7

ಜವಾಬ್ದಾರಿ ಇಲ್ಲದ ಭ್ರಷ್ಟ ಅಧಿಕಾರಿ

ಗುರುರಾಜ ಕರಜಗಿ
Published:
Updated:

ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯವಾಳುತ್ತಿದ್ದಾಗ ಬೋಧಿಸತ್ವ ಬೆಲೆಕಟ್ಟುವ ಅಧಿಕಾರಿಯಾಗಿದ್ದ. ರಾಜ್ಯ ಕೊಳ್ಳುವ ಅಥವಾ ಮಾರುವ ಯಾವುದೇ ವಸ್ತುವಿಗೆ ಸರಿಯಾಗಿ ಬೆಲೆಕಟ್ಟುವ ಅಧಿಕಾರ ಅವನದು. ಆನೆ, ಕುದುರೆ, ರಥ, ರತ್ನಗಳು, ಚಿನ್ನ, ಮುತ್ತುಗಳು, ದವಸ, ಧಾನ್ಯಗಳು ಮುಂತಾದ ವಸ್ತುಗಳನ್ನು ಪರೀಕ್ಷಿಸಿ ಅವುಗಳ ಬೆಲೆಯನ್ನು ನಿರ್ಧರಿಸುತ್ತಿದ್ದ. ಅವನ ಮಾತನ್ನು ಎಲ್ಲರೂ ಒಪ್ಪುತ್ತಿದ್ದರು. ಯಾಕೆಂದರೆ ಆತ ನಿಷ್ಪಕ್ಷಪಾತಿಯಾಗಿ ವಸ್ತುವಿನ ಮಾಲಿಕರಿಗೆ ಸರಿಯಾದ ಬೆಲೆ ದೊರೆಯುವಂತೆ ನೋಡಿಕೊಳ್ಳುತ್ತಿದ್ದ. ಆದರೆ ರಾಜ ಜಿಪುಣ, ಮೋಸಗಾರ. ಅವನಿಗೆ ಒಳ್ಳೆಯ ವಸ್ತುಗಳು ಅತ್ಯಂತ ಕಡಿಮೆ ಬೆಲೆಗೆ ಸಿಗಬೇಕೆಂಬುವ ಆಸೆ. ಅದಕ್ಕೆ ಅವನು ಬೋಧಿಸತ್ವನನ್ನು ಕೆಲಸದಿಂದ ತೆಗೆದು ತಾನು ಹೇಳಿದಂತೆ ಕೇಳುವ ಮತ್ತೊಬ್ಬ ಲೋಭಿ ಹಾಗೂ ಮೂರ್ಖನನ್ನು ಬೆಲೆಕಟ್ಟುವವನ ಸ್ಥಾನಕ್ಕೆ ತಂದುಕೊಂಡ.

ಆ ದಡ್ಡ ಮನುಷ್ಯ ಯಾವುದೇ ವಸ್ತು ಬಂದರೂ ರಾಜನ ಮುಖವನ್ನು ನೋಡಿ ಅದರ ಬೆಲೆಯನ್ನು ತೀರ ಕೆಳಕ್ಕಿಳಿಸಿ ಹೇಳಿಬಿಡುತ್ತಿದ್ದ. ಅವನು ಆ ಪದವಿಯಲ್ಲಿ ನಿಯುಕ್ತನಾದ್ದರಿಂದ ಅವನು ಹೇಳಿದ ಬೆಲೆಯೇ ವಸ್ತುವಿನ ಬೆಲೆ. ಯಾರೂ ಗೊಣಗುವಂತಿಲ್ಲ. ಆ ಸಮಯಕ್ಕೆ ಒಬ್ಬ ಅರಬ್ಬೀ ದೇಶದವನು ಐನೂರು ಸುಂದರ ಕುದುರೆಗಳನ್ನು ಮಾರಲು ತಂದ. ಬೆಲೆಕಟ್ಟುವ ಅಧಿಕಾರಿ ಅವುಗಳನ್ನು ನೋಡಿದ. ಅವನಿಗೆ ಅವುಗಳ ಬೆಲೆ ಹೇಗೆ ತಿಳಿಯಬೇಕು? ಆದರೂ ದೃಢವಾಗಿ ಹೇಳಿದ, ಈ ಎಲ್ಲ ಕುದುರೆಗಳ ಒಟ್ಟು ಬೆಲೆ ಭತ್ತದ ಹುಲ್ಲಿನ ಒಂದು ಕಡ್ಡಿ. ವ್ಯಾಪಾರಿಯ ಎದೆ ಒಡೆದುಹೋಯಿತು. ರಾಜ ಅವನಿಗೆ ಭತ್ತದ ಹುಲ್ಲಿನ ಕಡ್ಡಿಯೊಂದನ್ನು ಕೊಡಿಸಿ ಎಲ್ಲ ಕುದುರೆಗಳನ್ನು ಅಶ್ವಶಾಲೆಗೆ ಕಳುಹಿಸಿಬಿಟ್ಟ. ಹೌಹಾರಿದ ವ್ಯಾಪಾರಿ ರಾತ್ರಿ ಬೋಧಿಸತ್ವನನ್ನು ಕಂಡು ಕಷ್ಟ ಹೇಳಿಕೊಂಡ.
ಬೋಧಿಸತ್ವ ಹೇಳಿದ, ಈ ಬೆಲೆ ಕಟ್ಟುವ ಅಧಿಕಾರಿ ಮೂರ್ಖ ಮಾತ್ರವಲ್ಲ ಮಹಾಭ್ರಷ್ಟ. ಅವನ ಬಳಿ ಹೋಗಿ ಅವನಿಗೆ ಲಂಚ ಕೊಡು. ಅದಿಲ್ಲದಿದ್ದರೆ ಅವನು ಏನೂ ಮಾಡುವುದಿಲ್ಲ. ನಂತರ ಈ ಭತ್ತದ ಹುಲ್ಲಿನ ಕಡ್ಡಿಯ ಬೆಲೆ ಎಷ್ಟು ಎಂದು ಕೇಳು. ಹಾಗೆಯೇ ಅದನ್ನು ನಾಳೆ ರಾಜನ ಮುಂದೆಯೇ ಹೇಳಲು ತಿಳಿಸು. ನಾನೂ ಅಲ್ಲಿಗೆ ಬರುತ್ತೇನೆ. ಲಂಚ ತಿಂದ ಈ ಮನುಷ್ಯ ಏನನ್ನೂ ಮಾಡಿಯಾನು. ಅದರಂತೆ ವ್ಯಾಪಾರಿ ಲಂಚಕೊಟ್ಟು ರಾಜನ ಮುಂದೆ ಹುಲ್ಲುಕಡ್ಡಿಯ ಬೆಲೆಯನ್ನು ಹೇಳಲು ಒಪ್ಪಿಸಿದ.

ಮರುದಿನ ರಾಜನ ದರ್ಬಾರಿನಲ್ಲಿ ಈ ವ್ಯಾಪಾರಿ, ಸ್ವಾಮೀ, ನಿನ್ನೆ ತಾವು ನನ್ನ ಐನೂರು ಕುದುರೆಗಳ ಬೆಲೆ ಭತ್ತದ ಹುಲ್ಲಿನ ಒಂದು ಕಡ್ಡಿ ಎಂದು ಹೇಳಿದಿರಿ. ಅದು ಸರಿ. ಆದರೆ ಆ ಹುಲ್ಲುಕಡ್ಡಿಯ ಬೆಲೆ ಎಷ್ಟು? ಎಂದು ಕೇಳಿದ. ಲಂಚ ತಿಂದು ಋಣದಲ್ಲಿ ಬಿದ್ದ ಅಧಿಕಾರಿ ರಾಜನನ್ನು ಕಂಡು ಗಾಬರಿಯಾಗಿ, ಆ ಹುಲ್ಲುಕಡ್ಡಿಯ ಬೆಲೆ ಸಮಗ್ರ ವಾರಾಣಸಿಯೇ ಎಂದುಬಿಟ್ಟ. ರಾಜ ಸಿಟ್ಟಿನಿಂದ ಸಿಂಹಾಸನದಿಂದ ಹಾರಿ ನೆಗೆದ. ಈ ಮೂರ್ಖ ಕುದುರೆಗಳಿಗಾಗಿ ಇಡೀ ದೇಶವನ್ನೇ ಮಾರಿಬಿಡುತ್ತಾನಲ್ಲ ಎಂದು ಅವನನ್ನು ಆ ಕ್ಷಣದಿಂದಲೇ ಕೆಲಸದಿಂದ ತೊಲಗಿಸಿ ಬೋಧಿಸತ್ವನನ್ನು ಆ ಸ್ಥಾನಕ್ಕೆ ನಿಯಮಿಸಿದ.

ಇಂದೂ ಇಂಥ ಬೆಲೆಕಟ್ಟುವ ಅಧಿಕಾರಿಗಳು ಎಲ್ಲೆಲ್ಲೂ ತುಂಬಿದ್ದಾರೆ. ತಮ್ಮ ಜೇಬು ಭರ್ತಿಯಾದರೆ ಸಾಕು ಯಾವ ಅನ್ಯಾಯಕ್ಕೂ ಹೇಸುವವರಲ್ಲ, ದೇಶವನ್ನು, ಅದರ ಮರ್ಯಾದೆಯನ್ನು ಹಾಳುಮಾಡಲು ಸಿದ್ಧರಾಗುತ್ತಾರೆ. ಆದರೆ ಅವರನ್ನು ಅಲ್ಲಿಯೇ ಶಿಕ್ಷಿಸಿ, ಹೊರಹಾಕುವ ಧೈರ್ಯವನ್ನು, ಕುಶಲತೆಯನ್ನು ಅವರನ್ನಾಳುವವರು ತೋರಿಯಾರೇ?

ಬರಹ ಇಷ್ಟವಾಯಿತೆ?

 • 15

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !