ಗುರುವಾರ , ಡಿಸೆಂಬರ್ 1, 2022
21 °C

ಗುರುರಾಜ ಕರಜಗಿ ಅಂಕಣ – ಬೆರಗಿನ ಬೆಳಕು| ಅಂಚೆಯ ಆಳು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ನಲಿಸುವೊಲಿಸುವ, ಕೆಣಕಿ ಕಾಡಿಸುವ ಮುಳಿಯಿಸುವ ಕೆಳೆ ನಂಟು ಹಗೆ ಕಲಹ ಕುಹಕದೋಲೆಗಳಂ ||
ಹಲಬರಿಗೆ ಹಂಚಿ ಬಾರೆಂದು ವಿಧಿ ನೇಮಿಸಿಹ |
ಇಳೆಯಂಚೆಯಾಳು ನೀಂ – ಮಂಕುತಿಮ್ಮ || 726 ||

ಪದ-ಅರ್ಥ: ನಲಿಸುವೊಲಿಸುವ= ನಲಿಸುವ+ಒಲಿಸುವ, ಮುಳಿಯಿಸುವ=ಕೋಪವನ್ನುಂಟುಮಾಡುವ, ಕೆಳೆ=ಗೆಳೆತನ, ಕುಹಕದೋಲೆಗಳಂ=ಕುಹಕದ(ಕುಚೇಷ್ಟೆಯ)+ಓಲೆಗ, ಇಳೆಯಂಚೆಯಾಳು=ಇಳೆಯ(ಭೂಮಿಯ)+ಅಂಚೆಯಾಳು.
ವಾಚ್ಯಾರ್ಥ: ನಲಿಸುವ, ಒಲಿಸುವ, ಕೆಣಕುವ, ಕಾಡಿಸುವ, ಕೋಪಗೊಳಿಸುವ, ಸ್ನೇಹದ, ಬಾಂಧವ್ಯದ, ವೈರದ, ಕಲಹದ, ಕುಚೇಷ್ಟೆಯ ಎಲ್ಲ ಕೆಲಸಗಳು ನೀನು ಹಂಚುವ ಓಲೆಗಳಿದ್ದಂತೆ. ಪ್ರಪಂಚದಲ್ಲಿ ಹಲವರಿಗೆ ಈ ಓಲೆಗಳನ್ನು ಹಂಚಿ ಬಾರೆಂದು ವಿಧಿ ನೇಮಿಸಿದ್ದಾನೆ. ನೀನೇ ಭೂಮಿಯ ಅಂಚೆಯಾಳು.

ವಿವರಣೆ: ಬದುಕಿನ ಬೆಸುಗೆ ಒಂದಕ್ಕೊಂದು ಹೆಣೆದಿರುವುದು ಸಂಬಂಧಗಳ ಬಂಧದೊಳಗೆ. ಒಮ್ಮೆ ಒಬ್ಬರನ್ನು ಬೆಟ್ಟಿಯಾದರೆ ಅವರೊಂದಿಗೆ ಒಂದು ಬಂಧ, ಒಂದು ಖಾತೆ ತೆರೆದುಕೊಳ್ಳುತ್ತದೆ. ಬ್ಯಾಂಕಿನಲ್ಲಿ ಹಣವಿಟ್ಟು ಖಾತೆ ತೆಗೆದಂತೆ ಪ್ರತಿಯೊಂದು ಸಂಬಂಧವೂ ಒಂದು ಖಾತೆ. ಜೀವನದ ಪ್ರತಿಯೊಂದು ವ್ಯವಹಾರವೂ ಈ ಖಾತೆಯಲ್ಲಿ ಜಮಾ ಅಥವಾ ಖರ್ಚು ಆಗುತ್ತದೆ. ಒಬ್ಬರೊಡನೆ ಧನಾತ್ಮಕವಾಗಿ ನಡೆದ ಸಂವಹನ, ಮುಂದೆ ಬಿಡಿಸಲಾಗದ ನಂಟಾಗಬಹುದು. ಅದೇ ರೀತಿ ಋಣಾತ್ಮಕವಾದ ನಡೆ, ಸಂಬಂಧವನ್ನು ಕಗ್ಗಂಟಾಗಿಸಬಹುದು. ಜೀವನದ ಅನೇಕ ಘಟ್ಟಗಳಲ್ಲಿ ನಾವು ಕೆಲವರನ್ನು ನಲಿಸುತ್ತೇವೆೆ, ಕೆಲವರನ್ನು ಒಲಿಸುವ ಪ್ರಯತ್ನ ಮಾಡುತ್ತೇವೆ. ಒಮ್ಮೊಮ್ಮೆ ಕೆಲವರನ್ನು ಕೆಣಕುವ ಪ್ರಸಂಗ ಬರಬಹುದು. ಮತ್ತೊಮ್ಮೆ ಕಾಡಿಸುತ್ತೇವೆ. ಹಲವು ಬಾರಿ ನಮ್ಮ ನಡೆಯಿಂದ ಮತ್ತೊಬ್ಬರಿಗೆ ಕೋಪ ಬರುವಂತಾಗಬಹುದು. ಸಮಾನ ಚಿಂತನೆಗಳಿಂದಾಗಿ ನಮಗೆ ಕೆಲವರು ಸ್ನೇಹಿತರಾಗಿ ಬರುತ್ತಾರೆ. ಅದರಿಂದಾಗಿ ನಂಟು ಬೆಳೆಯಲೂಬಹುದು. ಕೆಲವೊಮ್ಮೆ ನಮ್ಮ ನಡೆ, ಮಾತು, ಮತ್ತೊಬ್ಬರಿಗೆ ಕುಹಕವಾಗಿ ತೋರೀತು. ಹೀಗೆ ಪರಸ್ಪರ ಸಂವಹನಗಳು ಒಂದು ರೀತಿಯಲ್ಲಿ ಓಲೆಗಳಿದ್ದಂತೆ. ಯಾಕೆಂದರೆ ಅವರಿಗೆ ನಮ್ಮಿಂದ ಮಾಹಿತಿ, ಅವರಿಂದ ನಮಗೆ ವಿಷಯ ತಿಳಿಯುತ್ತದೆ. ಅದಕ್ಕೇ ಕಗ್ಗ ಪ್ರತಿಯೊಬ್ಬ ವ್ಯಕ್ತಿಯನ್ನು ಅಂಚೆಯಾಳು ಎಂದು ಕರೆಯುತ್ತದೆ. ನಮ್ಮೆಲ್ಲ ನಡೆಗಳು, ನುಡಿಗಳು, ನಾವು ಹರಡುವ ಅಂಚೆಗಳು. ಹೀಗೆ ಅಂಚೆಗಳನ್ನು ಹಂಚುವುದರಿಂದ ಎರಡು ಲಾಭಗಳು. ಒಂದು, ಪರಸ್ಪರ ಸಂಪರ್ಕದಿಂದ ಜೀವನಾನುಭವ ಬೆಳೆದು ಜೀವ ಸಂಸ್ಕಾರ ಪಡೆಯುತ್ತದೆ. ಎರಡು, ನಮ್ಮೊಡನೆ ಸಂಪರ್ಕಕ್ಕೆ ಬಂದವರ ಜೀವ ಸಂಸ್ಕಾರವೂ ಆಗುತ್ತದೆ. ಈ ಕಾರ್ಯವನ್ನು, ಸಂಬಂಧಗಳ ಮೂಲಕ ಅಂಚೆಯನ್ನು ಹಂಚುವ ಕೆಲಸವನ್ನು, ಜಗತ್ತಿನಲ್ಲಿ ಮಾಡಿ ಬಾ ಅಂಚೆಯಾಳಾಗಿ, ಎಂದು ವಿಧಿ ನಮ್ಮನ್ನು ಕಳುಹಿಸಿದ್ದಾನಂತೆ. ಅದು ವಿಧಿಯು ನೇಮಿಸಿದ ಕಾರ್ಯವಾದ್ದರಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ, ಮಾತ್ರವಲ್ಲ, ಅದನ್ನು ಶ್ರದ್ಧೆಯಿಂದ ಮಾಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು