ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಬದುಕಿಗೆ ಮಾದರಿಗಳು

Last Updated 2 ಮಾರ್ಚ್ 2022, 18:49 IST
ಅಕ್ಷರ ಗಾತ್ರ

ಕಕ್ಷಿಗಾರನವೊಲೇ ಪೋರುತ್ತೆ ನ್ಯಾಯಕ್ಕೆ |
ಸಾಕ್ಷಿಯವೊಲಿರು ಕಡೆಗೆ ತೀರ್ಪಾಗುವಂದು ||
ಭಿಕ್ಷುವೊಲು ಕಾಲ ಸವೆಯಿಸಿ ಲೋಕಯಾತ್ರೆಯಲಿ |
ಪಕ್ಷಿವೊಲು ಮನದೊಳಿರು – ಮಂಕುತಿಮ್ಮ || 575 ||

ಪದ-ಅರ್ಥ: ಕಕ್ಷಿಗಾರನವೊಲೇ=ಕಕ್ಷಿಗಾರನಂತೆ (ದಾವೆ ಮಾಡಿದವನಂತೆ), ಪೋರುತ್ತೆ=ಹೋರಾಡುತ್ತ, ಸಾಕ್ಷಿಯವೊಲು=ಸಾಕ್ಷಿಯಂತೆ, ಭಿಕ್ಷುವೊಲು=ಭಿಕ್ಷುವಿನಂತೆ, ಪಕ್ಷಿವೊಲು=ಪಕ್ಷಿಯಂತೆ, ಮನದೊಳಿರು=ಮನದೊಳು+ಇರು.

ವಾಚ್ಯಾರ್ಥ: ನ್ಯಾಯಕ್ಕಾಗಿ ದಾವೆದಾರನಂತೆ ಹೋರಾಡಬೇಕು, ತೀರ್ಪು ದೊರಕುವಾಗ ಸಾಕ್ಷಿಯಂತೆ ಪಕ್ಷಪಾತರಹಿತನಾಗಿರಬೇಕು, ಭಿಕ್ಷುವಿನಂತೆ ಯಾವುದಕ್ಕೂ ಅಂಟದೆ ಬಾಳು ಸವೆಯಿಸಬೇಕು, ಮನಸ್ಸಿನಲ್ಲಿ ಹಕ್ಕಿಯ ಹಾಗೆ ಹಗುರವಾಗಿರಬೇಕು.

ವಿವರಣೆ: ಬದುಕಿನ ಬೇರೆ ಬೇರೆ ಹಂತಗಳಲ್ಲಿ ಹೇಗೆ ಬದುಕಬೇಕೆಂಬುದನ್ನು ಡಿವಿಜಿ ಈ ಕಗ್ಗದಲ್ಲಿ ತಿಳಿಸುತ್ತಾರೆ. ನ್ಯಾಯಕ್ಕಾಗಿ ಹೋರಾಡುವಾಗ ಕಕ್ಷಿಗಾರನ ತರಹ ಇರಬೇಕು. ಕಕ್ಷಿದಾರ ಕೋರ್ಟಿನಲ್ಲಿ ದಾವೆ ಹೂಡಿದ್ದಾನೆ. ಒಳ್ಳೆಯ ವಕೀಲರನ್ನು ಗೊತ್ತು ಮಾಡಿಕೊಂಡಿದ್ದಾನೆ, ದಾಖಲೆಗಳನ್ನು ಹುಡುಕಿ ತಂದು ಕೊಡುತ್ತಾನೆ. ಸಾಕ್ಷಿಗಳನ್ನು ಸಿದ್ಧ ಮಾಡುತ್ತಾನೆ. ಹೀಗೆ ಒಂದೇ ಸಮನೆ ವಿಷಯ ತೀರ್ಮಾನವಾಗುವವರೆಗೆ ಅವನ ಹೋರಾಟ ನಡೆದೇ ಇರುತ್ತದೆ. ತನಗೆ ನ್ಯಾಯ ದೊರಕಲಿ ಎಂದು ಸಕಲ ಪ್ರಯತ್ನಗಳನ್ನು ಮಾಡುತ್ತಾನೆ. ಹೀಗೆ ಜಗತ್ತಿನ ಒಳಿತಿಗೆ, ಧರ್ಮದ ರಕ್ಷಣೆಗೆ ಅನೇಕ ಮಹಾನುಭಾವರು ಜೀವನದುದ್ದಕ್ಕೂ ಶ್ರಮಿಸಿದರು. ಬಸವಣ್ಣನವರು, ಸಿದ್ಧರಾಮಣ್ಣನವರು ಲೋಕಹಿತಕ್ಕಾಗಿ ಸತತ ಕರ್ಮಗಳನ್ನು ಆಚರಿಸಿದರು. ದಾಸೋಹ ನಡೆಸಿದರು, ಧಾರ್ಮಿಕ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದರು. ಶಂಕರರು ದೇಶದ ನಾಲ್ಕು ದಿಕ್ಕುಗಳಲ್ಲಿಯೂ ಸಂಚರಿಸಿದರು, ಕಷ್ಟಗಳ ಸಹಿಸಿದರು, ಅದೈತ ಜ್ಞಾನವನ್ನು ಹರಡಿದರು. ಸಂತ ಜ್ಞಾನೇಶ್ವರರು ಬಡತನದ ಬೆಂಕಿಯಲ್ಲಿ ಅರಳಿದ ಹೂವು ಆದರೆ ಸಾವಿರಾರು ಜನರ ಬದುಕಿನಲ್ಲಿ ಆಧ್ಯಾತ್ಮದ ರಸ ಸುರಿದರು.

ಹೀಗೆ ಅವಿರತವಾಗಿ ಹೋರಾಡುತ್ತಿದ್ದರೂ ಆ ಮಹಾನುಭಾವರು ತಮ್ಮ ಕರ್ಮಗಳಲ್ಲಿ ಒಂದು ಕ್ಷಣವೂ ಬಂಧಿಯಾಗಲಿಲ್ಲ. ಅವರದು ನಿರ್ಲಿಪ್ತ ಮನೋಭಾವ. ಯಾವ ಫಲಾಪೇಕ್ಷೆಯೂ ಇಲ್ಲ. ಅದನ್ನು ಸಾಕ್ಷಿಯ ಗುಣ ಎನ್ನುತ್ತದೆ ಕಗ್ಗ. ಸಾಕ್ಷಿಯಾದವನು ತಾನು ಕಂಡದ್ದನ್ನು, ತನ್ನ ಅರಿವಿಗೆ ಬಂದದ್ದನ್ನು ಹೇಳುತ್ತಾನೆ. ತನ್ನ ಹೇಳಿಕೆಯಿಂದ ಯಾರಿಗೆ ಲಾಭವಾದೀತು ಎಂದು ನೋಡುವುದಿಲ್ಲ. ಯಾಕೆಂದರೆ ಅವರು ಯಾರ ಪಕ್ಷದವನೂ ಅಲ್ಲ. ಅವನಿಗೆ ಸಾಕ್ಷಿಯ ಕೆಲಸ ಒಂದು ಕರ್ತವ್ಯ. ಫಲದ ಅಪೇಕ್ಷೆ ಇಲ್ಲ.

ಕೃಷ್ಣ ಅರ್ಜುನನಿಗೆ ಹೇಳುತ್ತಾನೆ, ‘ಅರ್ಜುನ ನನಗೆ ಈ ಯುದ್ಧದಿಂದ ಏನಾಗಬೇಕಿದೆ? ನಾನು ಮೂರು ಲೋಕಗಳಲ್ಲಿ ಪಡೆಯಬೇಕಾದ ಅಥವಾ ಪಡೆಯದಿರುವ ವಸ್ತುವಿಲ್ಲ. ಆದರೂ ನಾನು ಕರ್ಮಮಾಡುತ್ತೇನೆ, ಆದರೆ ಏನನ್ನೂ ಬಯಸುವುದಿಲ್ಲ’. ಇದು ಸಾಕ್ಷಿಪ್ರಜ್ಞೆ ಇದರೊಂದಿಗೆ ಬದುಕಿನಲ್ಲಿ ಭಿಕ್ಷುವಿನ ಹಾಗೆ ಬದುಕಬೇಕು ಎನ್ನುತ್ತದೆ ಕಗ್ಗ. ಹಾಗೆಂದರೆ ಯಾವುದಕ್ಕೂ ಅತಿಯಾಗಿ ಅಂಟಿಕೊಳ್ಳದೆ ಕರ್ಮ ಮಾಡುವುದು. ನಾವು ಯಾವುದಕ್ಕೂ ಆಸೆಪಡದ, ನಿರ್ಮೋಹಿಯಾದ, ಸಕಲ ಉಪಾಧಿಗಳಿಂದ ದೂರನಾದ ಭಿಕ್ಷುವಿನಂತೆ ಆಗದೆ ಹೋದರೂ ಕೆಲಪ್ರಮಾಣದಲ್ಲಾದರೂ ಆ ಗುಣ ಬರುವುದು ಒಳ್ಳೆಯದು. ಕೊನೆಯದಾಗಿ ಮನಸ್ಸಿನಲ್ಲಿ ಹಕ್ಕಿಯ ಹಾಗೆ ಹಗುರವಾಗಿರಬೇಕಂತೆ. ಎಲ್ಲಿ ಮನಸ್ಸು ಸದಾಕಾಲ ಅಪೇಕ್ಷೆಯಲ್ಲಿ, ನಿರೀಕ್ಷೆಯಲ್ಲಿರುತ್ತದೆಯೋ, ಆಗ ಅದು ಭಾರವಾಗುತ್ತದೆ. ಭಾರವಾದ ಮನಸ್ಸುಸಂತೋಷದಲ್ಲಿ ಹಾರಲಾರದು, ಹೊಸದನ್ನು ಚಿಂತಿಸಲಾರದು. ಅದಕ್ಕೇ ಕಗ್ಗ ಕಕ್ಷಿಗಾರನ, ಸಾಕ್ಷಿಯ, ಭಿಕ್ಷುವಿನ ಮತ್ತು ಹಕ್ಕಿಯ ದೃಷ್ಟಾಂತಗಳನ್ನು ನೀಡಿ. ಅವುಗಳ ಕೆಲವು ಅಂಶಗಳಾದರೂ ನಮ್ಮ ಬದುಕಿನಲ್ಲಿ ಬರಲಿ ಎಂದು ಅಪೇಕ್ಷಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT