ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಸ್ವಭಾವಗಳ ಸಹಜತೆ

Last Updated 5 ಮೇ 2020, 19:45 IST
ಅಕ್ಷರ ಗಾತ್ರ

ನರರ ಸ್ವಭಾವ ವಕ್ರಗಳನೆಣಿಸುವುದೇಕೆ ? |
ಗಿರಿಕಣಿವೆಗಳ ಗಣಿಸಿ ರೋಷಗೊಳ್ಳುವೆಯೇಂ? ||
ಸುರೆ ಗರಲ ಸುಧೆಗಳ್ ಅಬ್ಧಿಯಲಿ ಸೋದರಲ್ತೆ ? |
ಅರಿತೊಗ್ಗು ಸಾಜಕ್ಕೆ - ಮಂಕುತಿಮ್ಮ || 287 ||

ಪದ-ಅರ್ಥ: ವಕ್ರಗಳನೆಣಿಸುವುದೇಕೆ=ವಕ್ರಗಳನು+ಎಣಿಸುವುದೇಕೆ, ಗಣಿಸಿ=ನೋಡಿ, ಕಂಡು, ಗರಲ=ವಿಷ, ಅಬ್ಧಿ=ಸಮುದ್ರ, ಅರಿತೊಗ್ಗು=ಅರಿತು+ಒಗ್ಗು (ಹೊಂದಿಸಿಕೊ), ಸಾಜ=ಸಹಜ.

ವಾಚ್ಯಾರ್ಥ: ಮನುಷ್ಯರ ಸ್ವಭಾವ, ಸೊಟ್ಟುಗಳನ್ನು ಎಣಿಸುವುದು ಏಕೆ? ಪರ್ವತ ಪ್ರದೇಶದಲ್ಲಿ ಬೆಟ್ಟಗಳನ್ನು, ಕಣಿವೆಗಳನ್ನು ನೋಡಿ ಕೋಪಿಸಿಕೊಳ್ಳುತ್ತೀಯಾ? ಸುರೆ, ವಿಷ, ಅಮೃತಗಳೆಲ್ಲ ಹುಟ್ಟಿದ್ದು ಅದೇ ಸಮುದ್ರದಲ್ಲಲ್ಲವೇ? ಆದ್ದರಿಂದ ಅವೆಲ್ಲ ಸೋದರರೆ. ಇದನ್ನು ಸಹಜ ಎಂದು ತಿಳಿದು ಒಗ್ಗಿಸಿಕೊ.

ವಿವರಣೆ: ಮನುಷ್ಯನ ಮನಸ್ಸೇ ಹಾಗೆ. ಅದು ಸದಾಕಾಲ ಏನನ್ನೋ ಗಮನಿಸುತ್ತಲೇ ಇರುತ್ತದೆ. ತನ್ನ ನಡತೆಯನ್ನು ಹೆಚ್ಚಾಗಿ ಗಮನಿಸದ ಮನಸ್ಸು ಮತ್ತೊಬ್ಬರ ನಡವಳಿಕೆಗಳನ್ನು ಪರೀಕ್ಷಿಸುತ್ತಲೇ ಇರುತ್ತದೆ. ಮತ್ತೊಬ್ಬರ ನೇರ ಸ್ವಭಾವ, ಮತ್ತೊಬ್ಬರ ವಕ್ರಸ್ವಭಾವಗಳನ್ನು ಗಮನಿಸಿ ಟೀಕೆ ಮಾಡುತ್ತದೆ. ಇದು ಬೇಕೆ? ಮನುಷ್ಯನಲ್ಲಿ ನೇರವಾದದ್ದೂ ಇದೆ, ವಕ್ರವಾದದ್ದೂ ಇದೆ. ಮಹಾವ್ಯಕ್ತಿಗಳಲ್ಲಿ ವಿಕ್ಷಿಪ್ತತೆಯನ್ನು ಕಾಣುತ್ತೇವೆ, ತುಂಬ ಸಣ್ಣ ವ್ಯಕ್ತಿಗಳಲ್ಲಿ ಅತ್ಯಂತ ಉದಾತ್ತವಾದದ್ದನ್ನು ಕಂಡಿದ್ದೇವೆ. ಇವು ಮನುಷ್ಯ ಸ್ವಭಾವದ ಸ್ವಾಭಾವಿಕವಾದ ನೆಲೆಗಳು. ಅವುಗಳ ಬಗ್ಗೆ ನಾವು ವ್ಯಾಖ್ಯಾನ ಮಾಡುವುದು ಬೇಡ.

ನೀವು ಪರ್ವತ ಪ್ರದೇಶಕ್ಕೆ ಪ್ರವಾಸ ಹೋಗಿದ್ದಾಗ, ಎತ್ತರದ ತುದಿಯಲ್ಲಿ ನಿಂತು ಒಮ್ಮೆ ಕಣ್ಣು ಹಾಯಿಸಿದರೆ ಎಷ್ಟೊಂದು ಸುಂದರವಾದ ಗಿರಿ, ಕಣಿವೆಗಳ ಪ್ರದೇಶ ಮನಸ್ಸನ್ನು ಸೊರೆಗೊಳ್ಳುತ್ತದೆ. ಆಗ ನೀವು ಪರ್ವತಗಳ ಬಗ್ಗೆ ಹೆಮ್ಮೆ ಪಟ್ಟು ಕಣಿವೆಗಳನ್ನು ಕುರಿತು ಹೀನಾಯವಾಗಿ ಮಾತನಾಡುತ್ತೀರಾ? ಆ ಕಣಿವೆಯಿಂದಲೇ ಬೆಟ್ಟ ಸುಂದರವಾಗಿ ಕಾಣುವುದು, ಮತ್ತೆ, ಬೆಟ್ಟ ಎತ್ತರವಾದಷ್ಟೂ ಕಣಿವೆಯ ನೋಟ ಸುಂದರ. ಅವೆರಡರಿಂದಲೇ ಆ ಪ್ರದೇಶದ ರಮ್ಯತೆ. ಅವೆರಡೂ ನಿಸರ್ಗದಲ್ಲಿ ಸಹಜ. ಒಂದು ಒಳ್ಳೆಯದು, ಮತ್ತೊಂದು ಕೆಟ್ಟದು ಎಂಬುದಿಲ್ಲ.

ಪುರಾಣದ ಕಥೆಯಲ್ಲಿ ಬರುವಂತೆ ಹಿಂದೆ ಸಮುದ್ರಮಥನ ನಡೆಯಿತು. ಸಮುದ್ರ ಗರ್ಭದಿಂದ ಅನೇಕಾನೇಕ ವಸ್ತುಗಳು ಹೊರಬಂದವು. ಅದರಲ್ಲಿ ಮೊದಲು ಬಂದದ್ದು ಹಾಲಾಹಲ ವಿಷ. ಅದನ್ನು ಶಿವ ತನ್ನ ಕುತ್ತಿಗೆಯಲ್ಲಿ ತಣಿಸಿದ ನಂತರ ಅನೇಕ ಪರಸ್ಪರ ವಿರುದ್ಧ ಸ್ವಭಾವದ ವಸ್ತುಗಳೂ ಬಂದವು. ಸುರೆಯೂ ಅಲ್ಲಿಂದ ಬಂತು ಮತ್ತು ಅಮೃತವೂ ಅಲ್ಲಿಂದಲೇ ಹೊರಬಂತು. ಸುರೆ ಆಯುಷ್ಯವನ್ನು ಕಳೆಯುವಂಥದ್ದು, ಬಾಳನ್ನು ಹಾಳುಮಾಡುವಂಥದ್ದು. ಆದರೆ ಅಮೃತ ಬಾಳನ್ನು ವೃದ್ಧಿಸುವಂತಹದ್ದು ಮತ್ತು ಉದಾತ್ತೀಕರಿಸುವಂಥದ್ದು. ಆದರೆ ವಿಷ, ಸುರೆ ಮತ್ತು ಅಮೃತಗಳ ಮೂಲನೆಲೆ ಸಮುದ್ರವೆ. ಅವು ಸಹೋದರರೆ. ಪರಸ್ಪರ ವಿರೋಧ ಸ್ವಭಾವದ ವಸ್ತುಗಳು ಸಮುದ್ರದಲ್ಲಿ ಸಹಜವಾಗಿಯೇ ಇವೆ.

ಅದಕ್ಕೆ ಕಗ್ಗ ಹೇಳುತ್ತದೆ, ನಿಸರ್ಗದಲ್ಲಿ ಬೆಟ್ಟ, ಕಣಿವೆಗಳು ಹೇಗೆ ಸ್ವಾಭಾವಿಕವೊ, ಸಮುದ್ರ ಗರ್ಭದಲ್ಲಿ ವಿಷ, ಸುರೆ ಮತ್ತು ಅಮೃತಗಳು ಹೇಗೆ ಸ್ವಾಭಾವಿಕವೊ, ಹಾಗೆಯೇ ಮನುಷ್ಯನಲ್ಲಿ ನೇರ ಹಾಗೂ ವಕ್ರಸ್ವಭಾವಗಳು ಸ್ವಾಭಾವಿಕ. ನಾವು ಅವುಗಳ ಬಗ್ಗೆ ಕೋಪವನ್ನೋ, ನಿರಾಸೆಯನ್ನೋ, ತೋರಿಸಿ ನಿಂದಿಸುವುದು ಬೇಡ. ಅವೆಲ್ಲ ಸಹಜವಾದವುಗಳು ಎಂಬುದಕ್ಕೆ ನಮ್ಮ ಮನಸ್ಸನ್ನು ಒಗ್ಗಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT