾಗಿ ಮಹೋಷಧಕುಮಾರ, ಆಯ್ತು, ರಾಜನಿಗೆ ಆ ಸುಂದರಿಯೊಂದಿಗೆ ಮದುವೆ ಮಾಡಿ ಕರೆತರುತ್ತೇನೆ. ಬ್ರಹ್ಮದತ್ತ ಹಾಗೂ ಕೇವಟ್ಟರು ಹದಿನೆಂಟು ಅಕ್ಷೋಹಿಣಿ ಸೈನ್ಯವನ್ನು ತಂದರೂ ಪಾರು ಮಾಡುತ್ತೇನೆ ಎಂದು ತೀರ್ಮಾನಿಸಿದ.

ಮರುದಿನ ರಾಜನಿಗೆ ಹೇಳಿದ, ‘ಪ್ರಭೂ, ನೀವು ಮದುವೆಯ ನಿಶ್ಚಯಕ್ಕೆ ಅವರ ದೇಶಕ್ಕೆ ಹೋಗಬೇಕಲ್ಲವೆ? ಆದರೆ ಒಂದು ಮಾತು. ನಾನು ಮುಂದೆ ಹೋಗಿ ಅಲ್ಲಿ ತಾವು ವಾಸಿಸುವುದಕ್ಕೆ ತಕ್ಕ ವ್ಯವಸ್ಥೆಯನ್ನು ಮಾಡಿ ತಮಗೆ ತಿಳಿಸಿದ ಮೇಲೆಯೇ ಅಲ್ಲಿಗೆ ಬರಬೇಕು’. ರಾಜ ಒಪ್ಪಿದ. ಮುಂದೆ ಎರಡು ದಿನಗಳಲ್ಲಿ ನೂರಾರು ಜನ ಅತ್ಯಂತ ಕುಶಲಕರ್ಮಿಗಳು, ನೂರು ಜನ ಬುದ್ಧಿವಂತರು, ಹತ್ತು ಸಾವಿರ ಜನ ಸೈನಿಕರು, ಆನೆ, ಕುದುರೆ, ಪದಾತಿ ದಳ ಎಲ್ಲರನ್ನು ಸೇರಿಸಿಕೊಂಡು ಹೊರಟ.

ತನ್ನ ನಂಬಿಕಸ್ತರಿಗೆ ಹೇಳಿ ಮೂರುನೂರು ಹಡಗುಗಳನ್ನು ಗಂಗಾನದಿಯಲ್ಲಿ ಅಲ್ಲಲ್ಲಿ ನಿಲ್ಲಿಸಿ, ರಾಜ ಅಲ್ಲಿಗೆ ಬಂದಾಗ ಅವನಿಗೆ ರಕ್ಷಣೆ ನೀಡಬೇಕೆಂದು ಆಜ್ಞೆ ಮಾಡಿದ. ನಂತರ ದಾರಿಯಲ್ಲಿ ಬಂದ ಪ್ರತಿಯೊಂದು ಊರಿನಲ್ಲಿ ಐದು ನೂರು ಸೈನಿಕರು ಮತ್ತು ಒಬ್ಬ ಬುದ್ಧಿವಂತನನ್ನು ಮಂತ್ರಿಯಾಗಿ ನೇಮಿಸಿದ. ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತ, ಅಲ್ಲಲ್ಲಿ ಪ್ರಬಲವಾದ ಸೈನ್ಯವನ್ನು ನಿರ್ಮಿಸಬೇಕು. ರಾಜನ ಪರಿವಾರ ಅಲ್ಲಿಗೆ ಬಂದರೆ ಪರಿವಾರದ ರಕ್ಷಣೆ ಅವರ ಜವಾಬ್ದಾರಿ ಎಂದು ನಿಲ್ಲಿಸಿದ.

ನಂತರ ಪ್ರವಾಸ ಮಾಡಿ ಪಾಂಚಾಲರಾಜ ಬ್ರಹ್ಮದತ್ತನ ನಗರಕ್ಕೆ ಬಂದ. ರಾಜನನ್ನು ಭೆಟ್ಟಿಯಾಗಿ, ಕಾಣಿಕೆಕೊಟ್ಟು, ತಾನು ತನ್ನ ರಾಜನಿಗೆ ವಾಸಕ್ಕೆ ಒಂದು ಮನೆ ಕಟ್ಟಲು ಬಂದಿರುವುದಾಗಿಯೂ, ಅದನ್ನು ಕಟ್ಟುವಾಗ ಬೇರೆ ಯಾರೂ ಅಲ್ಲಿಗೆ ಬರದಂತೆ, ಕೆಲಸಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಕೇಳಿದ. ಹೇಗಿದ್ದರೂ ರಾಜ ಮತ್ತು ಮಂತ್ರಿ ಇಬ್ಬರೂ ನಮ್ಮ ದೇಶದ, ನಮ್ಮ ನಗರದಲ್ಲೇ ಬಂದು ಇರುತ್ತಾರೆ ತಾನೇ? ಆಗಲೇ ಅವರನ್ನು ಮುಗಿಸಿದರಾಯ್ತು ಎಂದು ಕುಮಾರ ಕೇಳಿದ್ದಕ್ಕೆಲ್ಲ ಒಪ್ಪಿಗೆ ಕೊಟ್ಟ. ಆದರೆ ಮಹೋಷಧಕುಮಾರ ಮೊದಲ ದಿನದಿಂದಲೇ ಸುರಂಗವೊಂದನ್ನು ಕೊರೆಯಿಸತೊಡಗಿದ. ಆ ಸುರಂಗ ವಿದೇಹ ರಾಜನಿಗಾಗಿ ಕಟ್ಟಿದ ಅರಮನೆಯ ಕೆಳಭಾಗದಿಂದ ಬ್ರಹ್ಮದತ್ತನ ಅರಮನೆಯ ಒಳಭಾಗದವರೆಗೆ ಬಂದಿತ್ತು. ಒಂದು ಸರಿಯಾದ ದಿನ ನೋಡಿ ತನ್ನ ರಾಜ ವಿದೇಹನನ್ನು ಕರೆಸಿಕೊಂಡ.

ತಮ್ಮನ್ನು ಬ್ರಹ್ಮದತ್ತ, ಕೇವಟ್ಟರು ಕೊಲ್ಲಬಹುದೆಂದು ತಿಳಿದಿದ್ದ ಕುಮಾರ ಒಂದು ಸಂಜೆ ಬ್ರಹ್ಮದತ್ತನ ಹೆಂಡತಿ ರಾಣಿ, ಮಗಳು ಪಂಚಾಲಚಂಡಿ, ಮಗ ಪಂಚಾಲಚಂಡರನ್ನು ಸುರಂಗಮಾರ್ಗವಾಗಿ ವಿದೇಹ ರಾಜನ ಅರಮನೆಗೆ ಕರೆತಂದು, ಅವರನ್ನೆಲ್ಲ ನಾವೆಯಲ್ಲಿ ಕೂರಿಸಿ ಗಂಗಾನದಿಯಲ್ಲಿ ಕರೆದುಕೊಂಡು ಹೋಗುವಂತೆ ಆಜ್ಞೆ ಮಾಡಿದ. ರಾಣಿ ಹಾಗೂ ಮಕ್ಕಳು ವಿದೇಹನೊಡನೆ ಹೊರಟು, ಬ್ರಹ್ಮದತ್ತನೂ ತಮ್ಮನ್ನು ಸೇರಿಕೊಳ್ಳುತ್ತಾನೆ, ಅವನನ್ನು ಮಹೋಷಧಕುಮಾರ ಕರೆತರುತ್ತಾನೆ ಎಂದು ತಿಳಿದು ಆನಂದದಿಂದಿದ್ದರು. ಕುಮಾರ ತಾನೇ ಹೋಗಿ ಬ್ರಹ್ಮದತ್ತನಿಗೆ ಆದದ್ದನ್ನು ಹೇಳಿದ. ‘ನೀವು ನನಗೇನಾದರೂ ತೊಂದರೆ ಕೊಟ್ಟರೆ ನಿಮ್ಮ ರಾಣಿ ಹಾಗೂ ಮಕ್ಕಳು ಶಿಕ್ಷೆ ಅನುಭವಿಸುತ್ತಾರೆ, ಹುಷಾರ್’ ಎಂದು ಹೇಳಿ ತಾನೂ ಮತ್ತೊಂದು ನಾವೆಯಲ್ಲಿ ಬಂದ. ಮತ್ತೊಮ್ಮೆ ಬ್ರಹ್ಮದತ್ತನಿಗೆ ಮುಖಭಂಗವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT