ಬುಧವಾರ, ಅಕ್ಟೋಬರ್ 28, 2020
28 °C

ಬೆರಗಿನ ಬೆಳಕು: ಪರಸ್ಪರಾವಲಂಬನ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

Food chain

ಕ್ಷೀರಾನ್ನದಿಂದೆ ನರಪುಷ್ಟಿ; ಹಸುವಿಂ ಹಾಲು |
ಪೈರು ಬೆಳಸಿಂದೆ ಹಸು; ಪೈರುಗಳ್ಗೂರ ||
ಸಾರದಿಂ ಪುಷ್ಟಿ; ಇಂತುಣಿಸುಮುಂಬನುಮೊಂದು |
ಪಾಲೇನು? ಪೇಲೇನು ? – ಮಂಕುತಿಮ್ಮ || 341 ||

ಪದ-ಅರ್ಥ: ಕ್ಷೀರಾನ್ನ=ಹಾಲನ್ನ, ನರಪುಷ್ಟಿ= ನರರ ಶಕ್ತಿ, ಪೈರುಗಳ್ಗೂರಸಾರದಿಂ=ಪೈರುಗಳ್ಗೆ (ಪೈರುಗಳಿಗೆ)+ಊರಸಾರದಿಂ(ಊರಿನ ಕೊಳಚೆಯ ಸಾರದಿಂದ), ಇಂತುಣಿಸುಮುಂಬನುಮೊಂದು=ಇಂತು+ಉಣಿಸುಂ+ಉಂಬನುಂ+ಒಂದು, ಪೇಲೇನು=ಮಲವೇನು

ವಾಚ್ಯಾರ್ಥ: ಹಾಲು ಅನ್ನದಿಂದ ನರರಿಗೆ ಶಕ್ತಿ ದೊರೆಯುತ್ತದೆ, ಈ ಹಾಲು ದೊರಕುವುದು ಹಸುವಿನಿಂದ. ಹಸುವಿಗೆ ಶಕ್ತಿ ಬರುವುದು ಅದು ತಿನ್ನುವ ಪೈರು, ಹುಲ್ಲುಗಳಿಂದ. ಆ ಪೈರುಗಳಿಗೆ ಶಕ್ತಿ ನೀಡುವುದು ಊರ ಕೊಳಚೆಯ ನೀರು. ಹೀಗೆ ಒಂದರಿಂದ ಮತ್ತೊಂದಕ್ಕೆ ಶಕ್ತಿ. ಹೀಗಿರುವಾಗ ಹಾಲೇನು, ಮಲವೇನು?

ವಿವರಣೆ: ಇದು ಪರಸ್ಪರಾವಲಂಬನೆಯ ಉತ್ತಮ ಉದಾಹರಣೆಯಷ್ಟೇ ಅಲ್ಲ, ಆಹಾರ ಸರಪಳಿ ಎಂಬ ವೈಜ್ಞಾನಿಕ ತತ್ವವನ್ನು ತಿಳಿಸುವ ಮಾದರಿಯಾಗಿದೆ.

ಆಹಾರ ಸರಪಳಿ ಎಂಬ ತತ್ವವನ್ನು ಮೊದಲ ಬಾರಿಗೆ ಒಂಭತ್ತನೇ ಶತಮಾನದಲ್ಲಿ ಆಫ್ರಿಕನ್ ಅರಬ್ ವಿಜ್ಞಾನಿ ಮತ್ತು ತತ್ವಜ್ಞಾನಿ ಅಲ್ ಜಹೀಜ್ ಪರಿಚಯ ಮಾಡಿದರು. ಆದರೆ ಅದು ಪ್ರಪಂಚಕ್ಕೆ ಪರಿಚಿತವಾದದ್ದು 1927 ರಲ್ಲಿ ಚಾರ್ಲ್ಸ್ ಎಲ್ಟನ್ ರವರ “Animal Ecology” ಪುಸ್ತಕದ ಮೂಲಕ. ಪ್ರಪಂಚದ ಸೃಷ್ಟಿಯೇನೋ ಆಯಿತು. ಅದು ತನ್ನಷ್ಟಕ್ಕೆ ತಾನೇ ನಡೆಯಬೇಕಲ್ಲವೆ? ಪ್ರತಿ ಬಾರಿಯೂ ಹೊರಗಿನಿಂದ ಶಕ್ತಿಯನ್ನು ನೀಡಿ ನಡೆಸುವುದು ಅಸಾಧ್ಯ. ಆದ್ದರಿಂದ ಅದು ತನ್ನಷ್ಟಕ್ಕೆ ತಾನೇ ನಡೆಯುವಂತೆ, ತನ್ನ ಶಕ್ತಿಯನ್ನು ಉತ್ಪಾದಿಸಿಕೊಳ್ಳುವಂತೆ ಇರಬೇಕಾದದ್ದು ಅವಶ್ಯ. ಅದರ ಫಲವಾಗಿಯೇ ಬಂದದ್ದು ಆಹಾರ ಸರಪಳಿ. ಒಂದು ಪ್ರಾಣಿ ತನ್ನ ಅವಶ್ಯಕತೆಯನ್ನು ಮತ್ತೊಂದು ಪ್ರಾಣಿಯಿಂದ ಅಥವಾ ವಸ್ತುವಿನಿಂದ ತೀರಿಸಿಕೊಳ್ಳುವುದು. ಹೀಗಾದಾಗ ಶಕ್ತಿ ಒಂದು ಕೊಂಡಿಯಿಂದ ಮತ್ತೊಂದಕ್ಕೆ ರವಾನೆಯಾಗುತ್ತದೆ.

ದವಸಧಾನ್ಯಗಳನ್ನು ಇಲಿ ತಿನ್ನುತ್ತವೆ, ಸೊಳ್ಳೆ ಕೀಟಗಳನ್ನು ಹಲ್ಲಿ ತಿನ್ನುತ್ತದೆ. ಅವೆರಡನ್ನು ಹಾವು ನುಂಗುತ್ತದೆ. ಹಾವನ್ನು ಹದ್ದು ತಿನ್ನುತ್ತದೆ. ಅಧ್ಯಾತ್ಮಿಕವಾಗಿ ನೋಡಿದರೆ ಸೃಷ್ಟಿ ಮಾಡಿದ ಭಗವಂತ ಪ್ರತಿಯೊಂದು ಜೀವಿಗೆ ದಕ್ಕಬಹುದಾದ ಆಹಾರವನ್ನು ಅಲ್ಲಲ್ಲಿಯೇ ಇಟ್ಟಿದ್ದಾನೆ. ಅದಕ್ಕೇ ಕನಕದಾಸರು ಹಾಡಿದರು.

ಅಡವಿಗೊಳಗಾಡುವ ಮೃಗಪಕ್ಷಿಗಳಿಗೆಲ್ಲ |
ಅಡಿಗಡಿಗೆ ಆಹಾರವಿತ್ತವರು ಯಾರೊ ? ||
ಹಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ |
ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ ||
ತಲ್ಲಣಿಸದಿರು ಕಂಡ್ಯ ತಾಳು ಮನವೆ

ಈ ಕಗ್ಗ ಹೇಳುವುದು ಇದೇ ಮಾತನ್ನು. ಹಾಲು-ಅನ್ನದಿಂದ ಮನುಷ್ಯನಿಗೆ ಶಕ್ತಿ. ಹಸುವಿನಿಂದ ಹಾಲು. ಹಸುವಿಗೆ ಹುಲ್ಲಿನಿಂದ ಶಕ್ತಿ. ಹುಲ್ಲು ಬೆಳೆಯುವುದು ಊರ ಕೊಳಚೆಯ ನೀರಿನಿಂದ. ಹೀಗೆ ಒಂದರಿಂದ ಒಂದರ ಪುಷ್ಟಿ. ಹೀಗೆಯೇ ಸರಪಳಿ ಸಾಗುತ್ತದೆ. ಹೀಗೆಯೇ ಪರಸ್ಪರಾವಲಂಬನದಿಂದ ಪ್ರಪಂಚ ನಡೆಯುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.