ಶುಕ್ರವಾರ, ಜೂಲೈ 3, 2020
23 °C

ಬೆರಗಿನ ಬೆಳಕು | ಭಯದ ದಾರಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ಕಾಶ್ಯಪ ಸಮ್ಯಕ್ ಸಂಬುದ್ಧರ ಸಮಯದಲ್ಲಿ ವಾರಾಣಸಿಯನ್ನು ಉಸೀನರ ಎಂಬ ರಾಜ ಆಳುತ್ತಿದ್ದ. ಅವನು ತುಂಬ ಅಶಕ್ತ. ರಾಜ್ಯದಲ್ಲಿ ಧರ್ಮವನ್ನು ಕಡೆಗಣಿಸಲಾಗಿತ್ತು. ಬುದ್ಧ ತನ್ನ ಉಪದೇಶದಿಂದ ಜನರನ್ನು ಬಂಧನದಿಂದ ಬಿಡುಗಡೆಗೊಳಿಸಿ ನಿರ್ವಾಣ ಹೊಂದಿದ ಮೇಲೆ ಬಹಳ ಕಾಲದ ನಂತರ ಬುದ್ಧನ ಮಾತುಗಳು ಜನರಿಂದ ಮರೆಯಾಗತೊಡಗಿದವು. ಭಿಕ್ಷುಗಳು ಅನುಚಿತವಾದ ಮಾರ್ಗಗಳಿಂದ ಬದುಕತೊಡಗಿದರು, ಭಿಕ್ಷುಣಿಯರ ಸಂಗ ಮಾಡಲಾರಂಭಿಸಿದರು. ಅವರ ಸಂಸಾರಗಳು ನಡೆದವು. ಉಪಾಸಕರು ತಮ್ಮ ಉಪಾಸನೆಗಳನ್ನು ಮರೆತರು, ಬ್ರಾಹ್ಮಣರು ಬ್ರಾಹ್ಮಣ ಧರ್ಮವನ್ನು ಬಿಟ್ಟರು. ಎಲ್ಲರೂ ಬದುಕುವುದಕ್ಕಾಗಿ ಬುದ್ಧ ಪ್ರತಿಪಾದಿಸಿದ ಮೌಲ್ಯಗಳನ್ನು ಮರೆತು ಅನಾಚಾರಿಗಳಾದರು. ಆಗ ಸತ್ತವರೆಲ್ಲ ನರಕಕ್ಕೆ ಹೋದರು.

ದೇವರಾಜ ಇಂದ್ರ ಇದನ್ನು ಗಮನಿಸಿದ. ದೇವಲೋಕಗಳಿಗೆ ಜನರು ಬರುತ್ತಲೇ ಇಲ್ಲ, ನರಕಗಳು ತುಂಬಿ ತುಳುಕುತ್ತಿವೆ. ಮನುಷ್ಯ ಲೋಕದ ಕಡೆಗೆ ತನ್ನ ಜ್ಞಾನದೃಷ್ಟಿಯನ್ನು ಹರಿಸಿ ಗಮನಿಸಿದ. ಶಾಸ್ತ್ರದ, ಶಾಸನದ ಮಹತ್ವವನ್ನು ಜನ ಮರೆತಿರುವುದನ್ನು ಕಂಡು, ಅವರಿಗೆ ಮತ್ತೆ ಬುದ್ಧನ ತತ್ವಗಳನ್ನು ತಿಳಿಸಿ ಒಂದು ಸಾವಿರ ವರ್ಷವಾದರೂ ಮತ್ತೆ ಅದನ್ನು ಪ್ರತಿಷ್ಠಾಪನೆ ಮಾಡಬೇಕೆಂದು ತೀರ್ಮಾನಿಸಿ ಭೂಲೋಕಕ್ಕೆ ಹೊರಟ. ಅದಕ್ಕಾಗಿ ತನ್ನ ವೇಷವನ್ನು ಬದಲಾಯಿಸಿಕೊಂಡ. ತಾನು ಒಂದು ಕಾಷಾಯ ವಸ್ತ್ರವನ್ನು ಧರಿಸಿ ಮತ್ತೊಂದನ್ನು ಹೊದ್ದುಕೊಂಡ. ತನ್ನ ತಲೆಗೂದಲನ್ನು ಹಿಮ್ಮುಖವಾಗಿ ಎಳೆದು ಕಟ್ಟಿದ. ಕೊರಳಿಗೆ ಕೆಂಪು ಹೂವಿನ ಹಾರವನ್ನು ಹಾಕಿಕೊಂಡ. ಹಣೆಗೆ ದಪ್ಪನಾಗಿ ಕುಂಕುಮವನ್ನು ಬಳಿದುಕೊಂಡು ಕೈಯಲ್ಲಿ ಹೆದೆ ಏರಿಸಿದ ಹವಳದ ಬಣ್ಣದ ಬಿಲ್ಲನ್ನು ಹೆಗಲಿಗೇರಿಸಿದ. ಎಡಗೈಯಲ್ಲಿ ವಜ್ರದ ತುದಿಯ, ಹೊಳೆಹೊಳೆವ ಬಾಣವನ್ನು ತಿರುಗಿಸುತ್ತ ಬೇಟೆಗಾರನಂತೆ ಕಂಡ. ತನ್ನ ರಥದ ಸಾರಥಿ ಮಾತಲಿಯನ್ನು ಒಂದು ಬೇಟೆ ನಾಯಿಯನ್ನಾಗಿ ಮಾಡಿದ. ಅದು ಒಂದು ಬಲಿಷ್ಠ ಕುದುರೆಯಷ್ಟು ದೊಡ್ಡದಾಗಿತ್ತು. ಈ ಕಪ್ಪಗಾಗಿದ್ದ ನಾಯಿಯ ಬಾಯಿ ವಿಕಾರವಾಗಿತ್ತು. ಅದಕ್ಕಿದ್ದ ನಾಲ್ಕೇ ಹಲ್ಲುಗಳು ದೊಡ್ಡ ಬಾಳೆಹಣ್ಣಿನಷ್ಟು ಗಾತ್ರದ್ದಾಗಿದ್ದವು. ಅವು ಮಿಂಚಿನಂತೆ ಹೊಳೆಯುತ್ತಿದ್ದವು. ದೊಡ್ಡ ರಾಕ್ಷಸಾಕಾರದ ಕಣ್ಣುಗಳಿಂದ ಕಿಡಿಗಳು ಹೊರಡುತ್ತಿದ್ದವು. ಈ ರೀತಿ ಸಿದ್ಧವಾಗಿ ಇಂದ್ರ ವಾರಾಣಸಿ ನಗರದಲ್ಲಿ ಬಂದಿಳಿದ. ಜನರೆಲ್ಲ ಅವನನ್ನು ನೋಡಿ ದಿಕ್ಕೆಟ್ಟು ಓಡತೊಡಗಿದರು. ಆತ ಪ್ರಪಂಚ ನಾಶವಾಗುತ್ತದೆ, ನಾಳೆಗೇ ಅದು ಅಳಿದುಹೋಗುತ್ತದೆ ಎಂದು ಕೂಗುತ್ತಿದ್ದ. ರಾಜನೂ ಗಾಬರಿಯಾಗಿ ಕೋಟೆಯ ಬಾಗಿಲು ಹಾಕಿಸಿದ. ಆದರೆ ಅಷ್ಟೆತ್ತರದ ಕೋಟೆಯನ್ನು ಸುಲಭವಾಗಿ ಹತ್ತಿ ಅರಮನೆಯ ಬಳಿಗೆ ಬಂದ ಇಂದ್ರ.

ರಾಜ ಕಿಟಕಿಯಿಂದಲೇ ಕೇಳಿದ, ‘ನಿನ್ನ ನಾಯಿ ಭಯಂಕರವಾಗಿದೆ, ಅದು ಏಕೆ ಹಾಗೆ ಬೊಗಳುತ್ತಿದೆ?’. ಇಂದ್ರ, ‘ಅದಕ್ಕೆ ಹಸಿವೆಯಾಗಿದೆ’ ಎಂದ. ‘ಅದಕ್ಕೆ ಎಷ್ಟು ಬೇಕಾದರೂ ಆಹಾರ ಕೊಡಿಸುತ್ತೇನೆ. ಅದನ್ನು ಸುಮ್ಮನಾಗಿಸು’ ಎಂದ ರಾಜ.

‘ಅದು ಕೇವಲ ಮನುಷ್ಯರನ್ನು ತಿನ್ನುತ್ತದೆ. ಸಾತ್ವಿಕರನ್ನು ಮುಟ್ಟುವುದಿಲ್ಲ. ಅಧರ್ಮಿಗಳನ್ನು ಬಿಡುವುದಿಲ್ಲ. ಭಿಕ್ಷುಗಳ ಹಾಗೆ ವೇಷ ತೊಟ್ಟು ಪರಿವ್ರಾಜಕಿಯರ ಸಂಗ ಮಾಡುವವರನ್ನು, ಸಂತರಂತಿದ್ದು ತಮ್ಮ ಜ್ಞಾನಕ್ಕೆ ಹಣ ಪಡೆಯುವವರನ್ನು, ಯೌವನದಲ್ಲಿ ತಮ್ಮ ವೃದ್ಧ ತಂದೆ-ತಾಯಿಯರನ್ನು ಕಡೆಗಣಿಸಿದವರನ್ನು, ಗುರುಪತ್ನಿ, ಪರಪತ್ನಿಯರ ಮೇಲೆ ಮನಸ್ಸು ಮಾಡಿದವರನ್ನು ಹಾಗೂ ಮತ್ತೊಬ್ಬರಿಗೆ ಅಕಾರಣವಾಗಿ ನೋವು, ಹಿಂಸೆ ಮಾಡುವವರನ್ನೆಲ್ಲ ನನ್ನ ನಾಯಿ ತಿಂದು ಮುಗಿಸುತ್ತದೆ’ ಎಂದ ಇಂದ್ರ. ನಂತರ ರಾಜನಿಗೆ ಹೇಳಿ, ಈ ರಾಜ್ಯದಲ್ಲಿ ಧರ್ಮದ ನಡವಳಿಕೆಯನ್ನು ತರುವುದು ನಿನ್ನ ಜವಾಬ್ದಾರಿ ಎಂದು ಒಪ್ಪಿಸಿ ಮರಳಿ ಹೋದ. ನಾಯಿಯ ಹೆದರಿಕೆ ಜನರನ್ನು ಸರಿದಾರಿಗೆ ತಂದಿತು.

ನಮ್ಮ ಮನಃಪರಿವರ್ತನೆಯಿಂದ ಧರ್ಮಮಾರ್ಗಕ್ಕೆ ಎಳಸದೆ ಹೋದರೆ ಯಾವುದೋ ಭಯ ಬಂದು ಧರ್ಮಕ್ಕೆ ಮನಸ್ಸನ್ನು ತಿರುಗಿಸೀತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.