ಬುಧವಾರ, ಫೆಬ್ರವರಿ 1, 2023
27 °C

ಬೆರಗಿನ ಬೆಳಕು | ದೈವ ನಿರ್ಣಯ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ತಥಾಗತ ಬುದ್ಧತ್ವವನ್ನು ಪಡೆದ ಮೇಲೆ ಅವನ ಗೌರವ ಸಾವಿರ ಪಟ್ಟು ಹೆಚ್ಚಾಯಿತು. ಅವನ ಗುಣಗಳ ಕೀರ್ತಿ ಎಲ್ಲೆಡೆಗೆ ಹರಡಿತು. ಆದರೆ ಉಳಿದ ಮತ ಪ್ರಚಾರಕರಾಗಿದ್ದ ತೈರ್ಥಿಕರ ಬದುಕು ಕಷ್ಟವಾಯಿತು. ಅವರ ಆದಾಯ, ಗೌರವಗಳು ಸೊರಗಿ ಹೋದವು. ತಮ್ಮ ಈ ಸ್ಥಿತಿಗೆ ಶ್ರಮಣ ಗೌತಮ ಬುದ್ಧನೇ ಕಾರಣನೆಂದು ಮನದಲ್ಲಿಯೇ ಕುದಿಯತೊಡಗಿದರು. ಹೇಗಾದರೂ ಮಾಡಿ ಬುದ್ಧನ ಹೆಸರಿಗೆ ಕಳಂಕವನ್ನು ತಂದು ಅವನನ್ನು ದೇಶದಿಂದ ಹೊರಹಾಕಬೇಕೆಂದು ಹೊಂಚು ಹಾಕುತ್ತಿದ್ದರು.

ಈ ಸಮಯದಲ್ಲಿ ನಗರದಲ್ಲಿ ಚಿಂಚಮಾಣವಿಕೆ ಎಂಬ ತರುಣಿ ಇದ್ದಳು. ಆಕೆ ಅಪ್ಸರೆಯರಂತೆ ಸುಂದರಿಯಾಗಿದ್ದಳು. ಪುರುಷರ ಮನಸ್ಸನ್ನು ಹಿಡಿದುಕೊಳ್ಳುವ ಕಲೆಯಲ್ಲಿ ಪರಿಣಿತಳಾಗಿದ್ದಳು. ತೈರ್ಥಿಕರು ಆಕೆಯನ್ನು ಬಳಸಿಕೊಂಡು, ಆಕೆಯ ಸಂಬಂಧವನ್ನು ಬುದ್ಧನೊಂದಿಗೆ ಜೋಡಿಸಿ ಅವನ ಗೌರವಕ್ಕೆ ಚ್ಯುತಿ ತರಲು ಯೋಜನೆ ಹಾಕಿದರು. ಆಕೆಯನ್ನು ಕರೆದು ತೈರ್ಥಿಕರ ಮುಖಂಡ ಹೇಳಿದ, ‘ಸಹೋದರಿ, ಈ ಶ್ರಮಣ ಗೌತಮನಿಂದ ನಮಗೆ ಬಹಳ ತೊಂದರೆಯಾಗುತ್ತಿದೆ. ಅವನೊಬ್ಬನೇ ಬುದ್ಧನೇ? ನಾವೂ ಬುದ್ಧರೇ, ಆತ ನಾಟಕ ಮಾಡಿ ಜನರನ್ನು ಮರಳು ಮಾಡಿದ್ದಾನೆ. ಅವನಿಂದಾಗಿ ನಮಗೆ ದೊರಕುವ ಲಾಭ-ಸತ್ಕಾರಗಳೆಲ್ಲ ನಿಂತು ಹೋಗಿವೆ. ನೀನು ಸಹಾಯ ಮಾಡಿದರೆ ಅವನ ನಾಟಕವನ್ನು ನಿಲ್ಲಿಸಬಹುದು’. ಆಕೆ ‘ಅದು ಸರಿಯೆ, ನಾನು ಮಾಡಬೇಕಾದದ್ದೇನು? ಅದರಿಂದ ನನಗೇನು ಲಾಭ?’ ಎಂದು ಕೇಳಿದಳು. ಅದಕ್ಕೆ ತೈರ್ಥಿಕ ಮುಖಂಡ, ‘ನೀನು ಹೇಗಾದರೂ ಮಾಡಿ ಶ್ರಮಣ ಗೌತಮ ಬುದ್ಧನೊಡನೆ ಸಂಪರ್ಕ ನಿನಗಿದೆಯೆಂದು ಪ್ರಚಾರ ಮಾಡಿದರೆ ಅವನ ಮರ್ಯಾದೆ ಹೋಗುತ್ತದೆ. ಆಗ ನಮಗೆ ಬರುವ ಆದಾಯದಲ್ಲಿ ನಿನಗೂ ಪಾಲು ಕೊಡುತ್ತೇವೆ’ ಎಂದ.

ಆಕೆ ಅಂದಿನಿಂದ ನಿತ್ಯ ಸಂಜೆ ಚೇತವನಕ್ಕೆ ಹೋಗಿ ಅಲ್ಲಿಯೇ ಉಳಿದು ಮರುದಿನ ಬೆಳಿಗ್ಗೆ ಬರುವಾಗ ತಲೆ ಕೆದರಿಕೊಂಡು, ಕುಂಕುಮವನ್ನು ಹರಡಿಸಿಕೊಂಡು ಬರುತ್ತ, ತಾನು ರಾತ್ರಿಯನ್ನು ಬುದ್ಧನೊಡನೆ ಕಳೆದೆ ಎಂದು ಹೇಳುತ್ತಿದ್ದಳು. ಏಳೆಂಟು ತಿಂಗಳುಗಳ ನಂತರ ಹೊಟ್ಟೆಗೆ ಮರದ ಗಾಲಿಯನ್ನು ಕಟ್ಟಿಕೊಂಡು, ಅದಕ್ಕೆ ಬಟ್ಟೆ ಸುತ್ತಿಕೊಂಡು ಚೇತವನದ ಮುಂದೆ ಕೂಡ್ರುತ್ತಿದ್ದಳು. ಬಹಳಷ್ಟು ಜನರಿಗೆ ಈಗ ಆಕೆಯ ಮೇಲೆ ನಂಬಿಕೆ ಬಂದು, ಗೌತಮ ಬುದ್ಧನ ಬಗ್ಗೆ ಹೀಯಾಳಿಕೆಯ ಮಾತುಗಳು ಕೇಳಿ ಬರುತ್ತಿದ್ದವು. ಒಂದು ದಿನ ಬುದ್ಧನ ಉಪನ್ಯಾಸ ಮುಗಿದೊಡನೆ ಎಲ್ಲರ ಮುಂದೆ ನಿಂತು, ‘ಈ ಬುದ್ಧ ನನಗೆ ಅನ್ಯಾಯ ಮಾಡಿದ್ದಾನೆ. ನನಗೆ ಯಾವ ವ್ಯವಸ್ಥೆಯನ್ನೂ ಮಾಡಿಲ್ಲ. ತುಂಬು ಗರ್ಭಿಣಿಯಾದ ನನಗೆ ಊಟಕ್ಕೂ ಅನುಕೂಲ ಮಾಡಲಿಲ್ಲ’ ಎಂದು ಬಿಕ್ಕಿ ಬಿಕ್ಕಿ ಅತ್ತಳು. ಬುದ್ಧ ಮಾತೇ ಆಡಲಿಲ್ಲ. ಇಂದ್ರ ಇದನ್ನು ಗಮನಿಸಿ ನಾಲ್ಕು ದೇವಪುತ್ರರೊಂದಿಗೆ ಅಲ್ಲಿಗೆ ಬಂದ. ದೇವಪುತ್ರರು ಇಲಿಗಳ ರೂಪದಲ್ಲಿ ಅವಳ ಬಟ್ಟೆಯಲ್ಲಿ ಸೇರಿ ಮರದ ಗಾಲಿಯನ್ನು ಸುತ್ತಿದ್ದ ಬಟ್ಟೆಯನ್ನು ಕಡಿದು ಹಾಕಿದರು. ಆ ಗಾಲಿ ಅವಳ ಕಾಲ ಮೇಲೆ ಬಿದ್ದು ಎರಡೂ ಕಾಲು ಮುರಿದವು. ಜೋರಾಗಿ ಬಿಟ್ಟ ಗಾಳಿಗೆ ಅವಳು ತೊಟ್ಟಿದ್ದ ಬಟ್ಟೆ ಹಾರಿಹೋಯಿತು. ಜನರಿಗೆ ಸತ್ಯ ತಿಳಿಯಿತು. ನಾಚಿಕೆಯಿಂದ ಮುಖ ಮುಚ್ಚಿಕೊಂಡು ನಿಂತಿದ್ದವಳನ್ನು ಭೂಮಿ ಬಿರಿದು ಒಳಗೆ ಸೆಳೆದುಕೊಂಡು ನರಕಕ್ಕೆ ಹಾಕಿತು. ಬುದ್ಧ ಒಂದೂ ಮಾತನಾಡದೆ ಮರ್ಯಾದೆಯನ್ನು ಹೆಚ್ಚಿಸಿಕೊಂಡ. ತೈರ್ಥಿಕರಿಗೆ ಮುಖಭಂಗವಾಯಿತು.

ಸಾತ್ವಿಕರ ಮೇಲೆ, ಪ್ರಾಮಾಣಿಕರ ಮೇಲೆ ಅನ್ಯಾಯದ ಆಪಾದನೆ ಮಾಡಿದರೆ ಅವರು ಸುಮ್ಮನಿದ್ದರೂ, ದೈವ ಆಪಾದನೆ ಮಾಡಿದವರನ್ನು ಬಿಡದೆ ಶಿಕ್ಷಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು