ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಲೋಕದಿಂದ ನಿರ್ಲೋಕ

Last Updated 3 ಮೇ 2022, 19:30 IST
ಅಕ್ಷರ ಗಾತ್ರ

ಲೋಕಜೀವನದೆ ಮಾನಸದ ಪರಿಪಾಕವಾ |
ಪಾಕದಿಂ ಮತಿಶುದ್ಧಿಯದರಿನೊಳದೃಷ್ಟಿ ||
ಸಾಕಲ್ಯದಾತ್ಮಸಂದರ್ಶನಕೆ ಕರಣವದು |
ಲೋಕದಿಂದ ನಿರ್ಲೋಕ – ಮಂಕುತಿಮ್ಮ

|| 620 ||

ಪದ-ಅರ್ಥ: ಮಾನಸದ=ಮನಸ್ಸಿನ, ಮತಿಶುದ್ಧಿಯದರಿನೊಳದೃಷ್ಟಿ=ಮತಿಶುದ್ಧಿ (ಬುದ್ಧಿಯ ಶುದ್ಧಿ)+ಅದರಿನ್ (ಅದರಿಂದ)+ಒಳದೃಷ್ಟಿ, ಸಾಕಲ್ಯದಾತ್ಮಸಂದರ್ಶನಕೆ=ಸಾಕಲ್ಯದ (ಪರಿಪೂರ್ಣದ)+ಆತ್ಮಸಂದರ್ಶನಕೆ, ಕರಣ=ಸಾಧನ, ನಿರ್ಲೋಕ=ಲೋಕನಿವೃತ್ತಿ.
ವಾಚ್ಯಾರ್ಥ: ಲೋಕಜೀವನದಿಂದ ಮನಸ್ಸಿನ ಪರಿಪಾಕ. ಆ ಪರಿಪಾಕದಿಂದ ಬುದ್ಧಿಯ ಶುದ್ಧತೆ. ಅದರಿಂದ ಅಂತರ್‌ದೃಷ್ಠಿಯ ಮೊಳೆತ. ಅದೇ ಪರಿಪೂರ್ಣ ಆತ್ಮದರ್ಶನಕ್ಕೆ ಸಾಧನ. ಲೋಕಸಹವಾಸದಿಂದಲೇ ಲೋಕನಿವೃತ್ತಿ ಸಾಧ್ಯ.

ವಿವರಣೆ: ಈ ಪ್ರಪಂಚದಲ್ಲಿ ಕೇವಲ ನಮ್ಮದೇ ಆದದ್ದು ಎನ್ನುವಂಥದ್ದು ಯಾವುದೂ ಇಲ್ಲ. ನಮ್ಮ ದೇಹ ಪಂಚಭೂತಗಳಿಂದ ಆದದ್ದು, ಬುದ್ಧಿ, ವಿದ್ಯೆಗಳು ಪ್ರಕೃತಿದತ್ತವಾದವು, ನಮ್ಮ ಭಾವನೆಗಳು, ಕ್ರಿಯೆಗಳು ಮತ್ತು ಶಕ್ತಿಸೌಂದರ್ಯಗಳೆಲ್ಲ ನಿಸರ್ಗದ ಕೊಡುಗೆ. ಈ ಎಲ್ಲ ಕೊಡುಗೆಗಳನ್ನು ಪಡೆದು ಬೆಳೆದ ಅಹಂಕಾರ ಕೂಡ ಸೃಷ್ಟಿಯಾದದ್ದೇ. ಅದರ ನಾಶಕ್ಕೆ ಕೂಡ ಲೋಕದರ್ಶನ ಬೇಕು.

ಅಷ್ಟಾವಕ್ರ ಕಹೋಳ ಋಷಿಯ ಮಗ, ಶ್ವೇತಕೇತುವಿನ ಸೋದರಳಿಯ. ತಂದೆಯ ಶಾಪದಿಂದಲೇ ದೇಹ ಸೊಟ್ಟಸೊಟ್ಟಾಗಿ ಬೆಳೆದು ಅಷ್ಟಾವಕ್ರನಾಗಿದ್ದ. ಅವನು ಮಹಾಜ್ಞಾನಿ. ಅವನನ್ನು ಜನಕಮಹಾರಾಜ ಗುರುವೆಂದು ಬಗೆದಿದ್ದ. ಒಮ್ಮೆ ದರ್ಬಾರಿಗೆ ಅಷ್ಟಾವಕ್ರ ಬಂದ. ಅವನ ನಡಿಗೆ, ಸೊಟ್ಟ ದೇಹ ನೋಡಿ ಸಭಾಸದರು ಜೋರಾಗಿ ನಕ್ಕರು. ಜನಕರಾಜನಿಗೆ ಮುಜುಗರ. ಮಹರ್ಷಿಗಳು ಏನೆಂದುಕೊಂಡಾರೋ ಎಂಬ ಚಿಂತೆ. ಆಶ್ಚರ್ಯ! ಅಷ್ಟಾವಕ್ರ ಮತ್ತೂ ಜೋರಾಗಿ ನಕ್ಕ. ಹಿರಿಯರೊಬ್ಬರು ಕೇಳಿದರು, “ಸಭಾಸದರು ನಕ್ಕದ್ದಕ್ಕೆ ಕಾರಣವಿದೆ. ಆದರೆ ತಾವು ನಕ್ಕದ್ದೇಕೆ?” ಅಷ್ಟಾವಕ್ರ ಹೇಳಿದ, “ಅವರು ಯಾವ ಕಾರಣಕ್ಕೆ ನಕ್ಕರೋ, ಅದೇ ಕಾರಣಕ್ಕೆ ನಾನೂ ನಗುತ್ತಿದ್ದೇನೆ. ಅವರು ನನ್ನ ವಕ್ರ ದೇಹವನ್ನು ನೋಡಿ ನಕ್ಕರು. ಆದರೆ ಅವರು ನನ್ನ ದೇಹವನ್ನೇ ನಾನು ಎಂದು ತಿಳಿದದ್ದಕ್ಕೆ ನಗುತ್ತಿದ್ದೇನೆ. ವಿದ್ವಾಂಸರ ಅಜ್ಞಾನಕ್ಕೆ ನಗೆ ಬರುತ್ತದೆ!” ನಮ್ಮ ಬದುಕೂ ಹಾಗೆಯೇ ಅಲ್ಲವೆ? ಕೆಲವರು ನಮ್ಮನ್ನು ನೋಡಿ ನಗುತ್ತಾರೆ, ಕೆಲವರು ಹೊಗಳುತ್ತಾರೆ, ಮತ್ತೆ ಕೆಲವರು ಟೀಕೆ ಮಾಡಿ ಮನಸ್ಸಿಗೆ ಚುಚ್ಚುತ್ತಾರೆ. ಅದರಿಂದ ಮನಸ್ಸಿಗೆ ಹಿಗ್ಗು, ತಾಪ ಆಗುತ್ತವೆ. ಜೀವಕ್ಕೆ ನೋವು, ನಲಿವುಗಳು ಬರುವುದೇ ಹೀಗೆ. ಹಾಗೆಂದರೆ ಪ್ರತಿಯೊಂದು ಜೀವ ಸಂಘಾತಾವಲಂಬಿ. ನಾವು ಸರ್ವತಂತ್ರ ಸ್ವತಂತ್ರರಲ್ಲ. ಸಂಘಾತವನ್ನು ತೆಗೆದುಹಾಕಿದರೆ ನಾವೂ ಇರುವುದಿಲ್ಲ. ಆಗ ನಾನು, ನೀನುಗಳು ಅಳಿದು ವಿಮಲ ಚೇತನದ ಪರಮಮೂಲದ ದರ್ಶನವಾದೀತು.

ಅಂದರೆ ನಮ್ಮ ಅಹಂಕಾರಗಳು, ನಮ್ಮ ಬಗ್ಗೆಯೇ ನಮಗಿರುವ ಅತಿರಂಜಿತ ಕಲ್ಪನೆಗಳು ಕರಗಿ, ವಾಸ್ತವ ಮುಂದೆ ನಿಲ್ಲುವುದು ಲೋಕವ್ಯವಹಾರದಲ್ಲಿಯೇ: ಕಗ್ಗ ಇದೇ ಮಾತನ್ನು ಸ್ಪಷ್ಟಪಡಿಸುತ್ತದೆ. ಲೋಕವ್ಯವಹಾರದಲ್ಲಿ, ಜನರ ತಳ್ಳಾಟ, ನುಗ್ಗಾಟ, ಒಡೆದಾಟದಲ್ಲಿಯೇ ಮನಸ್ಸು ಪಾಕವಾಗುವುದು. ಹಾಗೆ ಮನಸ್ಸು ಪಾಕವಾದಾಗಲೇ ಅದು ಬಾಹ್ಯದಿಂದ ಅಂತರಂಗಕ್ಕೆ ಹೊರಳುವುದು. ವಿಮಲ ಚೇತನದ ಸಂಪೂರ್ಣ ದರ್ಶನಕ್ಕೆ ಈ ಅಂತರೀಕ್ಷಣೆಯೇ ಕಾರಣ, ಅದರಿಂದಲೇ ಲೋಕದಿಂದ ಮುಕ್ತಿ. ಹಾಗಾಗಿ ಲೋಕಾನುಭವ
ದಿಂದಲೇ ವಿಶ್ವಾತ್ಮದ ಅನುಭವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT