ಸೋಮವಾರ, ಜೂನ್ 14, 2021
23 °C

ಬೆರಗಿನ ಬೆಳಕು: ಮಾತ್ಸರ್ಯ, ಸೃಷ್ಟಿಯ ಉಪಾಯ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಕೈಕೇಯಿ ಸತ್ಯಭಾಮೆಯರಂಶವಿರದ ಪೆಣ್ |

ಲೋಕದೊಳಗಿರಳು; ಬೆಳೆವುದು ಲೋಕವವರಿಂ ||
ಸಾಕಿ ಸಲಹುವ ಮತ್ಸರವದು ಸೃಷ್ಟಿಯುಪಾಯ |
ಬೇಕದಕೆ ನಗು ಸಹನೆ – ಮಂಕುತಿಮ್ಮ || 418 ||

ಪದ-ಅರ್ಥ: ಸತ್ಯಭಾಮೆಯರಂಶವಿರದ=
ಸತ್ಯಭಾಮೆಯರ+ಅಂಶ+ಇರದ, ಲೋಕವವರಿಂ=ಲೋಕವು+ಅವರಿಂ(ಅವರಿಂದ),
ಸೃಷ್ಟಿಯುಪಾಯ=ಸೃಷ್ಟಿಯ+ಉಪಾಯ.

ವಾಚ್ಯಾರ್ಥ: ಕೈಕೇಯಿ, ಸತ್ಯಭಾಮೆಯರ ಅಂಶವಿರದ ಹೆಣ್ಣು ಲೋಕದಲ್ಲಿ ಇರಲಾರಳು. ಲೋಕ ಬೆಳೆಯುವುದೇ ಅವರಿಂದ. ಸಾಕಿ, ಸಲಹುವ ಈ ಮತ್ಸರ, ಸೃಷ್ಟಿಯ ಉಪಾಯ. ಇಂಥ ಗುಣಗಳನ್ನು ಕಂಡಾಗ ನಗು, ಸಹನೆ ಬೇಕು.

ವಿವರಣೆ: ಪ್ರಪಂಚದಲ್ಲಿ ಇದೊಂದು ಅದ್ಭುತ. ಹುಡುಗಿಯಾಗಿದ್ದವಳು, ತನಗಾಗಿ ಏನೆಲ್ಲ ಕನಸುಗಳನ್ನು ಕಟ್ಟಿಕೊಂಡವಳು, ಅವುಗಳನ್ನು ಸಾಕಾರಗೊಳಿಸಿಕೊಳ್ಳಲು ಹೋರಾಡಿದವಳು, ಮದುವೆಯಾಗಿ ಒಂದು ಮಗುವಾದೊಡನೆ ಬದಲಾಗಿ ಬಿಡುತ್ತಾಳೆ. ಈಗ ಆಕೆಯ ಕನಸುಗಳು ಮಗುವಿನ ಬೆಳವಣಿಗೆಯೊಂದಿಗೆ ಬೆಸೆದುಕೊಂಡಿವೆ! ಆಕೆಯ ಜಗತ್ತು ಈಗ ಅವಳ ಮಗು. ಮಗುವಿನೊಂದಿಗೆ ನಗುತ್ತಾಳೆ, ಅಳುತ್ತಾಳೆ. ಮಗು ಏನನ್ನಾದರೂ ಸಾಧಿಸಿದರೆ, ಅದಕ್ಕಿಂತ ಹೆಚ್ಚು ಸಂತೋಷ ಪಡುತ್ತಾಳೆ, ತನ್ನ ಕುಡಿಗೆ ಸ್ವಲ್ಪ ನೋವಾದರೂ ಅದಕ್ಕಿಂತ ನೂರು ಪಟ್ಟು ನೋವಿನಲ್ಲಿ ಬೇಯುತ್ತಾಳೆ. ತನ್ನ ಅಪೇಕ್ಷೆಗಳನ್ನು ನಗುನಗುತ್ತ ದೂರಕ್ಕೆ ತಳ್ಳಿ, ಮಗುವಿನ ಅಪೇಕ್ಷೆಗಳನ್ನು ಪೂರೈಸಲು ಧಾವಿಸುತ್ತಾಳೆ. ಮಗುವಿಗೋಸ್ಕರ ಏನನ್ನಾದರೂ ಮಾಡಲು ಸಿದ್ಧಳಾಗುತ್ತಾಳೆ.

ಹಾಗಾದರೆ ತಾಯಂದಿರು ಸ್ವಾರ್ಥಿಗಳೇ? ತನ್ನ ಕುಡಿಯನ್ನು ಸಾಕುವ, ರಕ್ಷಿಸುವ, ಅದರ ಬೆಳವಣಿಗೆಯನ್ನು ಕಾಣುವ ಮಮಕಾರವನ್ನು ಸ್ವಾರ್ಥ ಎನ್ನಲಾದೀತೇ? ಕಗ್ಗದಲ್ಲಿ ಇಬ್ಬರು ಮಹಿಳೆಯರ ಪ್ರಸ್ತಾಪವಿದೆ. ಮೊದಲನೆಯದು ಕೈಕೇಯಿ. ನಾವು ಆಕೆಯನ್ನು ಖಳನಾಯಕಿಯ ಸ್ಥಳದಲ್ಲಿ ನಿಲ್ಲಿಸಿದ್ದೇವೆ. ನಾವು ಆಕೆಯ ದೃಷ್ಟಿಯಲ್ಲಿ, ಆಕೆಯ ಮನಸ್ಸಿನಲ್ಲಿ ಹೊಕ್ಕು ನೋಡಿದರೆ, ಆಕೆಯ ಸಂಕಟ, ತಳಮಳ ಅರ್ಥವಾದೀತು. ತಮ್ಮ ಮಕ್ಕಳು ತರಗತಿಯಲ್ಲಿ ಮೊದಲ ಸ್ಥಾನ ಪಡೆಯಲಿ ಎಂತಲೋ, ಒಳ್ಳೆಯ ಕೆಲಸ ಸಿಗಲಿ ಎಂತಲೋ ತಾಯಂದಿರು ಒದ್ದಾಡುವುದಿಲ್ಲವೆ? ಹಾಗೆಂದ ಮಾತ್ರಕ್ಕೆ ಅವರಿಗೆ ಉಳಿದ ಮಕ್ಕಳ ಬಗ್ಗೆ ದ್ವೇಷವಿದೆ ಎಂದಲ್ಲ. ಅತ್ಯಂತ ಉತ್ತಮವಾದದ್ದು ತನ್ನ ಮಗುವಿಗೆ ದೊರಕಲಿ ಎಂಬ ತಟವಟ. ಈ ಸಣ್ಣಸಣ್ಣ ಅವಕಾಶಗಳಿಗೇ ಇಷ್ಟು ಸ್ವಾರ್ಥ ಇರುವುದಾದರೆ ಕೈಕೇಯಿಯ ಮುಂದಿರುವ ಅವಕಾಶ ಯಾವುದು? ಅದು ಯಾವುದೋ ನೌಕರಿಯಲ್ಲ, ಅಯೋಧ್ಯೆಯ ಚಕ್ರವರ್ತಿ ಪದವಿ! ಪಣ ತುಂಬ ದೊಡ್ಡದು. ಅದು ಜೀವನಮಾನದಲ್ಲೇ ಅತ್ಯಂತ ದೊಡ್ಡ ಅವಕಾಶ. ಅಂದು ತಪ್ಪಿದರೆ ಭರತ ಮಾತ್ರವಲ್ಲ, ಅವನ ವಂಶಕ್ಕೇ ರಾಜಪದವಿ ತಪ್ಪಿ ಹೋಗುತ್ತದೆ. ಪಣ ದೊಡ್ಡದಾದಷ್ಟೂ, ಆಕರ್ಷಣೆಯ ಒತ್ತಡ ಹೆಚ್ಚು. ಕೈಕೇಯಿಯನ್ನು ಅಸಹಾಯಳನ್ನಾಗಿ ಮಾಡಿದ್ದು ಮಗನ ಮೇಲಿನ ಮಮತೆ. ಸತ್ಯಭಾಮೆಗೂ, ಕೃಷ್ಣ ಕೇವಲ ತನ್ನವನಾಗಿರಬೇಕು ಎಂಬ ಅಪೇಕ್ಷೆ. ಆಕೆಯ ಸವತಿ ಮಾತ್ಸರ್ಯ ಈ ಹಂಬಲಿಕೆಯ ಫಲಶೃತಿ.

ಕಗ್ಗ, ಈ ಮಾತ್ಸರ್ಯವೆಂಬ ಗುಣವನ್ನು ಸಹನೆಯಿಂದ ಗಮನಿಸಲು ಹೇಳುತ್ತದೆ. ಇಂದು ಪ್ರಪಂಚ ನಡೆಯುತ್ತಿರುವುದು ಈ ಪರಿಯ ಒಲುಮೆಯ ಸ್ವಾರ್ಥದಿಂದಲೇ. ಯಾರು, ಯಾರಿಗೂ ಸಂಬಂಧವಿಲ್ಲದಂತೆ, ಬದುಕಿದರೆ ಪ್ರಪಂಚ ಬೆಳೆಯಲಾರದು. ಈ ಮತ್ಸರವನ್ನು ಸೃಷ್ಟಿ, ಉಪಾಯವಾಗಿ ಮನುಷ್ಯರ ಹೃದಯದಲ್ಲಿಟ್ಟಿದೆ. ಅದನ್ನು ನಗೆಯೊಂದಿಗೆ, ಸಹಾನುಭೂತಿಯಿಂದ ನೋಡೋಣ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.