ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸಮಸ್ಯೆಯ ಪರಿಹಾರ

Last Updated 24 ಫೆಬ್ರುವರಿ 2021, 17:06 IST
ಅಕ್ಷರ ಗಾತ್ರ

ಮಿಥಿಲೆಯ ರಾಜ ವಿದೇಹನಿಗೆ ಮಹೋಷಧಕುಮಾರನ ಬಗ್ಗೆ ಸಂಪೂರ್ಣ ತೃಪ್ತಿಯಾಗಿ, ಅವನು ಮಹಾಜ್ಞಾನಿ, ಬೋಧಿಸತ್ವ ಎಂದು ತಿಳಿದಿದ್ದರೂ ಅಮಾತ್ಯರಾದ ಸೆನಕಪಂಡಿತ ಮುಂತಾದವರು ಅವನನ್ನು ಮತ್ತಷ್ಟು ಪರೀಕ್ಷಿಸಬೇಕೆಂದು ಬಯಸುತ್ತಿದ್ದರು. ಅವರ ಪರೀಕ್ಷೆಗಳಾದರೂ ಮುಗಿದುಹೋಗಲಿ ಎಂದು ರಾಜ ಕಾಯುತ್ತಿದ್ದ. ಪಂಡಿತರು ಮತ್ತೊಂದು ಪರೀಕ್ಷೆಯನ್ನು ಯೋಜಿಸಿದರು.

ಮಹೋಷಧಕುಮಾರನಿದ್ದ ನಗರಕ್ಕೆ ವಿದೇಹ ರಾಜನಿಂದ ಒಂದು ಸಂದೇಶ ಹೋಯಿತು. ‘ರಾಜರಿಗೆ ನಿಮ್ಮ ನಗರದ ಬುದ್ಧಿಶಾಲಿಗಳಿಂದ ತಯಾರಾದ ಚಿತ್ರಾನ್ನವನ್ನು ತಿನ್ನಬೇಕೆಂಬ ಆಸೆಯಾಗಿದೆ. ಆದರೆ ಅದನ್ನು ಸಿದ್ಧಪಡಿಸುವುದಕ್ಕೆ ಕೆಲವು ನಿಬಂಧನೆಗಳಿವೆ. ಅವುಗಳನ್ನು ಮೀರತಕ್ಕದ್ದಲ್ಲ. ಮೀರಿದ್ದು ಕಂಡು ಬಂದರೆ ಇಡೀ ನಗರದ ಎಲ್ಲರಿಗೂ ಶಿಕ್ಷೆಯಾಗುತ್ತದೆ. ಈ ಚಿತ್ರಾನ್ನವನ್ನು ಮಾಡುವುದಕ್ಕೆ ಅಕ್ಕಿಯನ್ನು ಬಳಸಬಾರದು. ಅನ್ನ ಮಾಡಲು ನೀರು ಹಾಕಬಾರದು. ಒರಳಿನಲ್ಲಿ ಆಡಿಸಬಾರದು, ಒಲೆಯ ಮೇಲಿಟ್ಟು ಬೇಯಿಸಬಾರದು, ಬೆಂಕಿಯಿಂದ ಬೇಯಿಸಬಾರದು, ಸೌದೆಯಿಂದ ಬೇಯಿಸಬಾರದು, ಅನ್ನ ಬೇಯುವುದನ್ನು ಯಾರೂ ನೋಡಬಾರದು, ಹೆಂಗಸು ಅಡುಗೆ ಮಾಡಬಾರದು ಮತ್ತು ಗಂಡಸೂ ಅಡುಗೆ ಮಾಡಬಾರದು. ಇದನ್ನು ಸಿದ್ಧಪಡಿಸಿದ ಮೇಲೆ ರಸ್ತೆಯಲ್ಲಿ ತರಬಾರದು. ಇದರಲ್ಲಿ ಯಾವುದೇ ಕರಾರನ್ನು ತಪ್ಪಿದರೆ ನಗರಕ್ಕೆ ತಲಾ ಸಾವಿರ ಹಣದಂತೆ ದಂಡ ವಿಧಿಸಲಾಗುವುದು. ಎಚ್ಚರ’.

ಹೊಸ ಪರೀಕ್ಷೆಯನ್ನು ಕೇಳಿ ಜನರು ಗಾಬರಿಯಾದರು. ಈ ತರಹದ ಕರಾರುಗಳಲ್ಲಿ ಚಿತ್ರಾನ್ನ ಮಾಡುವುದು ಸಾಧ್ಯವೇ? ಮಾಡದಿದ್ದರೆ ರಾಜಾಜ್ಞೆಯನ್ನು ಪಾಲಿಸದಿದ್ದುದಕ್ಕೆ ಶಿಕ್ಷೆ. ಆದರೆ ಮಾಡುವುದು ಹೇಗೆ? ಬುದ್ಧಿವಂತರೆಲ್ಲ ಸೇರಿ ಚಿಂತಿಸಿ ತಲೆಕೆಡಿಸಿಕೊಂಡರು.ಪರಿಹಾರದೊರೆಯಲಿಲ್ಲ. ಮತ್ತೆ ಕೊನೆಗೆ ಮಹೋಷಧಕುಮಾರನ ಕಡೆಗೆ ಎಲ್ಲರೂ ನಡೆದರು. ಆತ ಎಲ್ಲ ಕರಾರುಗಳನ್ನು ಕೇಳಿಸಿಕೊಂಡ. ಪ್ರತಿಯೊಂದು ಕರಾರಿನ ಬಗ್ಗೆಯೂ ಒಂದೊಂದು ಕ್ಷಣ ಚಿಂತಿಸಿದ. ಅವನಿಗೊಂದು ಖಚಿತವಾದ ನಂಬಿಕೆ ಇತ್ತು. ಪರಿಹಾರವಿಲ್ಲದ ಸಮಸ್ಯೆಯೇ ಇಲ್ಲ. ಯಾವಾಗಲೂ ಪರಿಹಾರವುಸಮಸ್ಯೆಯಜೊತೆಗೇ ಅಂಟಿಕೊಂಡಿರುತ್ತದೆ. ಸ್ವಲ್ಪ ತಾಳ್ಮೆಯಿಂದ ಮನದ ಸ್ಥಿಮಿತತೆಯಿಂದ ಗಮನಿಸಿದಾಗ, ಪರಿಹಾರವನ್ನು ಸಮಸ್ಯೆಯಿಂದ ಬೇರ್ಪಡಿಸಬಹುದು.

ಆತ ಕೆಲವು ಕೆಲಸಗಾರರನ್ನು ಕರೆದು ಹೇಳಿದ, ‘ನೋಡಿ, ರಾಜ ಅಕ್ಕಿಯನ್ನು ಬಳಸಬಾರದೆಂದು ತಿಳಿಸಿದ್ದಾನೆ. ಆದ್ದರಿಂದ ಅಕ್ಕಿಯನ್ನು ಬಿಟ್ಟು ಸಿರಿಧಾನ್ಯವಾದ ನವಣಕ್ಕಿಯನ್ನು ಬಳಸಿ. ನೀರು ಹಾಕುವ ಬದಲು ಅನ್ನ ಮಾಡಲು ಬೇಕಾಗುವಷ್ಟು ಹಿಮಗಡ್ಡೆಗಳನ್ನು ಮಡಕೆಗೆ ಹಾಕಿ. ಒಲೆಯ ಮೇಲೆ, ಬೆಂಕಿಯಿಂದ, ಸೌದೆಯಿಂದ ಬೇಯಿಸಬಾರದಾದ್ದರಿಂದ, ನೆಲದಲ್ಲಿ ಒಂದು ಗುಂಡಿಯನ್ನು ತೆಗೆಯಿರಿ, ಅದರ ಮಧ್ಯದಲ್ಲಿ ಮಡಕೆಯನ್ನು ಇಟ್ಟು ನವಣಕ್ಕಿಯೊಂದಿಗೆ ಚಿತ್ರಾನ್ನ ರುಚಿಯಾಗಲು ಬೇಕಾದ ಎಲ್ಲ ಪದಾರ್ಥಗಳನ್ನು ಕಲ್ಲಿನ ಕಟ್ಟೆಯ ಮೇಲೆ ಅರೆದು ಹಾಕಿ. ಗಟ್ಟಿಯಾದ ಮುಚ್ಚಳವನ್ನು ಬಿಗಿದು, ಅದರ ಸುತ್ತಲೂ ಚೆನ್ನಾಗಿ ಕಾದ ಮರಳನ್ನು ಸುರಿದು ಮುಚ್ಚಿಬಿಡಿ. ನೆಲದ ಬಿಸಿ, ಮರಳಿನ ಬಿಸಿಗೆ ಅನ್ನ ಚೆನ್ನಾಗಿ ಬೇಯುತ್ತದೆ. ಅಡುಗೆ ಮಾಡುವುದಕ್ಕೆ ಒಂದಿಬ್ಬರು ನಪುಂಸಕರನ್ನು ನೇಮಿಸಿ. ಅನ್ನವಾದ ಮೇಲೆ ಅವರು ಅದನ್ನು ರಾಜಮಾರ್ಗದಿಂದ ತೆಗೆದುಕೊಂಡು ಹೋಗದೆ ಕಾಡಿನ ಮೂಲಕ ಹೋಗುವಂತೆ ಮಾಡಿ’. ಅವರು ಅದರಂತೆಯೇ ಮಾಡಿದರು. ರಾಜನಿಗೆ ಇದು ಮಹೋಷಧಕುಮಾರನ ಬುದ್ಧಿವಂತಿಕೆಯೇ ಎಂದು ಅರಿವಾಯಿತು. ಮತ್ತೆ ಅಮಾತ್ಯರಿಗೆ ನಿರಾಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT