7

ಎಂದಿಗೂ ಸುಖನೀಡದ ದುರಾಸೆ

ಗುರುರಾಜ ಕರಜಗಿ
Published:
Updated:

ಅನೇಕ ಕಲ್ಪಗಳ ಹಿಂದೆ ಬೋಧಿಸತ್ವ ವ್ಯಾಪಾರಿಯಾಗಿ ಹುಟ್ಟಿದ. ಅದೇ ಸಮಯದಲ್ಲಿ ಸೇರಿವ ಎಂಬ ಹೆಸರಿನ ಮತ್ತೊಬ್ಬ ಲೋಭಿ ವ್ಯಾಪಾರಿ ಅದೇ ನಗರದಲ್ಲಿದ್ದ. ಇಬ್ಬರೂ ಮುತ್ತು, ರತ್ನಗಳನ್ನು ಮಾರುವ ಸಂಚಾರಿ ವ್ಯಾಪಾರಿಗಳು, ಊರಿಂದ ಊರಿಗೆ ತಿರುಗಾಡಿ ವ್ಯಾಪಾರಮಾಡುವವರು. ಒಂದು ದಿನ ಇಬ್ಬರೂ ಅಂಧಪುರ ಎಂಬ ನಗರಕ್ಕೆ ಬಂದು ಮಾರಾಟ ಪ್ರಾರಂಭಿಸಿದರು.

ಆ ನಗರದಲ್ಲಿ ಒಬ್ಬ ಅತ್ಯಂತ ಶ್ರೀಮಂತ ಶ್ರೇಷ್ಠಿಯೊಬ್ಬನ ಪರಿವಾರ ಕೆಲಕಾಲದಿಂದ ದರಿದ್ರತೆಯನ್ನು ಹೊಂದಿತ್ತು. ಐಶ್ವರ್ಯವೆಲ್ಲ ನಷ್ಟವಾಗಿ ಬಂಧುಗಳೆಲ್ಲ ದೂರವಾಗಿ ಅಜ್ಜಿ ಮತ್ತು ಮೊಮ್ಮಗಳು ಮಾತ್ರ ಉಳಿದುಕೊಂಡಿದ್ದರು. ಬೇರೆಯವರ ಮನೆಗಳಲ್ಲಿ ಸೇವೆ ಮಾಡಿ ಜೀವ ಧರಿಸಿದ್ದರು. ಅವರ ಮನೆಯ ಅಟ್ಟದ ಮೇಲೆ ಹಳೆಯ ಸಾಮಾನುಗಳ ರಾಶಿ ಬಿದ್ದಿತ್ತು. ಅದರಲ್ಲೊಂದು ಚಿನ್ನದ ತಟ್ಟೆ. ಬಳಸದೇ ಬಿಟ್ಟಿದ್ದರಿಂದ ಅದು ಕೊಳೆಯಾಗಿ ಪ್ರಯೋಜನವಿಲ್ಲದ ಹಿತ್ತಾಳೆಯ ತಟ್ಟೆಯಂತೆ ಕಾಣುತ್ತಿತ್ತು.

ಲೋಭಿಯಾದ ವ್ಯಾಪಾರಿ ಸೇರಿವ ಈ ಬೀದಿಯಲ್ಲಿ ಮುತ್ತು, ರತ್ನ ಬೇಕೇ? ಎಂದು ಕೂಗುತ್ತ ಬಂದ. ಅದನ್ನು ಕೇಳಿದ ಮೊಮ್ಮಗಳು, ಅಜ್ಜೀ, ನನಗೊಂದು ಮುತ್ತಿನಹಾರ ಕೊಡಿಸುತ್ತೀಯಾ? ಎಂದು ಕೇಳಿದಳು. ಅಜ್ಜಿ ನಿಟ್ಟುಸಿರು ಬಿಟ್ಟು, ಒಂದು ಕಾಲದಲ್ಲಿ ನಮ್ಮ ಮನೆಯ ಕಸದಲ್ಲಿ ಮೊರದಷ್ಟು ಮುತ್ತುಗಳಿರುತ್ತಿದ್ದವು. ಈಗ ನಿನಗೆ ಒಂದು ಮುತ್ತಿನಹಾರ ಕೊಡಿಸಲು ಹಣವಿಲ್ಲ, ಯಾವ ವಸ್ತುವೂ ಇಲ್ಲ ಎಂದಳು. ಆಗ ಮೊಮ್ಮಗಳು, ಅಜ್ಜೀ, ಆ ಹಳೆಯ ತಟ್ಟೆಯಿದೆಯಲ್ಲ, ಅದನ್ನೇ ಕೊಟ್ಟು ಹಾರ ತೆಗೆದುಕೊಳ್ಳೋಣ ಎಂದು ಒತ್ತಾಯಿಸಿ ವ್ಯಾಪಾರಿಯನ್ನು ಒಳಗೆ ಕರೆದಳು. ಅಜ್ಜಿ ಅವನ ಮುಂದೆ ತಟ್ಟೆಯನ್ನಿರಿಸಿ, ಇದಕ್ಕೆ ಎಷ್ಟು ಮುತ್ತು ಬರುತ್ತದೋ, ಕೊಡಿ ಎಂದಳು. ಲೋಭಿ ವ್ಯಾಪಾರಿಗೆ ಅದು ಚಿನ್ನದ ತಟ್ಟೆಯಿರಬೇಕು ಎಂದು ಎನ್ನಿಸಿ, ಅದರ ಹಿಂದೆ ಗೀರು ಹಾಕಿ ಖಾತ್ರಿ ಮಾಡಿಕೊಂಡ. ಇವರು ಹೇಗೂ ಮುಗ್ಧರು, ಇವರಿಂದ ತಟ್ಟೆಯನ್ನು ಹೊಡೆಯಬೇಕು ಎಂದುಕೊಂಡು, ಅಯ್ಯೋ, ಈ ಪ್ರಯೋಜನವಿಲ್ಲದ ತಗಡಿನ ತಟ್ಟೆಗೆ ನಾಲ್ಕು ಗುಲಗಂಜಿಯೂ ಬರುವುದಿಲ್ಲ. ನಿಮಗೆ ಬೇಕಾದರೆ ಎರಡು ಮುತ್ತು ಕೊಡುತ್ತೇನೆ ಎಂದು ಎದ್ದು ಹೊರಟೇ ಬಿಟ್ಟ.

ಸ್ವಲ್ಪ ಹೊತ್ತಿನ ನಂತರ ಬೋಧಿಸತ್ವ ಅದೇ ರಸ್ತೆಗೆ ಬಂದು ಕೂಗಿದ. ಮತ್ತದೇ ರೀತಿಯಲ್ಲಿ ಮೊಮ್ಮಗಳು ಕರೆದು ತಟ್ಟೆಯನ್ನು ತೋರಿಸಿದಳು. ಬೋಧಿಸತ್ವ ಅದನ್ನು ಪರೀಕ್ಷಿಸಿ ಅದು ಚಿನ್ನದೆಂದು ತಿಳಿದು ಹೇಳಿದ, ತಾಯಿ ಇದು ಚಿನ್ನದ ತಟ್ಟೆ. ಇದಕ್ಕೆ ಸಮನಾದ ಬೆಲೆಯ ವಸ್ತು ನನ್ನಲ್ಲಿಲ್ಲ. ನನ್ನಲ್ಲಿ ಇರುವುದು ಐನೂರು ಕಹಾಪಣಗಳು ಮತ್ತು ಐನೂರು ಬೆಲೆಬಾಳುವ ಆಭರಣಗಳು. ತಟ್ಟೆಯ ಬೆಲೆ ಇವೆಲ್ಲವುಗಳಿಗಿಂತ ಹೆಚ್ಚು ಎಂದ. ಆಗ ಅಜ್ಜಿ, ಆಗಲಪ್ಪ, ನೀನು ಪ್ರಾಮಾಣಿಕ. ನೀನು ಮುಟ್ಟಿದ ಮೇಲೆ ತಟ್ಟೆ ಚಿನ್ನವಾಯಿತು. ಅದನ್ನು ನೀನೇ ತೆಗೆದುಕೋ. ಅದಕ್ಕೆ ಪ್ರತಿಯಾಗಿ ಏನು ಕೊಡುತ್ತೀಯೋ ಕೊಡು ಎಂದಳು. ಬೋಧಿಸತ್ವ ತನ್ನ ಎಲ್ಲ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಮನೆ ತಲುಪಲು ಮಾತ್ರ ಬೇಕಾಗುವ ಎಂಟು ಕಹಾಪಣಗಳನ್ನು ಪಡೆದು ನಡೆದ. ಮುಂದೆ ಮನೆಗೆ ಹೊರಡಲು ನಾವೆಯಲ್ಲಿ ಕುಳಿತ. ಇತ್ತ ಲೋಭಿ ವ್ಯಾಪಾರಿ ಮತ್ತೆ ಮುದುಕಿಯ ಮನೆಗೆ ಹೋಗಿ ಉಪಕಾರ ಮಾಡುವವರಂತೆ, ಆಯ್ತು ತಟ್ಟೆ ಕೊಡಿ, ನಿಮಗೊಂದು ಪುಟ್ಟ ಮುತ್ತಿನಹಾರ ಕೊಡುತ್ತೇನೆ ಎಂದ. ಆಗ ಮೊಮ್ಮಗಳು ನಡೆದದ್ದನ್ನು ಹೇಳಿದಾಗ ಆತ ಬೋಧಿಸತ್ವನ ಹಿಂದೆ ಓಡಿಬಂದ. ನಾವೆಯಲ್ಲಿ ಕುಳಿತಿದ್ದ ಬೋಧಿಸತ್ವನನ್ನು ಬಯ್ಯುತ್ತ ಮರಳಿ ಬರುವಂತೆ ಹೇಳಿದ. ಅವನು ಬಾರದಿದ್ದಾಗ ಕೂಗಿ, ಕೂಗಿ ಹೃದಯ ಒಡೆದು ರಕ್ತಕಾರಿ ಸತ್ತು ಹೋದ.

ಇದು ಹಿಂದಿನ ಕಥೆಯೇ? ಇಂದೂ ಹಾಗೆಯೇ ಇಲ್ಲವೇ? ಮುಗ್ಧರನ್ನು, ಅಮಾಯಕರನ್ನು ಮೋಸಗೊಳಿಸುವ ಲೋಭಿಗಳು, ವಂಚಕರು ಕಾಣುತ್ತಿಲ್ಲವೇ? ಅವರಿಗೆ ಈ ಕಥೆಯ ಅಂತ್ಯ ತಿಳಿಯಬೇಕು. ಹಾಗಾದಾಗ ಬಹುಶಃ ಅವರು ಮಾಡುವ ವಂಚನೆಯ ಪ್ರಮಾಣ ಕಡಿಮೆಯಾದೀತು.

ಬರಹ ಇಷ್ಟವಾಯಿತೆ?

 • 77

  Happy
 • 9

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !