ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಎರಡೇ ಗುಣಗಳು

Last Updated 9 ಜೂನ್ 2020, 19:30 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಅವನಿಗೆ ನೂರು ಜನ ಗಂಡು ಮಕ್ಕಳು. ಅವರಲ್ಲಿ ಅತ್ಯಂತ ಕಿರಿಯವನು ಸಂವರಕುಮಾರ. ಪ್ರತಿಯೊಬ್ಬ ಮಗನನ್ನು ನೋಡಿಕೊಂಡು ಬೆಳೆಸಲು ರಾಜ ಒಬ್ಬೊಬ್ಬ ಮಂತ್ರಿಯನ್ನು ಗೊತ್ತು ಮಾಡಿದ್ದ. ಬೋಧಿಸತ್ವ ಸಂವರಕುಮಾರನ ಗುರು. ಅವನಿಗೆ ಸಕಲವಿದ್ಯೆಗಳನ್ನು ಕಲಿಸಿ ಪಾರಂಗತನನ್ನಾಗಿ ಮಾಡಿದ. ರಾಜ ತನ್ನ ಉಳಿದ ಮಕ್ಕಳಿಗೆ ಶಿಕ್ಷಣ ಮುಗಿದ ಮೇಲೆ ಒಂದೊಂದು ಜನಪದವನ್ನು ಒಪ್ಪಿಸಿ ಅವುಗಳನ್ನು ನೋಡಿಕೊಳ್ಳುವಂತೆ ಕಳುಹಿಸಿದ. ಸಂವರ ಕುಮಾರ ಗುರು ಬೋಧಿಸತ್ವನನ್ನು ಕೇಳಿದ, ‘ಗುರುಗಳೇ, ಬಹುಶಃ ನನ್ನ ತಂದೆ ನನ್ನನ್ನು ಒಂದು ಜನಪದಕ್ಕೆ ಕಳುಹಿಸಿಬಿಡಬಹುದು. ನಾನು ಏನು ಮಾಡಲಿ?’. ‘ಮಗೂ, ರಾಜ ಹಾಗೆ ಹೇಳಿದರೆ ನೀನು ಅದನ್ನು ಒಪ್ಪಬೇಡ. ವಯಸ್ಸಾದ ತಂದೆಯನ್ನು ಬಿಟ್ಟು ಹೋಗುವುದು ಸರಿಯಲ್ಲ. ಅವರ ಜೊತೆಗೇ ಉಳಿದು ಬಿಡು’ ಎಂದು ಸಲಹೆ ನೀಡಿದ.

ಅಂದುಕೊಂಡಂತೆಯೇ ರಾಜ, ‘ಮಗೂ, ನಿನ್ನ ಶಿಕ್ಷಣ ಮುಗಿದಿದೆ. ನೀನು ಇಂತಹ ಜನಪದಕ್ಕೆ ಹೋಗಿ ಅದರ ನಾಯಕತ್ವವನ್ನು ವಹಿಸಿಕೊ’ ಎಂದ. ಸಂವರಕುಮಾರ, ‘ಬೇಡ ಪ್ರಭೂ, ನಾನು ತಮ್ಮೊಂದಿಗೆ ಜೊತೆಯಾಗಿದ್ದು ಸಹಾಯ ಮಾಡುತ್ತೇನೆ’ ಎಂದ. ತಂದೆ ಸಂತೋಷದಿಂದ ಹಾಗೆಯೇ ಆಗಲಿ ಎಂದ. ಬೋಧಿಸತ್ವನ ಬೋಧೆಯಂತೆ ಸಂವರಕುಮಾರ ನಿಧಾನವಾಗಿ ತಂದೆಯ ಜವಾಬ್ದಾರಿಯನ್ನೆಲ್ಲ ಒಂದೊಂದಾಗಿ ತೆಗೆದುಕೊಂಡು ರಾಜ್ಯದಲ್ಲಿ ಆರೋಗ್ಯ, ಆಹಾರ, ಶಿಸ್ತು, ಶಿಕ್ಷಣ ಎಲ್ಲವೂ ವ್ಯವಸ್ಥಿತವಾಗಿರುವಂತೆ ನೋಡಿಕೊಂಡ. ರಾಜ ಮರಣಶಯ್ಯೆಯಲ್ಲಿದ್ದಾಗ ಮಂತ್ರಿಗಳು ‘ಪ್ರಭೂ ತಮ್ಮ ನಂತರ ರಾಜಚ್ಛತ್ರವನ್ನು ಯಾರಿಗೆ ಕೊಡಬಯಸುತ್ತೀರಿ?’ ಎಂದು ಕೇಳಿದರು. ರಾಜ, ‘ನನ್ನ ನೂರು ಜನ ಮಕ್ಕಳೂ ಅದಕ್ಕೆ ಅರ್ಹರಾಗಿದ್ದಾರೆ. ಆದರೆ ಮಂತ್ರಿ ಪರಿಷತ್ತು ಯಾರನ್ನು ಒಪ್ಪುತ್ತದೋ ಅವನೇ ರಾಜನಾಗಲಿ’ ಎಂದು ಹೇಳಿ ತೀರಿಹೋದ.

ಅಂತ್ಯಕ್ರಿಯೆಗಳು ಮುಗಿದ ಮೇಲೆ ಮಂತ್ರಿಗಳು ನೂರೂ ರಾಜಕುಮಾರರನ್ನು ಕರೆದು, ‘ತಾವೆಲ್ಲರೂ ಸಿಂಹಾಸನಕ್ಕೆ ಅರ್ಹರಾಗಿದ್ದೀರಿ. ಆದರೆ ಪರಿಷತ್ತಿಗೆ ಸಂವರಕುಮಾರನ ದಕ್ಷತೆ ಇಷ್ಟವಾಗಿದೆ. ಆದ್ದರಿಂದ ರಾಜಪದವಿಯನ್ನು ಅವನಿಗೇ ಕೊಡಬೇಕೆಂದು ನಿರ್ಧರಿಸಿದ್ದೇವೆ’ ಎಂದು ತಿಳಿಸಿ ಪಟ್ಟಾಭಿಷೇಕವನ್ನು ನಡೆಸಿದರು. ಆತ ಬೋಧಿಸತ್ವನ ಮಾರ್ಗದರ್ಶನದಂತೆ ರಾಜ್ಯವನ್ನು ನಡೆಸತೊಡಗಿದ. ಉಳಿದ ತೊಂಭತ್ತೊಂಭತ್ತು ಜನ ರಾಜಕುಮಾರರು ಸಭೆ ಸೇರಿ ಅತ್ಯಂತ ಕಿರಿಯನಾದ ಸಂವರಕುಮಾರನಿಗೆ ರಾಜಪದವಿ ಕೊಡುವುದು ನಮಗೆ ಅಪಮಾನ ಮಾಡಿದಂತೆ. ಆದ್ದರಿಂದ ಎಲ್ಲ ಜಾನಪದಗಳಲ್ಲಿ ದಂಗೆಯನ್ನುಂಟುಮಾಡಿ ಅವನನ್ನು ಅಧಿಕಾರದಿಂದ ಇಳಿಸಿಬಿಡೋಣ ಎಂದು ತೀರ್ಮಾನಿಸಿದರು. ಇದು ಸಂವರಕುಮಾರನಿಗೆ ತಿಳಿಯಿತು. ಆತ ಬೋಧಿಸತ್ವನೊಡನೆ ಚಿಂತಿಸಿ, ಇಡೀ ದೇಶವನ್ನು ನೂರು ಭಾಗಗಳನ್ನಾಗಿ ಮಾಡಿ, ಎಲ್ಲ ಅಣ್ಣಂದಿರನ್ನು ಕರೆದು, ‘ತಾವೆಲ್ಲರೂ ಹಿರಿಯರು. ಇಡೀ ರಾಜ್ಯವನ್ನು ಸರಿಯಾಗಿ ನೂರು ಭಾಗ ಮಾಡಿದ್ದೇನೆ. ಎಲ್ಲರೂ ಒಂದೊಂದು ಭಾಗವನ್ನು ತೆಗೆದುಕೊಂಡು ಸುಖವಾಗಿರೋಣ. ಜಗಳ, ತಂಟೆ ಏತಕ್ಕೆ?’ ಎಂದು ಕೇಳಿದ. ತಮ್ಮನ ಉದಾರತೆ ಅವರಲ್ಲಿ ನಾಚಿಕೆಯನ್ನು ತಂದಿತು. ಅವನೇ ರಾಜನಾಗಲಿ ಎಂದು ತೀರ್ಮಾನಿಸಿ, ಅವನಿಗೆ ತಾವು ಸಹಾಯಕರಾಗಿರುವುದಾಗಿ ತಿಳಿಸಿದರು. ನಿನಗೆ ಈ ದೊಡ್ಡ ಗುಣ ಸಾಧ್ಯವಾದದ್ದು ಹೇಗೆ ಎಂದು ಕೇಳಿದಾಗ ಸಂವರಕುಮಾರ, ‘ಇದಕ್ಕೆ ಎರಡೇ ಕಾರಣ, ನನಗೆ ಅತಿಯಾದ ಸ್ವಂತ ಆಸೆ ಇಲ್ಲ ಮತ್ತು ಗುರುಗಳ ಮಾರ್ಗದರ್ಶನವನ್ನು ಚಾಚೂ ತಪ್ಪದೆ ಪಾಲಿಸುತ್ತೇನೆ’ ಎಂದ.

ಇಂದಿಗೂ ಅವೆರಡೇ ಗುಣಗಳು ಸಾಕುಬದುಕನ್ನು ಸುಂದರಗೊಳಿಸಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT