ಮಂಗಳವಾರ, ಮೇ 26, 2020
27 °C

ಬೆರಗಿನ ಬೆಳಕು | ಸುಳ್ಳಿನ ಫಲ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

prajavani

ಇದು ಸರ್ವಕಾಲಕ್ಕೂ ಪ್ರಸ್ತುತವಾದ ಕಥೆ.

ಹಿಂದೆ ಸಾವತ್ತೀನಗರದಲ್ಲಿ ಉಪಚರ ಎಂಬ ರಾಜನಿದ್ದ. ಆತ ಮಹಾ ಧರ್ಮಿಷ್ಟ. ಅವನ ಧರ್ಮಪ್ರಜ್ಞೆ ಯಾವ ಮಟ್ಟದಲ್ಲಿತ್ತೆಂದರೆ ಆತ ಬೇಕಾದಾಗ ಆಕಾಶದಲ್ಲಿ ವಿಹರಿಸಬಲ್ಲವನಾಗಿದ್ದ. ನಾಲ್ಕು ದಿಕ್ಕುಗಳಲ್ಲಿ ನಾಲ್ಕು ದೇವತೆಗಳು ಕೈಯಲ್ಲಿ ಕತ್ತಿ ಹಿಡಿದು ಸದಾಕಾಲ ಅವನ ರಕ್ಷಣೆ ಮಾಡುತಿದ್ದರು. ಅವನ ದೇಹದಿಂದ ಯಾವಾಗಲೂ ಶ್ರೀಗಂಧದ ವಾಸನೆ ಬರುತ್ತಿತ್ತು, ಬಾಯಿಯಿಂದ ಕೇಸರಿಯ ಸುಗಂಧ ತೇಲಿಬರುತ್ತಿತ್ತು.

ಈ ರಾಜನಿಗೆ ಕಪಿಲನೆಂಬುವವನು ಪುರೋಹಿತನಾಗಿದ್ದ. ಅವನೂ ತುಂಬ ಧರ್ಮಬುದ್ಧಿಯುಳ್ಳವನು. ರಾಜನಿಗೆ ಯಾವಾಗಲೂ ಸರಿಯಾದ ಮಾರ್ಗವನ್ನೇ ಬೋಧಿಸುತ್ತಿದ್ದ. ಅವನಿಗೊಬ್ಬ ತಮ್ಮ. ಅವನ ಹೆಸರು ಕೋರಕಲಂಬ. ಆತ ರಾಜನೊಂದಿಗೆ ಗುರುಕುಲದಲ್ಲಿ ಕಲಿತವನು. ಹೀಗಾಗಿ ರಾಜನೊಂದಿಗೆ ಅವನ ಸಲುಗೆ ಹೆಚ್ಚಿನದು. ಉಪಚರ ರಾಜನಾಗಿ ಅಧಿಕಾರ ವಹಿಸಿಕೊಂಡಾಗ ತಂದೆಗೆ ಪುರೋಹಿತನಾಗಿದ್ದ ಕಪಿಲನನ್ನು ಹಾಗೆಯೇ ಉಳಿಸಿಕೊಂಡ. ಕೋರಕಲಂಬನಿಗೆ ತನ್ನನ್ನು ಪುರೋಹಿತನನ್ನಾಗಿ ಮಾಡುತ್ತಾನೆ ಎಂಬ ಆಸೆ ಇತ್ತು, ಕೆಲದಿನಗಳ ನಂತರ ಕಪಿಲ ಪುರೋಹಿತ ರಾಜನ ಬಳಿಗೆ ಬಂದು ಹೇಳಿದ, ‘ಮಹಾರಾಜ, ನನಗೆ ಈ ಗೃಹಸ್ಥ ಜೀವನ ಸಾಕಾಗಿದೆ. ನಾನು ಪ್ರವ್ರಜಿತನಾಗಿ ಹೋಗಬಯಸುತ್ತೇನೆ. ಅದಕ್ಕೆ ನನ್ನ ಮಗನನ್ನು ಪುರೋಹಿತನನ್ನಾಗಿ ಮಾಡಿಕೊಂಡು ನನ್ನನ್ನು ಬಿಡುಗಡೆ ಮಾಡಿ’, ರಾಜ ಅದಕ್ಕೆ ಒಪ್ಪಿ ಅವನ ಮಗನನ್ನು ಪುರೋಹಿತನನ್ನಾಗಿ ನೇಮಿಸಿದ. ಇದರಿಂದ ಕೋರಕಲಂಬನಿಗೆ ಬಹಳ ನಿರಾಸೆಯಾಯಿತು. ತನಗೇ ಪುರೋಹಿತನ ಸ್ಥಾನ ಸಿಗುತ್ತದೆಂದು ನಂಬಿದವನಿಗೆ ತನ್ನ ಅಣ್ಣನ ಮಗ ಆ ಸ್ಥಾನ ಪಡೆದದ್ದು ಕಂಡು ಸಂಕಟವಾಯಿತು.

ಒಂದು ಸೂಕ್ತ ಸಮಯವನ್ನು ನೋಡಿ ರಾಜನಿಗೆ ತನ್ನ ನಿರಾಸೆಯನ್ನು ಹೇಳಿದ. ರಾಜ ತನ್ನ ಹಳೆಯ ಸ್ನೇಹವನ್ನು ನೆನೆಸಿಕೊಂಡು, ‘ಆಯ್ತು, ನಾನು ಕಪಿಲ ಪುರೋಹಿತನನ್ನು ಒಪ್ಪಿರಲಿಲ್ಲ, ಆದರೂ ಅವನನ್ನು ಪುರೋಹಿತನನ್ನಾಗಿ ಮಾಡಲಾಗಿದೆ ಎಂದು ಜನರ ಮುಂದೆ ಹೇಳಿ ಆ ತರುಣನನ್ನು ಕೆಳಗಿಳಿಸಿ, ನಿನ್ನನ್ನು ಪುರೋಹಿತನನ್ನಾಗಿ ಮಾಡುತ್ತೇನೆ’ ಎಂದ. ‘ಹೌದೇ, ಇದನ್ನು ಯಾವಾಗ ಮಾಡುತ್ತೀರಿ?’ ಎಂದು ಕುತೂಹಲದಿಂದ ಕೇಳಿದ ಕೋರಕಲಂಬ. ‘ಮುಂದಿನ ಸೋಮವಾರ ಬೆಳಿಗ್ಗೆ ದರ್ಬಾರಿನಲ್ಲೇ ಹೇಳುತ್ತೇನೆ’ ಎಂದ ರಾಜ. ಈ ಸುದ್ದಿ ಬಾಯಿಂದ ಬಾಯಿಗೆ ಹರಡಿ ತರುಣ ಪುರೋಹಿತನನ್ನು ತಲುಪಿತು. ಆತ ಗಾಬರಿಯಿಂದ ತನ್ನ ಪ್ರವ್ರಜಿತರಾದ ತಂದೆಗೆ ಹೇಳಿದ.

ಆ ಯುಗ ಎಲ್ಲರೂ ಸತ್ಯವನ್ನೇ ಹೇಳುವ ಯುಗ. ಯಾರಿಗೂ ಸುಳ್ಳನ್ನು ಹೇಳುವ ರೀತಿಯಾಗಲಿ, ಕಾರಣವಾಗಲಿ ಇರಲಿಲ್ಲ. ಪ್ರವ್ರಜಿತನಾದ ಕಪಿಲ ಮುನಿ ಸೋಮವಾರ ದರ್ಬಾರಿಗೆ ಬಂದ. ಜನ ಕಿಕ್ಕಿರಿದು ನೆರೆದಿದ್ದರು. ರಾಜ ಆಕಾಶದಲ್ಲಿ ಎತ್ತರದಲ್ಲೇ ಕುಳಿತಿದ್ದ. ಅವನ ಸುತ್ತ ದೇವತೆಗಳು ರಕ್ಷಣೆಗೆ ನಿಂತಿದ್ದರು. ಆಗ ರಾಜ ಹೇಳಿದ, ‘ನನಗೆ ಕೋರಕಲಂಬನೇ ಪುರೋಹಿತನಾಗಬೇಕೆಂದಿತ್ತು. ನಾನು ಕಪಿಲ ಪುರೋಹಿತನಿಗೆ ಹಾಗೆಯೇ ಹೇಳಿದ್ದೆ’. ಮರುಕ್ಷಣವೇ ಅವನ ಸುತ್ತಲಿದ್ದ ದೇವತೆಗಳು ಮಾಯವಾದರು. ರಾಜ ದೊಪ್ಪನೆ ನೆಲಕ್ಕೆ ಕುಸಿದ ಮಾತ್ರವಲ್ಲ, ಅವನ ಶರೀರ ಸೊಂಟದವರೆಗೆ ನೆಲದಲ್ಲಿ ಹೂತುಬಿಟ್ಟಿತ್ತು. ಕಪಿಲ ಮುನಿ ಕೇಳಿದ, ‘ರಾಜ, ನೀನು ಹಾಗೆ ಹೇಳಿದ್ದು ನಿಜವೇ’ ಹಟದಿಂದ ಮತ್ತೆ ರಾಜ, ‘ಹೌದು, ನಾನು ಹಾಗೆಯೇ ಹೇಳಿದ್ದು’ ಎಂದ. ಮುಂದಿನ ಕ್ಷಣವೇ ನೆಲ ಬಿರಿಯಿತು. ನೆಲದಿಂದ ಒಂದು ಕೈ ಮೇಲೆದ್ದು ರಾಜನನ್ನು ಒಳಕ್ಕೆಳೆದುಕೊಂಡು ಮುಚ್ಚಿಕೊಂಡುಬಿಟ್ಟಿತು. ಮುಂದೆ ಯಾರೂ ರಾಜನನ್ನು ಕಾಣಲಿಲ್ಲ.

ಪ್ರತಿ ಸುಳ್ಳೂ ನಮ್ಮನ್ನು ಕೆಳಗಿಳಿಸುತ್ತದೆ. ಅತಿಯಾದ ಸುಳ್ಳು ಬಲಿತೆಗೆದುಕೊಳ್ಳುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.