ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಕಡ್ಡಿಯ ಬುಡ–ತುದಿ

Last Updated 18 ಫೆಬ್ರುವರಿ 2021, 22:20 IST
ಅಕ್ಷರ ಗಾತ್ರ

ಪ್ರತಿ ಪರೀಕ್ಷೆಯಲ್ಲೂ ಹೀಗೆ ಯಶಸ್ಸು ಗಳಿಸಿದ ಮಹೋಷಧಕುಮಾರನನ್ನು ರಾಜ ವಿದೇಹ ಮೆಚ್ಚಿಕೊಂಡ. ಅವನನ್ನು ರಾಜ್ಯಕ್ಕೆ ಕರೆಸಿಕೊಂಡು ಮರ್ಯಾದೆ ಮಾಡಲೇ ಎಂದು ತನ್ನ ಅಮಾತ್ಯರನ್ನು ಕೇಳಿದ. ಅವರು, ‘ಪ್ರಭೂ, ಆತ ಬುದ್ಧಿವಂತ, ನಿಜ. ಆದರೆ ಅವನ ಪಾಂಡಿತ್ಯವನ್ನು ಮತ್ತಷ್ಟು ಪರೀಕ್ಷಿಸೋಣ, ಅವಸರ ಬೇಡ’ ಎಂದರು. ರಾಜ ಒಪ್ಪಿದ.

ಈ ಬಾರಿ ಅಮಾತ್ಯರು ಒಂದು ವಿಶೇಷ ಪರೀಕ್ಷೆಯನ್ನು ಯೋಜಿಸಿದರು. ಒಬ್ಬ ಕುಶಲ ಕಮ್ಮಾರನನ್ನು ಕರೆಯಿಸಿ ಒಂದು ಗೇಣುದ್ದದ ಹಿತ್ತಾಳೆಯ ಕಡ್ಡಿಯನ್ನು ಮಾಡಿಸಿದರು. ಅದನ್ನು ಸಾಣೆ ಹಿಡಿಸಿ, ಚೆನ್ನಾಗಿ ನಯಗೊಳಿಸಿದರು. ಅದನ್ನು ಹೇಗೆ ನೋಡಿದರೂ ಒಂದೇ ಗಾತ್ರದ ಸಪೂರವಾದ ಕಡ್ಡಿಯಂತೆ ತೋರುತ್ತಿತ್ತು. ಆದರೆ ಅದರ ಒಂದು ತುದಿ ಕೊಂಚವೇ ಹೆಚ್ಚು ತೂಕದ್ದಾಗಿತ್ತು. ಅದನ್ನು ಕಂಡು ಹಿಡಿಯುವುದು ಅಸಾಧ್ಯವಾಗಿತ್ತು. ಅಮಾತ್ಯರು ಈ ಕಡ್ಡಿಯನ್ನು ಮಹೋಷಧಕುಮಾರನ ನಗರಕ್ಕೆ ಕಳುಹಿಸಿದರು. ಅದರೊಂದಿಗೆ ಒಂದು ಪತ್ರ. ‘ಈ ನಗರದಲ್ಲಿರುವ ಶ್ರೇಷ್ಠ ಪಂಡಿತರಿಗೆ ಇದೊಂದು ಸವಾಲು. ಮಹಾರಾಜರು ಈ ಕಡ್ಡಿಯ ತುದಿ ಯಾವುದು ಮತ್ತು ಬುಡ ಯಾವುದು ಎಂಬುದನ್ನು ತಿಳಿಯ ಬಯಸಿದ್ದಾರೆ. ತಮಗೆ ಮೂರು ದಿವಸದ ಕಾಲಾವಕಾಶವನ್ನು ಕೊಡಲಾಗಿದೆ. ಅಷ್ಟರಲ್ಲಿ ಪಂಡಿತರಿಗೆ ಅದು ತಿಳಿಯದೆ ಹೋದರೆ ಈ ನಗರಕ್ಕೆ ಸಾವಿರ ನಾಣ್ಯಗಳ ದಂಡ ವಿಧಿಸಲಾಗುವುದು’.

ನಗರದ ಜನ ತಮ್ಮ ತಮ್ಮಲ್ಲೇ ಮಾತನಾಡಿಕೊಂಡು ತಮಗೆ ತಿಳಿದ ಪಂಡಿತರುಗಳನ್ನೆಲ್ಲ ಕರೆದು ತಂದರು. ಅವರು ಆ ಕಡ್ಡಿಯನ್ನು ಹೇಗೆ ಅಳೆದರೂ, ಪರೀಕ್ಷಿಸಿದರೂ ಎರಡೂ ಬದಿಗೆ ಒಂದೇ ಗಾತ್ರದಂತೆ ಕಾಣುತಿತ್ತು. ತಮ್ಮಿಂದ ಅದನ್ನು ಕಂಡು ಹಿಡಿಯುವುದು ಆಗುವುದಿಲ್ಲವೆಂದು ಅವರೆಲ್ಲ ಕೈ ಎತ್ತಿದರು. ತಮ್ಮ ವೈಫಲ್ಯದಿಂದ ನಗರಕ್ಕೆ ಅಪಖ್ಯಾತಿ ಬರುತ್ತದೆಂದು ಚಿಂತಿಸಿದರು. ಆಗ ಅವರಿಗೆ ಹೊಳೆದದ್ದು ಒಂದೇ. ಮಹೋಷಧಕುಮಾರ ಇದಕ್ಕೆ ಪರಿಹಾರವನ್ನು ಕಂಡುಹಿಡಿಯಬಹುದು. ಆ ಪಂಡಿತರೆಲ್ಲ ಸೇರಿ ಕುಮಾರನ ಬಳಿಗೆ ಬಂದರು. ತಾವು ತಂದಿದ್ದ ಕಡ್ಡಿಯನ್ನು ತೋರಿಸಿ, ಅದರ ಬುಡ ಮತ್ತು ತುದಿ ಯಾವುದು ಎಂದು ಕೇಳಿ, ರಾಜನಿಂದ ಬಂದ ಪತ್ರವನ್ನು ತೋರಿಸಿದರು. ಪತ್ರವನ್ನು ಓದಿದ ಕುಮಾರನಿಗೆ, ಇದು ತನಗೆ ಒಡ್ಡಿದ ಪರೀಕ್ಷೆ ಎಂಬುದು ಖಚಿತವಾಯಿತು. ಯಾಕೆಂದರೆ ರಾಜನಿಗೆ ಈ ಕಡ್ಡಿಯ ಬುಡ, ತುದಿಯನ್ನು ತಿಳಿದು ಆಗುವುದೇನಿದೆ?

ಪಂಡಿತರೆಲ್ಲ ಅವನಿಗೆ ದುಂಬಾಲು ಬಿದ್ದರು. ಹೇಗಾದರೂ ಮಾಡಿ ಸರಿಯಾದ ಉತ್ತರವನ್ನು ಕಂಡುಹಿಡಿದರೆ ನಗರಕ್ಕೆ ಒಳ್ಳೆಯ ಹೆಸರು ಬರುವುದಲ್ಲದೆ, ಸಾವಿರ ನಾಣ್ಯಗಳ ದಂಡವನ್ನು ಕಟ್ಟುವುದು ಉಳಿಯುತ್ತದೆ. ಕಡ್ಡಿಯನ್ನು ನೋಡಿದಾಕ್ಷಣ ಮಹೋಷಧಕುಮಾರನ ಚುರುಕು ಕಣ್ಣಿಗೆ ಬುಡ ಯಾವುದು ಎಂಬುದು ತಿಳಿಯಿತು. ಆದರೂ ಜನರಿಗೆಲ್ಲ ತಿಳಿಸಬೇಕೆಂದು ಒಂದು ಅಗಲವಾದ ನೀರಿನ ಬಟ್ಟಲನ್ನು ತರಿಸಿದ. ಅದರಲ್ಲಿ ನೀರು ತುಂಬಿಸಿದ. ಕಡ್ಡಿಯನ್ನು ಕೈಯಲ್ಲಿ ಹಿಡಿದು ನಿಧಾನಕ್ಕೆ ಅದನ್ನು ನೀರಿನ ಮೇಲ್ಮೈಗೆ ಸಮಾಂತರವಾಗಿ ತಂದ. ಇಡೀ ಕಡ್ಡಿ ನೀರನ್ನು ಮುಟ್ಟುತ್ತಿದ್ದಂತೆ ತನ್ನ ಬೆರಳುಗಳನ್ನು ತೆಗೆದುಬಿಟ್ಟ. ಆಗ ಕಡ್ಡಿ ಹಾಗೆಯೇ ನೀರಿನಲ್ಲಿ ಮುಳುಗದೆ, ಸೊಟ್ಟಾಗಿ ಬಂದು ತುದಿ ಕೆಳಗಾಗಿ ಬಟ್ಟಲಿನ ತಳವನ್ನು ಮುಟ್ಟಿತು. ಮಹೋಷಧಕುಮಾರ ಹೇಳಿದ, ‘ಯಾವ ಭಾಗ ತಳವನ್ನು ಮೊದಲು ಮುಟ್ಟಿತೋ ಅದು ಬುಡ, ಇನ್ನೊಂದು ತುದಿ’. ಎರಡೂ ತುದಿಗಳಿಗೆ ಬೇರೆ ಬಣ್ಣ ಬಳಿಸಿ, ಬುಡ ಮತ್ತು ತುದಿಗಳೆಂದು ಗುರುತು ಮಾಡಿ ರಾಜನಿಗೆ ಕಳುಹಿಸಿದ. ರಾಜನಿಗೆ ಕುಮಾರನ ಬಗ್ಗೆ ಅಭಿಮಾನ ಮತ್ತಷ್ಟು ಬಲಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT