ಬುಧವಾರ, ಜುಲೈ 28, 2021
20 °C

ಬೆರಗಿನ ಬೆಳಕು: ಮಹೋಷಧಕುಮಾರನ ಬುದ್ಧತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹೋಷಧಕುಮಾರ ಈಗ ಸೇನಾಪತಿಯಾಗಿ, ಅಪಾರ ಧನಕ್ಕೆ ಒಡೆಯನಾದ ಮೇಲೆ ಅವನಿಗೊಂದು ಯೋಚನೆ ಬಂತು. ಈ ರಾಜ ತುಂಬ ಸಂತೋಷದಿಂದ ಏನೇನೋ ಸವಲತ್ತುಗಳನ್ನು ಕೊಟ್ಟ. ಮತ್ತೆ ಮುಂದೆ ಅವುಗಳನ್ನು ಕಿತ್ತುಕೊಳ್ಳಲೂಬಹುದು. ರಾಜರದು ಕ್ಷಣ ಚಿತ್ತ, ಕ್ಷಣ ಪಿತ್ತ. ನಿಜವಾಗಿಯೂ ತನ್ನ ಬಗ್ಗೆ ರಾಜನ ಅಭಿಪ್ರಾಯವೇನು ಎಂಬುದನ್ನು ತಿಳಿಯಲು ಕುಮಾರ, ಪರಿವ್ರಾಜಿಕೆಯ ಸಹಾಯ ಪಡೆದ. ‘ಆರ್ಯೆ, ರಾಜ ನನಗೆಲ್ಲ ನೀಡಿದ್ದಾನೆ. ಆದರೆ ನನ್ನ ಬಗ್ಗೆ ರಾಜನ ಮನಸ್ಸು ನಿಜವಾಗಿ ಹೇಗಿದೆ ಎಂಬುದನ್ನು ತಿಳಿದು ಹೇಳುತ್ತೀಯಾ?’ ಎಂದು ಕೇಳಿದ. ಆಗಲಿ ಎಂದು ಆಕೆ ಒಪ್ಪಿಕೊಂಡಳು.

ಮರುದಿನ ಊಟವಾದ ನಂತರ ರಾಜನ ಮುಂದೆ ಬಂದು ಕುಳಿತುಕೊಂಡಳು. ರಾಜ ಆಕೆಗೆ ನಮಸ್ಕಾರ ಮಾಡಿದ. ಆಗ ಪರಿವ್ರಾಜಿಕೆ, ‘ಮಹಾರಾಜಾ, ನಾನು ನಿನ್ನ ಹತ್ತಿರ ಏಕಾಂತದಲ್ಲಿ ಮಾತನಾಡಬೇಕು’ ಎಂದಳು. ತಕ್ಷಣ ರಾಜ, ಮಂದಿರದಲ್ಲಿದ್ದ ಎಲ್ಲರನ್ನೂ ಹೊರಗೆ ಕಳುಹಿಸಿ, ‘ಈಗ ಹೇಳಿ’ ಎಂದ. ಪರಿವ್ರಾಜಿಕೆ, ‘ರಾಜಾ, ನಿನಗೊಂದು ಪ್ರಶ್ನೆ ಕೇಳುತ್ತೇನೆ. ವಿಚಾರ ಮಾಡಿ ಉತ್ತರಕೊಡು’ ಎಂದಳು. ನಂತರ, ‘ಒಂದು ಉಗ್ರವಾದ ಸಮುದ್ರದಲ್ಲಿ ಒಂದು ನೌಕೆ ಹೊಯ್ದಾಡುತ್ತಿದೆ. ಅದರಲ್ಲಿ ನಿಮ್ಮ ತಾಯಿ ತಲತಲಾದೇವಿ, ನಿಮ್ಮ ಪತ್ನಿ ನಂದಾದೇವಿ, ಒಬ್ಬ ಪ್ರಮುಖ ಮಂತ್ರಿ, ಒಬ್ಬ ಆಪ್ತ ಮಿತ್ರ, ಪುರೋಹಿತ, ಮಹೋಷಧಕುಮಾರ ಮತ್ತು ನೀನು ಇದ್ದೀರಿ. ಆಗ ಒಂದು ಮಹಾರಾಕ್ಷಸ ಬಂದು ನರಬಲಿ ಕೇಳುತ್ತದೆ. ನೀನು ಯಾವ ಕ್ರಮದಲ್ಲಿ ಅವರನ್ನು ಬಲಿ ಕೊಡುತ್ತೀ? ಒಬ್ಬನನ್ನು ಮಾತ್ರ ರಾಕ್ಷಸ ಬಿಟ್ಟು ಬಿಡುತ್ತದೆ’ ಎಂದು ಒಗಟನ್ನು ಹೇಳಿದಳು.

ರಾಜ ಒಂದು ಕ್ಷಣ ಕಣ್ಣು ಮುಚ್ಚಿ ಯೋಚಿಸಿ ಹೇಳಿದ, ‘ಮೊದಲು ತಾಯಿಯನ್ನು ಬಲಿಕೊಡುತ್ತೇನೆ, ಆನಂತರ ಹೆಂಡತಿ, ಮಂತ್ರಿ, ಮಿತ್ರ, ಪುರೋಹಿತರನ್ನು ಕೊಟ್ಟು ಆರನೆಯನವನಾಗಿ ನನ್ನನ್ನು ಬಲಿಕೊಡುತ್ತೇನೆ. ಮಹೋಷಧಕುಮಾರನನ್ನು ಉಳಿಸಿಕೊಳ್ಳುತ್ತೇನೆ’ ಎಂದ. ಪರಿವ್ರಾಜಿಕೆ ಆಶ್ಚರ್ಯದಿಂದ ಕೇಳಿದಳು, ‘ನಿಮಗೆ ಜನ್ಮಕೊಟ್ಟ ತಾಯಿ, ಜನ್ಮ ಸಂಗಾತಿ ಹೆಂಡತಿ, ಮಂತ್ರಿ, ಮಿತ್ರ, ಪುರೋಹಿತರಿಗಿಂತ, ನಿಮಗಿಂತ ಈ ಮಹೋಷಧಕುಮಾರ ಯಾಕೆ ಮುಖ್ಯನಾದ?’. ರಾಜನ ಉತ್ತರ ಅದ್ಭುತವಾಗಿತ್ತು. ‘ಆರ್ಯೆ, ನನ್ನ ತಾಯಿ ಜೀವನವನ್ನು ಸಂಪೂರ್ಣವಾಗಿ ಭೋಗಿಸಿದವಳು. ಅವಳೊಂದು ಮಾಗಿದ ಹಣ್ಣು. ಆದರೆ ಅವಳಲ್ಲಿ ತಾನಿನ್ನೂ ತರುಣಿಯಂತೆಯೇ ಇರಬೇಕೆಂಬ ಆಸೆ ಅತಿಯಾಗಿದೆ. ನನ್ನ ಹೆಂಡತಿಗೆ ಕಾಮವಾಸನೆ ಪ್ರಬಲವಾದದ್ದು. ಆಕೆ ಅಪೇಕ್ಷಿಸುವ ವಸ್ತುಗಳಿಗೆ ಮಿತಿಯೇ ಇಲ್ಲ. ನನ್ನ ಮಂತ್ರಿ ದೇಶಕ್ಕಾಗಿ ದುಡಿದಿದ್ದಾನೆ, ಆದರೆ ತನ್ನಿಂದಲೇ ರಾಜ್ಯವೆಂದು ತಿಳಿದು ಕೆಲವೊಮ್ಮೆ ನನ್ನನ್ನೇ ಉಪೇಕ್ಷಿಸುತ್ತಾನೆ. ನನ್ನ ಮಿತ್ರ, ಮಿತ್ರತ್ವವನ್ನು ಸಲುಗೆಯಿಂದ ಭಾವಿಸಿ, ರಾಜತ್ವವನ್ನು ಕಡೆಗಣಿಸುತ್ತಾನೆ. ಪುರೋಹಿತನಿಗೆ ಆತ ಪಡೆದ ವಿದ್ಯೆಯೇ ವೈರಿಯಾಗಿದೆ. ಅವನ ಅಹಂಕಾರದ ಕೊಡ ತುಂಬಿದೆ. ನನ್ನಲ್ಲೂ ಅನೇಕ ದೋಷಗಳಿವೆ. ನಾನು ವಿದೇಹ ರಾಜನನ್ನು ಕೊಲ್ಲಲು ಬಯಸಿದ್ದೆ. ಆದರೆ ಮಹೋಷಧಕುಮಾರನಲ್ಲಿ ಯಾವ ದೋಷವೂ ಇಲ್ಲ. ಅವನಿಗೆ ರಾಜ್ಯವನ್ನು ಆಳುವ ಆಸೆ ಇಲ್ಲ. ನಾನು ಸತ್ತರೂ ಆತ ನನ್ನ ಮಕ್ಕಳನ್ನು ಕೈ ಹಿಡಿದು ನಡೆಸಿ ರಾಜ್ಯವನ್ನು ಸುರಕ್ಷಿತ ಮಾಡುತ್ತಾನೆ. ಆದ್ದರಿಂದ ಆತ ಉಳಿಯಬೇಕು’. ಈ ಮಾತನ್ನು ಮಹೋಷಧಕುಮಾರನಿಗೆ ಹೇಳಿದಾಗ ಆತ ತನ್ನ ಬುದ್ಧತ್ವನ್ನು ಪ್ರಕಟಿಸಿದ. ಅಲ್ಲಿಗೆ ಮಹೋಷಧ ಜಾತಕ ಮುಗಿಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು