ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುರುರಾಜ ಕರಜಗಿ ಅಂಕಣ – ಬೆರಗಿನ ಬೆಳಕು| ಬದುಕಿನ ಸಾರ - ನಗು

Published 27 ಜೂನ್ 2023, 23:34 IST
Last Updated 27 ಜೂನ್ 2023, 23:34 IST
ಅಕ್ಷರ ಗಾತ್ರ

ಬರಿಯ ಪೊಳ್ಳುವಿಚಾರ ಮನುಷ ವ್ಯಾಪಾರ |
ಪರಿಕಿಸಲು ಪುಣ್ಯವೆಂಬುದುಮಹಂಕಾರ ||
ಅರಳಿ ಮೊಗವನಿತಿನಿತು, ನಕ್ಕು ನಗಿಸಿರೆ ಸಾರ |
ಹೊರೆ ಮಿಕ್ಕ ಸಂಸಾರ – ಮಂಕುತಿಮ್ಮ || 915 ||

ಪದ-ಅರ್ಥ: ಪರಿಕಿಸಲು=ಪರೀಕ್ಷಿಸಲು, ಪುಣ್ಯವೆಂಬುದುಮಹಂಕಾರ=ಪುಣ್ಯ+ಎಂಬುದುಮ್(ಎಂಬುದು)
+ಅಹಂಕಾರ, ಮೊಗವನಿತಿನಿತು=ಮೊಗವನು+ಇನಿತು+ಇನಿತು, ಸಾರ=ಸತ್ವ.

ವಾಚ್ಯಾರ್ಥ: ಮನುಷ್ಯ ಜೀವನದ ಭೌತಿಕ ವ್ಯವಹಾರ ಕೇವಲ ಪೊಳ್ಳು. ಪರೀಕ್ಷಿಸಿ ನೋಡಿದರೆ ಪುಣ್ಯಸಂಪಾದನೆ ಎನ್ನುವುದೂ ಅಹಂಕಾರವೇ. ಮುಖವನ್ನು ಕೊಂಚ ಅರಳಿಸಿ, ತಾನೂ ನಕ್ಕು ಮತ್ತೊಬ್ಬರನ್ನು ನಗಿಸಿದರೆ ಬದುಕು ಸತ್ವಯುತ. ಉಳಿದಸಂಸಾರವೆಲ್ಲ ಬರೀ ಭಾರ.
ವಿವರಣೆ: ಬದುಕಿರುವ ವರೆಗೆ ಮನುಷ್ಯ, ಮನುಷ್ಯ ಸಂಬಂಧಗಳು, ವ್ಯವಹಾರಗಳು ನಡೆದೇ ಇರುತ್ತವೆ. ಆದರೆ ಯಾವ ವ್ಯವಹಾರವೂ ಶಾಶ್ವತವಲ್ಲ, ಇಂದು ಸರಿಯಾದದ್ದು ಎನ್ನಿಸಿದ್ದು ಮುಂದೆಂದೊ ತಪ್ಪು ನಿರ್ಧಾರ ಎನ್ನಿಸಬಹುದು ಅಥವಾಇಂದು ತಪ್ಪಾಗಿದ್ದದ್ದು ಮುಂದೆ ಅತ್ಯುತ್ತಮ ತೀರ್ಮಾನವಾಗಬಹುದು. ಮಾಡಿದ ಕೆಲಸ ಮರೆತು ಹೋಗುತ್ತದೆ. ಸಂಬಂಧಗಳು ಮರೆಯಾಗುತ್ತವೆ. ಯಾವುದು ಶಾಶ್ವತವೆಂದು ಭಾವಿಸಿ ರಕ್ಷಿಸುತ್ತಿದ್ದೆವೋ ಅದು ಅಲ್ಪಕಾಲದ್ದು ಎಂದು ತಿಳಿದು ನೋವಾಗುತ್ತದೆ. ನಾನು ತುಂಬ ಧರ್ಮದ ಕಾರ್ಯಗಳನ್ನು ಮಾಡಿದ್ದೇನೆ, ಜನಪ್ರಿಯನಾಗಿದ್ದೇನೆ, ಪುಣ್ಯಗಳಿಸಿದ್ದೇನೆ ಎನ್ನುವುದೂ ಅಹಂಕಾರವೇ. ಅಹಂಕಾರಕ್ಕೆ ಒಂದಲ್ಲ ಒಂದು ದಿನ ಪೆಟ್ಟು ಬಿದ್ದು ನೋವು ತರುತ್ತದೆ. ಅದಕ್ಕೇ ಅಲ್ಲಮಪ್ರಭು ಹೇಳಿದ,
“ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದು:ಖ ನೋಡಾ”.

ಡಾ. ಗೋಪಾಲಕೃಷ್ಣ ಅಡಿಗರ ಒಂದು ಅದ್ಭುತವಾದ ಕವನ ಇದನ್ನೇ ಧ್ವನಿಸುತ್ತದೆ.
ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ |
 ಆಶೆಯೆಂಬ ತಳ ಒಡೆದ ದೋಣಿಯಲಿ ದೂರ ತೀರಯಾನ |
ಯಾರ ಲೀಲೆಗೋ ಯಾರೊ ಏನೊ ಗುರಿ ಇಡದೆ ಬಿಟ್ಟಬಾಣ ||
ಇದು ಬಾಳು ನೋಡು ಇದು ತಿಳಿದೆವೆಂದರೂ ತಿಳಿದ ಧೀರನಿಲ್ಲ |
ಹಲವುತನದ ಮೈಮರೆಸುವಾಟವಿದು ನಿಜವು ತೋರದಲ್ಲ ||

ಬದುಕೆಂಬ ದು:ಖದ ಕಡಲಿನಲ್ಲಿ ನಗೆಯೇ ಒಂದು ಹಾಯಿದೋಣೆ. ಅದಿರುವುದರಿಂದಲೇ ಬದುಕಿನ ಕಡಲಪ್ರಯಾಣ ಸಹ್ಯವಾಗುತ್ತದೆ, ಸಾಧ್ಯವಾಗುತ್ತದೆ. ಈ ಬಾಳನ್ನು ಸಂಪೂರ್ಣವಾಗಿ ತಿಳಿದಿದ್ದೇನೆಂಬ ಧೀರನಿಲ್ಲ ಮತ್ತು ಹಲವು ವಿಧದಲ್ಲಿ ಮೈಮರೆಸುವ ಆಟಗಳನ್ನಾಡುವ ಪ್ರಪಂಚದಲ್ಲೇ ಇದ್ದರೂ ಅದರ ನಿಜ ನಮಗೆ ತಿಳಿಯದು. ಹಾಗಿರುವಾಗ ಕಗ್ಗ ಒಂದು ಸಮಾಧಾನದ ಸೂತ್ರವನ್ನು ಹೇಳುತ್ತದೆ. ಸಾಧ್ಯವಿದ್ದಷ್ಟು ಕಾಲ, ಸಾಧ್ಯವಿದ್ದಷ್ಟು ಮಟ್ಟಿಗೆ ಮುಖವನ್ನು ಅರಳಿಸಿ ನಕ್ಕು, ಮತ್ತೊಬ್ಬರಲ್ಲೂ ನಗೆ ಮೂಡಿಸಿದರೆ ಬದುಕು ಹಗುರವಾಗುತ್ತದೆ. ಅದಷ್ಟೇ ಬದುಕಿನ ಸುಖದ ಭಾಗ. ಉಳಿದದ್ದೆಲ್ಲ ಸಂಸಾರದ ಹೊರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT